ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮೊದಲ ಟಾರ್ಗೆಟ್‌ 49 ರನ್: ಅವಮಾನ ತಪ್ಪಿಸುವ ರಣತಂತ್ರ ತಿಳಿಸಿದ ಅಭಿಷೇಕ್‌ ಪೊರೆಲ್!

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವಿರುದ್ಧ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡ 75 ರನ್‌ಗಳಿಗೆ ಆಲ್‌ಔಟ್‌ ಆಯಿತು. ಅಂದಹಾಗೆ ಈ ಪಂದ್ಯದಲ್ಲಿ ಡೆಲ್ಲಿ ಪಡೆ 50 ರನ್‌ಗಳ ಒಳಗೆ ಆಲ್‌ಔಟ್‌ ಆಗುವ ಎಲ್ಲಾ ಸಾಧ್ಯತೆಗಳಿತ್ತಾದರೂ, ಯುವ ಆಟಗಾರ ಅಭಿಷೇಕ್‌ ಪೊರೆಲ್‌ ಜವಾಬ್ದಾರಿಯುತ ಆಟವಾಡಿ ತಂಡವನ್ನು ಅನಗತ್ಯ ದಾಖಲೆ ಹೆಗಲೇರಿಸಿಕೊಳ್ಳುವುದರಿಂದ ಪಾರಾಗುವಂತೆ ಮಾಡಿದರು.

ವಿರಾಟ್‌ ಕೊಹ್ಲಿ ಮತ್ತು ಅಭಿಷೇಕ್‌ ಪೊರೆಲ್‌.

ಹೊಸದಿಲ್ಲಿ: ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯ 2026ರ ಆವೃತ್ತಿಯಲ್ಲಿ ಒಂದರ ಬಳಿಕ ಒಂದು ರೋಚಕ ಪಂದ್ಯಗಳು ಮೂಡಿ ಬರುತ್ತಿವೆ. ತನ್ನ ಕಳೆದ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ ಎದುರು 265 ರನ್‌ ಬಾರಿಸಿದ್ದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಈಗ ತವರಿನಲ್ಲಿ ರಾಯಲ್‌ ಚಾಲೆಂಹರ್ಸ್‌ ಬೆಂಗಳೂರು ಎದುರು 75 ರನ್‌ಗೆ ಆಲ್‌ಔಟ್‌ ಆಗಿ ಕಕ್ಕಾಬಿಕ್ಕಿಯಾಯಿತು.

ದಿಲ್ಲಿಯ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ಏಪ್ರಿಲ್‌ 27ರಂದು (ಸೋಮವಾರ) ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ 5 ರನ್‌ ಗಳಿಸುವ ಹೊತ್ತಿಗಾಗಲೇ 5 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಹಂತದಲ್ಲಿ ಐಪಿಎಲ್‌ನಲ್ಲಿ ಅತ್ಯಂತ ಕಡಿಮೆ ಮೊತ್ತದ ಅನಗತ್ಯ ದಾಖಲೆ ಹೊಂದಿರುವ ಆರ್‌ಸಿಬಿ, ಈ ಪಟ್ಟವನ್ನು ಡೆಲ್ಲಿ ಕ್ಯಾಪಿಟಲ್ಸ್‌ಗೆ ಕೊಡುವ ಎಲ್ಲಾ ಅವಕಾಶ ಎದುರಾಗಿತ್ತು.

RCB vs DC: ಭುವನೇಶ್ವರ್‌, ಹೇಝಲ್‌ವುಡ್‌ ಮಾರಕ ದಾಳಿ, ಆರ್‌ಸಿಬಿಗೆ ಸುಲಭ ತುತ್ತಾದ ಡೆಲ್ಲಿ ಕ್ಯಾಪಿಟಲ್ಸ್‌!

ಆದರೆ, ತಂಡದ ಐದು ವಿಕೆಟ್‌ ಕಳೆದುಕೊಂಡಿದ್ದ ಸಂದರ್ಭದಲ್ಲಿ ಇಂಪ್ಯಾಕ್ಟ್‌ ಸಬ್‌ ಪ್ಲೇಯರ್‌ ಆಗಿ ಬ್ಯಾಟಿಂಗ್‌ಗೆ ಬಂದ ಯುವ ಎಡಗೈ ಬ್ಯಾಟರ್‌ ಅಭಿಷೇಕ್‌ ಪೊರೆಲ್‌ ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಈ ಅಪಮಾನದಿಂದ ಪಾರು ಮಾಡಿದರು. ಅಂದಹಾಗೆ ಬ್ಯಾಟಿಂಗ್‌ಗೆ ಬರುವ ಮೊದಲೇ ತಂಡವನ್ನು ಈ ಅನಗತ್ಯ ದಾಖಲೆಯಿಂದ ತಪ್ಪಿಸಬೇಕು ಎಂಬ ರಣತಂತ್ರ ಹಾಕಿಕೊಂಡೇ ಬಂದಿದ್ದಾಗಿ ಪೊರೇಲ್‌ ಹೇಳಿಕೊಂಡಿದ್ದಾರೆ.

ಪಂದ್ಯದ ಬಳಿಕ ಮಾತನಾಡಿದ ಪೊರೆಲ್, "ನಾನು ಕ್ರೀಸ್‌ಗೆ ಬಂದಾಗ ಸ್ಕೋರ್‌ಬೋರ್ಡ್‌ ತುಂಬಾ ಒತ್ತಡದ ಪರಿಸ್ಥಿತಿಯನ್ನು ತೋರಿಸುತ್ತಿತ್ತು. ಆ ಸಮಯದಲ್ಲಿ ದೊಡ್ಡ ಶಾಟ್‌ಗಳ ಬಗ್ಗೆ ಯೋಚಿಸದೆ, ಮೊದಲ ಗುರಿಯಾಗಿ 49 ರನ್ ತಲುಪಬೇಕು ಎಂದು ನಿರ್ಧರಿಸಿದ್ದೆ," ಎಂದು ಹೇಳಿದರು. ಈ ಸರಳ ಆದರೆ ಸ್ಪಷ್ಟವಾದ ಗುರಿಯೇ ಅವರಿಗೆ ಆತ್ಮವಿಶ್ವಾಸ ತಂದುಕೊಟ್ಟಿದ್ದಾಗಿ ವಿವರಿಸಿದರು. ಅಂದಹಾಗೆ ಐಪಿಎಲ್‌ನಲ್ಲಿ ಅತ್ಯಂತ ಕಡಿಮೆ ಮೊತ್ತಕ್ಕೆ ಆಲ್‌ಔಟ್‌ ಆದ ದಾಖಲೆ ಆರ್‌ಸಿಬಿ ಹೆಸರಲ್ಲಿದೆ. ಬೆಂಗಳೂರಿನ ಎಂ ಚಿನ್ನಸ್ವಾಮಿ 2017ರಲ್ಲಿ ನಡೆದ ಕೆಕೆಆರ್‌ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ 49ಕ್ಕೆ ಆಲ್‌ಔಟ್‌ ಆಗಿತ್ತು.

IPL 2026: ʻನಾವು ಸೋಲಲು ಅರ್ಹರುʼ-ಡೆಲ್ಲಿ ಕ್ಯಾಪಿಟಲ್ಸ್‌ ಸೋಲಿಗೆ ಕಾರಣ ತಿಳಿಸಿದ ಅಕ್ಷರ್‌ ಪಟೇಲ್‌!

ಆರ್‌ಸಿಬಿ ವೇಗಿಗಳಾದ ಜಾಶ್‌ ಹೇಝಲ್‌ ವುಡ್‌ (12ಕ್ಕೆ 4) ಮತ್ತು ಭುವನೇಶ್ವರ್‌ ಕುಮಾರ್‌ (5ಕ್ಕೆ 3) ಅವರ ಪ್ರಚಂಡ ಬೌಲಿಂಗ್‌ ಎದುರು ಡಿ.ಸಿ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ಗಳು ಮಣ್ಣು ಮುಕ್ಕಿದ ಕಾರಣ, ಮಧ್ಯಕ್ರಮದ ಮೇಲೆ ಹೆಚ್ಚಿನ ಒತ್ತಡ ಬಿದ್ದಿತ್ತು. ಈ ಸಂದರ್ಭದಲ್ಲಿ ಪೊರೆಲ್ ತಾಳ್ಮೆಯಿಂದ ಸ್ಟ್ರೈಕ್‌ ರೋಟೇಶನ್‌ ಕಡೆಗೆ ಗಮನ ನೀಡಿ ಮತ್ತು ಸೂಕ್ತ ಸಮಯದಲ್ಲಿ ಬೌಂಡರಿಗಳನ್ನು ಹೊಡೆಯುವ ಮೂಲಕ ತಮ್ಮ ಬ್ಯಾಟಿಂಗ್‌ ಕೌಶಲ್ಯವನ್ನು ಪ್ರದರ್ಶಿಸಿದರು. ಅವರು ಕ್ರಮೇಣ ಇನ್ನಿಂಗ್ಸ್ ಕಟ್ಟಿ ತಂಡವನ್ನು ಅಪಾಯದಿಂದ ಮೇಲೆತ್ತುವ ಪ್ರಯತ್ನ ಮಾಡಿದರು.

ಕ್ರಿಕೆಟ್ ತಜ್ಞರ ಅಭಿಪ್ರಾಯದಲ್ಲಿ, ಪೊರೇಲ್‌ ಈ ರೀತಿಯ ಪರಿಸ್ಥಿತಿಯಲ್ಲಿ ತೋರಿದ ಮನಸ್ಥಿತಿ ಅತ್ಯಂತ ಪ್ರಶಂಸನೀಯ. ಯುವ ಆಟಗಾರರು ಸಾಮಾನ್ಯವಾಗಿ ಒತ್ತಡಕ್ಕೆ ಒಳಗಾಗಿ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಹೆಚ್ಚು. ಆದರೆ ಪೊರೇಲ್, ತನ್ನ ಆಟವನ್ನು ಸರಿಯಾಗಿ ಯೋಜಿಸಿ, ಪರಿಸ್ಥಿತಿಗೆ ತಕ್ಕಂತೆ ಆಡಿದದ್ದು ಅವರ ಪ್ರೌಢತೆಗೆ ಸಾಕ್ಷಿಯಾಗಿದೆ.

RCB vs DC: ತವರು ಅಂಗಣದಲ್ಲಿ ಆರ್‌ಸಿಬಿ ಗೆಲುವಿಗೆ ಬ್ರೇಕ್‌ ಹಾಕಿದ ಡೆಲ್ಲಿ ಕ್ಯಾಪಿಟಲ್ಸ್‌!

ಇದರ ಜೊತೆಗೆ, ತಂಡದ ಕೋಚ್ ಹಾಗೂ ಹಿರಿಯ ಆಟಗಾರರಿಂದ ಬಂದ ಮಾರ್ಗದರ್ಶನ ಕೂಡ ಪೊರೆಲ್ ಆಟದಲ್ಲಿ ಸ್ಪಷ್ಟವಾಗಿ ಕಾಣಿಸಿತು. "ಆತಂಕಕ್ಕೆ ಒಳಗಾಗಬೇಡಿ, ಸಣ್ಣ ಗುರಿಗಳನ್ನು ಇಟ್ಟುಕೊಂಡು ಬ್ಯಾಟಿಂಗ್‌ ಮುಂದುವರಿಸಿ," ಎಂದು ತಂಡದ ಬ್ಯಾಟಿಂಗ್‌ ಕೋಚ್‌ ಹೇಮಂಗ್ ಬದಾನಿ ಸಲಹೆ ನೀಡಿದ್ದರು ಅದನ್ನು ಅನ್ವಯಿಸಿದ್ದಾಗಿ ಪೊರೆಲ್‌ ಹೇಳಿಕೊಂಡಿದ್ದಾರೆ.

ತಾಳ್ಮೆಯಿಂದ 33 ಎಸೆತಗಳಲ್ಲಿ 30 ರನ್‌ ಬಾರಿಸಿದ ಪೊರೆಲ್‌ ತಂಡವನ್ನು 49 ರನ್‌ಗಳ ಗಡಿ ದಾಟಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಕೆಳ ಕ್ರಮಾಂಕದಲ್ಲಿ ಡೇವಿಡ್‌ ಮಿಲ್ಲರ್‌ (19) ಮತ್ತು ಕೈಲ್‌ ಜೇಮಿಸನ್‌ (12) ಕೊಡುಗೆಯಿಂದಾಗಿ ತಂಡ 75 ರನ್‌ಗಳ ಗಡಿ ಮುಟ್ಟಿತು. ಬಳಿಕ ಆರ್‌ಸಿಬಿ ಒಂದು ವಿಕೆಟ್‌ ನಷ್ಟದಲ್ಲಿ ಕೇವಲ 6.2 ಓವರ್‌ಗಳಲ್ಲೇ ಈ ಗುರಿ ಮೆಟ್ಟಿನಿಂತು ಅಂಕಪಟ್ಟಿಯಲ್ಲಿ 2ನೇ ಸ್ಥಾನವನ್ನು ಮತ್ತಷ್ಟು ಬಲಪಡಿಸಿಕೊಂಡಿತು.