Spoorthi Vani Column: ರಾಮನ ಭೇಟಿಯಾದ ಶಬರಿಯ ಆನಂದ ಕಲ್ಪಿಸಿಕೊಳ್ಳಿ; ಶಬರಿ ಭಕ್ತಿಯ ನಿಜವಾದ ಸಂದೇಶವಿದು
ಶಬರಿಯು ರಾಮನಿಗೋಸ್ಕರ ಅರವತ್ತೆರಡು ವರ್ಷಗಳ ಸುದೀರ್ಘ ಕಾಲ ಕಾದಳು! ಅವಳಿಗೆ ರಾಮನ ಮೇಲೆ ಅಷ್ಟೊಂದು ಭಕ್ತಿಯಿತ್ತು ಮತ್ತು ಅವಳು ಅವನಿಗಾಗಿ ತನ್ನ ಬಾಳನ್ನೇ ಮುಡಿಪಾಗಿಟ್ಟಳು. ರಾಮನಿಂದ ದೂರವಾಗಿರುವುದು ಅವಳು ಅವನಿಗಾಗಿ ರಕ್ಷಿಸಿಕೊಂಡು ಬಂದಂಥ ಭಕ್ತಿಯನ್ನು ಹೆಚ್ಚಿಸಿತು.

-

ಒಮ್ಮೆ ಒಬ್ಬ ಭಕ್ತರು, "ಸ್ವಾಮಿ! ನಾವು ದೇವರಲ್ಲಿ ಲೀನವಾಗಿ ದೇವರೇ ಯಾಕಾಗಬೇಕು? ದ್ವೈತ ಭಕ್ತಿಯಲ್ಲಿಯೂ ಆನಂದವಿದೆ. ನಾನೂ ಇದ್ದೇನೆ, ದೇವರೂ ಇದ್ದಾನೆ; ನಾನು ದೇವರನ್ನು ನೋಡಬಹುದು, ದೇವರೂ ಕೂಡ ನನ್ನನ್ನು ನೋಡಬಹುದು ಮತ್ತು ನಾವು ಪರಸ್ಪರ ಈ ಪ್ರೇಮವನ್ನು ಅನುಭವಿಸಬಹುದು. ಇದು ಕೂಡ ಚೆನ್ನಾಗಿರುವುದಿಲ್ಲವೇ? ನಾವು ದೇವರಲ್ಲಿ ಯಾಕೆ ಲೀನವಾಗಬೇಕು? ಹೀಗೆ ಲೀನವಾಗುವುದರಿಂದ ನಮ್ಮ ಈ ಬಾಂಧವ್ಯವನ್ನು ನಾವು ಕಳೆದುಕೊಳ್ಳುವುದಿಲ್ಲವೇ?" ಎಂದು ಕೇಳಿದರು.
ಇದು ನಿಜವಾಗಿಯೂ ಸತ್ಯ. ಎಲ್ಲಾ ತಾನೇ ಆಗುವುದರಿಂದ ದೇವರಿಗೆ ಖುಷಿಯೂ ಇರಲಿಲ್ಲ. ಆದ್ದರಿಂದ, ಇಬ್ಬರಾಗಿರಬೇಕೆಂದೇ ಅವನು ಈ ಜಗತ್ತನ್ನು ಸೃಷ್ಟಿಸಿದ. ನೀವು ದೇವರನ್ನು ಪ್ರೇಮಿಸಬಹುದು, ಅವನೂ ನಿಮ್ಮನ್ನು ಪ್ರೇಮಿಸಬಹುದು. ಹಾಗಾಗಿ, ಈ ರೀತಿಯಾಗಿ ಭಾವಿಸುವುದು ತಪ್ಪೇನೂ ಅಲ್ಲ.
ಶಬರಿಯ ಉದಾಹರಣೆ ಗಮನಿಸೋಣ. ಶಬರಿಯು ರಾಮನಿಗೋಸ್ಕರ ಅರವತ್ತೆರಡು ವರ್ಷಗಳ ಸುದೀರ್ಘ ಕಾಲ ಕಾದಳು! ಅವಳಿಗೆ ರಾಮನ ಮೇಲೆ ಅಷ್ಟೊಂದು ಭಕ್ತಿಯಿತ್ತು ಮತ್ತು ಅವಳು ಅವನಿಗಾಗಿ ತನ್ನ ಬಾಳನ್ನೇ ಮುಡಿಪಾಗಿಟ್ಟಳು. ರಾಮನಿಂದ ದೂರವಾಗಿರುವುದು ಅವಳು ಅವನಿಗಾಗಿ ರಕ್ಷಿಸಿಕೊಂಡು ಬಂದಂಥ ಭಕ್ತಿಯನ್ನು ಹೆಚ್ಚಿಸಿತು ಮತ್ತು ಇದರಿಂದ ಅವಳ ಪ್ರತಿಯೊಂದು ಯೋಚನೆ, ಮಾತು ಹಾಗೂ ಕೃತಿಗಳನ್ನು ರಾಮನೇ ಆವರಿಸಿಕೊಂಡುಬಿಟ್ಟ. ಪ್ರತಿದಿನವೂ ಅವಳು ರಾಮನಿಗಾಗಿ ನಿರೀಕ್ಷೆ ಮಾಡಿಮಾಡಿ ನಿರಾಶಳಾಗಿ ನಿದ್ರೆಗೆ ಜಾರುತ್ತಿದ್ದಳು. ನಿದ್ದೆಗೂ ಮುನ್ನ, "ಇವತ್ತೂ ರಾಮನು ಬರಲೇ ಇಲ್ಲ. ನಾಳೆಯಾದರೂ ಬರುತ್ತಾನೋ ನೋಡೋಣ" ಎಂದು ಚಿಂತಿಸುತ್ತಿದ್ದಳು. ಅವಳ ಭಕ್ತಿಯೇ ಅವಳ ಈ ಭರವಸೆಯನ್ನು ಜೀವಂತವಾಗಿರಿಸಿತ್ತು. ಶಬರಿ ಕೊನೆಗೂ ರಾಮನನ್ನು ತನ್ನ ಆಶ್ರಮದಲ್ಲಿ ಭೇಟಿಯಾದಾಗಿನ ಅವಳ ಆನಂದವನ್ನು ಸ್ವಲ್ಪ ಕಲ್ಪಿಸಿಕೊಳ್ಳಿ!
ಅದರಂತೆ, ನೀವು ದೇವರೊಂದಿಗೆ ಇರುವ ಹಂಬಲ ಮತ್ತು ಉತ್ಸುಕತೆ ಮೇರೆ ಮೀರಿದಾಗ ನೀವು ಪರಿಶುದ್ಧರಾಗುತ್ತೀರಿ ಮತ್ತು ಇದು ನಿಮಗೆ ಅಪಾರವಾದ ಆನಂದವನ್ನು ಕೊಡುತ್ತದೆ. ಇದು ನೀವು ತುಂಬಾ ಹಸಿದಾಗ ಊಟ ಮಾಡಿದಂತೆ. ಆಹಾರ ಸೇವಿಸುವ ಆನಂದವನ್ನು ಇನ್ನೂ ಹೆಚ್ಚಾಗಿ ಅನುಭವಿಸುತ್ತೀರಿ. ಈ ಕತೆಯ ನೀತಿಯೇನೆಂದರೆ, ಎಲ್ಲಿಯವರೆಗೆ ನೀವು ದ್ವೈತ ಭಾವದಲ್ಲಿರುತ್ತೀರೋ, ಅದನ್ನು ಅನುಭವಿಸಿರಿ. ಮುಂದೊಂದು ದಿನ, ಕೃಷ್ಣನ ಲೀಲೆಗಳನ್ನು ಆಸ್ವಾದಿಸಿ, ನಂತರ ಅಂತಿಮವಾಗಿ ಅವರು ಕೃಷ್ಣನಲ್ಲಿಯೇ ಒಂದಾಗಿದ್ದೇವೆ ಎಂದು ಅರಿತ ಗೋಪಿಕೆಯರ ಸ್ಥಿತಿಯನ್ನು ತಲುಪುತ್ತೀರಿ.
ಹಾಗೆಯೇ, ನಿಮ್ಮ ಶಿಕ್ಷಣ, ಕೆಲಸ, ಸೇವೆ ಮತ್ತು ಭಕ್ತಿಗಳೊಂದಿಗೆ ಮುಂದೊಂದು ದಿನ ಅತ್ಯುನ್ನತ ಸ್ಥಿತಿಗೆ ಏರಿ ಆತ್ಮಾನಂದವನ್ನು ಅನುಭವಿಸಬೇಕು. ಅಂದರೆ ದೈವದೊಂದಿಗೆ ಒಂದಾಗಬೇಕು. ನಿಮ್ಮ ಶಿಕ್ಷಣವು ನಿಮ್ಮನ್ನು ಆ ಗುರಿಯತ್ತ ಕರೆದೊಯ್ಯಬೇಕು. ಆಗ ಮಾತ್ರವೇ ಈ ಸಂಸ್ಥೆಗಳನ್ನು ನಡೆಸುವುದು ಸಾರ್ಥಕವೆನಿಸುತ್ತದೆ. ಕೇವಲ ನಾವು ಚೆನ್ನಾಗಿದ್ದು, ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ, ರಾಜ್ಯ ಹಾಗೂ ದೇಶದಲ್ಲಿ ಅತ್ಯಂತ ಹೆಚ್ಚಿನ ಮಾರ್ಕುಗಳನ್ನು ತೆಗೆದು, ನಮ್ಮ ಶ್ರೇಷ್ಠ ಸಂಶೋಧನೆಗಳಿಂದ ಮತ್ತು ವೈಜ್ಞಾನಿಕ ಕಾರ್ಯಗಳಿಂದ ಗುರುತಿಸಲ್ಪಟ್ಟು, ಜಗತ್ತಿನ ಅತ್ಯಂತ ಶ್ರೇಷ್ಠಾತಿಶ್ರೇಷ್ಠ ವಿಶ್ವವಿದ್ಯಾಲಯ ಎಂಬ ಹೆಸರು ಗಳಿಸಿದರೆ ಮಾತ್ರ ಏನೂ ಸಾಲದು. ಇವೆಲ್ಲವುಗಳನ್ನೂ ಹೊರಗಿನ ಸಂಸ್ಥೆಗಳಲ್ಲಿ ಎಲ್ಲರೂ ಮಾಡುತ್ತಾರೆ. ಆದರೆ ಅವರು ಎಲ್ಲಿಯೂ ಅಂತಿಮ ಗುರಿಯನ್ನು ಸಾಧಿಸುವುದಿಲ್ಲ. ಅವರು ಯಾವಾಗಲೂ ಜನನ ಮರಣಗಳ ಚಕ್ರದಲ್ಲಿ ಸುತ್ತತ್ತಲೇ ಇರುತ್ತಾರೆ. 'ಪುನರಪಿ ಜನನಂ, ಪುನರಪಿ ಮರಣಂ, ಪುನರಪಿ ಜನನೀ ಜಠರೇ ಶಯನಂ.' (ಭಜ ಗೋವಿಂದಂ 21) ಮತ್ತೆ ಮತ್ತೆ ತಾಯಿಯ ಗರ್ಭದಲ್ಲಿ ವಾಸ ಮಾಡುವುದಕ್ಕೆ ಪದೇಪದೇ ಹುಟ್ಟುವುದು ಪದೇಪದೇ ಸಾಯುವುದು!
ಸದ್ಗುರು ಶ್ರೀ ಮಧುಸೂದನ ಸಾಯಿ ಪರಿಚಯ
ಚಿಕ್ಕಬಳ್ಳಾಪುರ ತಾಲ್ಲೂಕಿನ ಮುದ್ದೇನಹಳ್ಳಿಯನ್ನು ಕೇಂದ್ರವಾಗಿಸಿಕೊಂಡು ವಿಶ್ವದ ನೂರು ದೇಶಗಳಲ್ಲಿ ಅಧ್ಯಾತ್ಮ ತಳಹದಿಯ ಸೇವಾ ಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದಾರೆ ಸದ್ಗುರು ಶ್ರೀ ಮಧುಸೂದನ ಸಾಯಿ. 'ವಸುಧೈವ ಕುಟುಂಬಕಂ' (ಒಂದು ಜಗತ್ತು, ಒಂದು ಕುಟುಂಬ) ಎನ್ನುವುದು ಅವರ ತತ್ತ್ವ. ಭಗವಾನ್ ಶ್ರೀ ಸತ್ಯ ಸಾಯಿ ಬಾಬಾ ಹೆಜ್ಜೆಗಳನ್ನು ಅನುಸರಿಸುತ್ತಿರುವ ಅವರು, 'ಶ್ರೀ ಮಧುಸೂದನ ಸಾಯಿ ಜಾಗತಿಕ ಮಾನವೀಯ ಸೇವಾ ಅಭಿಯಾನ' (Sri Madhusudan Sai Global Humanitarian Mission) ಮೂಲಕ ಶಿಕ್ಷಣ, ಆರೋಗ್ಯ, ಪೌಷ್ಟಿಕ ಆಹಾರ ಮತ್ತು ಸಾಮಾಜಿಕ ಅಭ್ಯುದಯ ಕ್ಷೇತ್ರಗಳಲ್ಲಿ ನೂರಾರು ಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದಾರೆ.
ವೇದ, ಉಪನಿಷತ್, ಭಗವದ್ಗೀತೆ ಸೇರಿದಂತೆ ಸನಾತನ ಧರ್ಮದ ಬಹುತೇಕ ಗ್ರಂಥಗಳನ್ನು ಆಳವಾಗಿ ಅಭ್ಯಾಸ ಮಾಡಿದ್ದಾರೆ. ಪಾರಂಪರಿಕ ಜ್ಞಾನವನ್ನು ಆಧುನಿಕ ವಿಚಾರಗಳಿಗೆ ಬೆಸೆಯುವ ಮೂಲಕ ಸಾರ್ವಕಾಲಿಕ ಮೌಲ್ಯಗಳನ್ನು ಮನಮುಟ್ಟುವಂತೆ ಪ್ರತಿಪಾದಿಸುವುದು ಅವರ ವಿಶಿಷ್ಟ ಶೈಲಿ. ಶ್ರೀಮಧುಸೂದನ ಸಾಯಿ ಅವರ ಬದುಕು, ಬರಹ, ಕಾರ್ಯಚಟುವಟಿಕೆ ಕುರಿತ ಹೆಚ್ಚಿನ ಮಾಹಿತಿಗೆ ಹಾಗೂ ನೀವೂ ಸ್ವತಃ ಈ ಮಾನವೀಯ ಸೇವಾ ಅಭಿಯಾನದಲ್ಲಿ ಭಾಗಿಯಾಗಲು https://srimadhusudansai.com ಜಾಲತಾಣ ನೋಡಿ.