ಲಿಂಗಪತ್ತೆಯ ಪ್ರಕ್ರಿಯೆ ಮತ್ತು ಹೆಣ್ಣು ಭ್ರೂಣಹತ್ಯೆಯನ್ನು ಹತ್ತಿಕ್ಕಲು ನಿಷ್ಠುರ ಕ್ರಮಗಳನ್ನು ಕೈಗೊಂಡಿರುವುದರ ಹೊರತಾಗಿಯೂ ಕೆಲವು ದುರುಳರು ಈ ಚಟುವಟಿಕೆಯಲ್ಲಿ ತೊಡಗಿಸಿ ಕೊಂಡಿರುವುದು ವಿಷಾದನೀಯ. ಹಳೇ ಮೈಸೂರು ಪ್ರದೇಶದಲ್ಲಿ ಇಂಥ ಏಳು ಮಂದಿಯ ವಿರುದ್ಧ ಪ್ರಕರಣವನ್ನು ದಾಖಲಿಸಿ ಬಂಧಿಸಿರುವುದು ಇದಕ್ಕೆ ಪುಷ್ಟಿ ನೀಡುತ್ತದೆ.
ಇಂಥ ಘಟನೆಗಳು ಮತ್ತೆ ಮತ್ತೆ ವರದಿಯಾಗುವುದನ್ನು ನೋಡಿದಾಗ, ಸಂಚಿ ಹೊನ್ನಮ್ಮ ಅವರ ‘ಕುವರಿಯಾದೊಡೆ ಕುಂದೇನು?’ ಎಂಬ ಪದ್ಯದಲ್ಲಿನ ‘ಪೆಣ್ಣಲ್ಲವೆ ತಮ್ಮನೆಲ್ಲ ಪಡೆದ ತಾಯಿ, ಪೆಣ್ಣಲ್ಲವೆ ಪೊರೆದವಳು, ಪೆಣ್ಣು ಪೆಣ್ಣೆಂದೇಕೆ ಬೀಳುಗಳೆವರು ಕಣ್ಣು ಕಾಣದ ಗಾವಿಲರು’ ಎಂಬ ಸಾಲು ನೆನಪಾಗುತ್ತದೆ. ಇಂದು ಪುರುಷನಿಗೆ ಸರಿಸಮನಾಗಿ ಸಮಾಜದ ವಿವಿಧ ಕಾರ್ಯಕ್ಷೇತ್ರಗಳಲ್ಲಿ ತನ್ನ ಛಾಪನ್ನು ಮೂಡಿಸುತ್ತಿದ್ದಾಳೆ ಹೆಣ್ಣು.
ಇದನ್ನೂ ಓದಿ: Vishwavani Editorial: ದುಡ್ಡು ಮಾಡುವ ದಂಧೆಯೇ?!
ಇಷ್ಟಾಗಿಯೂ, ನಮ್ಮ ಜನರಲ್ಲಿ ಕೆಲವರಿಗೆ ಹೆಣ್ಣೆಂದರೆ ಅದೇಕೆ ಅಷ್ಟೊಂದು ಅಸಹನೆ ಮತ್ತು ನಿಕೃಷ್ಟ ಭಾವನೆ ಎಂಬುದು ಅರ್ಥವಾಗದ ಸಂಗತಿ. ಅದರಲ್ಲೂ ಒಬ್ಬ ಹೆಣ್ಣಾಗಿದ್ದುಕೊಂಡು, ತನ್ನ ಒಡಲೊಳಗಿನ ಮತ್ತೊಂದು ಹೆಣ್ಣು ಭ್ರೂಣವನ್ನು ತೆಗೆಸುವಷ್ಟರ ಮಟ್ಟಿಗೆ ತಾಯಿಯೊಬ್ಬಳ ಹೃದಯ ಕಲ್ಲಾಗುವುದೇಕೆ? ಎಂಬುದು ಯಕ್ಷಪ್ರಶ್ನೆ. ಇಂಥವರು ಇರುವುದರಿಂದಲೇ ಲಿಂಗಪತ್ತೆಗೆ ಮತ್ತು ಹೆಣ್ಣು ಭ್ರೂಣಹತ್ಯೆಗೆ ಸಹಕರಿಸುವರೂ ವಿವಿಧೆಡೆ ಮೈ ಚೆಲ್ಲಿಕೊಂಡು ಮಿಕಗಳಿಗೆ ಬಲೆ ಬೀಸುತ್ತಿದ್ದಾರೆ ಎನ್ನಲಡ್ಡಿಯಿಲ್ಲ.
ಹೆಣ್ಣು ಜೀವಗಳನ್ನು ಹೀಗೆ ಗರ್ಭದಲ್ಲಿರುವಾಗಲೇ ಕತ್ತು ಹಿಸುಕಿ ಇಲ್ಲವಾಗಿಸುವುದರಿಂದ, ಮುಂಬರುವ ದಿನಗಳಲ್ಲಿ ಸಮಾಜದಲ್ಲಿ ಗಂಡು ಮತ್ತು ಹೆಣ್ಣು ಜೀವಗಳ ಅನುಪಾತದಲ್ಲಿ ಅದೆಷ್ಟು ಅಂತರ ಮೈದಳೆಯುತ್ತದೆ, ಸಾಮಾಜಿಕ ವ್ಯವಸ್ಥೆಯಲ್ಲಿನ ಸಮತೋಲನ ಅದೆಷ್ಟರ ಮಟ್ಟಿಗೆ ಹದ ತಪ್ಪುತ್ತದೆ ಎಂಬ ಅರಿವೂ ಇಂಥವರಿಗೆ ಇದ್ದಂತಿಲ್ಲ. ಇವರಿಗೆ ಬುದ್ಧಿ ಹೇಳೋರ‍್ಯಾರು?