IND vs ENG 5th Test: ಹರ್ಷ ಭೋಗ್ಲೆ ಜತೆ ಕ್ರಿಕೆಟ್ ಕಾಮೆಂಟರಿ ಮಾಡಿದ ಗೂಗಲ್ ಸಿಇಒ ಸುಂದರ್ ಪಿಚೈ
Sundar Pichai: ಸುಂದರ್ ಪಿಚೈ ಕಾಮೆಂಟರಿ ಮಾಡುವಾಗ ಟಿ20 ಗಿಂತ ಟೆಸ್ಟ್ ಕ್ರಿಕೆಟ್‌ನತ್ತ ತಮ್ಮ ಒಲವು ಹೆಚ್ಚು ಎನ್ನುದನ್ನು ಬಹಿರಂಗಪಡಿಸಿದರು. ಭಾರತದಲ್ಲಿ 80-90ರ ದಶಕದಲ್ಲಿ ತಾನು ಚೆನ್ನೈಯಲ್ಲಿ ಹಲವು ಟೆಸ್ಟ್ ಪಂದ್ಯಗಳನ್ನು ವೀಕ್ಷಿಸಿದ್ದೇನೆ ಎಂದು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.


ಲಂಡನ್: ಭಾರತ ಮತ್ತು ಇಂಗ್ಲೆಂಡ್(IND vs ENG 5th Test) ನಡುವಣ ತೆಂಡುಲ್ಕರ್-ಆ್ಯಂಡರ್‌ಸನ್ ಟೆಸ್ಟ್ ಸರಣಿಯ ಅಂತಿಮ ಪಂದ್ಯದ ಮೂರನೇ ದಿನದಾಟ ವಿಶೇಷ ಕ್ಷಣವೊಂದಕ್ಕೆ ಸಾಕ್ಷಿಯಾಯಿತು. ಗೂಗಲ್ ಕಂಪನಿಯ ಸಿಇಒ ಆಗಿರುವ ಭಾರತೀಯ ಮೂಲದ ಸುಂದರ್ ಪಿಚೈ(Sundar Pichai) ಅವರು ಕಾಮೆಂಟರಿ ಮಾಡುವ ಮೂಲಕವೂ ಗಮನಸೆಳೆದಿದ್ದಾರೆ. ಕ್ರಿಕೆಟ್ ವಿಶ್ಲೇಷಕ ಹರ್ಷ ಭೋಗ್ಲೆ(Harsha Bhogle) ಅವರ ಜತೆ ಸುಂದರ್ ಪಿಚೈ ಕೆಲ ಕಾಲ ಕಾಮೆಂಟರಿ ಮಾಡಿ ಗಮನಸೆಳೆದರು.
ಸುಂದರ್ ಪಿಚೈ ಕಾಮೆಂಟರಿ ಮಾಡುವಾಗ ಟಿ20 ಗಿಂತ ಟೆಸ್ಟ್ ಕ್ರಿಕೆಟ್‌ನತ್ತ ತಮ್ಮ ಒಲವು ಹೆಚ್ಚು ಎನ್ನುದನ್ನು ಬಹಿರಂಗಪಡಿಸಿದರು. ಭಾರತದಲ್ಲಿ 80-90ರ ದಶಕದಲ್ಲಿ ತಾನು ಚೆನ್ನೈಯಲ್ಲಿ ಹಲವು ಟೆಸ್ಟ್ ಪಂದ್ಯಗಳನ್ನು ವೀಕ್ಷಿಸಿದ್ದೇನೆ ಎಂದು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.
ಈ ವೇಳೆ ಹರ್ಷ ಭೋಗ್ಲೆ ನೇರವಾಗಿ ಸುಂದರ್ ಪಿಚೈ ಅವರಿಗೆ ನಿಮ್ಮ ಫೇವರಿಟ್ ಕ್ರಿಕೆಟರ್ ಯಾರು ಎಂದು ಪ್ರಶ್ನೆ ಕೇಳಿದರು. ಇದಕ್ಕೆ ಉತ್ತರಿಸಿದ ಸುಂದರ್ ಪಿಚೈ, 'ನಿಸ್ಸಂಶಯವಾಗಿ ಅದು ವಿರಾಟ್ ಕೊಹ್ಲಿ. ಅವರ ಆಕ್ರಮಣಕಾರಿ ಶೈಲಿಯ ವ್ಯಕ್ತಿತ್ವಕ್ಕೆ ನಾನು ದೊಡ್ಡ ಅಭಿಮಾನಿ. ಎಂದಿಗೂ ಸೋಲದ ಅವರ ಮನೋಭಾವವನ್ನು ನಾನು ಬಹಳ ಇಷ್ಟಪಡುತ್ತೇನೆ' ಎಂದು ಹೇಳಿದರು.
ಇದೇ ವೇಳೆ ನೀವೊಂದು ಕ್ರಿಕೆಟ್ ಟೀಮ್ ಕಟ್ಟಿದರೆ ಅದಕ್ಕೆ ಯಾರನ್ನು ನಾಯಕರನ್ನಾಗಿ ಆಯ್ಕೆ ಮಾಡುತ್ತೀರಿ ಎನ್ನುವ ಪ್ರಶ್ನೆಗೂ, ಉತ್ತರಿಸಿದ ಅವರು 'ನಾನು ತಂಡವನ್ನು ಕಟ್ಟಿದರೆ ಅದಕ್ಕೆ ವಿರಾಟ್ ಕೊಹ್ಲಿಯನ್ನು ಆಯ್ಕೆ ಮಾಡುತ್ತೇನೆ' ಎಂದು ಹೇಳಿದರು.
A surprise in the commentary box 🤩
— Sony Sports Network (@SonySportsNetwk) August 2, 2025
Google CEO Sundar Pichai joins Harsha Bhogle for a short commentary stint 😲#SonySportsNetwork #ENGvIND #NayaIndia #DhaakadIndia #TeamIndia #ExtraaaInnings | @bhogleharsha @sundarpichai pic.twitter.com/ZmI4jtulwd
ಇನ್ನು ಸುಂದರ್ ಪಿಚೈ ಅವರೊಂದಿಗೆ ಕಾಮೆಂಟರಿ ಬಾಕ್ಸ್‌ನಲ್ಲಿದ್ದ ಕ್ಷಣವನ್ನು ಹರ್ಷ ಭೋಗ್ಲೆ ಕೂಡ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. 'ಕಾರ್ಪೊರೇಟ್ ನಾಯಕರೊಂದಿಗೆ ನಾನು ಕಾಮೆಂಟರಿ ಬಾಕ್ಸ್‌ನಲ್ಲಿ ಇದ್ದೇನೆ ಅಂತ ನನಗನ್ನಿಸುವುದಿಲ್ಲ. ಕ್ರಿಕೆಟ್ ಅನ್ನು ತುಂಬಾ ಪ್ರೀತಿಸ್ತಾರೆ. ಹಾಗೂ ಬಹಳ ಸರಳ ಸ್ವಭಾವದವರು' ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ IND vs ENG 5th Test: ಯಶಸ್ವಿ ಜೈಸ್ವಾಲ್ ಶತಕ, ಮೂರನೇ ದಿನ ಭಾರತ ತಂಡಕ್ಕೆ ಮೇಲುಗೈ!