ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Amit Mishra: ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಅಮಿತ್ ಮಿಶ್ರಾ

Amit Mishra retirement: 2003 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಅವರು, 2008 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಆ ಪಂದ್ಯದಲ್ಲಿ ಅವರು ಐದು ವಿಕೆಟ್ ಗೊಂಚಲು (5/71) ಸೇರಿ ಒಟ್ಟು 7 ವಿಕೆಟ್‌ ಉರುಳಿಸಿ ಭಾರತದ 320 ರನ್‌ಗಳ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

25 ವರ್ಷಗಳ ಕ್ರಿಕೆಟ್‌ ವೃತ್ತಿಜೀವನಕ್ಕೆ ತೆರೆ ಎಳೆದ ಅಮಿತ್ ಮಿಶ್ರಾ

-

Abhilash BC Abhilash BC Sep 4, 2025 1:32 PM

ನವದೆಹಲಿ: ಟೀಮ್‌ ಇಂಡಿಯಾದ ಹಿರಿಯ ಸ್ಪಿನ್ನರ್‌ ಅಮಿತ್ ಮಿಶ್ರಾ(Amit Mishra)ಅವರು ಎಲ್ಲ ಮಾದರಿಯ ಕ್ರಿಕೆಟ್‌ಗೆ ಗುರುವಾರ ನಿವೃತ್ತಿ ಘೋಷಿಸಿದ್ದಾರೆ. ಈ ಮೂಲಕ ತಮ್ಮ 25 ವರ್ಷಗಳ ಕ್ರಿಕೆಟ್‌ ವೃತ್ತಿಜೀವನಕ್ಕೆ ತೆರೆ ಎಳೆದರು. ಮಿಶ್ರಾ 22 ಟೆಸ್ಟ್, 36 ಏಕದಿನ ಮತ್ತು 10 ಟಿ20 ಗಳಲ್ಲಿ ಭಾರತವನ್ನು ಪ್ರತಿನಿಧಿಸಿ ಒಟ್ಟು 156 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

2003 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಅವರು, 2008 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಆ ಪಂದ್ಯದಲ್ಲಿ ಅವರು ಐದು ವಿಕೆಟ್ ಗೊಂಚಲು (5/71) ಸೇರಿ ಒಟ್ಟು 7 ವಿಕೆಟ್‌ ಉರುಳಿಸಿ ಭಾರತದ 320 ರನ್‌ಗಳ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

42 ವರ್ಷ ವಯಸ್ಸಿನ ಮಿಶ್ರಾ ಕೊನೆಯ ಬಾರಿಗೆ 2016 ರಲ್ಲಿ ಚೆನ್ನೈನಲ್ಲಿ ನಡೆದಿದ್ದ ಇಂಗ್ಲೆಂಡ್ ವಿರುದ್ಧದ 5 ನೇ ಟೆಸ್ಟ್ ಪಂದ್ಯದಲ್ಲಿ ಭಾರತ ಪರ ಆಡಿದ್ದರು. ಮಿಶ್ರಾ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಆಡಿದ ಅತ್ಯಂತ ಯಶಸ್ವಿ ಸ್ಪಿನ್ನರ್‌ಗಳಲ್ಲಿ ಒಬ್ಬರಾಗಿದ್ದಾರೆ. ಮಿಶ್ರಾ 162 ಐಪಿಎಲ್‌ ಪಂದ್ಯಗಳಿಂದ 174 ವಿಕೆಟ್‌ಗಳನ್ನು ಪಡೆಯುವ ಮೂಲಕ ಟೂರ್ನಿಯ ಇತಿಹಾಸದಲ್ಲಿ ಎಂಟನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. 2008, 2011 ಮತ್ತು 2013 ರಲ್ಲಿ ಅವರು ಹ್ಯಾಟ್ರಿಕ್‌ ವಿಕೆಟ್‌ ಕಿತ್ತು ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಹ್ಯಾಟ್ರಿಕ್ ಪಡೆದ ದಾಖಲೆಯನ್ನು ಹೊಂದಿದ್ದಾರೆ.

"ಇಂದು, 25 ವರ್ಷಗಳ ನಂತರ, ನಾನು ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸುತ್ತಿದ್ದೇನೆ. ನನ್ನ ಮೊದಲ ಪ್ರೀತಿ ಮತ್ತು ನನ್ನ ಅತ್ಯಂತ ಸಂತೋಷದ ಮೂಲವಾಗಿದ್ದ ಆಟ. ಈ ಪ್ರಯಾಣವು ಲೆಕ್ಕವಿಲ್ಲದಷ್ಟು ಭಾವನೆಗಳಿಂದ ತುಂಬಿದೆ. ಹೆಮ್ಮೆ, ಕಷ್ಟ, ಕಲಿಕೆ ಮತ್ತು ಪ್ರೀತಿಯ ಕ್ಷಣಗಳು. ಬಿಸಿಸಿಐ, ಹರಿಯಾಣ ಕ್ರಿಕೆಟ್ ಅಸೋಸಿಯೇಷನ್, ನನ್ನ ತರಬೇತುದಾರರು, ಬೆಂಬಲ ಸಿಬ್ಬಂದಿ, ಸಹೋದ್ಯೋಗಿಗಳು ಮತ್ತು ಮುಖ್ಯವಾಗಿ, ಅಭಿಮಾನಿಗಳಿಗೆ ನಾನು ತುಂಬಾ ಕೃತಜ್ಞನಾಗಿದ್ದೇನೆ, ಅವರ ನಂಬಿಕೆ ಮತ್ತು ಬೆಂಬಲವು ಪ್ರತಿ ಹಂತದಲ್ಲೂ ನನಗೆ ಬಲವನ್ನು ನೀಡಿತು" ಎಂದು ಮಿಶ್ರಾ ತಮ್ಮ ಎಕ್ಸ್ ಖಾತೆಯಲ್ಲಿ ಬರೆದಿದ್ದಾರೆ.



"ಆರಂಭಿಕ ದಿನಗಳಲ್ಲಿ ಹೋರಾಟಗಳು ಮತ್ತು ತ್ಯಾಗಗಳಿಂದ ಹಿಡಿದು ಮೈದಾನದಲ್ಲಿನ ಮರೆಯಲಾಗದ ಕ್ಷಣಗಳವರೆಗೆ, ಪ್ರತಿ ಅಧ್ಯಾಯವು ನನ್ನನ್ನು ಒಬ್ಬ ಕ್ರಿಕೆಟಿಗನಾಗಿ ಮತ್ತು ವ್ಯಕ್ತಿಯಾಗಿ ರೂಪಿಸಿದ ಅನುಭವವಾಗಿದೆ. ನನ್ನ ಕುಟುಂಬಕ್ಕೆ, ಏರಿಳಿತಗಳ ಮೂಲಕ ನನ್ನ ಪಕ್ಕದಲ್ಲಿ ದೃಢವಾಗಿ ನಿಂತಿದ್ದಕ್ಕಾಗಿ ಧನ್ಯವಾದಗಳು. ನನ್ನ ತಂಡದ ಸದಸ್ಯರು ಮತ್ತು ಮಾರ್ಗದರ್ಶಕರಿಗೆ ಈ ಪ್ರಯಾಣವನ್ನು ವಿಶೇಷವಾಗಿಸಿದ್ದಕ್ಕಾಗಿ ಧನ್ಯವಾದಗಳು. ನಾನು ಈ ಅಧ್ಯಾಯವನ್ನು ಮುಗಿಸುತ್ತಿದ್ದಂತೆ, ನನ್ನ ಹೃದಯವು ಕೃತಜ್ಞತೆ ಮತ್ತು ಪ್ರೀತಿಯಿಂದ ತುಂಬಿದೆ. ಕ್ರಿಕೆಟ್ ನನಗೆ ಎಲ್ಲವನ್ನೂ ನೀಡಿದೆ, ಮತ್ತು ಈಗ, ನನ್ನನ್ನು ನಾನಾಗಿ ಮಾಡಿದ ಆಟಕ್ಕೆ ಮರಳಿ ನೀಡಲು ನಾನು ಎದುರು ನೋಡುತ್ತಿದ್ದೇನೆ" ಎಂದು ಅವರು ಹೇಳಿದರು.