BCCI Revenue: 5 ವರ್ಷಗಳಲ್ಲಿ ಬಿಸಿಸಿಐ ಆದಾಯ ದ್ವಿಗುಣ; 20,686 ಕೋಟಿ ರೂ.ಗೆ ಏರಿಕೆ
ಬಿಸಿಸಿಐ ಕಳೆದ ಹಣಕಾಸು ವರ್ಷದಲ್ಲಿ (2023-24) ಆದಾಯ ತೆರಿಗೆಗಾಗಿ 3,150 ಕೋಟಿ ರೂ.ಗಳನ್ನು ಮೀಸಲಿಟ್ಟಿದೆ. ಈ ವಿಷಯದ ಬಗ್ಗೆ ನ್ಯಾಯಾಲಯಗಳು ಮತ್ತು ನ್ಯಾಯಮಂಡಳಿಗಳಲ್ಲಿ ನಡೆಯುತ್ತಿರುವ ಚರ್ಚೆಗಳ ಹೊರತಾಗಿಯೂ, ಭವಿಷ್ಯದ ತೆರಿಗೆಗಳಿಗಾಗಿ ಈ ನಿಧಿಯನ್ನು ಮೀಸಲಿಡಲಾಗಿದೆ ಎಂದು ತಿಳಿದುಬಂದಿದೆ.

-

ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ವಿಶ್ವದ ಶ್ರೀಮಂತ ಕ್ರಿಕೆಟ್ ಸಂಸ್ಥೆ ಎನ್ನುವ ಸತ್ಯ ಈಗಾಗಲೇ ಎಲ್ಲರಿಗೆ ತಿಳಿದಿರುವ ವಿಚಾರ. ಕಳೆದ ಐದು ವರ್ಷಗಳಲ್ಲಿ ಬಿಸಿಸಿಐ(BCCI Revenue) ಆದಾಯವು ದೊಡ್ಡ ಮಟ್ಟದಲ್ಲಿ ದ್ವಿಗುಣಗೊಂಡಿದೆ. ಬರೋಬ್ಬರಿ 14627 ಕೋಟಿ ರೂ. ಸೇರ್ಪಡೆಯಾಗಿದೆ. ಈ ಆದಾಯ ಹೆಚ್ಚಳಕ್ಕೆ ಐಪಿಎಲ್‌ನ ಯಶಸ್ಸು ಮುಖ್ಯ ಕಾರಣವಾಗಿದೆ.
2019ರಲ್ಲಿ ಬಿಸಿಸಿಐ ಖಜಾನೆಯಲ್ಲಿ 6,059 ಕೋಟಿ ರೂ. ಹಣವಿತ್ತು. ಇದು 2024ರಲ್ಲಿ 20,686 ಕೋಟಿ ರೂ.ಗೆ ಏರಿಕೆಯಾಗಿದೆ. ಕಳೆದ ಒಂದು ವರ್ಷದಲ್ಲೇ ಬಿಸಿಸಿಐ 4,196 ಕೋಟಿ ರೂ. ಗಳಿಸಿಸಿದೆ. ಜತೆಗೆ ಬಿಸಿಸಿಐ ಸಾಮಾನ್ಯ ನಿಧಿಯೂ ಸಹ 3,906 ಕೋಟಿ ರೂ.ನಿಂದ 7,988 ಕೋಟಿ ರೂ.ಗೆ ಏರಿಕೆಯಾಗಿದೆ ಎಂದು ವರದಿಗಳು ತಿಳಿಸಿವೆ.
ಇದಲ್ಲದೆ, ಬಿಸಿಸಿಐ ಕಳೆದ ಹಣಕಾಸು ವರ್ಷದಲ್ಲಿ (2023-24) ಆದಾಯ ತೆರಿಗೆಗಾಗಿ 3,150 ಕೋಟಿ ರೂ.ಗಳನ್ನು ಮೀಸಲಿಟ್ಟಿದೆ. ಈ ವಿಷಯದ ಬಗ್ಗೆ ನ್ಯಾಯಾಲಯಗಳು ಮತ್ತು ನ್ಯಾಯಮಂಡಳಿಗಳಲ್ಲಿ ನಡೆಯುತ್ತಿರುವ ಚರ್ಚೆಗಳ ಹೊರತಾಗಿಯೂ, ಭವಿಷ್ಯದ ತೆರಿಗೆಗಳಿಗಾಗಿ ಈ ನಿಧಿಯನ್ನು ಮೀಸಲಿಡಲಾಗಿದೆ ಎಂದು ತಿಳಿದುಬಂದಿದೆ.
ಬಿಸಿಸಿಐ ಕಾರ್ಯದರ್ಶಿ ನೀಡಿದ ಮಾಹಿತಿ ಪ್ರಕಾರ, ಈ ಹಿಂದೆ ರಾಜ್ಯ ಸಂಘಗಳಿಗೆ ಪಾವತಿ ಒಳಗೊಂಡಂತೆ ಬ್ಯಾಂಕ್ ಬ್ಯಾಲೆನ್ಸ್ ಮತ್ತು ನಗದು 6,059 ಕೋಟಿ ರೂ.ಗಳಷ್ಟಿತ್ತು. ಈಗ, ಆಯಾ ಸಂಘಗಳಿಗೆ ಪಾವತಿಸಿದ ಬಳಿಕವೂ ಹೆಚ್ಚುವರಿ 20,686 ಕೋಟಿ ರೂ.ಗಳಿಗೆ ತಲುಪಿದೆ. ಕಳೆದ ಐದು ವರ್ಷಗಳಲ್ಲಿ, 14,627 ಕೋಟಿ ರೂ.ಗಳಗೆ ವೃದ್ಧಿ ಆಗಿದೆ ಎನ್ನಲಾಗಿದೆ.
2023-24 ರ ಹಣಕಾಸು ವರ್ಷದಲ್ಲಿ, ಮೈದಾನದಲ್ಲಿನ ಮೂಲಸೌಕರ್ಯ ಸೌಲಭ್ಯಗಳಿಗಾಗಿ ಬಿಸಿಸಿಐ 1,200 ಕೋಟಿ ರೂ.ಗಳನ್ನು ಹಂಚಿಕೆ ಮಾಡಿದೆ. ಪ್ಲಾಟಿನಂ ಜುಬಿಲಿ ನಿಧಿಯಾಗಿ 350 ಕೋಟಿ ರೂ.ಗಳನ್ನು ಮತ್ತು ಕ್ರಿಕೆಟ್ ಅಭಿವೃದ್ಧಿಗಾಗಿ 500 ಕೋಟಿ ರೂ.ಗಳನ್ನು ಹಂಚಿಕೆ ಮಾಡಿದೆ. ರಾಜ್ಯ ಕ್ರಿಕೆಟ್ ಸಂಘಗಳು 1,990 ಕೋಟಿ ರೂ.ಗಳನ್ನು ಪಡೆದುಕೊಂಡಿವೆ" ಎಂದು ಕ್ರಿಕೆಟ್ ಮೂಲಗಳು ಬಹಿರಂಗಪಡಿಸಿವೆ. ಈ ವಿವರಗಳನ್ನು 28 ರಂದು ನಡೆಯಲಿರುವ ವಾರ್ಷಿಕ ಮಹಾಸಭೆಯಲ್ಲಿ ಅಧಿಕೃತವಾಗಿ ಅನುಮೋದಿಸಲಾಗುವುದು.
ಇದನ್ನೂ ಓದಿ ಭಾರತ ಕ್ರಿಕೆಟ್ ತಂಡದ ಜೆರ್ಸಿ ಪ್ರಾಯೋಜಕತ್ವಕ್ಕೆ ಹೊಸ ಮೂಲ ಬೆಲೆ ನಿಗದಿಪಡಿಸಿದ ಬಿಸಿಸಿಐ