Vishwavani Editorial: ಹಣ ಮಾಡುವ ದಂಧೆಯಾಗದಿರಲಿ
ಸಿಸೇರಿಯನ್ ಶಸ್ತ್ರಚಿಕಿತ್ಸೆಯನ್ನು ಸುಖಾ ಸುಮ್ಮನೆ ಕೈಗೊಳ್ಳುವಂತಿಲ್ಲ ಎಂಬುದು ಬಹುತೇಕರಿಗೆ ಗೊತ್ತಿರುವಂಥದ್ದೇ. ಸಹಜ ಹೆರಿಗೆಯಲ್ಲಿ ಅಡಚಣೆ ತಲೆದೋರಬಹುದು ಎನಿಸಿದರೆ, ಗರ್ಭಿಣಿಯಲ್ಲಿ ಅಧಿಕ ರಕ್ತದೊತ್ತಡ ಕಂಡುಬಂದರೆ, ಅವಳಿ ಗರ್ಭಧಾರಣೆಯಾಗಿದ್ದರೆ ಹೀಗೆ ಸಿಸೇರಿಯನ್ ಆಯ್ಕೆಗೆ ಒಂದಿಷ್ಟು ಕಾರಣಗಳಿವೆ. ವೈದ್ಯಕೀಯವಾಗಿ ಅಗತ್ಯವಿದ್ದಾಗಷ್ಟೇ ಸಿಸೇರಿಯನ್ ಮಾಡಬೇಕೆಂದು ವಿಶ್ವ ಆರೋಗ್ಯ ಸಂಸ್ಥೆಯೂ ಹೇಳಿದೆ.
-
ಹಣ ವಸೂಲಿಗಾಗಿ ಅನಗತ್ಯವಾಗಿ ಸಿಸೇರಿಯನ್ ಹೆರಿಗೆ ಮಾಡುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಎಚ್ಚರಿಸಿದ್ದಾರೆ. ಇದು ಶ್ಲಾಘನೀಯ ಹೆಜ್ಜೆಯೇ.
ಸಿಸೇರಿಯನ್ ಶಸ್ತ್ರಚಿಕಿತ್ಸೆಯನ್ನು ಸುಖಾ ಸುಮ್ಮನೆ ಕೈಗೊಳ್ಳುವಂತಿಲ್ಲ ಎಂಬುದು ಬಹುತೇಕರಿಗೆ ಗೊತ್ತಿರುವಂಥದ್ದೇ. ಸಹಜ ಹೆರಿಗೆಯಲ್ಲಿ ಅಡಚಣೆ ತಲೆದೋರಬಹುದು ಎನಿಸಿದರೆ, ಗರ್ಭಿಣಿಯಲ್ಲಿ ಅಧಿಕ ರಕ್ತದೊತ್ತಡ ಕಂಡುಬಂದರೆ, ಅವಳಿ ಗರ್ಭಧಾರಣೆಯಾಗಿದ್ದರೆ ಹೀಗೆ ಸಿಸೇರಿಯನ್ ಆಯ್ಕೆಗೆ ಒಂದಿಷ್ಟು ಕಾರಣಗಳಿವೆ. ವೈದ್ಯಕೀಯವಾಗಿ ಅಗತ್ಯವಿದ್ದಾಗಷ್ಟೇ ಸಿಸೇರಿಯನ್ ಮಾಡಬೇಕೆಂದು ವಿಶ್ವ ಆರೋಗ್ಯ ಸಂಸ್ಥೆಯೂ ಹೇಳಿದೆ.
ಇದನ್ನೂ ಓದಿ: Vishwavani Editorial: ತೂತುಕೊಡಕ್ಕೆ ನೀರು ತುಂಬಿದರೆ...
ಆದರೆ, ‘ಆಚಾರ ಹೇಳೋಕ್ಕೆ, ಬದನೆಕಾಯಿ ತಿನ್ನೋಕ್ಕೆ’ ಎಂಬಂತೆ ಈ ಗ್ರಹಿಕೆಯನ್ನು ಉಲ್ಲಂಘಿಸಿ ಸಿಸೇರಿಯನ್‌ಗೆ ಮುಂದಾಗುವವರು ನಮ್ಮ ನಡುವೆ ಸಾಕಷ್ಟಿದ್ದಾರೆ. ಮೇಲೆ ಉಲ್ಲೇಖಿಸಿರುವ ಗಂಭೀರ ಪರಿಸ್ಥಿತಿ ಇಲ್ಲದ ಸಂದರ್ಭದಲ್ಲೂ ‘ಸಿಸೇರಿಯನ್ ಮಾಡಬೇಕಾಗುತ್ತೆ’ ಎಂಬ ಇಶಾರೆಯನ್ನು ಕೆಲವಷ್ಟು ಖಾಸಗಿ ಆಸ್ಪತ್ರೆಗಳಲ್ಲಿ ಹೊಮ್ಮಿಸುವುದಿದೆ.
ಸಹಜ ಹೆರಿಗೆಗೆ ಮತ್ತು ಸಿಸೇರಿಯನ್‌ಗೆ ವಿಽಸಲಾಗುವ ಶುಲ್ಕಗಳಲ್ಲಿ ಸಾಕಷ್ಟು ಅಂತರವಿರುವುದು ಕೂಡ ಇದಕ್ಕೊಂದು ಕಾರಣ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ಇಂಥ ವೇಳೆ ಗರ್ಭಿಣಿಯಲ್ಲಿ ಮತ್ತು ಆಕೆಯ ಕುಟುಂಬಿಕರಲ್ಲಿ ಸಹಜವಾಗೇ ಒಂದಷ್ಟು ತಲ್ಲಣಗಳು ಮನೆ ಮಾಡಿರುತ್ತವೆ.
ಹೀಗಾಗಿ, ‘ಇದು ಎರಡು ಅಮೂಲ್ಯ ಜೀವಗಳ ವಿಷಯ. ಯಾಕೆ ಸುಮ್ಮನೆ ಚಾನ್ಸ್ ತೆಗೆದು ಕೊಳ್ಳು ವುದು?’ ಎಂದುಕೊಂಡು ಕುಟುಂಬಿಕರು ಆ ಇಶಾರೆಗೆ ತಲೆಯಾಡಿಸಬೇಕಾಗುತ್ತದೆ. ಆ ಮನೆಯವರು ಸ್ಥಿತಿವಂತರಾಗಿದ್ದರೆ ಸಿಸೇರಿಯನ್ ಖರ್ಚನ್ನು ಭರಿಸಿಯಾರು; ಮಿಕ್ಕವರು ಏನು ಮಾಡಬೇಕು? ಈ ಹಿನ್ನೆಲೆಯಲ್ಲಿ ಸಚಿವರ ಎಚ್ಚರಿಕೆ ಸಕಾಲಿಕವಾಗಿದೆ. ಆದರೆ ಇದು ಎಷ್ಟರ ಮಟ್ಟಿಗೆ ಕಾರ್ಯರೂಪಕ್ಕೆ ಬರುತ್ತದೆ ಎಂಬುದನ್ನು ಕಾದು ನೋಡಬೇಕು.