Spoorthi Vani Column: ಅಹಂಕಾರ, ಮಮಕಾರಗಳೆಂಬ ಅಧಿಕಾರದ ಅಡ್ಡಪರಿಣಾಮಗಳನ್ನು ಮೀರಲು ಜನಕರಾಜನ ತಂತ್ರವೇ ಮಾದರಿ
ಅಹಂಕಾರವು ಎಂದಿಗೂ ಒಳ್ಳೆಯದಲ್ಲ, ಆದರೆ, ಯಾರಾದರೂ ಏನಾದರೂ ಶ್ಲಾಘನೀಯ ಕೆಲಸವನ್ನು ಮಾಡಿದಾಗ, ಸ್ವಲ್ಪ ಅಹಂಕಾರವಿದ್ದರೆ ಅದನ್ನು ಸಹಿಸಿಕೊಳ್ಳಬಹುದು. ಆದರೆ, ಸೋಮಾರಿಗಳು ಬಹಳ ಅಹಂಕಾರದಿಂದ ಮೆರೆಯುವಾಗ ಸಹಿಸಿಕೊಳ್ಳುವುದು ಕಷ್ಟ. ನಿಮಗೆ ಹುದ್ದೆಯೊಂದು ದೊರಕಿದಾಗ, ತಕ್ಷಣ ನಿಮಗೆ ಕಿರೀಟ ಧಾರಣೆಯಾಗುತ್ತದೆ. ಹೊಸ ಆಸನದ ವ್ಯವಸ್ಥೆ ಮಾಡುತ್ತಾರೆ. ನೀವು ಇದರಿಂದ ಪರೀಕ್ಷೆಗಳಿಗೆ ಒಳಪಡುತ್ತೀರಿ ಎನ್ನುವುದನ್ನು ಗಮನಿಸಬೇಕು.

-

- ಸದ್ಗುರು ಶ್ರೀ ಮಧುಸೂದನ ಸಾಯಿ
ಯಾರೊಬ್ಬರೂ ತಮ್ಮಲ್ಲಿ ಅಹಂ ಭಾವನೆಯನ್ನು ಬೆಳೆಸಿಕೊಳ್ಳಬಾರದು. ಅಹಂಕಾರವು ಎಂದಿಗೂ ಒಳ್ಳೆಯದಲ್ಲ, ಆದರೆ, ಯಾರಾದರೂ ಏನಾದರೂ ಶ್ಲಾಘನೀಯ ಕೆಲಸವನ್ನು ಮಾಡಿದಾಗ, ಸ್ವಲ್ಪ ಅಹಂಕಾರವಿದ್ದರೆ ಅದನ್ನು ಸಹಿಸಿಕೊಳ್ಳಬಹುದು. ಆದರೆ, ಸೋಮಾರಿಗಳು ಬಹಳ ಅಹಂಕಾರದಿಂದ ಮೆರೆಯುವಾಗ ಸಹಿಸಿಕೊಳ್ಳುವುದು ಕಷ್ಟ. ಉದಾಹರಣೆಗೆ, ಯಾದವರಲ್ಲಿ ಕೃಷ್ಣನ ಯಾವುದೇ ಸಹಚರನಿಗೂ, ದಾಯಾದಿಗೂ, ಗೆಳೆಯನಿಗೂ, ಕೃಷ್ಣನು ಯಾರು ಎಂಬುದನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಅವರಿಗೆಲ್ಲ ಮುಂದೇನಾಯ್ತು? ಅವರೆಲ್ಲ ತಮ್ಮಲ್ಲಿಯೇ ಪರಸ್ಪರ ಯುದ್ಧ ಮಾಡಿಕೊಂಡು ಸತ್ತು ಹೋದರು. ನೀವು ಎಚ್ಚರಿಕೆಯಿಂದ ಇರದಿದ್ದರೆ, ನಿಮಗೂ ಕೂಡ ಇದೇ ಗತಿಯಾಗಬಹುದು. ನಿಮಗೆ ಒಂದು ಸಲ ಉನ್ನತವಾದ ಹುದ್ದೆ ದೊರಕಿ, ಅಧಿಕಾರ ಮತ್ತು ಹೆಸರು ಬಂದರೆ, ಸಾಮಾಜಿಕವಾಗಿ ನೀವು ದೊಡ್ಡವರೆಂದು ಗುರುತಿಸಲ್ಪಟ್ಟರೆ, ನೀವು ಕೂಡಾ ವಿಚಲಿತರಾಗುವ ಎಲ್ಲ ಅವಕಾಶಗಳು ಇರುತ್ತವೆ ಎಂಬುದನ್ನು ನೀವು ಮರೆಯಬಾರದು.
ನಿಮಗೆ ಹುದ್ದೆಯೊಂದು ದೊರಕಿದಾಗ, ತಕ್ಷಣ ನಿಮಗೆ ಕಿರೀಟ ಧಾರಣೆಯಾಗುತ್ತದೆ. ಹೊಸ ಆಸನದ ವ್ಯವಸ್ಥೆ ಮಾಡುತ್ತಾರೆ. ನೀವು ಇದರಿಂದ ಪರೀಕ್ಷೆಗಳಿಗೆ ಒಳಪಡುತ್ತೀರಿ. ಆ ಸ್ಥಾನದಿಂದ ನೀವು ಯಾವಾಗ ಬೇಕಾದರೂ ಜಾರಿಬೀಳಬಹುದು ಎಂಬುದನ್ನು ನೆನಪಿಟ್ಟುಕೊಳ್ಳಬೇಕು. ಏಕೆಂದರೆ ಉನ್ನತವಾದ ಸ್ಥಾನದೊಂದಿಗೆ ಅಹಂಕಾರವೂ ಅಡ್ಡಪರಿಣಾಮವಾಗಿ ಬಂದೇ ಬರುತ್ತದೆ. ಸೇವೆಯ ದಾರಿಯು ಎರಡು ಅಲಗಿನ ಖಡ್ಗವಿದ್ದಂತೆ. ನೀವು ಜಾಗೃತರಾಗಿರದಿದ್ದರೆ, ಅದು ನಿಮಗೆ ಒಳ್ಳೆಯದನ್ನು ಮಾಡದೆ ಕೆಟ್ಟದನ್ನೇ ಮಾಡುತ್ತದೆ. ಮರದಲ್ಲಿ ಎಷ್ಟು ಹೆಚ್ಚು ಹಣ್ಣುಗಳಿರುತ್ತವೆಯೋ, ಅದು ಅಷ್ಟು ಹೆಚ್ಚು ಮಣಿಯುತ್ತದೆ. ಅದರಂತೆ, ಸೇವೆಯನ್ನು ಮಾಡುವುದರಿಂದ, ನೀವು ಹೆಚ್ಚು ವಿನೀತರಾಗಬೇಕು. ನೀವು ಯಾವುದರ ಕುರಿತೂ ಮಮಕಾರವನ್ನೂ ಬೆಳೆಸಿಕೊಳ್ಳಬಾರದು.
ನೀವು ಜನಕರಾಜನ ಹಾಗೆ ಜಾಗೃತರಾಗಿರಬೇಕು. ಹಗಲು ಹೊತ್ತಿನಲ್ಲಿ ಅವನು ರಾಜನಾಗಿರುತ್ತಿದ್ದ. ರಾಜನ ಹಾಗೆ ಪೋಷಾಕುಗಳನ್ನು ಧರಿಸಿ, ಕರ್ತವ್ಯಗಳನ್ನು ನಿಭಾಯಿಸುತ್ತಿದ್ದ. ಆದರೆ ದಿನದ ಕೊನೆಯಲ್ಲಿ, ಅವನು ತನ್ನ ಕಿರೀಟವನ್ನು, ರಾಚೋಚಿತ ಪೋಷಾಕುಗಳು ಮತ್ತು ಆಭರಣಗಳನ್ನು ತೆಗೆದಿರಿಸಿ, ಕೇಸರಿ ಬಣ್ಣದ ಒಂದು ನಿಲುವಂಗಿಯನ್ನು ಧರಿಸಿ, ನೆಲದ ಮೇಲೆ ಹಾಸಿದ ಹುಲ್ಲಿನ ಚಾಪೆಯ ಮೇಲೆ ಮಲಗುತ್ತಿದ್ದ. ರಾಜನ ಪಾತ್ರವು ಸಾಕಷ್ಟು ಅಹಂಕಾರವನ್ನೂ ಮತ್ತು ಮಮಕಾರವನ್ನೂ ತರುತ್ತದೆ ಎಂದು ಅವನಿಗೆ ಗೊತ್ತಿತ್ತು. ಆದ್ದರಿಂದಲೇ ಅವನು ಹೀಗೆ ನಡೆದುಕೊಳ್ಳುತ್ತಿದ್ದ. ಹೊರಜಗತ್ತಿಗೆ ಮಾತ್ರವೇ ಅವನು ರಾಜನಾಗಿದ್ದ. ಆದರೆ, ಆಂತರ್ಯದಲ್ಲಿ, ಅವನು ಸಂಪೂರ್ಣ ವಿರಾಗಿಯಾದ ಸನ್ಯಾಸಿಯಾಗಿದ್ದ.
ಒಂದು ಹಂತದಲ್ಲಿ ಜನಕ ಮಹಾರಾಜನು ಈ ದ್ವಿಪಾತ್ರದಿಂದ ಬೇಸರಗೊಂಡ. ಒಂದು ದಿನ ಗುರುವಾದ ಅಷ್ಟಾವಕ್ರನಿಗೆ, ‘ನಾನು ಇನ್ನು ಈ ಜೀವನವನ್ನು ನಡೆಸಲಾರೆ, ಹಗಲಿನಲ್ಲಿ ನಾನು ರಾಜನಾಗಿರಬೇಕು, ಇದು ನನಗೆ ತುಂಬಾ ನೋವು ಕೊಡುವ ವಿಚಾರ ಮತ್ತು ರಾತ್ರಿಯಲ್ಲಿ ನಾನು ಸನ್ಯಾಸಿ. ಇದು ನನಗೆ ತುಂಬಾ ಸಂತೋಷ ಕೊಡುವ ವಿಚಾರ. ದಯವಿಟ್ಟು ನನ್ನನ್ನು ಇದರಿಂದ ಪಾರು ಮಾಡಿರಿ’ ಎಂದು ಪ್ರಾರ್ಥಿಸಿದ.
ಈ ಸುದ್ದಿಯನ್ನೂ ಓದಿ: Spoorthi Vani Column: ರಾಮನ ಭೇಟಿಯಾದ ಶಬರಿಯ ಆನಂದ ಕಲ್ಪಿಸಿಕೊಳ್ಳಿ; ಶಬರಿ ಭಕ್ತಿಯ ನಿಜವಾದ ಸಂದೇಶವಿದು
ಅಷ್ಟಾವಕ್ರನು ಒಬ್ಬ ಸಣ್ಣ ಹುಡುಗನಾಗಿದ್ದ ಮತ್ತು ಜನಕನು ಒಬ್ಬ ರಾಜನಾಗಿದ್ದ. ಚಿಕ್ಕವನೇ ಆದರೂ, ಅವನು ಬ್ರಹ್ಮಜ್ಞಾನಿಯಾಗಿದ್ದರಿಂದ ಜನಕರಾಜನಿಗೆ ಅವನು ಗುರುವಾಗಿ ಎಲ್ಲ ವಿಧದ ಜ್ಞಾನವನ್ನು ದಯಪಾಲಿಸಿದ್ದ. ಅಷ್ಟಾವಕ್ರನು ಜನಕನಿಗೆ, ‘ನಿನಗೆ ರಾಜ್ಯವು ಬೇಕು ಎಂದು ನೀನು ರಾಜನಾಗಿರಬೇಡ. ಆದರೆ, ಈ ರಾಜ್ಯವು ನಿನ್ನನ್ನು ಬಯಸುತ್ತದೆ ಎಂದು ನೀನು ರಾಜನಾಗು’ ಎಂದು ಹೇಳಿದ. ಜನಕರಾಜನು ತನ್ನ ಗುರುವಿನ ಆದೇಶವನ್ನು ಶಿರಸಾವಹಿಸಿ ಪಾಲಿಸಿದ. ನನಗೆ ಯಾವುದೇ ಸ್ಥಾನದ ಅಗತ್ಯವಿಲ್ಲ, ಆದರೆ, ಆ ಸ್ಥಾನಕ್ಕೆ ಈಗಿನ ಪರಿಸ್ಥಿತಿಯಲ್ಲಿ ಒಳ್ಳೆಯ ಕೆಲಸಗಳನ್ನು ನೆರವೇರಿಸಲು ನನ್ನ ಅವಶ್ಯಕತೆಯಿದೆ ಎಂದು ಜನಕರಾಜನು ಯೋಚಿಸಿದ.
ನೀವು ಈ ಜಗತ್ತಿನಲ್ಲಿ, ಇಂಥ ಸ್ಪಷ್ಟತೆಯಿಂದ ನಡೆದುಕೊಂಡರೆ, ‘ನೈವಂ ಪಾಪಮವಾಪ್ಸ್ಯಸಿ’ (ಭಗವದ್ಗೀತೆ 2.38) - ನಿಮಗೆ ಪಾಪದ ಭೀತಿ ಇರುವುದಿಲ್ಲ. ‘ನ ಕರ್ಮ ಲಿಪ್ಯತೇ (ಈಶಾವಾಸ್ಯೋಪನಿಷದ್ 2)’ - ಕರ್ಮವು ನಿಮಗೆ ಅಂಟಿಕೊಳ್ಳಲಾರದು. ಪಾಪ, ಬಂಧನಗಳು ಅಥವಾ ಕರ್ಮಗಳು ನಿಮ್ಮನ್ನು ಮುಟ್ಟಲಾರವು. ನೀವು ಯಾವಾಗಲೂ ನೀರಿನಲ್ಲಿಯ ಕಮಲದಂತೆ ಇರುತ್ತೀರಿ. ನೀರು ಎಷ್ಟೇ ರಾಡಿಯಾಗಿರಲಿ, ಕಮಲವು ಪರಿಶುದ್ಧವಾಗಿ, ಸುಂದರವಾಗಿ, ಪ್ರಶಾಂತವಾಗಿ ನೀರು ಸೋಕದಂತೆ ಇರುವಂತೆಯೇ ನೀವು ಕೂಡಾ ಪಾಪಗಳಿಂದ ಕಲುಷಿತರಾಗುವುದಿಲ್ಲ ಅಥವಾ ಈ ಜಗತ್ತಿನಿಂದ ಕೆಟ್ಟು ಹೋಗುವುದಿಲ್ಲ. ನಿಮಗೆ ಇಂಥ ವಿವೇಚನೆ ಇರಬೇಕು.
(ಲೇಖಕರು ಆಧ್ಯಾತ್ಮಿಕ ಚಿಂತಕರು)
ಸದ್ಗುರು ಶ್ರೀ ಮಧುಸೂದನ ಸಾಯಿ ಪರಿಚಯ
ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿಯನ್ನು ಕೇಂದ್ರವಾಗಿಸಿಕೊಂಡು ವಿಶ್ವದ ನೂರು ದೇಶಗಳಲ್ಲಿ ಅಧ್ಯಾತ್ಮ ತಳಹದಿಯ ಸೇವಾ ಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದಾರೆ ಸದ್ಗುರು ಶ್ರೀ ಮಧುಸೂದನ ಸಾಯಿ. 'ವಸುಧೈವ ಕುಟುಂಬಕಂ' (ಒಂದು ಜಗತ್ತು, ಒಂದು ಕುಟುಂಬ) ಎನ್ನುವುದು ಅವರ ತತ್ತ್ವ. ಭಗವಾನ್ ಶ್ರೀ ಸತ್ಯ ಸಾಯಿ ಬಾಬಾ ಹೆಜ್ಜೆಗಳನ್ನು ಅನುಸರಿಸುತ್ತಿರುವ ಅವರು, 'ಶ್ರೀ ಮಧುಸೂದನ ಸಾಯಿ ಜಾಗತಿಕ ಮಾನವೀಯ ಸೇವಾ ಅಭಿಯಾನ' (Sri Madhusudan Sai Global Humanitarian Mission) ಮೂಲಕ ಶಿಕ್ಷಣ, ಆರೋಗ್ಯ, ಪೌಷ್ಟಿಕ ಆಹಾರ ಮತ್ತು ಸಾಮಾಜಿಕ ಅಭ್ಯುದಯ ಕ್ಷೇತ್ರಗಳಲ್ಲಿ ನೂರಾರು ಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದಾರೆ.
ವೇದ, ಉಪನಿಷತ್, ಭಗವದ್ಗೀತೆ ಸೇರಿದಂತೆ ಸನಾತನ ಧರ್ಮದ ಬಹುತೇಕ ಗ್ರಂಥಗಳನ್ನು ಆಳವಾಗಿ ಅಭ್ಯಾಸ ಮಾಡಿದ್ದಾರೆ. ಪಾರಂಪರಿಕ ಜ್ಞಾನವನ್ನು ಆಧುನಿಕ ವಿಚಾರಗಳಿಗೆ ಬೆಸೆಯುವ ಮೂಲಕ ಸಾರ್ವಕಾಲಿಕ ಮೌಲ್ಯಗಳನ್ನು ಮನಮುಟ್ಟುವಂತೆ ಪ್ರತಿಪಾದಿಸುವುದು ಅವರ ವಿಶಿಷ್ಟ ಶೈಲಿ. ಶ್ರೀಮಧುಸೂದನ ಸಾಯಿ ಅವರ ಬದುಕು, ಬರಹ, ಕಾರ್ಯಚಟುವಟಿಕೆ ಕುರಿತ ಹೆಚ್ಚಿನ ಮಾಹಿತಿಗೆ ಹಾಗೂ ನೀವೂ ಸ್ವತಃ ಈ ಮಾನವೀಯ ಸೇವಾ ಅಭಿಯಾನದಲ್ಲಿ ಭಾಗಿಯಾಗಲು https://srimadhusudansai.com ಜಾಲತಾಣ ನೋಡಿ.