Vishwavani Editorial: ಪ್ರಯಾಣವೇ ಕೆಟ್ಟ ಕನಸಾದರೆ..
ಕಝಕಿಸ್ತಾನದಲ್ಲಿ ಅಜರ್ಬೈಜಾನ್ ವಿಮಾನವು ದುರಂತಕ್ಕೀಡಾಗಿ 38 ಜನರ ಸಾವಿಗೆ ಕಾರಣವಾದ ಘಟನೆಯು ಇನ್ನೂ ಹಸಿರಾಗಿರುವಾಗಲೇ ಈ ಎರಡು ಅವಘಡಗಳು ಸಂಭವಿಸಿ
Ashok Nayak
December 31, 2024
181 ಪ್ರಯಾಣಿಕರಿದ್ದ ವಿಮಾನವೊಂದು ದಕ್ಷಿಣ ಕೊರಿಯಾದ ಮುವಾನ್ ವಿಮಾನ ನಿಲ್ದಾಣದಲ್ಲಿ ಪತನಗೊಂಡು 179 ಮಂದಿ ಅಸುನೀಗಿದ ಸುದ್ದಿಯನ್ನು ನೀವು ಈಗಾಗಲೇ ಓದಿದ್ದೀರಿ. ಮತ್ತೊಂದೆಡೆ, ‘ಏರ್ ಕೆನಡಾ ಎಕ್ಸ್‌ಪ್ರೆಸ್’ ಸಂಸ್ಥೆಯ ವಿಮಾನವು ಕೆನಡಾದ ಹ್ಯಾಲಿಫೆಕ್ಸ್ ಸ್ಪ್ಯಾನ್‌ಫೀಲ್ಡ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಲ್ಯಾಂಡ್ ಆಗಬೇಕಿದ್ದಾಗ, ಲ್ಯಾಂಡಿಂಗ್ ಗೇರ್ ಕೈಕೊಟ್ಟಿದ್ದಕ್ಕೆ ಮತ್ತು ಚಕ್ರಗಳು ತೆರೆದುಕೊಳ್ಳದೆ ವಿಮಾನವು ರನ್ ವೇಗೆ ಅಪ್ಪಳಿಸುವಂತಾಗಿದ್ದಕ್ಕೆ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡ ಸಂಗತಿ ವರದಿಯಾಗಿದೆ.
ಕಝಕಿಸ್ತಾನದಲ್ಲಿ ಅಜರ್ಬೈಜಾನ್ ವಿಮಾನವು ದುರಂತಕ್ಕೀಡಾಗಿ 38 ಜನರ ಸಾವಿಗೆ ಕಾರಣವಾದ ಘಟನೆಯು ಇನ್ನೂ ಹಸಿರಾಗಿರುವಾಗಲೇ ಈ ಎರಡು ಅವಘಡಗಳು ಸಂಭವಿಸಿ ತಲ್ಲಣಕ್ಕೆ ಕಾರಣವಾಗಿವೆ. ಇಂಥ ಘಟನೆ ಗಳಾದಾಗ ವಿಮಾನ ಪ್ರಯಾಣದ ಸುರಕ್ಷತೆಯ ಬಗೆಗಿನ ಪ್ರಶ್ನೆಗಳು ಮತ್ತೊಮ್ಮೆ ಮುನ್ನೆಲೆಗೆ ಬರುತ್ತವೆ. ‘ಅಪಘಾತಗಳು ಅಥವಾ ದುರಂತಗಳು ಅಕಸ್ಮಾತ್ತಾಗಿ ಆಗುವಂಥವು, ಇವು ನಮ್ಮ ಕೈಮೀರಿದಂಥವು’ ಎಂಬ ಮಾತೂ ಒಪ್ಪು ವಂಥದ್ದೇ.
ಆದರೆ, ಇದರಲ್ಲಿ ಮನುಷ್ಯರ ಕರ್ತವ್ಯಲೋಪದ ಪಾಲೆಷ್ಟು? ಎಂಬ ಪ್ರಶ್ನೆಯೂ ನಡುವೆಯೇ ತೂರಿಕೊಳ್ಳುತ್ತದೆ. ಉದಾಹರಣೆಗೆ, ದಕ್ಷಿಣ ಕೊರಿಯಾದ ವಿಮಾನ ನಿಲ್ದಾಣದಲ್ಲಾದ ದುರಂತಕ್ಕೆ ಪಟ್ಟಿ ಮಾಡಲಾಗಿರುವ ‘ಲ್ಯಾಂಡಿಂಗ್ ಗೇರ್ ವೈಫಲ್ಯ’, ‘ಬೆಲ್ಲಿ ಲ್ಯಾಂಡಿಂಗ್’, ‘ಎಂಜಿನ್‌ಗೆ ಹಕ್ಕಿಯ ಡಿಕ್ಕಿ’ ಮುಂತಾದ ಕಾರಣಗಳ ಜತೆಗೆ, ‘ಪ್ರತಿಕೂಲ ಹವಾಮಾನ ವಿದ್ದರೂ ತುರ್ತು ಲ್ಯಾಂಡಿಂಗ್‌ಗೆ ಅವಕಾಶ ನೀಡಿದ ಅಧಿಕಾರಿಗಳ ತಪ್ಪು ನಿರ್ಧಾರ’ ಎಂಬ ಕಾರಣವೂ ಸೇರಿದೆ.
ಈ ಕೊನೆಯ ಕಾರಣವೇ ಹಲವರಿಂದ ಪ್ರಶ್ನೆಗಳು, ಆಕ್ಷೇಪಗಳು ಹೊಮ್ಮುವುದಕ್ಕೆ ಕಾರಣವಾಗಿರುವುದು. ಏಕೆಂದರೆ, ಇದು ಸಿಬ್ಬಂದಿಯ ಕರ್ತವ್ಯಲೋಪಕ್ಕೆ ಸಂಬಂಧಿಸಿದ್ದು. ಒಂದು ರೀತಿಯಲ್ಲಿ ಇದು, ಎರಡು ರೈಲುಗಳು ಒಂದೇ ಟ್ರ್ಯಾಕ್‌ನಲ್ಲಿ ಪರಸ್ಪರ ಅಭಿಮುಖವಾಗಿ ವೇಗವಾಗಿ ಧಾವಿಸಿ ಅಪ್ಪಳಿಸಿ ಅಪಘಾತಕ್ಕೀಡಾಗುವುದಕ್ಕೆ ಕಾರಣವಾಗುವ, ‘ಸಿಗ್ನಲಿಂಗ್ ವ್ಯವಸ್ಥೆ’ಯನ್ನು ನೋಡಿಕೊಳ್ಳುವ ಸಿಬ್ಬಂದಿಯ ಕರ್ತವ್ಯ ಲೋಪಕ್ಕೆ ಹೋಲು ವಂಥದ್ದು. ಪ್ರಾಕೃತಿಕ ದುರಂತಗಳನ್ನು ತಡೆಯಲಾಗದು, ಆದರೆ ನಮ್ಮ ತಪ್ಪಿನಿಂದಾಗಿ ದುರಂತ ಗಳಾಗದಂತೆ ನೋಡಿಕೊಳ್ಳುವುದು ನಮ್ಮ ಕೈಯಲ್ಲೇ ಇದೆ, ಅಲ್ಲವೇ?
ಇದನ್ನೂ ಓದಿ: Vishwavani Editorial: ನವಸಂಕಲ್ಪದ ಪರ್ವಕಾಲ ವಾಗಲಿ