Navaratri 2025: ನವರಾತ್ರಿಯ ಎರಡನೇ ದಿನ: ಬ್ರಹ್ಮಚಾರಿಣಿಯನ್ನು ಏಕೆ ಪೂಜಿಸಲಾಗುತ್ತದೆ?
ನವರಾತ್ರಿಯ (Navaratri 2025) ಮೊದಲ ದಿನ ಶೈಲಪುತ್ರಿಯನ್ನು ಪೂಜಿಸಿದರೆ ಎರಡನೇ ದಿನ ಬ್ರಹ್ಮಚಾರಿಣಿಯನ್ನು ಪೂಜಿಸಲಾಗುತ್ತದೆ. ಪೂರ್ಣ ಜ್ಯೋತಿರ್ಮಯ ಸ್ವರೂಪವಾಗಿರುವ ಬ್ರಹ್ಮಚಾರಿಣಿ ದೇವಿಯು ತಪಸ್ಸು, ತ್ಯಾಗ, ವೈರಾಗ್ಯ, ಸದಾಚಾರ, ಸಂಯಮದ ಪ್ರತೀಕವಾಗಿದೆ. ಇವಳನ್ನು ಯಾಕೆ ಪೂಜಿಸಲಾಗುತ್ತದೆ ಎನ್ನುವ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ.

-

ಬೆಂಗಳೂರು: ನವರಾತ್ರಿಯ (Navaratri 2025) ಮೊದಲ ದಿನ ಶೈಲಪುತ್ರಿಯನ್ನು ಪೂಜಿಸಿದರೆ ಎರಡನೇ ದಿನ ಬ್ರಹ್ಮಚಾರಿಣಿಯನ್ನು ಪೂಜಿಸಲಾಗುತ್ತದೆ. ಪಾರ್ವತಿ ದೇವಿಯು (Parvati devi) ಶಿವನನ್ನು ಸೇರಲು ಕಠಿಣ ತಪಸ್ಸು ಮಾಡಿದ ಕಾರಣ ಅವಳಿಗೆ ಬ್ರಹ್ಮಚಾರಿಣಿ (Brahmacharini) ಅಂದರೆ ತಪಸ್ಸನ್ನು ಆಚರಿಸಿದವಳು ಎನ್ನುವ ಹೆಸರು ಬಂದಿತ್ತು. ಬಿಳಿ ಸೀರೆಯುಟ್ಟು, ಒಂದು ಕೈಯಲ್ಲಿ ಜಪಮಾಲೆ, ಇನ್ನೊಂದರಲ್ಲಿ ಕಮಂಡಲ ಹಿಡಿದಿರುವ ದುರ್ಗೆಯ (durga devi) ಈ ರೂಪವು ಸತ್ಯ ಮತ್ತು ಬ್ರಹ್ಮ ಅನ್ವೇಷಣೆಯಲ್ಲಿ ಸಾಗುವಾಗ ತ್ಯಾಗ ಮತ್ತು ಸಂಯಮದ ಹಾದಿಯಿಂದ ದಾರಿ ತಪ್ಪಬಾರದು ಎನ್ನುವ ಸಂದೇಶ ನೀಡುತ್ತದೆ.
ಹಿನ್ನೆಲೆ
ಶಿವನನ್ನೇ ಪತಿಯಾಗಿ ಪಡೆಯಬೇಕು ಎಂದು ಬ್ರಹ್ಮಚಾರಿಣಿ ರೂಪದಲ್ಲಿ ಪಾರ್ವತಿ ದೇವಿಯು ಸುಮಾರು 5,000 ವರ್ಷಗಳ ಕಾಲ ಕಠಿಣ ತಪಸ್ಸನ್ನು ಮಾಡಿದಳು. ಈ ವೇಳೆ ಅವಳು ಹಲವಾರು ರೀತಿಯ ಸಂಕಷ್ಟಗಳನ್ನು ಎದುರಿಸುತ್ತಾಳೆ. ತಪಸ್ಸನ್ನು ಆಚರಿಸುತ್ತಾ ಆಕೆ ಮೊದಲು ಕೇವಲ ಹಣ್ಣುಗಳನ್ನುತಿಂದರೆ ಬಳಿಕ ಒಣಗಿದ ಬಿಲ್ವಪತ್ರೆಗಳನ್ನು ತಿನ್ನಲು ಆರಂಭಿಸಿದಳು. ಬಳಿಕ ಅದನ್ನು ಬಿಟ್ಟುಬಿಟ್ಟಳು. ಅಂತಿಮವಾಗಿ ಸಂಪೂರ್ಣ ಆಹಾರ ತ್ಯಜಿಸಿದ ಆಕೆಗೆ ಒಲಿದ ಬ್ರಹ್ಮನು ಶಿವನನ್ನು ಮದುವೆಯಾಗು ಎಂದು ವರ ನೀಡಿದ ಎನ್ನಲಾಗುತ್ತದೆ.
ಬ್ರಹ್ಮ ಎಂದರೆ ತಪಸ್ಸು ಎಂದರ್ಥ. ಬ್ರಹ್ಮ ಚಾರಿಣಿ ಎಂದರೆ ತಪಸ್ಸನ್ನು ಆಚರಿಸುವ ದೇವಿ. ಇದು ದುರ್ಗಾ ದೇವಿಯ ಪೂರ್ಣ ಜ್ಯೋತಿರ್ಮಯ ಸ್ವರೂಪವಾಗಿದ್ದು, ಇವಳನ್ನು ಅಪರ್ಣಾ, ಉಮಾ ಎಂದು ಕೂಡ ಕರೆಯಲಾಗುತ್ತದೆ. ಇವಳನ್ನು ಆರಾಧಿಸುವುದರಿಂದ ತಪಸ್ಸು, ತ್ಯಾಗ, ವೈರಾಗ್ಯ, ಸದಾಚಾರ, ಸಂಯಮ ಸಿದ್ಧಿಸುತ್ತದೆ.
ಆರಾಧನೆಯಿಂದ ಏನು ಫಲ?
ನವರಾತ್ರಿಯ ಒಂಬತ್ತು ದಿನಗಳಲ್ಲಿ ಒಂದೊಂದು ದಿನ ಒಂದೊಂದು ದೇವಿಯ ರೂಪವನ್ನು ಪೂಜಿಸಲಾಗುತ್ತದೆ. ದುರ್ಗೆಯ ಪ್ರತೀ ರೂಪಕ್ಕೂ ಒಂದೊಂದು ವಿಶೇಷತೆ ಇದೆ. ಮಹಿಳೆಯರ ಶಕ್ತಿ ಹಾಗೂ ಬಲವನ್ನು ತೋರಿಸುವ ದೇವಿಯ ಸ್ವರೂಪವೇ ಬ್ರಹ್ಮಚಾರಿಣಿ ದೇವಿ. ಬ್ರಹ್ಮಚಾರಿಣಿ ದೇವಿಯನ್ನು ಪೂಜಿಸುವುದರಿಂದ ಶಾಂತಿ, ಸಂತೋಷ ಸಿಗುವುದು, ಸಂಕಲ್ಪ ಸಿದ್ಧಿಸುವುದು ಎಂದು ನಂಬಲಾಗಿದೆ. ಬ್ರಹ್ಮಚಾರಿಣಿ ದೇವಿಯನ್ನು ಪೂಜಿಸುವುದರಿಂದ ತಮ್ಮ ಕಾರ್ಯಗಳು ನಿರ್ವಿಘ್ನವಾಗಿ ನೆರವೇರುವುದು ಎನ್ನುವ ನಂಬಿಕೆ ಇದೆ.
ಧರ್ಮದ ಜ್ಞಾನ ಪಡೆಯ ಬಯಸುವವರು ಬ್ರಹ್ಮಚಾರಿಣಿ ದೇವಿಯನ್ನು ಪೂಜಿಸಿದರೆ ಆಕೆ ಮನಸ್ಸನ್ನು ಕದಡಿಸಲು ಬಿಡುವುದಿಲ್ಲ. ಆದರೆ ಈ ದೇವಿಯ ಸ್ವರೂಪವನ್ನು ಅತ್ಯಂತ ಶ್ರದ್ಧೆ, ಭಕ್ತಿ ಹಾಗೂ ಸಂಕಲ್ಪದೊಂದಿಗೆ ಪೂಜಿಸಬೇಕು.
ಇದನ್ನೂ ಓದಿ: Sabarimala: ಶಬರಿಮಲೆಯಲ್ಲಿ ಚಿನ್ನ ನಾಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಕಳುವಾಗಿದ್ದ ಸಂಪತ್ತು ದೇವಸ್ಥಾನಕ್ಕೆ ವಾಪಸ್
ಭಾರತದಲ್ಲಿರುವ ಬ್ರಹ್ಮಚಾರಿಣಿ ದೇವಿಯ ದೇವಾಲಯ
ಉತ್ತರಪ್ರದೇಶದ ಗಂಗಾ ಮತ್ತು ಘಾಘ್ರಾ ನದಿಗಳ ನಡುವೆ ಇರುವ ಬಲ್ಲಿಯಾದ ಹನುಮಾನ್ ಗಂಜ್ ಪ್ರದೇಶದಲ್ಲಿ ದೇಶದ ಅತ್ಯಂತ ಪ್ರಸಿದ್ಧ ಮಾ ಬ್ರಹ್ಮಚಾರಿಣಿ ದೇವಿ ದುರ್ಗಾ ಮಂದಿರವಿದೆ. ಇದು ಅತ್ಯಂತ ಪ್ರಾಚೀನ ದೇವಾಲಯವಾಗಿದೆ. ಹನುಮಾನ್‌ಗಂಜ್‌ಗೆ ಹತ್ತಿರವಿರುವ ಬ್ರಾಹ್ಮಿಣೆ ಗ್ರಾಮದಲ್ಲಿ ಮಹರ್ಷಿ ಭೃಗುವಿನ ಪೋಷಕರು ಯಜ್ಞಯಾಗಾದಿಗಳನ್ನು ಮಾಡುತ್ತಿರುತ್ತಾರೆ. ಈ ವೇಳೆ ಭಗವತಿ ದೇವಿಯು ಬಾಣಾಸುರನೆಂಬ ರಾಕ್ಷಸನನ್ನು ವಧಿಸಲು ಅವತರಿಸಿದಳು. ಹೀಗಾಗಿ ಇಲ್ಲಿ ದೇವಿಯನ್ನು ಕನ್ಯೆಯ ರೂಪದಲ್ಲಿ ಪೂಜಿಸಲಾಗುತ್ತದೆ.