ಹಿಟ್ಮ್ಯಾನ್ ರೋಹಿತ್ ವಿಶ್ವ ದಾಖಲೆ ಮುರಿದ ಅಭಿಷೇಕ್ ಶರ್ಮ
Abhishek Sharma: ಪಂದ್ಯದಲ್ಲಿ ಅಭಿಷೇಕ್ ಕೇವಲ 38 ಎಸೆತಗಳಲ್ಲಿ 113 ರನ್ಗಳ ಅದ್ಭುತ ಇನ್ನಿಂಗ್ಸ್ ಆಡುವ ಮೂಲಕ ದಾಖಲೆ ನಿರ್ಮಿಸಿದರು. ಈ ಗೆಲುವಿನೊಂದಿಗೆ ಭಾರತವು ಐದು ಪಂದ್ಯಗಳ ಸರಣಿಯಲ್ಲಿ 3-0 ಅಂತರದ ಅಜೇಯ ಮುನ್ನಡೆಯನ್ನು ಪಡೆದುಕೊಂಡು ಸರಣಿಯನ್ನು ತನ್ನದಾಗಿಸಿಕೊಂಡಿತು.
Abhishek Sharma -
ವೆಲ್ಲಿಂಗ್ಟನ್, ಅ.28: ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯ ಮೂರನೇ ಪಂದ್ಯದಲ್ಲಿ ಅತ್ಯದ್ಭುತ ಬ್ಯಾಟಿಂಗ್ ಪ್ರದರ್ಶನದ ತೋರಿದ ಅಭಿಷೇಕ್ ಶರ್ಮ ಅವರು ಕ್ಯಾಲೆಂಡರ್ ವರ್ಷದಲ್ಲಿ 'ಫುಲ್ ಮೆಂಬರ್' (ಪೂರ್ಣ ಸದಸ್ಯ) ರಾಷ್ಟ್ರದ ಬ್ಯಾಟರ್ವೊಬ್ಬರು ಸಿಡಿಸಿದ ಅತಿ ಹೆಚ್ಚು ಸಿಕ್ಸರ್ಗಳ ಹೊಸ ವಿಶ್ವ ದಾಖಲೆಯನ್ನು ನಿರ್ಮಿಸಿದರು.
ಅಭಿಷೇಕ್, 2026ರಲ್ಲಿ ತನ್ನ ಸಿಕ್ಸರ್ಗಳ ಸಂಖ್ಯೆಯನ್ನು 85ಕ್ಕೆ ಏರಿಸಿಕೊಂಡಿದ್ದು, 2023ರಲ್ಲಿ ಭಾರತದ ಮಾಜಿ ನಾಯಕ ರೋಹಿತ್ ಶರ್ಮಾ ನಿರ್ಮಿಸಿದ್ದ 80 ಸಿಕ್ಸರ್ಗಳ ಹಿಂದಿನ ದಾಖಲೆಯನ್ನು ಮೀರಿಸಿದರು. ನ್ಯೂಜಿಲೆಂಡ್ ನೀಡಿದ್ದ 199 ರನ್ಗಳ ಗುರಿಯನ್ನು ಬೆನ್ನಟ್ಟಿದ ಭಾರತ, ಕೇವಲ 13.2 ಓವರ್ಗಳಲ್ಲಿ ಜಯ ಸಾಧಿಸಿತು.
ಈ ಪಂದ್ಯದಲ್ಲಿ ಅಭಿಷೇಕ್ ಕೇವಲ 38 ಎಸೆತಗಳಲ್ಲಿ 113 ರನ್ಗಳ ಅದ್ಭುತ ಇನ್ನಿಂಗ್ಸ್ ಆಡುವ ಮೂಲಕ ದಾಖಲೆ ನಿರ್ಮಿಸಿದರು. ಈ ಗೆಲುವಿನೊಂದಿಗೆ ಭಾರತವು ಐದು ಪಂದ್ಯಗಳ ಸರಣಿಯಲ್ಲಿ 3-0 ಅಂತರದ ಅಜೇಯ ಮುನ್ನಡೆಯನ್ನು ಪಡೆದುಕೊಂಡು ಸರಣಿಯನ್ನು ತನ್ನದಾಗಿಸಿಕೊಂಡಿತು.
ವಿಶ್ವದ ಅಗ್ರ ಶ್ರೇಯಾಂಕದ T20 ಬ್ಯಾಟರ್, ನ್ಯೂಜಿಲೆಂಡ್ನ ಬೌಲಿಂಗ್ ದಾಳಿಯನ್ನು ಧೂಳೀಪಟ ಮಾಡಿದರು. ಕೇವಲ 15 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಅವರು, 35 ಎಸೆತಗಳಲ್ಲಿ ಶತಕವನ್ನು ಪೂರ್ಣಗೊಳಿಸಿದರು. ಅವರ ಈ ಇನ್ನಿಂಗ್ಸ್ನಲ್ಲಿ 11 ಸಿಕ್ಸರ್ಗಳು ಮತ್ತು 9 ಬೌಂಡರಿಗಳು ಒಳಗೊಂಡಿದ್ದವು.
ವಿರಾಟ್ ಕೊಹ್ಲಿಯ ಶತಕದ ದಾಖಲೆ ಮುರಿದ ಅಭಿಷೇಕ್ ಶರ್ಮಾ
ಅಭಿಷೇಕ್ ಮೊದಲ ಓವರ್ನಲ್ಲೇ ತಮ್ಮ ಆಕ್ರಮಣವನ್ನು ಆರಂಭಿಸಿದರು; ಈ ಓವರ್ನಲ್ಲಿ ಭಾರತವು ಜೇಕಬ್ ಡಫಿ ಅವರ ಬೌಲಿಂಗ್ನಲ್ಲಿ 26 ರನ್ಗಳನ್ನು ಕಲೆಹಾಕಿತು. 18 ಎಸೆತಗಳಲ್ಲಿ 45 ರನ್ ಸಿಡಿಸಿದ 15 ವರ್ಷದ ವೈಭವ್ ಸೂರ್ಯವಂಶಿ ಅವರೊಂದಿಗೆ ಸೇರಿ, ಅಭಿಷೇಕ್ ಭಾರತಕ್ಕೆ 'ಪವರ್ಪ್ಲೇ'ನಲ್ಲಿ ದಾಖಲೆಯ 118 ರನ್ಗಳನ್ನು ತಂದುಕೊಟ್ಟರು. ಟಿ20 ಇನ್ನಿಂಗ್ಸ್ನ ಮೊದಲ ಆರು ಓವರ್ಗಳಲ್ಲಿ ಯಾವುದೇ ತಂಡ ಗಳಿಸಿದ ಅತಿ ಹೆಚ್ಚು ಮೊತ್ತ ಇದಾಗಿದೆ.
ಈ ಆರಂಭಿಕ ಜೋಡಿಯು ಕೇವಲ ಏಳು ಓವರ್ಗಳಲ್ಲಿ 133 ರನ್ಗಳನ್ನು ಕಲೆಹಾಕಿತು. ಈ ಜೊತೆಯಾಟದ ವೇಳೆ ಸೂರ್ಯವಂಶಿ ನಾಲ್ಕು ಸಿಕ್ಸರ್ಗಳನ್ನು ಬಾರಿಸಿದರೆ, ಅಭಿಷೇಕ್ ಎಂಟು ಬಾರಿ ಚೆಂಡನ್ನು ಬೌಂಡರಿ ಗೆರೆಯಾಚೆ (ಸಿಕ್ಸರ್ಗೆ) ಕಳುಹಿಸಿದರು.
ಗುರಿ ಬೆನ್ನಟ್ಟುವಲ್ಲಿ ಸೂರ್ಯವಂಶಿ ಅವರ ಸ್ಫೋಟಕ ಆರಂಭವು ಪ್ರಮುಖ ಪಾತ್ರ ವಹಿಸಿತಾದರೂ, ನಂತರ ಅಭಿಷೇಕ್ ತಮ್ಮ ಅದ್ಭುತ ಪವರ್-ಹಿಟ್ಟಿಂಗ್ ಪ್ರದರ್ಶನದ ಮೂಲಕ ಎಲ್ಲರ ಗಮನ ಸೆಳೆದರು. ಅವರು ತಮ್ಮ ಶತಕವನ್ನು ಪೂರೈಸಿದ ನಂತರ, ತಮ್ಮ ವಿಶಿಷ್ಟ ಶೈಲಿಯ 'ಧ್ಯಾನ ಭಂಗಿ'ಯಲ್ಲಿ (ಮೆಡಿಟೇಶನ್ ಪೋಸ್) ಸಂಭ್ರಮಿಸಿದರು. ಅಂತಿಮವಾಗಿ ಗ್ಲೆನ್ ಫಿಲಿಪ್ಸ್ ಅವರ ಬೌಲಿಂಗ್ನಲ್ಲಿ ಅವರು ವಿಕೆಟ್ ಒಪ್ಪಿಸಿದರು.