ಸರಕಾರಿ ಶಾಲೆಗಳು ಒಂದೊಂದಾಗಿ ಮುಚ್ಚುತ್ತಾ ಬಂದಿರುವ ಸುದ್ದಿಯನ್ನು ಸಾಕಷ್ಟು ದಿನಗಳ ಹಿಂದೆಯೇ ಓದಿಯಾಯಿತು; ಈಗ ಏಕೋಪಾಧ್ಯಾಯ ಶಾಲೆಗಳ ಕುರಿತಾದ ಸುದ್ದಿಯ ಸರದಿ. ದೇಶದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಸಂಖ್ಯೆಯಲ್ಲಿ ‘ಏಕೋಪಾಧ್ಯಾಯ ಶಾಲೆ’ಗಳಿದ್ದು ಇವುಗಳಲ್ಲಿ 33 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ ಎಂದು ಹೇಳಿದೆ ಶಿಕ್ಷಣ ಸಚಿವಾಲಯವು ಬಿಡುಗಡೆ ಮಾಡಿರುವ ದತ್ತಾಂಶ.
ಇಂಥ ಶಾಲೆಗಳಿರುವ ರಾಜ್ಯಗಳ ಯಾದಿಯಲ್ಲಿ ಆಂಧ್ರಪ್ರದೇಶ ಮತ್ತು ಕರ್ನಾಟಕ ಕ್ರಮವಾಗಿ ಮೊದಲ ಮತ್ತು ಐದನೇ ಸ್ಥಾನದಲ್ಲಿವೆ ಎಂಬುದು ಲಭ್ಯ ಮಾಹಿತಿ. ಏಕೋಪಾಧ್ಯಾಯ ಶಾಲೆಗಳು, ವಿವಿಧ ಹಂತದ ವಿದ್ಯಾರ್ಥಿಗಳ ಕಲಿಕಾ ಪ್ರಕ್ರಿಯೆಗೆ ಅಡ್ಡಿಯುಂಟುಮಾಡುತ್ತವೆ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ.
ಇದನ್ನೂ ಓದಿ: Vishwavani Editorial: ಅತ್ತೂ ಕರೆದೂ ಔತಣಕ್ಕೆ...!
ಇಷ್ಟಾಗಿಯೂ, ಈ ಸಮಸ್ಯೆಯ ನಿವಾರಣೆಯು ಆಳುಗರ ಪಾಲಿಗೆ ಕೊನೆಯ ಆದ್ಯತೆ ಆಗಿರುವುದೇಕೆ? ಎಂಬುದು ಯಕ್ಷಪ್ರಶ್ನೆ. ‘ಭಾರತದ ಭವಿಷ್ಯವನ್ನು ರೂಪಿಸುವ ಮುಂದಿನ ಪ್ರಜೆಗಳು’ ಎಂದೇ ಕರೆಸಿ ಕೊಳ್ಳುವ ‘ಇಂದಿನ ಮಕ್ಕಳು’ ಹೀಗೆ ಏಕೋಪಾಧ್ಯಾಯ ಶಾಲಾ ವ್ಯವಸ್ಥೆಯಲ್ಲೇ ದಿನದೂಡು ವಂತಾದರೆ, ಅವರ ಜ್ಞಾನದ ಬೇರುಗಳು ಭದ್ರವಾಗುವುದಾದರೂ ಹೇಗೆ? ಕಲಿಕೆಯಲ್ಲಿ ಉತ್ತಮವಾದ ತಳಹದಿ ಸಿಗುವುದಾದರೂ ಹೇಗೆ? ಉನ್ನತ ಶಿಕ್ಷಣ ಸಂಸ್ಥೆಗಳ ಸ್ಥಾಪನೆ ಸಲೀಸಾಗಿ ನಡೆದು ಬಿಡುವ ನಮ್ಮ ದೇಶದಲ್ಲಿ, ಪ್ರಾಥಮಿಕ ಹಂತದ ಇಂಥ ಶಿಕ್ಷಣ ಸಜ್ಜಿಕೆಗಳು ಅನಾದರಕ್ಕೆ ಒಳಗಾಗುವುದೇಕೆ? ಪದವಿ ತರಗತಿಗಳಲ್ಲಿ ಕಲಿತ ವಿಷಯಗಳು ಕೆಲವರಿಗೆ ನೆನಪಿರುವುದಿಲ್ಲ, ಆದರೆ ಶಾಲಾದಿನಗಳಲ್ಲಿ ಕಲಿತ ಪದ್ಯ ಸ್ಪಷ್ಟವಾಗಿ ಬಾಯಿಗೆ ಬರುವಂತಿರುತ್ತದೆ!
ಕಾರಣ, ಬಾಲ್ಯದ ಮನಸ್ಸು ಹಸಿಮಣ್ಣಿನಂತೆ ಇದ್ದು, ಶಿಕ್ಷಕರು ಉಣಿಸಿದ ಜ್ಞಾನವನ್ನು ಗಟ್ಟಿಯಾಗಿ ಅಚ್ಚೊತ್ತಿಕೊಂಡುಬಿಡುತ್ತದೆ. ಆದರೆ ಆ ಹಂತವೇ ನಿರ್ಲಕ್ಷ್ಯಕ್ಕೆ ಒಳಗಾದರೆ, ಶಿಕ್ಷಣದ ಮೂಲ ಆಶಯಕ್ಕೇ ಧಕ್ಕೆ ಒದಗಿದಂತಾಗುವುದಿಲ್ಲವೇ? ಈ ಪ್ರಶ್ನೆಗಳು ಸಂಬಂಧಪಟ್ಟವರನ್ನು ಆತ್ಮಾವ ಲೋಕನಕ್ಕೆ ಒಳಪಡಿಸಬೇಕು.