ವೈಫಲ್ಯದ ಹೊರತಾಗಿಯೂ ವೈಭವ್ ಸೂರ್ಯವಂಶಿಯನ್ನು ಬೆಂಬಲಿಸಿದ ಅಭಿಷೇಕ್ ನಾಯರ್!
ಇಂಗ್ಲೆಂಡ್ ವಿರುದ್ಧದ ಟಿ20ಐ ಸರಣಿಯ ಮೂರು ಪಂದ್ಯಗಳಲ್ಲಿ ಸತತ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಹೊರತಾಗಿಯೂ ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್ ವೈಭವ್ ಸೂರ್ಯವಂಶಿಯನ್ನು ಕೈ ಬಿಡದೇ ಮುಂದುವರಿಸಬೇಕೆಂದು ಮಾಜಿ ಆಟಗಾರ ಅಭಿಷೇಕ್ ನಾಯರ್ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ವೈಭವ್ ಸೂರ್ಯವಂಶಿಯನ್ನು ಬೆಂಬಲಿಸಿದ ಅಭಿಷೇಕ್ ನಾಯರ್. -
ನವದೆಹಲಿ: ಇಂಗ್ಲೆಂಡ್ ವಿರುದ್ಧದ ಟಿ20ಐ ಸರಣಿಯ (IND vs ENG) ಸತತ ಮೂರು ಪಂದ್ಯಗಳ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಹೊರತಾಗಿಯೂ ಭಾರತ ತಂಡದ ಯುವ ಆರಂಭಿಕ ವೈಭವ್ ಸೂರ್ಯವಂಶಿಯನ್ನು (Vaibhav Sooryavanshi) ಮಾಜಿ ಕ್ರಿಕೆಟಿಗ ಅಭಿಷೇಕ್ ನಾಯರ್ (Abhishek Nayar) ಬೆಂಬಲಿಸಿದ್ದಾರೆ. ಅವರಿನ್ನೂ ಯುವ ಬ್ಯಾಟ್ಸ್‌ಮನ್ ಆಗಿದ್ದು, ಅವರಿನ್ನೂ ತಂಡದಲ್ಲಿ ನೆಲೆ ಕಂಡುಕೊಳ್ಳಲು ಅವಕಾಶ ನೀಡಬೇಕೆಂದು ಹೇಳಿದ್ದಾರೆ. ಅಂದ ಹಾಗೆ ಭಾರತ ತಂಡ ಇನ್ನೂ ಒಂದು ಪಂದ್ಯ ಬಾಕಿ ಇರುವಾಗಲೇ ಟಿ20ಐ ಸರಣಿಯನ್ನು 0-3 ಅಂತರದಲ್ಲಿ ಸೋಲು ಅನುಭವಿಸಿದೆ.
ಐರ್ಲೆಂಡ್ ವಿರುದ್ಧ ಎರಡು ಪಂದ್ಯಗಳು ಹಾಗೂ ಇಂಗ್ಲೆಂಡ್ ವಿರುದ್ಧ ಮೊದಲನೇ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಬಳಿಕ ಸಂಜು ಸ್ಯಾಮ್ಸನ್ ಅವರನ್ನು ಎರಡನೇ ಪಂದ್ಯದಿಂದ ಕೈಬಿಟ್ಟು ಯುವ ಬ್ಯಾಟ್ಸ್‌ಮನ್ ವೈಭವ್ ಸೂರ್ಯವಂಶಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಲು ಅವಕಾಶವನ್ನು ನೀಡಲಾಗಿತ್ತು. ಆದರೆ, 15ರ ವಯಸ್ಸಿನ ಬ್ಯಾಟ್ಸ್‌ಮನ್ ಕ್ರಮವಾಗಿ 14, 13, ಹಾಗೂ 15 ರನ್‌ಗಳಿಗೆ ಸೀಮಿತರಾದರು.
IND vs ENG: ಭಾರತ ತಂಡದ ಹೀನಾಯ ಸೋಲಿಗೆ ಕಾರಣ ತಿಳಿಸಿದ ದಿನೇಶ್ ಕಾರ್ತಿಕ್!
"ಜಸ್‌ಪ್ರೀತ್ ಬುಮ್ರಾ, ಜೋಫ್ರಾ ಆರ್ಚರ್ ಅವರಂತಹ ಅನುಭವಿ ಬೌಲರ್‌ಗಳಿದ್ದಾರೆ ಎಂಬ ಭಾವನೆ ಸಹಜ. ಆದರೆ ನಿಜವಾದ ಒತ್ತಡ ಅವರ ಮೇಲೆಯೇ ಇರುತ್ತದೆ. ಏಕೆಂದರೆ ಯುವ ಆಟಗಾರನಿಗೆ ಕಳೆದುಕೊಳ್ಳಲು ಏನೂ ಇರುವುದಿಲ್ಲ. ಬುಮ್ರಾ ವಿರುದ್ಧ ಮೊದಲ ಎಸೆತದಲ್ಲೇ ಔಟಾದರೂ ಯಾರೂ ಅವರನ್ನು ಪ್ರಶ್ನಿಸುವುದಿಲ್ಲ. ಆದರೆ ಮೊದಲ ಎಸೆತವನ್ನೇ ಸಿಕ್ಸರ್‌ಗೆ ಅಟ್ಟುವ ಧೈರ್ಯ ಹೊಂದಿರುವ ಬ್ಯಾಟರ್ ಎದುರಿದ್ದಾನೆ ಎಂದು ಬೌಲರ್‌ಗೆ ಗೊತ್ತಾದಾಗ, ಕಳೆದುಕೊಳ್ಳಲು ಹೆಚ್ಚು ಇರುವ ಬೌಲರ್ ಮೇಲೆಯೇ ಹೆಚ್ಚಿನ ಒತ್ತಡ ಇರುತ್ತದೆ," ಎಂದು ಜಯೋಸ್ಟಾರ್‌ನ 'ಗೂಗ್ಲೀಸ್' ಕಾರ್ಯಕ್ರಮದಲ್ಲಿ ಅಭಿಷೇಕ್ ನಾಯರ್ ಹೇಳಿದ್ದಾರೆ.
ಗಂಭೀರ್‌ಗೆ ಸಂಕಷ್ಟ: ಲಕ್ಷ್ಮಣ್‌ರನ್ನು ಕೋಚ್ ಮಾಡುತ್ತಾ ಬಿಸಿಸಿಐ?
"ಹೆಸರಾಂತ ಆಟಗಾರರ ಮನಸ್ಸಿನಲ್ಲಿ, 'ಈ ಹುಡುಗ ನನ್ನ ಮೊದಲ ಎಸೆತವನ್ನೇ ಸಿಕ್ಸರ್ ಹೊಡೆದರೆ ಅವರ ಮೌಲ್ಯ ಹೆಚ್ಚಾಗುತ್ತದೆ, ನನ್ನ ಪ್ರತಿಷ್ಠೆ ಕುಸಿಯುತ್ತದೆ. ಆದರೆ ನಾನು ಅವರನ್ನು ಔಟ್ ಮಾಡಿದರೆ, ಅವಉ ಇನ್ನೂ ಯುವ ಆಟಗಾರ ಎಂದು ಜನ ಹೇಳುತ್ತಾರೆ' ಎಂಬ ಯೋಚನೆ ಇರುತ್ತದೆ. ಅದಕ್ಕಾಗಿಯೇ ಯುವ ಆಟಗಾರರು ಯಾವುದೇ ಒತ್ತಡವಿಲ್ಲದೆ ಸಂಪೂರ್ಣ ಸ್ವಾತಂತ್ರ್ಯದೊಂದಿಗೆ ಆಡುತ್ತಾರೆ. ಆದರೆ ಅವರು ಹೆಚ್ಚು ಪಂದ್ಯಗಳನ್ನು ಆಡುತ್ತಾ ಹೆಸರು ಗಳಿಸಿದಂತೆ, ಅವರ ಮೇಲಿನ ನಿರೀಕ್ಷೆಗಳೂ ಹೆಚ್ಚುತ್ತವೆ. ಆಗ ಅದೇ ಮಟ್ಟದ ಪ್ರದರ್ಶನವನ್ನು ನಿರಂತರವಾಗಿ ಕಾಯ್ದುಕೊಳ್ಳುವುದು ಇನ್ನಷ್ಟು ಸವಾಲಿನ ಕೆಲಸವಾಗುತ್ತದೆ," ಎಂದು ಅವರು ತಿಳಿಸಿದ್ದಾರೆ.
ಶ್ರೇಯಸ್ ಅಯ್ಯರ್ ನಾಯಕತ್ವಕ್ಕೆ ಅಭಿಷೇಕ್ ನಾಯರ್ ಬೆಂಬಲ
ಭಾರತದ ಟಿ20 ತಂಡದ ನಾಯಕನಾಗಿ ಶ್ರೇಯಸ್ ಅಯ್ಯರ್ ಇನ್ನೂ ತಮ್ಮ ಮೊದಲ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಅವರ ನಾಯಕತ್ವದಲ್ಲಿ ಭಾರತ ಇದುವರೆಗೆ ಆಡಿರುವ ಆರು ಪಂದ್ಯಗಳಲ್ಲಿ ಐದರಲ್ಲಿ ಸೋಲು ಅನುಭವಿಸಿದ್ದು, ಒಂದು ಪಂದ್ಯ ಮಳೆಯಿಂದ ರದ್ದಾಗಿದೆ. ಆದರೆ ಅಭಿಷೇಕ್ ನಾಯರ್, ಶ್ರೇಯಸ್ ನಾಯಕತ್ವದ ಮೇಲೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಯುವ ಹಾಗೂ ಅನುಭವವಿಲ್ಲದ ತಂಡಗಳನ್ನು ಯಶಸ್ಸಿನತ್ತ ಮುನ್ನಡೆಸಿದ ಅನುಭವ ಅಯ್ಯರ್ ಅವರಿಗಿದೆ ಎಂದು ಅವರು ಹೇಳಿದ್ದಾರೆ.
ತಂಡ ಪರಿವರ್ತನೆಯ ಹಂತದಲ್ಲಿದೆ; ಸರಣಿ ಸೋಲಿನ ಬೆನ್ನಲ್ಲೇ ಅಯ್ಯರ್ ಹೇಳಿಕೆ
"ಈ ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಭಾರತ ಪರ ಆಡಿದ ಕೊನೆಯ ಟಿ20 ಇನಿಂಗ್ಸ್‌ನಲ್ಲಿ ಶ್ರೇಯಸ್ ಅಯ್ಯರ್, ಬೆಂಗಳೂರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ಅರ್ಧಶತಕ ಗಳಿಸಿದ್ದರು. ಅವರು ಯಾವಾಗಲೂ ನಿರಂತರವಾಗಿ ರನ್ ಗಳಿಸುತ್ತಿದ್ದ ಆಟಗಾರ. ಐಪಿಎಲ್ ಮಾತ್ರವಲ್ಲದೆ, ನಾಯಕನಾಗಿ ಮುಂಬೈ ತಂಡವನ್ನು ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಪ್ರಶಸ್ತಿಯನ್ನೂ ಗೆಲ್ಲಿಸಿದ್ದರು. ನನ್ನ ಅನಿಸಿಕೆಯಲ್ಲಿ, ಒಂದು ಹಂತದ ನಂತರ ಅವರು ಭಾರತ ತಂಡದಲ್ಲಿ ಆಯ್ಕೆಯಾಗುವ ಬಗ್ಗೆ ಚಿಂತಿಸುವುದನ್ನೇ ನಿಲ್ಲಿಸಿದರು. ಅದರ ಬದಲಿಗೆ ತಮ್ಮ ಆಟದ ಮೇಲೆ ಮಾತ್ರ ಗಮನಹರಿಸಿದರು," ಎಂದು ಅಭಿಷೇಕ್ ನಾಯರ್ ತಿಳಿಸಿದ್ದಾರೆ.