ದುಬೈ: ಸಾಂಪ್ರದಾಯಿಕ ಬದ್ಧ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ(India vs Pakistan) ತಂಡಗಳು ಭಾನುವಾರ ನಡೆಯುವ ಏಷ್ಯಾ ಕಪ್ ಟಿ20 ಟೂರ್ನಿಯ ಫೈನಲ್(Asia Cup 2025 final)ನಲ್ಲಿ ಸೆಣಸಾಡಲಿದೆ. ಈ ಬಾರಿಯ ಆವೃತ್ತಿಯಲ್ಲಿ ಇದು ಇತ್ತಂಡಗಳ ಮೂರನೇ ಹಾಗೂ 41 ವರ್ಷಗಳ ಟೂರ್ನಿಯ ಇತಿಹಾಸದಲ್ಲೇ ಮೊದಲ ಫೈನಲ್ ಮುಖಾಮುಖಿಯಾಗಿದೆ. ಹೀಗಾಗಿ ಪಂದ್ಯದ ನಿರೀಕ್ಷೆ ಬೆಟ್ಟದಷ್ಟಿದೆ.
ಹೌದು, 1984ರಲ್ಲಿ ಆರಂಭವಾದ ಏಷ್ಯಾಕಪ್ ಟೂರ್ನಿಯಲ್ಲಿ ಇದುವರೆಗೆ 16 ಆವೃತ್ತಿ ನಡೆದಿದೆ. ಈ ಬಾರಿಯದ್ದು 17ನೇ ಆವೃತ್ತಿ. ಇದುವರೆಗಿನ ಟೂರ್ನಿ ಇತಿಹಾಸದಲ್ಲಿ ಭಾರತ ಅತ್ಯಂತ ಯಶಸ್ವಿ ತಂಡವೆಂಬ ಹೆಗ್ಗಳಿಕೆ ಹೊಂದಿದೆ. 11 ಸಲ ಫೈನಲ್‌ಗೆ ಲಗ್ಗೆ ಇಟ್ಟಿರುವ ಭಾರತ ಅತ್ಯಧಿಕ 8 ಸಲ ಪ್ರಶಸ್ತಿಯನ್ನೆತ್ತಿದೆ. ಈ ಬಾರಿಯದ್ದು ಸೇರಿ 12ನೇ ಫೈನಲ್. ಯುಎಇಯಲ್ಲೇ ಏರ್ಪಟ್ಟ 1984ರ ಚೊಚ್ಚಲ ಏಷ್ಯಾಕಪ್ ಗೆದ್ದ ಹಿರಿಮೆ ಭಾರತದ್ದು. ಸುನೀಲ್ ಗವಾಸ್ಕರ್ ಏಷ್ಯಾ ಕಪ್ ಎತ್ತಿದ ಮೊದಲ ನಾಯಕ.
ಇದನ್ನೂ ಓದಿ Asia Cup 2025 Final: ಫೈನಲ್‌ಗೂ ಮುನ್ನ ಭಾರತಕ್ಕೆ ಅದೃಷ್ಟ ತಂದ ಟೈ!
ಸ್ವಾರಸ್ಯವೆಂದರೆ, ಏಷ್ಯಾ ಕಪ್ ಚರಿತ್ರೆಯಲ್ಲಿ ಭಾರತ-ಪಾಕಿಸ್ತಾನ ತಂಡಗಳು ಇಮ್ಮೆಯೂ ಫೈನಲ್‌ನಲ್ಲಿ ಮುಖಾಮುಖಿ ಆಗಿರಲಿಲ್ಲ. ಇದೀಗ 41 ವರ್ಷಗಳ ಬಳಿಕ ಇತ್ತಂಡಗಳು ಫೈನಲ್ ಸೆಣಸಾಟ ನಡೆಸಿಲಿದೆ. ಈ ಬಾರಿಯ ಆವೃತ್ತಿಯಲ್ಲಿ ಭಾರತ ಎರಡು ಬಾರಿ ಪಾಕಿಸ್ತಾನಕ್ಕೆ ಸೋಲುಣಿಸಿದೆ. ಹೀಗಾಗಿ ಪಾಕ್ ಕೂಡ ಸೇಡು ತೀರಿಸಿಕೊಳ್ಳಲು ಕಾದು ಕುಳಿತಿದೆ.
ಪಹಲ್ಗಾಮ್ ಉಗ್ರರ ದಾಳಿ ಮತ್ತು ಆಪರೇಷನ್ ಸಿಂಧೂರ್ ವಿಚಾರದಲ್ಲಿ ಉಭಯ ತಂಡಗಳ ಆಟಗಾರರು ಈಗಾಗಲೇ ಕಿತ್ತಾಟ ನಡೆಸಿರುವ ಕಾರಣ ಫೈನಲ್ ಪಂದ್ಯ ಯುದ್ಧದಷ್ಟೇ ಕುತೂಹಲ ಮೂಡಿಸಿದೆ.