Makara Sankranti: ಎಲ್ಲೆಲ್ಲೂ ಸಂಕ್ರಾಂತಿ ಸಂಭ್ರಮ; ಭಾರತದ ವಿವಿಧೆಡೆ ಹೇಗೆ ಆಚರಣೆ ಮಾಡ್ತಾರೆ ಗೊತ್ತಾ?
ಮಕರ ಸಂಕ್ರಾಂತಿ ಹಬ್ಬಕ್ಕೆ ಐತಿಹಾಸಿಕ, ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಮಹತ್ವವಿದ್ದು, ದೇಶದಾದ್ಯಂತ ವಿಭಿನ್ನ ರೀತಿಯಲ್ಲಿ ಆಚರಿಸಲಾಗುತ್ತದೆ. ವೈವಿಧ್ಯತೆಯಿಂದ ಸಮೃದ್ಧವಾಗಿರುವ ಭಾರತದಲ್ಲಿ, ಮಕರ ಸಂಕ್ರಾಂತಿಯನ್ನು ಪ್ರತಿ ರಾಜ್ಯದಲ್ಲಿ ವಿಭಿನ್ನವಾಗಿ ಆಚರಣೆ ಮಾಡಲಾಗುತ್ತಿದ್ದು, ಕೆಲವು ಪ್ರಮುಖ ರಾಜ್ಯಗಳಲ್ಲಿ ಈ ಹಬ್ಬವನ್ನು ಹೇಗೆ ಆಚರಿಸುತ್ತಾರೆ ನೋಡೋಣ ಬನ್ನಿ.
ಸಂಕ್ರಾಂತಿ -
ಬೆಂಗಳೂರು: ಭಾರತವು (India) ಸಂಸ್ಕೃತಿ ಮತ್ತು ಪರಂಪರೆ ವೈವಿಧ್ಯತೆ, ಏಕತೆ, ಮತ್ತು ಶ್ರೀಮಂತ ಇತಿಹಾಸದಿಂದ ಕೂಡಿದ ದೇಶ. ಅದರಲ್ಲೂ ಮುಖ್ಯವಾಗಿ ಇದು ಹಬ್ಬಗಳ (Festival) ನಾಡು. ಅನೇಕ ಹಬ್ಬಗಳನ್ನು ಭಾರತದಲ್ಲಿ ಅಪಾರ ಹೆಮ್ಮೆ ಮತ್ತು ಸಂತೋಷದಿಂದ ಆಚರಿಸಲಾಗುತ್ತದೆ. ಅಂತಹ ಪ್ರಮುಖ ಹಬ್ಬಗಳಲ್ಲೊಂದು ಮಕರ ಸಂಕ್ರಾಂತಿ (Makara Sankranti). ಇದಕ್ಕೆ ಐತಿಹಾಸಿಕ, ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಮಹತ್ವವಿದ್ದು, ದೇಶದಾದ್ಯಂತ ವಿಭಿನ್ನ ರೀತಿಯಲ್ಲಿ ಆಚರಿಸಲಾಗುತ್ತದೆ. ವೈವಿಧ್ಯತೆಯಿಂದ ಸಮೃದ್ಧವಾಗಿರುವ ಭಾರತದಲ್ಲಿ, ಮಕರ ಸಂಕ್ರಾಂತಿಯನ್ನು ಪ್ರತಿ ರಾಜ್ಯದಲ್ಲಿ ವಿಭಿನ್ನ ಆಚರಿಸಲಾಗುತ್ತದೆ.
ಇದು ಸೂರ್ಯನು ಮಕರ ರಾಶಿಗೆ ಪ್ರವೇಶಿಸುವ ಸಂದರ್ಭದಲ್ಲಿ ಆಚರಿಸಲ್ಪಡುವ ಬೆಳೆ ಹಬ್ಬವಾಗಿದೆ. ಚಳಿಗಾಲದ ಅಂತ್ಯವನ್ನು ಸೂಚಿಸುವ ಈ ದಿನವನ್ನು ಸೂರ್ಯ ದೇವರ ಆರಾಧನೆಗೆ ಸಮರ್ಪಿಸಲಾಗುತ್ತದೆ.
ಭಾರತದ ಪ್ರತಿಯೊಂದು ರಾಜ್ಯವೂ ತನ್ನದೇ ಆದ ಶೈಲಿಯಲ್ಲಿ ಮಕರ ಸಂಕ್ರಾಂತಿಯನ್ನು ಆಚರಿಸುತ್ತದೆ. ಕೆಲವು ಪ್ರಮುಖ ರಾಜ್ಯಗಳಲ್ಲಿ ಈ ಹಬ್ಬವನ್ನು ಹೇಗೆ ಆಚರಿಸುತ್ತಾರೆ ನೋಡಣ ಬನ್ನಿ.
ಪಶ್ಚಿಮ ಬಂಗಾಳ
ಪಶ್ಚಿಮ ಬಂಗಾಳದಲ್ಲಿ ಮಕರ ಸಂಕ್ರಾಂತಿಯನ್ನು "ಪೌಷ್ ಪರ್ವನ್" ಅಥವಾ "ಗಂಗಾಸಾಗರ್ ಮೇಳಾ" ಎಂದು ಕರೆಯಲಾಗುತ್ತದೆ. ಗಂಗಾಸಾಗರ್ ಮೇಳಾ ಕುಂಭಮೇಳದ ನಂತರದ ವಿಶ್ವದ ಎರಡನೇ ಅತಿದೊಡ್ಡ ಜನಸಮೂಹದ ಮೇಳವಾಗಿದೆ. ಗಂಗಾ ನದಿ ಮತ್ತು ಬಂಗಾಳ ಕೊಲ್ಲಿಯ ಸಂಗಮ ಸ್ಥಳದಲ್ಲಿ ಪವಿತ್ರ ಸ್ನಾನ ಮಾಡಲು ದೇಶ-ವಿದೇಶಗಳಿಂದ ಜನರು ಸೇರುತ್ತಾರೆ. ಅಲ್ಲದೆ ಪವಿತ್ರ ಕಪಿಲ ಮುನಿ ಆಶ್ರಮದಲ್ಲಿ ಪೂಜೆ ಸಲ್ಲಿಸುತ್ತಾರೆ.
ಮಕರ ಸಂಕ್ರಾಂತಿ ಬಂಗಾಳಿ ತಿಂಗಳಾದ ಪೌಷ್‌ನ ಕೊನೆಯ ದಿನವೂ ಆಗಿದೆ. ಈ ದಿನ ಲಕ್ಷ್ಮಿ ದೇವಿಯನ್ನು ಪೂಜಿಸಲಾಗುತ್ತದೆ. ಹೊಸದಾಗಿ ಕೊಯ್ದ ಭತ್ತ ಮತ್ತು ಖರ್ಜೂರ ಮರದ ಸಿರಪ್‌ನಿಂದ ತಯಾರಿಸಿದ "ಖೇಜೂರ್ ಗುಡ್" ಮತ್ತು "ಪಟಾಲಿ" ಬಳಸಿ ಅಕ್ಕಿ, ತೆಂಗಿನಕಾಯಿ, ಹಾಲು ಮತ್ತು ಬೆಲ್ಲದಿಂದ ತಯಾರಿಸಲಾದ ಸಾಂಪ್ರದಾಯಿಕ ಸಿಹಿತಿಂಡಿಗಳನ್ನು ಮಾಡಲಾಗುತ್ತದೆ. ಇವುಗಳನ್ನು "ಪುಲಿ ಪಿಠಾ" ಎಂದು ಕರೆಯುತ್ತಾರೆ.
Sankranti Jewel Fashion 2026: ಹಬ್ಬದ ಗ್ರ್ಯಾಂಡ್ ಲುಕ್‌ಗೆ ಆಭರಣಗಳನ್ನು ಮ್ಯಾಚ್ ಮಾಡುವುದು ಹೇಗೆ?
ಗುಜರಾತ್
ಗುಜರಾತ್‌ನಲ್ಲಿ ಮಕರ ಸಂಕ್ರಾಂತಿಯನ್ನು "ಉತ್ತರಾಯಣ" ಎಂದು ಕರೆಯಲಾಗುತ್ತದೆ. ಈ ಹಬ್ಬದ ಪ್ರಮುಖ ಆಕರ್ಷಣೆ ಗಾಳಿಪಟ ಹಾರಿಸುವುದು. ಲಕ್ಷಾಂತರ ಗುಜರಾತಿಗಳು ತಮ್ಮ ಮನೆಗಳ ಛಾವಣಿಗಳ ಮೇಲೆ ಗಾಳಿಪಟ ಹಾರಿಸುತ್ತಾರೆ. “ಕೈ ಪೊ ಚೇ!” ಮತ್ತು “ಲಪೇಟ್!” ಎಂಬ ಘೋಷಣೆಗಳು ಈ ಸಂದರ್ಭದಲ್ಲಿ ಎಲ್ಲೆಡೆ ಕೇಳಿಸುತ್ತವೆ. ಚಳಿಗಾಲದ ತರಕಾರಿಗಳಿಂದ ತಯಾರಿಸಿದ ರುಚಿಕರವಾದ "ಉಂಧಿಯು, ಚಿಕ್ಕಿ ಹಾಗೂ ಜಿಲೇಬಿ ಸೇರಿದಂತೆ ಮುಂತಾದ ಗುಜರಾತಿ ಸಿಹಿತಿಂಡಿಗಳು ಈ ದಿನದ ವಿಶೇಷ ಆಹಾರಗಳಾಗಿವೆ.
ಪಂಜಾಬ್
ಪಂಜಾಬ್‌ನಲ್ಲಿ ಮಕರ ಸಂಕ್ರಾಂತಿಯನ್ನು "ಲೋಹ್ರಿ" ಎಂಬ ಹೆಸರಿನಲ್ಲಿ ಆಚರಿಸಲಾಗುತ್ತದೆ. ಬಣ್ಣ, ನೃತ್ಯ, ಸಂಗೀತ ಮತ್ತು ಬೆಂಕಿ ಕುಂಡಗಳು ಈ ಹಬ್ಬದ ವಿಶೇಷತೆಗಳಾಗಿವೆ. ಮಕ್ಕಳು ಮನೆ ಮನೆಗೆ ಹೋಗಿ “ದುಲ್ಭಟ್ಟಿ” ಹಾಡು ಹಾಡುತ್ತಾ ಪಾಪ್‌ಕಾರ್ನ್, ರೇವ್ರಿ, ಶೇಂಗಾ, ಬೆಲ್ಲ, ಗಜಕ್ ಮುಂತಾದ ಸಿಹಿ-ಉಪ್ಪು ತಿಂಡಿಗಳನ್ನು ಸಂಗ್ರಹಿಸುತ್ತಾರೆ. ಸಂಜೆಯ ವೇಳೆಗೆ, ಪುರುಷರು ಮತ್ತು ಮಹಿಳೆಯರು ಸಾಂಪ್ರದಾಯಿಕ ಉಡುಪು ಧರಿಸಿ ಬೆಂಕಿಯ ಸುತ್ತಲೂ ಸೇರಿ "ಭಾಂಗ್ರಾ" ನೃತ್ಯ ಮಾಡುತ್ತಾರೆ.
ಆಂಧ್ರ ಪ್ರದೇಶ
ಆಂಧ್ರ ಪ್ರದೇಶದಲ್ಲಿ ಮಕರ ಸಂಕ್ರಾಂತಿ ನಾಲ್ಕು ದಿನಗಳ ಹಬ್ಬವಾಗಿದೆ. ಮೊದಲ ದಿನವನ್ನು "ಭೋಗಿ" ಎಂದು ಆಚರಿಸಲಾಗುತ್ತದೆ. ಈ ದಿನ ಹಳೆಯ ವಸ್ತುಗಳನ್ನು ಬೆಂಕಿಗೆ ಹಾಕಲಾಗುತ್ತದೆ. ಎರಡನೇ ದಿನವೇ ಮುಖ್ಯ ಹಬ್ಬ "ಮಕರ ಸಂಕ್ರಾಂತಿ"ಯಾಗಿದ್ದು, ಈ ದಿನ ರಂಗೋಲಿ, ಸಿಹಿತಿಂಡಿಗಳು ಮತ್ತು ಬಣ್ಣಬಣ್ಣದ ಅಲಂಕಾರಗಳು ಇರುತ್ತವೆ. ನಾಲ್ಕನೇ ದಿನವನ್ನು "ಕಾನುಮ" ಎಂದು ಕರೆಯಲಾಗುತ್ತದೆ, ಇದು ವಿಶೇಷವಾಗಿ ರೈತರಿಗೆ ಸಮರ್ಪಿತವಾಗಿದೆ. ಕೊನೆಯ ದಿನವನ್ನು "ಮುಕ್ಕನುಮ" ಎಂದು ಕರೆಯುತ್ತಾರೆ. ಮೊದಲ ಮೂರು ದಿನ ಶಾಕಾಹಾರ ಮಾತ್ರ ಸೇವಿಸುವ ಜನ, ಕೊನೆಯ ದಿನ ಮಾಂಸಾಹಾರವನ್ನು ಆಸ್ವಾದಿಸುತ್ತಾರೆ.
ತಮಿಳುನಾಡು
ತಮಿಳುನಾಡಿನಲ್ಲಿ ಮಕರ ಸಂಕ್ರಾಂತಿಯನ್ನು "ಪೊಂಗಲ್" ಎಂದು ಕರೆಯಲಾಗುತ್ತದೆ. ಇದು ಅತ್ಯಂತ ಮಹತ್ವದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಹಬ್ಬವಾಗಿದೆ. ನಾಲ್ಕು ದಿನಗಳ ಕಾಲ ಅಕ್ಕಿ, ಹಾಲು, ಬೆಲ್ಲ, ಎಳ್ಳು ಇತ್ಯಾದಿಯಿಂದ ತಯಾರಿಸಿದ ವಿವಿಧ ಸಿಹಿ ಹಾಗೂ ಖಾರದ ತಿಂಡಿಗಳನ್ನು ಮಾಡಲಾಗುತ್ತದೆ. ಮಣ್ಣಿನ ಪಾತ್ರೆಯಲ್ಲಿ ಅಕ್ಕಿ ಕುದಿಸುವುದು ಪೊಂಗಲ್ ಹಬ್ಬದ ಪ್ರಮುಖ ಆಚರಣೆಯಾಗಿದೆ.
ಜಾರ್ಖಂಡ್ ಮತ್ತು ಬಿಹಾರ
ಬಿಹಾರ ಮತ್ತು ಜಾರ್ಖಂಡ್ ರಾಜ್ಯಗಳಲ್ಲಿ ಮಕರ ಸಂಕ್ರಾಂತಿಯನ್ನು "ಖಿಚಡಿ ಪರ್ವ್" ಎಂದು ಆಚರಿಸಲಾಗುತ್ತದೆ. ನದಿಗಳಲ್ಲಿ ಪವಿತ್ರ ಸ್ನಾನ, ಗಾಳಿಪಟ ಹಾರಿಸುವುದು ಈ ಹಬ್ಬದ ವಿಶೇಷತೆಗಳಾಗಿವೆ. ಕಾಳು ಅಕ್ಕಿ, ಕಾಲಿಫ್ಲವರ್, ಬಟಾಣಿ ಮತ್ತು ಆಲೂಗಡ್ಡೆಯಿಂದ ತಯಾರಿಸಿದ ವಿಶೇಷ "ಖಿಚಡಿ"ಯನ್ನು ಚೋಖಾ, ಉಪ್ಪಿನಕಾಯಿ, ಪಾಪಡ್ ಮತ್ತು ತುಪ್ಪದೊಂದಿಗೆ ಸೇವಿಸುತ್ತಾರೆ. ಎಳ್ಳು ಮತ್ತು ಬೆಲ್ಲದಿಂದ ತಯಾರಿಸಿದ ವಿವಿಧ ಸಿಹಿತಿಂಡಿಗಳಾದ ತಿಲ್ಗುಡ್ ಕೂಡ ಈ ಹಬ್ಬದ ಅವಿಭಾಜ್ಯ ಅಂಗವಾಗಿದೆ.
ಮಕರ ಸಂಕ್ರಾಂತಿ ಭಾರತದೆಲ್ಲೆಡೆ ವಿಭಿನ್ನ ಸಂಸ್ಕೃತಿ ಮತ್ತು ಪರಂಪರೆಗಳೊಂದಿಗೆ ವಿಭಿನ್ನ ರೀತಿಯಲ್ಲಿ ಆಚರಿಸಲ್ಪಡುವ ಅತ್ಯಂತ ಮಹತ್ವದ ಹಬ್ಬವಾಗಿದೆ. ಜನವರಿಯಲ್ಲಿ ಆಚರಿಸಲಾಗುವ ಈ ಹಬ್ಬದ ಸಮಯದಲ್ಲಿ ಬೆಲ್ಲದ ಸುವಾಸನೆ, ಎಳ್ಳು, ಬೆಂಕಿ ಕುಂಡಗಳು, ರುಚಿಕರ ಖಾದ್ಯ, ತೆಂಗಿನಕಾಯಿ ಮತ್ತು ಬಾದಾಮಿ ಲಡ್ಡು, ಪುಲಿ ಪಿಠಾ ಹಾಗೂ ಬಣ್ಣಬಣ್ಣದ ಗಾಳಿಪಟಗಳು ಈ ಹಬ್ಬದ ವಾತಾವರಣವನ್ನು ಮತ್ತಷ್ಟು ಉಲ್ಲಾಸಭರಿತವಾಗಿಸುತ್ತವೆ.