Vishwavani Editorial: ಕಾನೂನು ಎಲ್ಲರಿಗೂ ಒಂದೇ
ಪ್ರಭಾವಿಗಳೆಂಬ ಕಾರಣಕ್ಕೆ ಕಾನೂನಿನ ಕಬಂಧಬಾಹುಗಳಿಂದ ಇವರು ತಪ್ಪಿಸಿಕೊಳ್ಳಬಹುದು ಎಂಬ ಆಕ್ರೋಶ-ಅಸಮಾಧಾನಭರಿತ ಅಭಿಪ್ರಾಯಗಳೂ ಅವರಿಂದ ವ್ಯಕ್ತವಾಗಿದ್ದುಂಟು. ಆದರೀಗ ಲಭ್ಯವಾಗಿ ರುವ ಮಾಹಿತಿಯ ಪ್ರಕಾರ ಈ ಉದ್ಯಮಿಗಳಿಬ್ಬರ ಗಡಿಪಾರಿಗೆ ಸಮ್ಮತಿ ಸಿಕ್ಕಿರುವುದರಿಂದ ಹಿಂದೆ ಹೀಗೆ ಅನುಮಾನಿಸಿದ್ದವರಿಗೆ ಸಮಾಧಾನವಾಗಿದೆ.

-

ಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತು ಭಾರತೀಯ ಸ್ಟೇಟ್ ಬ್ಯಾಂಕ್ ಸೇರಿದಂತೆ ದೇಶದ ವಿವಿಧ ಬ್ಯಾಂಕುಗಳಿಂದ ಕೋಟ್ಯಂತರ ರುಪಾಯಿ ಹಣವನ್ನು ಸಾಲವಾಗಿ ಪಡೆದು, ಅದನ್ನು ಮರು ಪಾವತಿಸದೆಯೇ ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ಕರ್ನಾಟಕದ ಉದ್ಯಮಿ ವಿಜಯ್ ಮಲ್ಯ ಹಾಗೂ ಗುಜರಾತಿನ ವಜ್ರಾಭರಣ ಉದ್ಯಮಿ ನೀರವ್ ಮೋದಿ ಶೀಘ್ರದಲ್ಲೇ ಗಡಿಪಾರಾಗಿ ಭಾರತಕ್ಕೆ ಬಂದು ಸೆರೆವಾಸ ಅನುಭವಿಸುವುದು ಖಚಿತ ಎನ್ನಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿ ಬ್ರಿಟನ್ ಸರಕಾರಕ್ಕೆ ಕೇಂದ್ರ ಸರಕಾರವು ಸಲ್ಲಿಸಿದ ಕೋರಿಕೆಯ ಮೇರೆಗೆ, ವಂಚಕರ ಗಡಿಪಾರಿಗೆ ಅಲ್ಲಿನ ನ್ಯಾಯಾಂಗದಿಂದಲೂ ಸಮ್ಮತಿ ಸಿಕ್ಕಿದೆ ಎನ್ನಲಾಗಿದೆ. ಈ ಇಬ್ಬರು ದೇಶದ ಆಳುಗ ವ್ಯವಸ್ಥೆಯ ಕಣ್ಣಿಗೆ ಮಣ್ಣೆರಚಿ ವಿದೇಶಕ್ಕೆ ಫೇರಿ ಕಿತ್ತಾಗ, ಶ್ರೀಸಾಮಾನ್ಯರು ಒಂದಷ್ಟು ಅನುಮಾನಗಳನ್ನು ಹೊಮ್ಮಿಸಿದ್ದುಂಟು.
ಇದನ್ನೂ ಓದಿ:Vishwavani Editorial: ಮೂಗು ಹಿಡಿದರೆ ಬಾಯಿ ಓಪನ್!
ಪ್ರಭಾವಿಗಳೆಂಬ ಕಾರಣಕ್ಕೆ ಕಾನೂನಿನ ಕಬಂಧಬಾಹುಗಳಿಂದ ಇವರು ತಪ್ಪಿಸಿಕೊಳ್ಳಬಹುದು ಎಂಬ ಆಕ್ರೋಶ-ಅಸಮಾಧಾನಭರಿತ ಅಭಿಪ್ರಾಯಗಳೂ ಅವರಿಂದ ವ್ಯಕ್ತವಾಗಿದ್ದುಂಟು. ಆದರೀಗ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಈ ಉದ್ಯಮಿಗಳಿಬ್ಬರ ಗಡಿಪಾರಿಗೆ ಸಮ್ಮತಿ ಸಿಕ್ಕಿರುವುದರಿಂದ ಹಿಂದೆ ಹೀಗೆ ಅನುಮಾನಿಸಿದ್ದವರಿಗೆ ಸಮಾಧಾನವಾಗಿದೆ.
’ಶ್ರೀಮಂತನೇ ಆಗಿರಲಿ, ಪ್ರಭಾವಿಯೇ ಆಗಿರಲಿ, ಬಡವನೇ ಆಗಿರಲಿ, ನೆಲದ ಕಾನೂನು ಎಲ್ಲರಿಗೂ ಒಂದೇ ಆಗಿರುತ್ತದೆ’ ಎಂಬ ಗ್ರಹಿಕೆಗೆ ಪುಷ್ಟಿ ನೀಡುವ ಮತ್ತೆರಡು ನಿದರ್ಶನಗಳು ಇವಾಗಲಿವೆ ಎಂಬುದು ಬಲ್ಲವರ ಮಾತು. ಇಂಥ ಉಪಕ್ರಮಗಳು ಇಷ್ಟಕ್ಕೇ ನಿಲ್ಲದೆ, ಈ ನೆಲದ ಕಾನೂನನ್ನು ಹಗುರವಾಗಿ ಪರಿಗಣಿಸಿ ಹುಡುಗಾಟವಾಡಿದವರಿಗೆ ಹಾಗೂ ತಾವು ಕಾನೂನಿಗಿಂತಲೂ ಮಿಗಿಲು ಎಂಬ ಧಾರ್ಷ್ಟ್ಯವನ್ನು ತೋರಿದವರಿಗೆ ಕೂಡ ತಕ್ಕ ಶಾಸ್ತಿ ಮಾಡುವಂಥ ಸಜ್ಜಿಕೆ ನಿರ್ಮಾಣವಾಗಲಿ. ಇದು ಬಹುತೇಕರ ನಿರೀಕ್ಷೆ ಮತ್ತು ಆಶಯ. ವ್ಯವಸ್ಥೆಯ ಮೇಲಿನ ಜನಸಾಮಾನ್ಯರ ನಂಬಿಕೆ ಹಾಗೂ ವಿಶ್ವಾಸಗಳು ಗಟ್ಟಿಯಾಗುವುದು ಆಗಲೇ ತಾನೇ?