Vastu Tips: ನೆಮ್ಮದಿಯ ನಿದ್ರೆಗಾಗಿ ಈ ವಸ್ತುಗಳು ದೂರವಿರಲಿ
ಮನುಷ್ಯ ದಿನವಿಡಿ ಅಲ್ಲಿ ಇಲ್ಲಿ ಎಂದು ಎಷ್ಟೇ ಓಡಾಡಿದರೂ ಸುಖವಾದ ವಿಶ್ರಾಂತಿ ಬೇಕೆಂದಾಗ ಬರುವುದು ಮನೆಗೆ. ಅದರಲ್ಲೂ ತಮ್ಮದೇ ಆದ ಮಲಗುವ ಕೋಣೆಗೆ. ತಾಯಿ ಮಡಿಲಿನಷ್ಟೇ ಸುಖ ಶಾಂತಿ, ನೆಮ್ಮದಿಯನ್ನು ಕೊಡುವ ನಮ್ಮ ಮಲಗುವ ಕೋಣೆಯಲ್ಲಿ ಪ್ರತಿಯೊಬ್ಬರೂ ಅವರವರಿಗೆ ಇಷ್ಟವಾಗುವ ಎಲ್ಲ ವಸ್ತುಗಳನ್ನು ಇಟ್ಟುಕೊಂಡಿರುತ್ತೇವೆ. ತಮ್ಮ ಅಭಿರುಚಿಗೆ ತಕ್ಕಂತೆ ಮಲಗುವ ಕೋಣೆಯನ್ನು ಅಲಂಕರಿಸುತ್ತಾರೆ. ಹೀಗಿರುವಾಗ ಕೆಲವೊಂದು ವಸ್ತುಗಳನ್ನು ಮಲಗುವ ಕೋಣೆಯಲ್ಲಿ ಇಡಲೇಬಾರದು ಎಂಬುದು ನಿಮಗೆ ಗೊತ್ತಿದೆಯೇ?


ಮನೆಯಲ್ಲಿ ಶಾಂತಿ, ಸಮೃದ್ಧಿ ಮತ್ತು ಆರೋಗ್ಯ ಇರಬೇಕಾದರೆ ಪ್ರಾಚೀನ ಭಾರತೀಯ ವಾಸ್ತುಶಿಲ್ಪ ಮತ್ತು ವಿನ್ಯಾಸ ವಿಜ್ಞಾನವಾದ ವಾಸ್ತು ಶಾಸ್ತ್ರವನ್ನು (vastu shastra) ಅನುಸರಿಸುವುದು ಬಹುಮುಖ್ಯ ಎನ್ನುತ್ತಾರೆ ವಾಸ್ತು (vastu tips) ತಜ್ಞರು. ಮನೆ ಮತ್ತು ಮನೆಯವರಲ್ಲಿ ಸಾಮರಸ್ಯವನ್ನು ಕಾಪಾಡಿಕೊಳ್ಳಲು ವಾಸ್ತು ತತ್ತ್ವಗಳ ಪ್ರಕಾರ ಮಲಗುವ ಕೋಣೆಯು (vastu for bedroom) ಇರಬೇಕು. ಯಾಕೆಂದರೆ ಮಲಗುವ ಕೋಣೆಯು ನಮಗೆ ಕೇವಲ ವಿಶ್ರಾಂತಿಯನ್ನು ಮಾತ್ರ ನೀಡುವುದಿಲ್ಲ. ಅದು ನಮಗೆ ಪುನರ್ಯೌವನವನ್ನೂ ಕೊಡುತ್ತದೆ.
ಮಲಗುವ ಕೋಣೆಯಲ್ಲಿ ಕೆಲವು ವಸ್ತುಗಳನ್ನು ಇಡುವುದು ಇಲ್ಲಿ ಸಕಾರಾತ್ಮಕ ಶಕ್ತಿಯ ಹರಿವಿಗೆ ಅಡ್ಡಿಯನ್ನು ಉಂಟು ಮಾಡುತ್ತದೆ. ಇದರಿಂದ ಮನೆ ಮಂದಿಯ ಯೋಗಕ್ಷೇಮದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಮನೆಯಲ್ಲಿ ಸಾಮರಸ್ಯ ಕಾಪಾಡಿಕೊಳ್ಳಲು, ಮನೆ ಮಂದಿಯ ಉತ್ತಮ ಆರೋಗ್ಯವನ್ನು ಖಚಿತ ಪಡಿಸಿಕೊಳ್ಳಲು ಮತ್ತು ಸುಖಕರವಾದ ವಿಶ್ರಾಂತಿಗೆ ಮಲಗುವ ಕೋಣೆಯಲ್ಲಿ ಈ ಐದು ವಸ್ತುಗಳನ್ನು ಇಡಲೇಬಾರದು ಎನ್ನುತ್ತಾರೆ ವಾಸ್ತು ತಜ್ಞರು.
ಈ ಐದು ವಸ್ತುಗಳ ಮೇಲೆ ವಿಶೇಷ ನಿಗಾ ವಹಿಸಿ ವಾಸ್ತು ಸಲಹೆಗಳನ್ನು ಪಾಲಿಸಿದರೆ ವಿಶ್ರಾಂತಿ ಪಡೆಯಲು, ಚೆನ್ನಾಗಿ ನಿದ್ರೆ ಮಾಡಲು ಮತ್ತು ಉಲ್ಲಾಸದಿಂದಿರಲು ಸಹಾಯ ಮಾಡುವ ಶಾಂತಿಯುತ ಮತ್ತು ಸಕಾರಾತ್ಮಕ ಸ್ಥಳವನ್ನು ರಚಿಸಬಹುದಾಗಿದೆ.

ಹಾಸಿಗೆಗೆ ಎದುರಾಗಿ ಕನ್ನಡಿ
ಸಾಮಾನ್ಯವಾಗಿ ಮಲಗುವ ಕೋಣೆಯಲ್ಲಿ ಎಲ್ಲರೂ ಕನ್ನಡಿಯನ್ನು ಇಟ್ಟಿರುತ್ತಾರೆ. ಹೀಗೆ ಇಡುವ ಕನ್ನಡಿಯು ಹಾಸಿಗೆಗೆ ಎದುರಾಗಿ ಇರಲೇಬಾರದು. ಮಲಗಿರುವುದನ್ನು ಪ್ರತಿಬಿಂಬಿಸುವ ಕನ್ನಡಿಯು ವಾಸ್ತು ದೋಷಕ್ಕೆ ಪ್ರಮುಖ ಕಾರಣವಾಗುತ್ತದೆ. ಇದರಿಂದ ಮನೆಯವರ ನಿದ್ರೆಗೆ ತೊಂದರೆಗಳಾಗುತ್ತವೆ ಮತ್ತು ಒತ್ತಡ, ಆತಂಕವನ್ನು ಹೆಚ್ಚಿಸುತ್ತದೆ. ಮಲಗುವುದನ್ನು ಪ್ರತಿಫಲಿಸುವ ಕನ್ನಡಿಯು ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ಮನೆ ಮಂದಿಯಲ್ಲಿ ಅನಗತ್ಯ ವಾದಗಳನ್ನು ಉಂಟು ಮಾಡುತ್ತದೆ. ಆರೋಗ್ಯ ಸಮಸ್ಯೆಗಳಿಗೂ ಇದು ಕಾರಣವಾಗಬಹುದು. ಮಲಗುವ ಕೋಣೆಯಿಂದ ಕನ್ನಡಿಯನ್ನು ತೆಗೆದುಹಾಕಲು ಸಾಧ್ಯವಾಗದಿದ್ದರೆ ಮಲಗುವಾಗ ಅದನ್ನು ಒಂದು ಬಟ್ಟೆಯಿಂದ ಮುಚ್ಚಿ ಇಡುವುದು ಒಳ್ಳೆಯದು.
ಎಲೆಕ್ಟ್ರಾನಿಕ್ಸ್ ಮತ್ತು ಗ್ಯಾಜೆಟ್‌ಗಳು
ಮಲಗುವ ಕೋಣೆಯಲ್ಲಿ ಟಿವಿ, ಲ್ಯಾಪ್‌ಟಾಪ್, ಮೊಬೈಲ್ ಫೋನ್ ಅಥವಾ ಇತರ ಯಾವುದೇ ಎಲೆಕ್ಟ್ರಾನಿಕ್ ಸಾಧನಗಳನ್ನು ಇಡಲೇಬಾರದು. ಇವುಗಳು ನಿದ್ರೆಗೆ ಅಡ್ಡಿಪಡಿಸುವ ಮತ್ತು ಮಾನಸಿಕ ಅಶಾಂತಿಯನ್ನು ಉಂಟುಮಾಡುವ ವಿದ್ಯುತ್ಕಾಂತೀಯ ತರಂಗಗಳನ್ನು ಹೊರಸೂಸುತ್ತವೆ. ಅಲ್ಲದೇ ಈ ವಸ್ತುಗಳು ಕೋಣೆಯ ಸಕಾರಾತ್ಮಕ ಶಕ್ತಿಗೆ ಅಡ್ಡಿಯಾಗಬಹುದು. ಅವುಗಳ ಬಳಕೆಯನ್ನು ಕಡಿಮೆ ಮಾಡಿ ಅಥವಾ ಅವುಗಳನ್ನು ಮಲಗುವ ಪ್ರದೇಶದಿಂದ ದೂರವಿಡುವುದು ಉತ್ತಮ.
ಮುಳ್ಳಿನ ಗಿಡಗಳು
ಮುಳ್ಳಿನ ಸಸ್ಯಗಳು ಮಲಗುವ ಕೋಣೆಗೆ ನಕಾರಾತ್ಮಕ ಶಕ್ತಿಯನ್ನು ತರುತ್ತವೆ ಎನ್ನುತ್ತದೆ ವಾಸ್ತುಶಾಸ್ತ್ರ. ಈ ಸಸ್ಯಗಳು ಒತ್ತಡ, ಸಂಘರ್ಷ ಮತ್ತು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತವೆ. ಇವುಗಳ ಬದಲಿಗೆ ಸಕಾರಾತ್ಮಕ ಶಕ್ತಿಯನ್ನು ತರುವ ಪೀಸ್ ಲಿಲ್ಲಿ ಅಥವಾ ಹಾವಿನ ಸಸ್ಯಗಳನ್ನು ಮಲಗುವ ಕೋಣೆಯಲ್ಲಿ ಇರಿಸಬಹುದು.
ಇದನ್ನೂ ಓದಿ: Vastu Tips: ಹಣಕಾಸಿನ ತೊಂದರೆಯನ್ನು ದೂರ ಮಾಡುತ್ತದೆ ನವಿಲು
ಬಳಕೆಯಾಗದ ವಸ್ತುಗಳು
ಹಾಸಿಗೆಯ ಕೆಳಗೆ ಅಥವಾ ಕೋಣೆಯ ಮೂಲೆಗಳಲ್ಲಿಅನಗತ್ಯ ವಸ್ತುಗಳನ್ನು ಇರಿಸಿದರೆ ಅವು ಸಕಾರಾತ್ಮಕ ಶಕ್ತಿಯ ಹರಿವಿಗೆ ತೊಂದರೆಯನ್ನು ಉಂಟು ಮಾಡುತ್ತದೆ. ಇದು ಮನೆಯವರಲ್ಲಿ ನಿಶ್ಚಲತೆಯ ಭಾವನೆಯನ್ನು ಸೃಷ್ಟಿಸುತ್ತದೆ. ಹೀಗಾಗಿ ಮಲಗುವ ಕೋಣೆಯಲ್ಲಿ ಯಾವುದೇ ಹಳೆಯ, ಬಳಕೆಯಾಗದ ಅಥವಾ ಮುರಿದ ವಸ್ತುಗಳನ್ನು ಸಂಗ್ರಹಿಸಿ ಇಡಬೇಡಿ. ಮಲಗುವ ಕೋಣೆಯನ್ನು ಆದಷ್ಟು ಸ್ವಚ್ಛವಾಗಿ ಇಡಬೇಕು. ಇದರಿಂದ ವಿಶ್ರಾಂತಿ ವಾತಾವರಣ ವೃದ್ಧಿಯಾಗುತ್ತದೆ.
ನೀರಿನ ಅಂಶಗಳು
ಅಕ್ವೇರಿಯಂ, ನೀರಿನ ಕಾರಂಜಿ ಅಥವಾ ನೀರನ್ನು ಚಿತ್ರಿಸುವ ವರ್ಣಚಿತ್ರಗಳನ್ನು ಮಲಗುವ ಕೋಣೆಯಲ್ಲಿ ಇಡಕೂಡದು. ವಾಸ್ತು ಪ್ರಕಾರ, ಇವು ಆರ್ಥಿಕ ಅಸ್ಥಿರತೆ ಮತ್ತು ಭಾವನಾತ್ಮಕ ವೈಪರೀತ್ಯಕ್ಕೆ ಕಾರಣವಾಗುತ್ತದೆ.