ಬೆಂಗಳೂರು: ಹಿಂದೂ ಧರ್ಮದಲ್ಲಿ(Hindu Religion) ಲಕ್ಷ್ಮೀ ದೇವಿಯನ್ನು(Lakshmi Devi) ಸಂಪತ್ತು, ಐಶ್ವರ್ಯ, ಸಮೃದ್ಧಿ ಹಾಗೂ ಸುಖ-ಶಾಂತಿಯ ಅಧಿದೇವತೆಯಾಗಿ ಪೂಜಿಸಲಾಗುತ್ತದೆ. ಲಕ್ಷ್ಮಿ ದೇವಿಯ ಅನುಗ್ರಹ ದೊರೆತರೆ ಜೀವನದಲ್ಲಿ ಸುಖ, ಶಾಂತಿ ಹಾಗೂ ಆರ್ಥಿಕ ಸ್ಥಿರತೆ ನೆಲೆಸುತ್ತದೆ ಎಂಬ ಗಾಢ ನಂಬಿಕೆಯಿದೆ. ಇದೇ ಕಾರಣಕ್ಕೆ ಬಹುತೇಕ ಮನೆಗಳಲ್ಲಿ ಲಕ್ಷ್ಮೀ ದೇವಿಯ ಫೋಟೊ ಅಥವಾ ಮೂರ್ತಿಯನ್ನು ಪ್ರತಿಷ್ಠಾಪಿಸಿ ಭಕ್ತಿಯಿಂದ ಪೂಜೆ ಮಾಡುವ ಪದ್ಧತಿ ಇಂದಿಗೂ ಮುಂದುವರಿದಿದೆ. ಆದರೆ ಅನೇಕರಿಗೆ ಲಕ್ಷ್ಮೀ ದೇವಿಯ ಫೋಟೊವನ್ನು (Lakshmi Devi Photo) ಮನೆಯಲ್ಲಿ ಯಾವ ಸ್ಥಳದಲ್ಲಿ, ಯಾವ ದಿಕ್ಕಿನಲ್ಲಿ ಮತ್ತು ಯಾವ ರೀತಿಯಲ್ಲಿ ಇಡಬೇಕು ಎಂಬ ಬಗ್ಗೆ ತಿಳಿದಿಲ್ಲ.
ಹಾಗಾಗಿ ನಾವಿಂದು ಲಕ್ಷ್ಮೀ ದೇವಿ ಫೋಟೊ ಇಡಲು ಯಾವ ವಾಸ್ತು ನಿಯಮ (Vastu Tips) ಪಾಲಿಸಬೇಕು? ಯಾವ ರೀತಿಯ ಲಕ್ಷ್ಮೀ ಫೋಟೊವನ್ನು ಮನೆಯಲ್ಲಿ ಇಡಬೇಕು ಎಂಬಿತ್ಯಾದಿ ಮಾಹಿತಿ ಇಲ್ಲಿದೆ.
ವಾಸ್ತು ಶಾಸ್ತ್ರದ ಪ್ರಕಾರ, ಲಕ್ಷ್ಮೀ ದೇವಿಯ ಫೋಟೊವನ್ನು ಸರಿಯಾದ ಸ್ಥಳದಲ್ಲಿ ಇಡುವುದು ಅತ್ಯಂತ ಮುಖ್ಯ. ಮನೆಯಲ್ಲಿ ಲಕ್ಷ್ಮೀ ದೇವಿಯ ಫೋಟೊವನ್ನು ಇಡಲು ಅತ್ಯುತ್ತಮ ಸ್ಥಳವೆಂದರೆ ಈಶಾನ್ಯ ಮೂಲೆ (ಉತ್ತರ-ಪೂರ್ವ ದಿಕ್ಕು). ಈ ಮೂಲೆಯು ಪೂಜಾ ಕೊಠಡಿಗೆ ಅತ್ಯಂತ ಸೂಕ್ತ ಸ್ಥಳವಾಗಿದ್ದು, ಇಲ್ಲಿ ದೇವಿಯ ಫೋಟೊವನ್ನು ಇಟ್ಟು ಪೂಜೆ ಮಾಡುವುದರಿಂದ ಧನಾತ್ಮಕ ಶಕ್ತಿ ಹೆಚ್ಚುತ್ತದೆ. ಈಶಾನ್ಯ ಮೂಲೆಯ ಜತೆಗೆ ಮನೆಯ ಉತ್ತರ ಅಥವಾ ಪೂರ್ವ ದಿಕ್ಕಿನಲ್ಲೂ ಲಕ್ಷ್ಮೀ ದೇವಿಯ ಫೋಟೊವನ್ನು ಇಡಬಹುದು. ಈ ಸಂದರ್ಭದಲ್ಲಿ ದೇವಿಯ ಮುಖ ಪಶ್ಚಿಮ ದಿಕ್ಕಿನತ್ತ ಇರಬೇಕು. ಪೂಜೆ ಮಾಡುವಾಗ ಭಕ್ತರು ಉತ್ತರ ಅಥವಾ ಪೂರ್ವ ದಿಕ್ಕಿನತ್ತ ಮುಖ ಮಾಡಿ ಪೂಜಿಸಬೇಕು. ಮುಖ್ಯವಾಗಿ ಲಕ್ಷ್ಮೀ ದೇವಿಯ ಫೋಟೊವನ್ನು ದಕ್ಷಿಣ ದಿಕ್ಕಿನಲ್ಲಿ ಇಡುವುದನ್ನು ಸಂಪೂರ್ಣವಾಗಿ ತಪ್ಪಿಸಬೇಕು. ಅಲ್ಲದೆ ಒಂದೇ ಮನೆಯಲ್ಲಿ ಲಕ್ಷ್ಮೀ ದೇವಿಯ ಒಂದಕ್ಕಿಂತ ಹೆಚ್ಚು ಫೋಟೊಗಳನ್ನು ಅಥವಾ ಮೂರ್ತಿಗಳನ್ನು ಇಡುವುದು ವಾಸ್ತು ಪ್ರಕಾರ ಅಶುಭವೆಂದು ಪರಿಗಣಿಸಲಾಗಿದೆ.
ಹಣ ಬರುತ್ತಿಲ್ಲ, ಬಂದ ಹಣ ಉಳಿಯುತ್ತಿಲ್ಲವೆಂಬ ಚಿಂತೆಯೇ? ಈ ಸಿಂಪಲ್ ಪರಿಹಾರಗಳನ್ನು ಮಾಡಿ
ಇದರೊಂದಿಗೆ ಮನೆಯಲ್ಲಿ ಯಾವ ರೀತಿಯ ಲಕ್ಷ್ಮೀ ದೇವಿಯ ಫೋಟೊ ಅಥವಾ ಮೂರ್ತಿಯನ್ನು ಇಡುತ್ತೇವೆ ಎಂಬುದು ಬಹಳ ಮುಖ್ಯವಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ಕಮಲದ ಹೂವಿನ ಮೇಲೆ ಕುಳಿತಿರುವ ಲಕ್ಷ್ಮೀ ದೇವಿಯ ಫೋಟೊ ಅತ್ಯಂತ ಶುಭ ಎಂದು ಹೇಳಲಾಗುತ್ತದೆ. ನಿಂತಿರುವ ಭಂಗಿಯಲ್ಲಿರುವ ಲಕ್ಷ್ಮೀ ದೇವಿಯ ಮೂರ್ತಿ ಅಥವಾ ಫೋಟೊ ಮನೆಯಲ್ಲಿ ಇಡುವುದು ಶುಭವಲ್ಲ ಎಂಬ ಉಲ್ಲೇಖವೂ ಇದ್ದು, ಲಕ್ಷ್ಮೀ ದೇವಿಯ ಕೃಪೆ ದೊರೆಯುವುದಿಲ್ಲ ಎಂಬ ನಂಬಿಕೆ ಇದೆ. ಅದೇ ರೀತಿ, ಗೂಬೆ ವಾಹನದ ಮೇಲೆ ಕುಳಿತಿರುವ ಲಕ್ಷ್ಮೀ ದೇವಿಯ ಫೋಟೊ ಅಥವಾ ಪ್ರತಿಮೆ ಮನೆಯಲ್ಲಿ ಇಡಬಾರದು.
ಇನ್ನೊಂದು ಪ್ರಮುಖ ಅಂಶವೆಂದರೆ, ಲಕ್ಷ್ಮೀಯ ಫೋಟೊದಲ್ಲಿ ದೇವಿಯ ಪಾದಗಳು ಸ್ಪಷ್ಟವಾಗಿ ಕಾಣುವಂತೆ ಇರಬಾರದು. ಎರಡೂ ಕೈಗಳಿಂದ ಆಶೀರ್ವಾದ ನೀಡುತ್ತಿರುವ ರೂಪದಲ್ಲಿರುವ ಲಕ್ಷ್ಮೀ ದೇವಿಯ ಫೋಟೊ ಉತ್ತಮ ಎಂದು ಪರಿಗಣಿಸಲಾಗುತ್ತದೆ. ಜತೆಗೆ ಲಕ್ಷ್ಮೀ ದೇವಿಯ ಎರಡೂ ಬದಿಗಳಲ್ಲಿ ಆನೆಗಳು ಇರುವ ಚಿತ್ರಗಳು ಐಶ್ವರ್ಯ, ಸಂಪತ್ತು ಮತ್ತು ಸಮೃದ್ಧಿಯ ಸಂಕೇತವಾಗಿದ್ದು, ಮನೆಯಲ್ಲಿ ಧನಾಗಮನಕ್ಕೆ ಸಹಕಾರಿ ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ.
ಈ ಎಲ್ಲ ವಾಸ್ತು ನಿಯಮಗಳನ್ನು ಪಾಲಿಸಿ ಲಕ್ಷ್ಮೀ ದೇವಿಯ ಫೋಟೊವನ್ನು ಮನೆಯಲ್ಲಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದರೆ, ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚಾಗಿ ಸಂತೋಷ, ಸಮೃದ್ಧಿ ಮತ್ತು ಆರ್ಥಿಕ ಅಭಿವೃದ್ಧಿ ಕಂಡುಬರುತ್ತದೆ ಎಂಬ ನಂಬಿಕೆಯಿದೆ.