ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishwavani Editorial: ಬೀಗಿದವ ಬಾಗಲೇಬೇಕು...

ಪರದೇಶಗಳಿಂದ ಬರುವ ಉತ್ಪನ್ನಗಳ ಮೇಲೆ ಅತಿರೇಕದ ಸುಂಕವನ್ನು ವಿಧಿಸುವ ತಮ್ಮ ನಡೆಗೆ ಅಮೆರಿಕದ ಪ್ರಜೆಗಳಿಂದಲೇ ಆಕ್ರೋಶ- ಅಸಮಾಧಾನ ವ್ಯಕ್ತವಾದ ಹಿನ್ನೆಲೆಯಲ್ಲಿ ಟ್ರಂಪ್ ಈ ಹೆಜ್ಜೆಯಿಂದ ಹಿಂದೆ ಸರಿದಿದ್ದಾರೆ ಎಂಬುದು. ರಾಷ್ಟ್ರವೊಂದರ ಪ್ರಜೆಗಳ ಇಚ್ಛಾಶಕ್ತಿ ಬಲವಾಗಿ ದ್ದರೆ, ಅದರ ನಾಯಕನೂ ಮಣಿಯಲೇ ಬೇಕಾಗುತ್ತದೆ ಎಂಬುದಕ್ಕೆ ಈ ಬೆಳವಣಿಗೆಯೇ ಸಾಕ್ಷಿ.

Vishwavani Editorial: ಬೀಗಿದವ ಬಾಗಲೇಬೇಕು...

-

Ashok Nayak
Ashok Nayak Nov 18, 2025 12:18 PM

ಕಳೆದ ಕೆಲ ತಿಂಗಳಿಂದ ಇನ್ನಿಲ್ಲದಂತೆ ಬೀಗುತ್ತಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೊನೆಗೂ ಬಾಗಿದ್ದಾರೆ; ರಷ್ಯಾದಿಂದ ಕಚ್ಚಾತೈಲ ಆಮದು ಮಾಡಿಕೊಳ್ಳುತ್ತಿದೆ ಎಂಬ ನೆಪವೂ ಸೇರಿದಂತೆ ಹಲವು ಕಾರಣಗಳನ್ನು ಮುಂದು ಮಾಡಿ, ಭಾರತದಿಂದ ಅಮೆರಿಕಕ್ಕೆ ಬಂದು ಬೀಳುವ ಹಲವು ಉತ್ಪನ್ನಗಳ ಮೇಲೆ ಹೇರಿದ್ದ ಅತಿರೇಕದ ಸುಂಕವನ್ನು ಅವರು ಕಡಿತಗೊಳಿಸಿರುವುದೇ ಇದಕ್ಕೆ ಸಾಕ್ಷಿ.

ಟ್ರಂಪ್ ಅವರ ಈ ಕ್ರಮದಿಂದಾಗಿ, ಮಸಾಲೆ ಪದಾರ್ಥಗಳು, ಚಹಾ ಸೇರಿದಂತೆ ಭಾರತ ದಿಂದ ಅಮೆರಿಕಕ್ಕೆ ರಫ್ತಾಗುವ ಸಾಕಷ್ಟು ಉತ್ಪನ್ನಗಳ ರಫ್ತಿನಲ್ಲಿ ಹೆಚ್ಚಳವಾಗಲಿದೆ ಎಂಬು ದು ಕ್ಷೇತ್ರ ತಜ್ಞರ ಅಭಿಮತ. ‘ಅಮೆರಿಕವು ವಿಶ್ವದ ದೊಡ್ಡಣ್ಣ’ ಎಂಬ ಗ್ರಹಿಕೆ ಒಂದು ಕಾಲಕ್ಕೆ ಬಲವಾಗಿತ್ತು.

ಆದರೀಗ ‘ಭೂರಾಜಕೀಯ’ ಎಂಬುದು ಮೊದಲಿನಂತಿಲ್ಲ. ‘ನೀ ನನಗಾದರೆ, ನಾ ನಿನಗೆ’ ಎಂಬ ಆಶಯಕ್ಕೆ ಇಂಬುಕೊಟ್ಟು ಪರಸ್ಪರ ಸಹಕಾರ ಹಸ್ತವನ್ನು ಚಾಚಿದರೆ ಮಾತ್ರವೇ ಆಡಳಿತದ ಬಂಡಿ ಸುಸೂತ್ರವಾಗಿ ಓಡುತ್ತದೆ ಎಂಬುದು ವಿಶ್ವದ ವಿವಿಧ ದೇಶಗಳಲ್ಲಿನ ವಸ್ತುಸ್ಥಿತಿ. ಅಮೆರಿಕ ಕೂಡ ಇದಕ್ಕೆ ಹೊರತಾಗಿಲ್ಲ.

ಇದನ್ನೂ ಓದಿ: Vishwavani Editorial: ಆತ್ಮಾವಲೋಕನಕ್ಕೆ ಇದು ಸಕಾಲ

ಸಾಕಷ್ಟು ಕ್ಷೇತ್ರಗಳಲ್ಲಿ ಅದು ಪಾರಮ್ಯ/ ಸ್ವಾವಲಂಬನೆಯನ್ನು ಸಾಧಿಸಿದ್ದರೂ, ಒಂದಷ್ಟು ವಲಯಗಳಲ್ಲಿ ಪರರಾಷ್ಟ್ರ ಗಳನ್ನು ನೆಚ್ಚಲೇಬೇಕಾಗಿದೆ. ಈ ಕಹಿಸತ್ಯವನ್ನು ತಡವಾಗಿ ಯಾದರೂ ಮನಗಂಡಿರುವ ಟ್ರಂಪ್ ಮಹಾಶಯರು, ‘ತುಂಡಾದೇನು, ಆದರೆ ಬಾಗಲಾರೆ’ ಎಂಬ ತಮ್ಮ ಠೇಂಕಾರವನ್ನು ಸುತ್ತಿ ಪಕ್ಕಕ್ಕಿಟ್ಟು, ಹಳಿಗೆ ಮರಳಿದ್ದಾರೆ. ಅವರ ಈ ನಡೆ ಯನ್ನು ಸ್ವಾಗತಿಸೋಣ.

ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ, ಪರದೇಶಗಳಿಂದ ಬರುವ ಉತ್ಪನ್ನಗಳ ಮೇಲೆ ಅತಿರೇಕದ ಸುಂಕವನ್ನು ವಿಧಿಸುವ ತಮ್ಮ ನಡೆಗೆ ಅಮೆರಿಕದ ಪ್ರಜೆಗಳಿಂದಲೇ ಆಕ್ರೋಶ- ಅಸಮಾಧಾನ ವ್ಯಕ್ತವಾದ ಹಿನ್ನೆಲೆಯಲ್ಲಿ ಟ್ರಂಪ್ ಈ ಹೆಜ್ಜೆಯಿಂದ ಹಿಂದೆ ಸರಿದಿದ್ದಾರೆ ಎಂಬುದು. ರಾಷ್ಟ್ರವೊಂದರ ಪ್ರಜೆಗಳ ಇಚ್ಛಾಶಕ್ತಿ ಬಲವಾಗಿದ್ದರೆ, ಅದರ ನಾಯಕನೂ ಮಣಿಯಲೇ ಬೇಕಾಗುತ್ತದೆ ಎಂಬುದಕ್ಕೆ ಈ ಬೆಳವಣಿಗೆಯೇ ಸಾಕ್ಷಿ. ನಮ್ಮಲ್ಲೂ ಇಂಥ ಇಚ್ಛಾಶಕ್ತಿ ಕೆನೆ ಗಟ್ಟುವಂತಾಗಲಿ ಎಂಬುದೇ ಬಹುತೇಕರ ಆಶಯ ಮತ್ತು ನಿರೀಕ್ಷೆ...