Vishwavani Editorial: ಇನ್ನೂ ಎಷ್ಟು ಬಲಿಯಾಗಬೇಕು?
ಕಿವಿಗೆ ಇಯರ್ ಫೋನ್ ಸಿಕ್ಕಿಸಿಕೊಂಡು ‘ಪಬ್‌ಜಿ’ ಎಂಬ ಆನ್‌ಲೈನ್ ಆಟದಲ್ಲಿ ಭಾಗಿಯಾಗಿದ್ದ ೨೨ರ ಹರೆಯದ ಯುವಕನೊಬ್ಬ, ರಕ್ತದೊತ್ತಡವು ತೀವ್ರವಾದ ಕಾರಣ ಸಾವನ್ನಪ್ಪಿದ ಮತ್ತು ಈತ ಕಳೆದ 4 ತಿಂಗಳಿಂದ ಈ ಆಟದ ಗೀಳು ಹತ್ತಿಸಿಕೊಂಡು, ದಿನದ ಬಹುಭಾಗವನ್ನು ಅದರಲ್ಲೇ ಕಳೆಯುತ್ತಿದ್ದ ಎಂದಿದೆ ವರದಿ.
-
ಕೊರಿಯನ್ ಲವರ್ ಗೇಮ್ ಎಂಬ ಹೆಸರಿನ ಆನ್‌ಲೈನ್ ಗೇಮ್‌ನ ವ್ಯಸನಕ್ಕೆ ಸಿಲುಕಿ ಉತ್ತರ ಪ್ರದೇಶ ರಾಜ್ಯದ ಘಾಜಿಯಾಬಾದ್'ನ ಮೂವರು ಸೋದರಿಯರು 8ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡರೆಂಬ ಸುದ್ದಿಯನ್ನು ನೀವು ಈಗಾಗಲೇ ಓದಿದ್ದೀರಿ. ಇದು ಮನದ ಗೋಡೆಯಲ್ಲಿನ್ನೂ ಹಸಿಹಸಿಯಾಗಿರುವಾಗಲೇ ಮತ್ತದೇ ಉತ್ತರ ಪ್ರದೇಶದಲ್ಲಿ ಇಂಥ ಮತ್ತೊಂದು ದುರಂತ ಸಂಭವಿಸಿರುವುದು ವಿಷಾದನೀಯ.
ಕಿವಿಗೆ ಇಯರ್ ಫೋನ್ ಸಿಕ್ಕಿಸಿಕೊಂಡು ‘ಪಬ್‌ಜಿ’ ಎಂಬ ಆನ್‌ಲೈನ್ ಆಟದಲ್ಲಿ ಭಾಗಿಯಾಗಿದ್ದ ೨೨ರ ಹರೆಯದ ಯುವಕನೊಬ್ಬ, ರಕ್ತದೊತ್ತಡವು ತೀವ್ರವಾದ ಕಾರಣ ಸಾವನ್ನಪ್ಪಿದ ಮತ್ತು ಈತ ಕಳೆದ 4 ತಿಂಗಳಿಂದ ಈ ಆಟದ ಗೀಳು ಹತ್ತಿಸಿಕೊಂಡು, ದಿನದ ಬಹುಭಾಗವನ್ನು ಅದರಲ್ಲೇ ಕಳೆಯುತ್ತಿದ್ದ ಎಂದಿದೆ ವರದಿ.
ಇದನ್ನೂ ಓದಿ: Vishwavani Editorial: ಮೈಮರೆವು ಬೇಡ, ಎಚ್ಚರವಿರಲಿ
ಚಾಕುವನ್ನು ಹಣ್ಣು ಕತ್ತರಿಸುವುದಕ್ಕೂ ಬಳಸಬಹುದು, ಮತ್ತೊಬ್ಬರನ್ನು ಹಿಂಸಿಸುವುದಕ್ಕೂ ದುರ್ಬಳಕೆ ಮಾಡಿಕೊಳ್ಳಬಹುದು ಎಂಬುದು ಗೊತ್ತಿರುವ ಸಂಗತಿಯೇ. ಆನ್‌ಲೈನ್ ಮಾಧ್ಯಮದ ತಂತ್ರಜ್ಞಾನದಲ್ಲಿ ಕ್ರಾಂತಿಯಾದಾಗಿನಿಂದಲೂ, ಅದರ ಸಕಾರಾತ್ಮಕ ಮತ್ತು ಆರೋಗ್ಯಕರ ಮಗ್ಗುಲುಗಳಲ್ಲಿ ಸಾಕಷ್ಟು ಸಾಧ್ಯತೆಗಳು ಅನಾವರಣಗೊಂಡಿವೆ.
ಗಣನೀಯ ಸಂಖ್ಯೆಯ ಯುವಜನರಿಗೆ ಜೀವನೋಪಾಯವನ್ನು ಕಟ್ಟಿಕೊಡುವ ನಿಟ್ಟಿನಲ್ಲೂ ಈ ಮಾಧ್ಯಮ ಮುಂಚೂಣಿಯಲ್ಲಿದೆ. ಆದರೆ, ಯಾವುದೇ ಕ್ಷೇತ್ರದಲ್ಲಿ ಪ್ರಖರ ಅಂಶಗಳ ಜತೆಜತೆಗೆ ಕಪ್ಪುಚುಕ್ಕೆಗಳೂ ಇರುವಂತೆ ಈ ಮಾಧ್ಯಮದಲ್ಲೂ ಒಂದಷ್ಟು ‘ಜಾರುವ ಮತ್ತು ಎಡವುವ’ ತಾಣಗಳಿವೆ. ಆ ಪೈಕಿ ಎದ್ದು ಕಾಣುವಂಥದ್ದು ಹೀಗೆ ಮನುಷ್ಯರ ಜೀವಕ್ಕೇ ಸಂಚಕಾರವನ್ನು ತಂದೊಡ್ಡುವ ಮಾರಕ ಆಟಗಳದ್ದು.
ಇಂಥ ಆಟಗಳನ್ನು ನಿಷೇಧಿಸಬೇಕಿರುವುದರ ಕುರಿತು ಕೆಲ ವರ್ಷದ ಹಿಂದೆ ದನಿಯೆದ್ದಿದ್ದು ಹೌದಾದರೂ, ಅಷ್ಟೇ ಕ್ಷಿಪ್ರವಾಗಿ ಅದು ಮರೆಗೆ ಸರಿದಿದ್ದು ವಿಷಾದನೀಯ. ಈಗ ಉತ್ತರ ಪ್ರದೇಶದಲ್ಲಿ ಸಂಭವಿಸಿರುವ ಈ ಸಾವುಗಳನ್ನು ಗಮನಿಸಿಯಾದರೂ ಆಳುಗರು ಈ ಪಿಡುಗಿಗೆ ಒಂದು ಪರಿಣಾಮ ಕಾರಿ ಮದ್ದನ್ನು ಅರೆಯಬೇಕಿದೆ...