ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Astro Tips: ಸೋಮವಾರದಂದು ಏನು ಮಾಡಬೇಕು? ಏನು ಮಾಡಬಾರದು? ಶಿವಾನುಗ್ರಹಕ್ಕೆ ಈ ನಿಯಮಗಳನ್ನು ಪಾಲಿಸಿ

ಹಿಂದೂ ಶಾಸ್ತ್ರಗಳ ಪ್ರಕಾರ ಸೋಮವಾರವು ಶಿವ ಹಾಗೂ ಚಂದ್ರ ಗ್ರಹಕ್ಕೆ ಸಂಬಂಧಿಸಿದ ಮಹತ್ವದ ದಿನವಾಗಿದೆ. ಈ ದಿನ ಬಿಳಿ ಬಟ್ಟೆ ಧರಿಸುವುದು, ಬಿಳಿ ಆಹಾರ ಸೇವನೆ ಮತ್ತು ರುದ್ರಾಭಿಷೇಕ ಮಾಡುವುದು ಶುಭಕರವೆಂದು ನಂಬಲಾಗುತ್ತದೆ. ಸೋಮವಾರದ ನಿಯಮಗಳನ್ನು ಪಾಲಿಸುವುದರಿಂದ ಸಕಾರಾತ್ಮಕ ಶಕ್ತಿ ಮತ್ತು ಶುಭ ಫಲ ದೊರಕುತ್ತದೆ ಎಂಬ ನಂಬಿಕೆ ಇದೆ.

ಶಿವ

ಬೆಂಗಳೂರು: ಹಿಂದೂ ಧರ್ಮದಲ್ಲಿ (Hindu Religion) ವಾರದ ಪ್ರತಿಯೊಂದು ದಿನವೂ ನಿರ್ದಿಷ್ಟ ದೇವರು–ದೇವತೆಗಳಿಗೆ ಅರ್ಪಿತವಾಗಿದೆ. ಜೊತೆಗೆ, ಯಾವ ದಿನ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬುದನ್ನು ಜ್ಯೋತಿಷ್ಯ ಶಾಸ್ತ್ರಗಳು ವಿವರಿಸುತ್ತವೆ. ಈ ನಿಯಮಗಳನ್ನು ಪಾಲಿಸುವುದರಿಂದ ಜೀವನದಲ್ಲಿ ಸಕಾರಾತ್ಮಕತೆ, ಯಶಸ್ಸು ಮತ್ತು ಮಾನಸಿಕ ನೆಮ್ಮದಿ, ಶಾಂತಿ ದೊರಕುತ್ತದೆ ಎಂಬ ನಂಬಿಕೆ ಇದೆ. ಈ ಹಿನ್ನೆಲೆಯಲ್ಲಿ ಸೋಮವಾರದಂದು ಪಾಲಿಸಬೇಕಾದ ಅಂದರೆ ಮಾಡಬಹುದಾದ ಹಾಗೂ ಮಾಡಬಾರದಾದ ಕೆಲ ವಿಷಯಗಳ ಕುರಿತು ಜ್ಯೋತಿಷ್ಯ ಶಾಸ್ತ್ರದಲ್ಲಿ (Astrology) ವಿವರಿಸಲಾಗಿದೆ.

ಹಾಗಾದ್ರೆ ಬನ್ನಿ ಜ್ಯೋತಿಷ್ಯ ಶಾಸ್ತ್ರದ ಸಲಹೆ (Astro Tips) ಪ್ರಕಾರ ಸೋಮವಾರ ಯಾವ ಕೆಲಸ ಮಾಡುವುದರಿಂದ ಶಿವನ ಅನುಗ್ರಹ ಪಡೆಯಬಹುದು ಹಾಗೇ ಯಾವಾ ಕೆಲಸ ಮಾಡಿದ್ರೆ ಅವನು ಕೋಪಗೊಳ್ಳುತ್ತಾನೆ ಎಂಬುದನ್ನು ತಿಳಿದುಕೊಳ್ಳೋಣ.

ಸೋಮವಾರವನ್ನು ಶಿವನ ದಿನವೆಂದು ಪರಿಗಣಿಸಲಾಗುತ್ತದೆ. ಜೊತೆಗೆ ಇದು ಚಂದ್ರ ಗ್ರಹಕ್ಕೆ ಸಂಬಂಧಿಸಿದ ದಿನವಾಗಿರುವುದರಿಂದ, ಈ ದಿನ ಚಂದ್ರ ದೋಷ ನಿವಾರಣೆಗೆ ಸಂಬಂಧಿಸಿದ ಪರಿಹಾರಗಳನ್ನು ಕೈಗೊಳ್ಳುವುದು ಮಂಗಳಕರವೆಂದು ನಂಬಲಾಗಿದೆ.

ಸೋಮವಾರದಂದು ಪಾಲಿಸಬೇಕಾದ ನಿಯಮಗಳು

ಸೋಮವಾರದಂದು ಬಿಳಿ ಬಟ್ಟೆ ಧರಿಸುವುದು ಶುಭಕರವೆಂದು ಪರಿಗಣಿಸಲಾಗಿದೆ. ಹಾಲು, ಮೊಸರು, ಅನ್ನ, ಬಿಳಿ ಎಳ್ಳು ಸೇರಿದಂತೆ ಬಿಳಿ ವಸ್ತುಗಳಿಂದ ತಯಾರಿಸಿದ ಆಹಾರವನ್ನು ಸೇವಿಸುವುದರಿಂದ ಶುಭ ಫಲಗಳು ದೊರೆಯುತ್ತದೆ ಎಂದು ಹೇಳುತ್ತಾರೆ.

Astro Tips: ಈ ಮಂತ್ರಗಳನ್ನು ಪಠಿಸಿದರೆ ವಿಷ್ಣುವಿನ ಅನುಗ್ರಹ ಶೀಘ್ರ, ಇಷ್ಟಾರ್ಥ ಸಿದ್ಧಿ!

ಹಾಗೇ ಸೋಮವಾರ ದಿನ ಬಿಳಿ ಬಣ್ಣದ ಗೋವಿಗೆ ಆಹಾರ ಅಥವಾ ಗೋಗ್ರಾಸ ನೀಡುವುದು ಪುಣ್ಯಕರ ಕಾರ್ಯವೆಂದು ನಂಬಲಾಗಿದೆ.

ಶಿವಲಿಂಗದ ಮೇಲೆ 11 ಬಿಲ್ವಪತ್ರೆಗಳು ಹಾಗೂ ಬಿಳಿ ಎಳ್ಳು ಸೇರಿಸಿ ಜಲಾಭಿಷೇಕ ಮಾಡುವುದರಿಂದ ಶುಭ ಫಲ ದೊರಕುತ್ತದೆ ಎಂಬ ನಂಬಿಕೆ ಇದೆ.

ಸೋಮವಾರದಂದು ತಪ್ಪಿಯೂ ಈ ಕೆಲಸಗಳನ್ನು ಮಾಡಬೇಡಿ:

ಚಂದ್ರ ದೋಷ ಇರುವವರು ಈ ದಿನ ಸಕ್ಕರೆ ಸೇವನೆಯನ್ನು ತಪ್ಪಿಸಬೇಕು.

ತಾಯಿಯೊಂದಿಗೆ ವಾದವಿವಾದ ಮಾಡಬಾರದು.
ತಾಮಸಿಕ ಆಹಾರ ಸೇವಿಸದೆ, ನೀರು ಅಥವಾ ಶಾಂಪೂ ಬಳಸಿ ಕೂದಲು ತೊಳೆಯುವುದನ್ನು ತಪ್ಪಿಸುವುದು ಒಳ್ಳೆಯದು.

ಮಹಿಳೆಯರು ಹಾಗೂ ಹಿರಿಯರನ್ನು ಅವಮಾನಿಸಬಾರದು ಇದರಿಂದ ಜಗದೊಡೆಯ ಈಶ್ವರ ಕೋಪಗೊಳ್ಳುತ್ತಾನೆ.

ನೀರನ್ನು ಅನಾವಶ್ಯಕವಾಗಿ ವ್ಯರ್ಥ ಮಾಡಬಾರದು.
ಶನಿಗೆ ಸಂಬಂಧಿಸಿದ ಬದನೆ, ಹಲಸು, ಕಪ್ಪು ಎಳ್ಳು, ಕಪ್ಪು ಉಂಡೆ ಮೊದಲಾದ ಆಹಾರಗಳನ್ನು ಈ ದಿನ ಸೇವಿಸುವುದನ್ನು ತಪ್ಪಿಸಬೇಕು.

ಕಪ್ಪು, ನೀಲಿ ಅಥವಾ ಗಾಢ ಬಣ್ಣದ ಶನಿಗೆ ಸಂಬಂಧಿಸಿದ ಬಟ್ಟೆಗಳನ್ನು ಧರಿಸುವುದನ್ನೂ ನಿರಾಕರಿಸುವುದು ಒಳಿತು.

ಇನ್ನೂ ಸೋಮವಾರ ದಿನದಂದು ಪೂರ್ವ, ಉತ್ತರ ಹಾಗೂ ಅಗ್ನಿ ದಿಕ್ಕಿಗೆ ಪ್ರಯಾಣ ಮಾಡಬಾರದು. ವಿಶೇಷವಾಗಿ ಪೂರ್ವ ದಿಕ್ಕಿನ ಪ್ರಯಾಣವನ್ನು ನಿಷೇಧಿಸಲಾಗಿದೆ. ಈ ದಿಕ್ಕಿನಲ್ಲಿ ಅಶುಭಗಳಿಗೆ ಅಥವಾ ವೈಫಲ್ಯಕ್ಕೆ ಕಾರಣವಾಗುತ್ತದೆ ಎಂದು ಹೇಳಲಾಗುತ್ತದೆ.

ಶಾಸ್ತ್ರಗಳ ಪ್ರಕಾರ, ಸೋಮವಾರದಂದು ಈ ನಿಯಮಗಳನ್ನು ಉಲ್ಲಂಘಿಸಿದರೆ ಶಿವನ ಅಸಮಾಧಾನಕ್ಕೆ ಗುರಿಯಾಗುವ ಸಾಧ್ಯತೆಯಿದ್ದು, ಜೊತೆಗೆ ಶನಿಯ ದುಷ್ಪರಿಣಾಮಗಳನ್ನೂ ಎದುರಿಸಬೇಕಾಗುತ್ತದೆ ಎಂಬ ನಂಬಿಕೆ ಇದೆ.