ದುಬೈ: ಸೆಪ್ಟೆಂಬರ್ 14 ರಂದು ನಡೆಯಲಿರುವ ಸಾಂಪ್ರದಾಯಿಕ ವೈರಿಗಳಾದ ಭಾರತ ಮತ್ತು ಪಾಕಿಸ್ತಾನ(IND vs PAK) ನಡುವಿನ ಏಷ್ಯಾಕಪ್(Asia Cup 2025) ಪಂದ್ಯ ದುಬೈನಲ್ಲಿ ನಡೆಯಲಿದೆ ಎಂದು ಏಷ್ಯನ್ ಕ್ರಿಕೆಟ್ ಕೌನ್ಸಿಲ್(ACC) ಖಚಿತಪಡಿಸಿದೆ. ಈ ಹಿಂದೆ ಪಂದ್ಯಾವಳಿಯ ವೇಳಾಪಟ್ಟಿಯನ್ನು ಮಾತ್ರ ಪ್ರಕಟಿಸಲಾಗಿತ್ತು. ಪಂದ್ಯಗಳ ತಾಣವನ್ನು ಅಂತಿಮಗೊಳಿಸಿರಲಿಲ್ಲ.
ಪಂದ್ಯಾವಳಿಯನ್ನು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಆಯೋಜಿಸುತ್ತಿದ್ದು, ಬಿಸಿಸಿಐ ಆತಿಥ್ಯ ವಹಿಸಲಿದೆ. ಸೆಪ್ಟೆಂಬರ್ 9 ರಿಂದ 28 ರವರೆಗೆ ದುಬೈ ಮತ್ತು ಅಬುಧಾಬಿಯಲ್ಲಿ ನಡೆಯಲಿದೆ. ಫೈನಲ್ ಸಹಿತ ಒಟ್ಟು 19 ಪಂದ್ಯಗಳು ನಡೆಯಲಿದ್ದು, ಈ ಪೈಕಿ ದುಬೈ ಕ್ರೀಡಾಂಗಣ 11 ಪಂದ್ಯ ಹಾಗೂ ಅಬುಧಾಬಿ ಕ್ರೀಡಾಂಗಣ 8 ಪಂದ್ಯಗಳಿಗೆ ಆತಿಥ್ಯ ವಹಿಸಲಿದೆ. ಈ ಟೂರ್ನಿಯು ಟಿ20 ಮಾದರಿಯಲ್ಲಿ ನಡೆಯಲಿದ್ದು, 8 ತಂಡಗಳು ಭಾಗವಹಿಸಲಿವೆ. ಯುಎಇ ಸಮಯ ಸಂಜೆ 6 ಗಂಟೆಗೆ ಪ್ರಾರಂಭವಾಗುವ ಪಂದ್ಯಗಳು ಭಾರತದಲ್ಲಿ ಸಂಜೆ 7:30 ಕ್ಕೆ ಆರಂಭವಾಗಲಿದೆ. 8 ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ.
'ಎ' ಗುಂಪು: ಭಾರತ, ಪಾಕಿಸ್ತಾನ, ಯುಎಇ, ಮತ್ತು ಒಮಾನ್.
'ಬಿ' ಗುಂಪು: ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ, ಮತ್ತು ಹಾಂಗ್ ಕಾಂಗ್.
ಭಾರತದ ಲೀಗ್ ಪಂದ್ಯಗಳು ಸೆಪ್ಟೆಂಬರ್ 10 (ಯುಎಇ ವಿರುದ್ಧ), ಸೆಪ್ಟೆಂಬರ್ 14 (ಪಾಕಿಸ್ತಾನ ವಿರುದ್ಧ) ಮತ್ತು ಸೆಪ್ಟೆಂಬರ್ 19 (ಒಮಾನ್ ವಿರುದ್ಧ) ರಂದು ನಡೆಯಲಿವೆ. ಭಾರತ ಮತ್ತು ಪಾಕಿಸ್ತಾನ ತಮ್ಮ ಗುಂಪಿನಲ್ಲಿ ಅಗ್ರ ಎರಡು ತಂಡಗಳಾಗಿ ಸ್ಥಾನ ಪಡೆದರೆ, ಸೆಪ್ಟೆಂಬರ್ 21 ರಂದು ಸೂಪರ್ 4 ಹಂತದಲ್ಲಿ ಮತ್ತೆ ಮುಖಾಮುಖಿಯಾಗಲಿದಾರೆ.
ಇದನ್ನೂ ಓದಿ IND vs ENG 5th Test: ಹರ್ಷ ಭೋಗ್ಲೆ ಜತೆ ಕ್ರಿಕೆಟ್ ಕಾಮೆಂಟರಿ ಮಾಡಿದ ಗೂಗಲ್ ಸಿಇಒ ಸುಂದರ್ ಪಿಚೈ