ದೇಶದ ಉದ್ದಗಲಕ್ಕೂ ಇಂದು 77ನೇ ಗಣರಾಜ್ಯೋತ್ಸವದ ಸಂಭ್ರಮ. ನೈತಿಕ ನಾಯಕತ್ವ, ಸ್ಪಂದನಶೀಲ ಆಡಳಿತ ಮತ್ತು ಜನರ ಆಕಾಂಕ್ಷೆಗಳೊಂದಿಗೆ ನಿರಂತರವಾಗಿ ತೊಡಗಿಸಿ ಕೊಳ್ಳುವ ಮೂಲಕ ಗಣತಂತ್ರವು ತನ್ನ ಅಸ್ತಿತ್ವವನ್ನು ಕಂಡುಕೊಳ್ಳುತ್ತದೆ, ಸಾರ್ಥಕತೆ ಯನ್ನು ಮೆರೆಯುತ್ತದೆ ಹಾಗೂ ಆಳುಗ ವ್ಯವಸ್ಥೆಯು ಜನರಿಗಾಗಿ ಆಡಳಿತ ನಡೆಸಲು ಬದ್ಧವಾಗಿರುವಾಗ ಮಾತ್ರವೇ ಪ್ರಜಾಪ್ರಭುತ್ವವು ನಿಜಾರ್ಥದಲ್ಲಿ ಉಳಿಯುತ್ತದೆ ಎಂಬುದು ಬಲ್ಲವರ ವ್ಯಾಖ್ಯಾನ. ಈ ಉದ್ದೇಶವು ಪರಿಪೂರ್ಣವಾಗಿ ನೆರವೇರಬೇಕೆಂದರೆ ಆಳುಗ ವ್ಯವಸ್ಥೆಯೊಂದಿಗೆ ಪ್ರಜೆಗಳೂ ಕೈಜೋಡಿಸಬೇಕಾದ್ದು ಅನಿವಾರ್ಯ.
ಇದನ್ನೂ ಓದಿ: Vishwavani Editorial: ಮಾಡೋದು ಅನಾಚಾರ, ಮನೆಮುಂದೆ..
ಅಂದರೆ, ಜವಾಬ್ದಾರಿಯ ಹಂಚಿಕೆಯು ಇಲ್ಲಿ ವ್ಯಾಪಕವಾಗಿದೆ ಎಂಬುದನ್ನು ನಾವೆಲ್ಲರೂ ಅರಿಯಬೇಕು. ಸಾಮಾಜಿಕ ನ್ಯಾಯವನ್ನು ಬಲಪಡಿಸುತ್ತ, ಆರ್ಥಿಕ ಸೇರ್ಪಡೆಯನ್ನು ಸಕ್ರಿಯಗೊಳಿಸುತ್ತ ಮತ್ತು ಸಂವಿಧಾನದ ಕಲ್ಯಾಣ ಆಧಾರಿತ ಪ್ರಜಾಪ್ರಭುತ್ವದ ಆಶಯ ವನ್ನು ಬಲಪಡಿಸುತ್ತ ಮುನ್ನಡೆಯುತ್ತಿರುವ ಭಾರತೀಯ ಗಣರಾಜ್ಯದ ಜತೆಜತೆಗೇ ಹೆಜ್ಜೆ ಹಾಕುವುದಕ್ಕೆ ನಾವೆಲ್ಲರೂ ಸಂಕಲ್ಪಿಸಬೇಕಿದೆ.
ಆರ್ಥಿಕತೆ, ವಿಜ್ಞಾನ, ತಂತ್ರಜ್ಞಾನ, ಕೃಷಿ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ನಿರಂತರ ಉತ್ತಮಿಕೆಯನ್ನು ಸಾಧಿಸುತ್ತಾ, ‘ವಿಶ್ವಗುರು’ ಆಗುವತ್ತ ದಾಪುಗಾಲು ಇಟ್ಟಿರುವ ಭಾರತದ ಮೇಲೆ, ವಿಶ್ವದ ಒಂದಿಷ್ಟು ಕುತ್ಸಿತ ಶಕ್ತಿಗಳು ಕೆಂಗಣ್ಣು ಬೀರಿ, ಭಾರತದ ಏಕತೆ, ಭದ್ರತೆ, ಸಮಗ್ರತೆ, ಸಾರ್ವಭೌಮತೆ, ಸಾಮರಸ್ಯ, ಶಾಂತಿ ಮತ್ತು ನೆಮ್ಮದಿಗಳಿಗೆ ಸಂಚಕಾರವನ್ನು ತರಲು ಕಾಲಾನುಕಾಲಕ್ಕೆ ಹೊಂಚುಹಾಕುತ್ತಿರುವುದನ್ನು ನಾವೆಲ್ಲರೂ ಗಮನಿಸುತ್ತಲೇ ಬಂದಿದ್ದೇವೆ.
ನಾವು ನಾಗರಿಕರು ಒಂದು ರಾಷ್ಟ್ರವಾಗಿ ಒಗ್ಗೂಡಿದರೆ, ಕಟಿಬದ್ಧರಾದರೆ, ಇಂಥ ಎಲ್ಲ ಸಂಚುಗಳನ್ನೂ ಬುಡಸಮೇತ ಕಿತ್ತೆಸೆಯಬಹುದು ಎಂಬುದನ್ನು ಮನವರಿಕೆ ಮಾಡಿ ಕೊಳ್ಳೋಣ ಮತ್ತು ಈ ಮಹತ್ಕಾರ್ಯಕ್ಕಾಗಿ ಸಂಕಲ್ಪಿಸಲು ಇಂದಿನ ಗಣತಂತ್ರ ದಿನವು ಪರ್ವಕಾಲವಾಗಲಿ..