Vishwavani Editorial: ಉಗ್ರವಾದದ ದಮನವಾಗಲಿ
ಉಗ್ರವಾದವನ್ನು ಮತ್ತು ಉಗ್ರವಾದಿಗಳನ್ನು ಹಣಿಯಲು ಭಾರತವು ಕೈಗೊಂಡಿರುವ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ‘ಬ್ರಿಕ್ಸ್’ ರಾಷ್ಟ್ರಗಳು ಪುನರುಚ್ಚರಿಸಿವೆ. ಮತ್ತೊಂದೆಡೆ, ಭಯೋ ತ್ಪಾದನೆಯನ್ನು ಮಟ್ಟ ಹಾಕಿ, ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ವಿರುದ್ಧ ನಿರ್ಣಾಯಕ ಕ್ರಮವನ್ನು ಕೈಗೊಳ್ಳುವಂತೆ ಅಮೆರಿಕವು ಪಾಕಿಸ್ತಾನಕ್ಕೆ ತಾಕೀತು ಮಾಡಿದೆ.


ಇದು ನಿಜಕ್ಕೂ ಸಮಾಧಾನ ತರುವ ಬೆಳವಣಿಗೆ. ಅದಕ್ಕೆ ಕಾರಣವಾಗಿರುವುದು, ವಿಶ್ವದ ಎರಡು ವಿಭಿನ್ನ ವೇದಿಕೆಗಳಲ್ಲಿ ಹೊಮ್ಮಿರುವ ಒಮ್ಮತದ ಅಭಿಪ್ರಾಯ. ಕಾಶ್ಮೀರದ ಪಹಲ್ಗಾಮ್ ಪ್ರವಾಸಿ ತಾಣದಲ್ಲಿ ಏಪ್ರಿಲ್ 22ರಂದು ಭಯೋತ್ಪಾದಕರು ನಡೆಸಿದ 26 ಮಂದಿ ಅಮಾಯಕರ ಮಾರಣ ಹೋಮವನ್ನು ‘ಬ್ರಿಕ್ಸ್’ ಒಕ್ಕೂಟದ ಸದಸ್ಯ ರಾಷ್ಟ್ರಗಳು ಒಮ್ಮತದಿಂದ ಖಂಡಿಸಿರುವುದು ಈ ಪೈಕಿ ಒಂದು ಬೆಳವಣಿಗೆ.
ಉಗ್ರವಾದವನ್ನು ಮತ್ತು ಉಗ್ರವಾದಿಗಳನ್ನು ಹಣಿಯಲು ಭಾರತವು ಕೈಗೊಂಡಿರುವ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ‘ಬ್ರಿಕ್ಸ್’ ರಾಷ್ಟ್ರಗಳು ಪುನರುಚ್ಚರಿಸಿವೆ. ಮತ್ತೊಂದೆಡೆ, ಭಯೋ ತ್ಪಾದನೆಯನ್ನು ಮಟ್ಟ ಹಾಕಿ, ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ವಿರುದ್ಧ ನಿರ್ಣಾಯಕ ಕ್ರಮವನ್ನು ಕೈಗೊಳ್ಳುವಂತೆ ಅಮೆರಿಕವು ಪಾಕಿಸ್ತಾನಕ್ಕೆ ತಾಕೀತು ಮಾಡಿದೆ.
ಅಮೆರಿಕ ಸಂಸದ ಬ್ರಾಡ್ ಶೆರ್ಮನ್ ಅವರು ಇತ್ತೀಚೆಗೆ ತಮ್ಮನ್ನು ಭೇಟಿಯಾದ ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೊ ಜರ್ದಾರಿ ನೇತೃತ್ವದ ನಿಯೋಗಕ್ಕೆ ಹೀಗೆ ಆಗ್ರಹಿಸಿ, ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಕರಾಳ ಕೃತ್ಯಗಳನ್ನು ಅವರ ಸಮ್ಮುಖ ತೆರೆದಿಟ್ಟಿದ್ದಾರೆ ಎಂಬುದು ಲಭ್ಯ ಮಾಹಿತಿ.
ಇದನ್ನೂ ಓದಿ: Vishwavani Editorial: ಇದು ಭರವಸೆಯ ಆಶಾಕಿರಣ
ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನಕ್ಕೆ ಹೀಗೊಂದು ರಾಜತಾಂತ್ರಿಕ ತಪರಾಕಿ ಯಾವಾಗಲೋ ಬೀಳ ಬೇಕಿತ್ತು; ಪಹಲ್ಗಾಮ್ ಕುಕೃತ್ಯದ ನಂತರವಾದರೂ ಅದು ಬಿದ್ದಿರುವುದು ಸಮಾಧಾನಕರ ಸಂಗತಿ ಎನ್ನಲಡ್ಡಿಯಿಲ್ಲ. ಹಿಂದೆಲ್ಲಾ ಅದೆಂಥದೇ ರಾಜತಾಂತ್ರಿಕ ಬೆದರಿಕೆ ಅಥವಾ ಆಗ್ರಹಗಳು ಎದುರಾ ದರೂ, ‘ತಾನುಂಟು ಮೂರು ಲೋಕವುಂಟು’ ಎಂಬಂತೆ ಮೆರೆಯುತ್ತಿದ್ದ ಪಾಕಿಸ್ತಾನ, ತನ್ನ ವಿಧ್ವಂಸಕ ಚಿತ್ತಸ್ಥಿತಿಗೆ ಜಗತ್ತಿನ ಮಿಕ್ಕ ಮುಸ್ಲಿಂ ರಾಷ್ಟ್ರಗಳು ಒತ್ತಾಸೆಯಾಗಿ ನಿಲ್ಲುತ್ತವೆ ಎಂದೇ ಭ್ರಮಿಸಿತ್ತು. ಆದರೆ ದಿನಗಳೆದಂತೆ, ಪಾಕಿಸ್ತಾನದ ಮುಖವಾಡ ಬಯಲಾಗುತ್ತಾ ಹೋದಂತೆ ಆ ರಾಷ್ಟ್ರಗಳ ಪೈಕಿ ಯಾವುದೂ ಪಾಕಿಸ್ತಾನವನ್ನು ನಂಬುವ ಸ್ಥಿತಿಯಲ್ಲಿಲ್ಲ.
ಹೀಗಾಗಿ ಅಂತಾರಾಷ್ಟ್ರೀಯ ಸಮುದಾಯದೆದುರು ಮೂಲೆಗುಂಪಾಗಬೇಕಾಗಿ ಬಂದಿರುವ ಪಾಕಿಸ್ತಾನ, ಪ್ರಸ್ತುತ ಅಮೆರಿಕದಿಂದ ಹೊಮ್ಮಿರುವ ರಾಜತಾಂತ್ರಿಕ ತಾಕೀತಿನ ಅನುಸಾರ ನಡೆದು ಕೊಳ್ಳಬೇಕಾಗಿ ಬಂದಿದೆ. ಮಾಡಿದ ಪಾಪಕ್ಕೆ ತಕ್ಕ ಪ್ರಾಯಶ್ಚಿತ್ತವನ್ನು ಅನುಭವಿಸಲೇ ಬೇಕಲ್ಲವೇ?!