ಬೆಂಗಳೂರು: ನವರಾತ್ರಿಯ (Navaratri 2025) ಏಳನೇ ದಿನ ನವದುರ್ಗೆಯರ ಒಂಬತ್ತು ರೂಪಗಳಲ್ಲಿ ಅತ್ಯಂತ ಉಗ್ರ ರೂಪವಾದ ಮಹಾಕಾಳಿ (Mahakali) ಅಥವಾ ಕಾಳರಾತ್ರಿ (Kalaratri) ದೇವಿಯನ್ನು ಪೂಜಿಸಲಾಗುತ್ತದೆ. ಈಕೆಯ ನೋಟವೇ ನೋಡುಗರಲ್ಲಿ ಭಯವನ್ನು ಉಂಟು ಮಾಡುತ್ತದೆ. ನಕಾರಾತ್ಮಕ ಶಕ್ತಿಗಳನ್ನು ನಾಶ ಮಾಡುವ ದೇವಿಯಾಗಿ ಈಕೆಯನ್ನು ಪೂಜಿಸಲಾಗುತ್ತದೆ. ಕಾಳರಾತ್ರಿ ದೇವಿಯು ಮೂರು ಕಣ್ಣುಗಳನ್ನು ಹೊಂದಿದ್ದು, ಕತ್ತೆಯ ಮೇಲೆ ಕುಳಿತು ಸವರಿ ಮಾಡುತ್ತಾಳೆ. ನಾಲ್ಕು ಕೈಗಳಲ್ಲಿ ಎರಡು ವರ, ರಕ್ಷಣೆ ನೀಡುವ ಮುದ್ರೆಯಲ್ಲಿದ್ದು, ಇನ್ನೆರಡು ಕೈಗಳಲ್ಲಿ ಖಡ್ಗ ಮತ್ತು ಬೆಂಕಿಹಿಡಿದಿದ್ದಾಳೆ. ಕಡು ಕಪ್ಪು ಮೈ ಬಣ್ಣವನ್ನು ಹೊಂದಿರುವ ಈಕೆಯ ನಾಲಿಗೆಯು ಬಾಯಿಯಿಂದ ಹೊರಗೆ ಚಾಚಿಕೊಂಡಿರುವ ಭಂಗಿಯಲ್ಲಿ ತೋರಿಸಲಾಗುತ್ತದೆ.
ಹಿನ್ನೆಲೆ
ಪಾರ್ವತಿ ದೇವಿಯ ದೇಹದಿಂದ ಅಂಬಿಕಾ ದೇವಿಯು ಹೊರಬಂದ ಬಳಿಕ ಆಕೆಯ ಮೈಬಣ್ಣ ಅತ್ಯಂತ ಕಪ್ಪಾಗುತ್ತದೆ. ಹೀಗಾಗಿ ಪಾರ್ವತಿಗೆ ಕಾಳಿಕಾ ಮತ್ತು ಕಾಳರಾತ್ರಿ ಎನ್ನುವ ಹೆಸರು ಬಂತು.
ಶುಂಭ, ನಿಶುಂಭ, ಚಂಡ ಮುಂಡ, ರಕ್ತಬೀಜಾಸುರನ ಸಂಹಾರಕ್ಕಾಗಿ ಪಾರ್ವತಿ ದೇವಿಯು ಮಹಾಕಾಳಿಯ ರೂಪ ತಾಳಿದಳು. ಈ ಮೂಲಕ ಎಲ್ಲ ದುಷ್ಟಶಕ್ತಿಗಳನ್ನು ನಾಶ ಮಾಡಿದ ದುರ್ಗೆಯು ದುಷ್ಟತೆ ಮತ್ತು ನಕಾರಾತ್ಮಕ ಶಕ್ತಿಯನ್ನು ದೂರ ಮಾಡುವ ದೇವಿಯಾಗಿ ಗುರುತಿಸಿಕೊಂಡಿದ್ದಾಳೆ. ಈಕೆಗೆ ಚಾಮುಂಡಿ, ಅಂಬಿಕೆ ಎನ್ನುವ ಹೆಸರು ಕೂಡ ಇದೆ.
ಕಾಳರಾತ್ರಿ ಹೆಸರಿನ ಅರ್ಥ ಕಾಲ ಎಂದರೆ ಸಾವು, ರಾತ್ರಿ ಎಂದರೆ ಕಟ್ಟಲು. ಇದರ ಪೂರ್ಣ ಅರ್ಥ ವಿನಾಶದ ರಾತ್ರಿ. ಇದು ಮಹಾಕಾಳಿಯ ವಿನಾಶಕಾರಿ ರೂಪವನ್ನು ಪ್ರತಿನಿಧಿಸುತ್ತದೆ. ಕಾಳರಾತ್ರಿಯನ್ನು ಮಾ ಶುಭಂಕರಿ ಎಂದೂ ಕರೆಯುತ್ತಾರೆ. ಇದರ ಅರ್ಥ ಒಳ್ಳೆಯದನ್ನು ಮಾಡುವವಳು.
ಆರಾಧನೆಯಿಂದ ಏನು ಫಲ?
ದೇವಿ ಕಾಳರಾತ್ರಿಯು ಶನಿ ಗ್ರಹದ ಅಧಿಪತಿ. ಈಕೆ ಒಳ್ಳೆಯದನ್ನು ರಕ್ಷಿಸುವ ದೇವಿ. ಕಠಿಣ ಪರಿಶ್ರಮ ಮತ್ತು ಪ್ರಾಮಾಣಿಕತೆಯನ್ನು ಗುರುತಿಸುತ್ತಾಳೆ. ಕಾಳರಾತ್ರಿ ದೇವಿಯನ್ನು ಪೂಜಿಸುವುದರಿಂದ ಭಯ ನಿವಾರಣೆಯಾಗುವುದು. ಅಭಿವೃದ್ಧಿಗೆ ಇರುವ ತೊಂದರೆಗಳು ದೂರವಾಗುವುದು, ದೀರ್ಘಕಾಲದ ರೋಗ ವಾಸಿಯಾಗುವುದು, ಮಾನಸಿಕ ಶಾಂತಿ ಹಾಗೂ ಸುಖಕ್ಕಾಗಿ ಈಕೆಯನ್ನು ಪ್ರಾರ್ಥಿಸಬೇಕು ಎನ್ನುವ ನಂಬಿಕೆ ಇದೆ.
ಇದನ್ನೂ ಓದಿ: Navaratra Namasya: ನವರಾತ್ರಿ ಎಂದರೆ ಮನರಂಜನೆಯಲ್ಲ, ಅದು ದೇವಿಯ ಆರಾಧನೆ ಕಾಲ: ರಾಘವೇಶ್ವರ ಶ್ರೀ
ಕಾಳರಾತ್ರಿ ದೇವಿಯ ದೇವಸ್ಥಾನ
ಕಾಳರಾತ್ರಿ ದೇವಿಯ ಕೆಲವು ಪ್ರಸಿದ್ಧ ದೇವಾಲಯಗಳು ವಾರಣಾಸಿ, ಪಟಿಯಾಲ, ಸಂಗ್ರೂರ್ ನಲ್ಲಿದೆ. ವಾರಣಾಸಿಯಲ್ಲಿರುವ ಕಾಳರಾತ್ರಿ ದೇವಸ್ಥಾನವು ಕಾಳಿಕಾ ಗಲ್ಲಿಯಲ್ಲಿ ಇದೆ. ಪಂಜಾಬ್‌ನ ಪಟಿಯಾಲ, ಸಂಗ್ರೂರ್ ನಲ್ಲಿಯೂ ಕಾಳರಾತ್ರಿ ದೇವಾಲಯವಿದೆ.