ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Shivratri Fasting: ಶಿವರಾತ್ರಿ ಉಪವಾಸ- ಆರೋಗ್ಯಕ್ಕೆ ಏನು ಲಾಭವಿದೆ?

ಮೊದಲಿನಿಂದಲೂ ಚಾಲ್ತಿಯಲ್ಲಿರುವ ಶಿವರಾತ್ರಿಯ ಉಪವಾಸ, ವಾರಕ್ಕೊಮ್ಮೆ ಒಪ್ಪತ್ತು, ಏಕಾದಶಿಗೆ ವ್ರತ, ಸಂಕಷ್ಟಿಗೆ ಉಪವಾಸದಂಥ ಕ್ರಮಗಳು ಆರೋಗ್ಯಕ್ಕೆ ಬೇಕಾದಂಥವು. ಸ್ವಾಮಿ ಕಾರ್ಯ, ಸ್ವಕಾರ್ಯ ಎಂಬಂತೆ- ದೇವರ ಮೆಚ್ಚುಗೆಗೆ, ಆರೋಗ್ಯದ ಹೆಚ್ಚಳಕ್ಕೆ- ಎರಡಕ್ಕೂ ಆಯಿತೆನ್ನುವ ಉಪವಾಸವನ್ನು ವ್ರತವಾಗಿಸಿ ಬಹಳಷ್ಟು ಸಂದರ್ಭಗಳಲ್ಲಿ ಆಚರಿಸಲಾಗುತ್ತದೆ. ಶಿವರಾತ್ರಿಯ ಹೊಸ್ತಿಲಲ್ಲಿ ನಿಂತು, ಉಪವಾಸದ ಮಹತ್ವವೇನು ಎಂಬುದನ್ನು ತಿಳಿಯೋಣವೇ?

ಉಪವಾಸ ಒಳ್ಳೆಯದೇ? ಆರೋಗ್ಯಕ್ಕೆ ಸಿಗುವ ಪ್ರಯೋಜನವೇನು?

Profile Pushpa Kumari Feb 25, 2025 10:55 AM

ನವದೆಹಲಿ: ಆಹಾರವೇ ರೋಗಗಳಿಗೆ ಕಾರಣವಾಗುತ್ತಿರುವ ಇಂದಿನ ದಿನಗಳಲ್ಲಿ ಉಪವಾಸವೇ ಮದ್ದಿನಂತೆ ಕೆಲಸ ಮಾಡುತ್ತಿದೆ. ಒಂದಿಲ್ಲೊಂದು ಕಾರಣಕ್ಕೆ ಉಪವಾಸ ಮಾಡುವ ಶ್ರದ್ಧೆಯನ್ನು ತನ್ನ ಅನುಯಾಯಿಗಳಿಗೆ ಪ್ರತಿಯೊಂದು ಧರ್ಮವೂ ಬೋಧಿಸುತ್ತದೆ. ಸ್ವಾಮಿ ಕಾರ್ಯ, ಸ್ವಕಾರ್ಯ ಎಂಬಂತೆ- ದೇವರ ಮೆಚ್ಚುಗೆಗೆ, ಆರೋಗ್ಯದ ಹೆಚ್ಚಳಕ್ಕೆ- ಎರಡಕ್ಕೂ ಆಯಿತೆನ್ನುವ ಉಪವಾಸವನ್ನು ವ್ರತವಾಗಿಸಿ ಬಹಳಷ್ಟು ಸಂದರ್ಭಗಳಲ್ಲಿ ಆಚರಿಸಲಾಗುತ್ತದೆ. ಶಿವರಾತ್ರಿಯ ಹೊಸಿಲಲ್ಲಿ ನಿಂತು, ಉಪವಾಸದ (Shivratri Fasting) ಮಹತ್ವವೇನು ಎಂಬುದನ್ನು ತಿಳಿಯೋಣವೇ?

ವರ್ಷವಿಡೀ ಸಂಭ್ರಮಿಸುತ್ತಾ ಬದುಕನ್ನು ಚಂದವಾಗಿಸುವ ನಮ್ಮ ದೇಶದಲ್ಲಿ ಶಿವರಾತ್ರಿಯ ಆಚರಣೆಗೊಂದು ವಿಶೇಷ ಮಹತ್ವವಿದೆ. ತ್ರಿಮೂರ್ತಿಗಳಲ್ಲಿ ಒಬ್ಬನಾದ ಈತ ಸೃಷ್ಟಿಯಲ್ಲಿ ಸ್ಥಿತಿಯಿಂದ ಹೊರತಾದ ಎಲ್ಲವನ್ನೂ ಲಯ ಮಾಡುವವ. ಹೊಸ ಹುಟ್ಟಿಗೆ ಅವಕಾಶ ಉಂಟಾಗುವುದು ಹಳತೆಲ್ಲ ಹೋದಾಗಲೇ ತಾನೇ? ಅಂದರೆ ಹೊಸ ಹುಟ್ಟೆಂದರೆ ಹೊಸ ಶಕ್ತಿಯ ಹುಟ್ಟೂ ಹೌದು. ಶಿವರಾತ್ರಿಯೆಂದರೆ ಹೊಸಶಕ್ತಿಯನ್ನು ಮೈಗೂಡಿಸಿಕೊಳ್ಳುವುದು ಎಂಬ ಭಾವವೂ ಇದೆ. ಇನ್ನೂ ಸರಳವಾಗಿ ಹೇಳಬೇಕೆಂದರೆ, ಉಪವಾಸದಿಂದ ಬೇಡದ್ದನ್ನು ಕಳೆದುಕೊಂಡು, ಜಗನ್ನಿಯಾಮಕನ ಧ್ಯಾನದಿಂದ ಹೊಸಶಕ್ತಿಯನ್ನು ಮೈಗೂಡಿಸಿಕೊಳ್ಳುವ ಕಾಲ.

ಉಪವಾಸ: ದೇಹ ಮತ್ತು ಮನಸ್ಸುಗಳ ಶುದ್ಧೀಕರಣಕ್ಕೆ ಇದು ಅತ್ಯಂತ ಮಹತ್ವದ್ದು ಎಂದು ಹೇಳಲಾಗುತ್ತದೆ. ಈಗಿನ ಭಾಷೆಯಲ್ಲಿ ಹೇಳುವುದಾದರೆ, ದೇಹ-ಮನಸ್ಸುಗಳನ್ನು ಡಿಟಾಕ್ಸ್‌ ಮಾಡುವ ಕ್ರಮವಿದು. ಮೊದಲಿನಿಂದಲೂ ಚಾಲ್ತಿಯಲ್ಲಿರುವ ಶಿವರಾತ್ರಿಯ ಉಪವಾಸ, ವಾರಕ್ಕೊಮ್ಮೆ ಒಪ್ಪತ್ತು, ಏಕಾದಶಿಗೆ ವ್ರತ, ಸಂಕಷ್ಟಿಗೆ ಉಪವಾಸದಂಥ ಕ್ರಮಗಳು ಆರೋಗ್ಯಕ್ಕೆ ಬೇಕಾದಂಥವು. ಇದರಿಂದ ಜೀರ್ಣಾಂಗಗಳಿಗೆ ಬೇಕಾದ ವಿರಾಮವೂ ದೊರೆತು, ಚಯಾಪಚಯ ಸುಧಾರಿಸುತ್ತದೆ. ಬೇಡದ್ದನ್ನು ದೇಹದಿಂದ ಹೊರಹಾಕಲು ಸಾಧ್ಯ ವಾಗುತ್ತದೆ. ಜೊತೆಗೆ ಉಳಿದಂತೆ ಆ ದಿನಗಳಲ್ಲಿ ತೆಗೆದುಕೊಳ್ಳುವ ಸಾತ್ವಿಕ ಆಹಾರದಿಂದ ಅನಗತ್ಯ ಕ್ಯಾಲರಿಗಳು ದೇಹ ಸೇರುವುದು ತಪ್ಪುತ್ತದೆ. ಇದರಿಂದ ತೂಕ ನಿಯಂತ್ರಣಕ್ಕೆ ಅನುಕೂಲ ಆಗಬಹುದು. ಆದರೆ ವಾರವಿಡೀ ಏಕಾದಶಿ, ತಿಂಗಳಿಡೀ ಸಂಕಷ್ಟಿ ಮಾಡುವುದು ಸರಿಯಲ್ಲ ಎನ್ನುತ್ತಾರೆ ಆಹಾರ ತಜ್ಞರು. ಇದಕ್ಕೆ ಕಾರಣಗಳು ಹಲವು.

ಉಪಯೋಗವೇನು?: ಉಪವಾಸವನ್ನು ಸರಿಯಾದ ಕ್ರಮದಲ್ಲಿ ಮಾಡಿದಾಗ ಹಲವು ಧನಾತ್ಮಕ ಪರಿಣಾಮಗಳನ್ನು ದೇಹ ಬಿಂಬಿ ಸುತ್ತದೆ. ಚಯಾಪಚಯ ಚುರುಕಾಗುತ್ತದೆ; ತೂಕ ಇಳಿಕೆಗೆ ನೆರ ವಾಗುತ್ತದೆ; ಚರ್ಮದ ಆರೋಗ್ಯ ಸುಧಾರಿಸುತ್ತದೆ; ಮೆದುಳಿನ ಕ್ಷಮತೆ ಹೆಚ್ಚುತ್ತದೆ. ಆದರೆ ಅದನ್ನೇ ತಪ್ಪಾಗಿ ಮಾಡಿದರೆ ಸುಸ್ತು, ಆಯಾಸ, ತಲೆ ಸುತ್ತುವುದು, ರಕ್ತದೊತ್ತಡ ಏರಿಳಿಯುವುದು, ಸಕ್ಕರೆಯಂಶ ಹದ ತಪ್ಪುವುದು, ನಿರ್ಜಲೀಕರಣ ಮುಂತಾದ ಅಡ್ಡ ಪರಿಣಾಮಗಳು ತಲೆ ದೋರುತ್ತವೆ. ಹಾಗಾಗಿಯೇ ಶಿವರಾತ್ರಿಯಲ್ಲಿ ಹಣ್ಣಿನ ಪಾನಕ, ಕೋಸಂಬರಿಗಳನ್ನು ಸೇವಿಸುವ ಕ್ರಮವಿದೆ.

ಕೊರತೆ: ದೀರ್ಘ ಕಾಲದ ಉಪವಾಸದಿಂದ ದೇಹಕ್ಕೆ ಅಗತ್ಯವಾದ ನೀರು, ವಿಟಮಿನ್‌ಗಳು, ಖನಿಜಗಳು ಮತ್ತು ಎಲೆಕ್ಟ್ರೋಲೈಟ್‌ಗಳ ಕೊರತೆ ಎದುರಾಗಬಹುದು. ಅದರಲ್ಲೂ ಈಗಾಗಲೇ ಬೇಸಿಗೆ ಆರಂಭ ವಾಗಿರುವ ಹಿನ್ನೆಲೆಯಲ್ಲಿ, ನೀರೂ ಕುಡಿಯದಂಥ ನಿಟ್ಟುಪವಾಸದಿಂದ ಅಂಗಾಂಗ ವೈಫಲ್ಯಕ್ಕೆ ಒಳಗಾದವರೂ ಇದ್ದಾರೆ. ಹಾಗಾಗಿ ನಿಮ್ಮ ದೇಹದ ಸ್ಥಿತಿ-ಗತಿಯ ಬಗ್ಗೆ ಮೊದಲಿಗೆ ವೈದ್ಯರಲ್ಲಿ ಸಮಾಲೋಚಿಸಿ. ಅವರ ಸಲಹೆಯಂತೆ ಶಿವರಾತ್ರಿಯ ವ್ರತವನ್ನು ಕೈಗೆತ್ತಿಕೊಳ್ಳಿ.

ಇಂಥವರು ಜಾಗ್ರತೆ!: ಚುಟುಕು ಉಪವಾಸ ಒಳ್ಳೆಯದೆ. ಆದರೆ ದೀರ್ಘಕಾಲದ ಉಪವಾಸದಿಂದ ದೇಹ ಬಳಲಬಹುದು. ಅದರಲ್ಲೂ ಮಧುಮೇಹ ಮತ್ತು ರಕ್ತದೊತ್ತಡದಂಥ ಸಮಸ್ಯೆಗಳಿದ್ದರೆ ಇಂಥವೆಲ್ಲ ಸರಿಯಲ್ಲ. ಹಾಗೂ ಉಪವಾಸ ಮಾಡಬೇಕೆಂದಿದ್ದರೆ ಈ ಬಗ್ಗೆ ವೈದ್ಯರಲ್ಲಿ ಅಥವಾ ನೋಂದಾಯಿತ ಆಹಾರ ತಜ್ಞರಲ್ಲಿ ಸಮಾ ಲೋಚನೆ ಮಾಡುವುದು ಉತ್ತಮ. ಹೃದಯ ಸಮಸ್ಯೆಗಳು ಅಥವಾ ಕೋಮಾರ್ಬಿಟಿಸ್‌ ಇದ್ದವರಲ್ಲಿ ರಕ್ತದೊತ್ತಡ ಇಲ್ಲವೇ ಸಕ್ರೆಯಂಶಗಳು ಉಪವಾಸದಿಂದ ದಿಢೀರ್‌ ಏರಿಳಿತವಾಗುವ ಸಂಭವವಿದೆ. ಇದರಿಂದ ಜೀವಕ್ಕೂ ಅಪಾಯ ಸಂಭವಿಸಬಹುದು.

ಇದನ್ನು ಓದಿ: Health Tips: ಖಾಲಿ ಹೊಟ್ಟೆಗೆ ನೆನೆಸಿದ ಮೆಂತೆಕಾಳು ನೀರು ಕುಡಿಯುವುದರಿಂದ ಸಿಗುತ್ತೆ ಇಷ್ಟೆಲ್ಲ ಪ್ರಯೋಜನ

ಎಲ್ಲರೂ ಮಾಡಬಹುದೇ: ಒಂದೊಂದು ದಿನದ ಉಪವಾಸವನ್ನು ಹೆಚ್ಚಿನವರು ಮಾಡಬಹುದು. ಆದರೆ ವೃದ್ಧರು, ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರು ಈ ಬಗ್ಗೆ ವೈದ್ಯರಲ್ಲಿ ಸಮಾಲೋಚಿ ಸಬೇಕು. ಉಪವಾಸದ ವಿಷಯದಲ್ಲಿ ಎಲ್ಲರಿಗೂ ಒಂದೇ ಸೂತ್ರವನ್ನು ಹೇಳಲಾಗದು. ಅವರವರ ದೇಹಸ್ಥಿತಿಯನ್ನು ಗಮನಿಸಿದ ನಂತರವೇ ಉಪವಾಸ ಮಾಡಬಹುದೇ ಎಂಬುದನ್ನು ನಿರ್ಧರಿಸುವುದು ಸರಿಯಾದ ಕ್ರಮ