ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs PAK: ಟಾಸ್‌ ವೇಳೆ ಶೇಕ್‌ಹ್ಯಾಂಡ್‌ ನೀಡಲು ನಿರಾಕರಿಸಿದ ಸೂರ್ಯಕುಮಾರ್‌-ಸಲ್ಮಾನ್‌ ಅಘಾ!

IND vs PAK Super-4 Match: ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಣ 2025zರ ಏಷ್ಯಾ ಕಪ್‌ ಟೂರ್ನಿಯ ಸೂಪರ್‌-4ರ ಪಂದ್ಯದಲ್ಲಿಯೂ ಸೂರ್ಯಕುಮಾರ್‌ ಯಾದವ್‌ ಹಾಗೂ ಸಲ್ಮಾನ್‌ ಅಘಾ ಅವರು ಶೇಕ್‌ಹ್ಯಾಂಡ್‌ ನೀಡಲು ನಿರಾಕರಿಸಿದರು. ಲೀಗ್‌ ಹಂತದ ಪಂದ್ಯದಲ್ಲಿ ಸೂರ್ಯಕುಮಾರ್‌ ನಿರಾಕರಿಸಿದ್ದರಿಂದ ಹ್ಯಾಂಡ್‌ಶೇಕ್‌ ವಿವಾದ ಉಂಟಾಗಿತ್ತು.

ಶೇಕ್‌ಹ್ಯಾಂಡ್‌ ನಿರಾಕರಿಸಿದ ಸೂರ್ಯಕುಮಾರ್‌-ಸಲ್ಮಾನ್‌ ಅಘಾ!

ಶೇಕ್‌ಹ್ಯಾಂಡ್‌ ನೀಡದ ಸೂರ್ಯಕುಮಾರ್‌ ಯಾದವ್‌-ಸಲ್ಮಾನ್‌ ಆಘಾ. -

Profile Ramesh Kote Sep 21, 2025 10:08 PM

ದುಬೈ: ಇಲ್ಲಿನ ದುಬೈ ಇಂಟರ್‌ನ್ಯಾಷನಲ್‌ ಕ್ರೀಡಾಂಗಣದಲ್ಲಿ ನಡೆದ 2025ರ ಏಷ್ಯಾ ಕಪ್‌ (Asia Cup 2025) ಟೂರ್ನಿಯ ಸೂಪರ್‌-4ರ ಪಂದ್ಯದಲ್ಲಿ ಭಾರತ ಹಾಗೂ ಪಾಕಿಸ್ತಾನ (IND vs PAK) ತಂಡಗಳು ಕಾದಾಟ ನಡೆಸಿದ್ದವು. ಈ ಪಂದ್ಯದಲ್ಲಿಯೂ ಟಾಸ್‌ ವೇಳೆ ಟೀಮ್‌ ಇಂಡಿಯಾ ನಾಯಕ ಸೂರ್ಯಕುಮಾರ್‌ ಯಾದವ್‌ (Suryakumar Yadav) ಅವರು, ಪಾಕ್‌ ನಾಯಕ ಸಲ್ಮಾನ್‌ ಅಘಾ ಅವರಿಗೆ ಶೇಕ್‌ಹ್ಯಾಂಡ್‌ ನೀಡಲು ಮುಂದಾಗಲಿಲ್ಲ. ಲೀಗ್‌ ಪಂದ್ಯದಂತೆಯೇ ಈ ವೇಳೆಯೂ ಹಾಗೆಯೇ ಇದ್ದರು. ಅಂದ ಹಾಗೆ ಎದುರಾಳಿ ನಾಯಕ ಕೂಡ ಹಸ್ತಲಾಘವ ನೀಡುವ ಬಗ್ಗೆ ಆಸಕ್ತಿ ತೋರಲಿಲ್ಲ. ಆ ಮೂಲಕ ಉಭಯ ನಾಯಕರ ನಡುವೆ ಹ್ಯಾಂಡ್‌ಶೇಕ್‌ ಇಲ್ಲದೆ ಟಾಸ್‌ ಪ್ರಕ್ರಿಯೆ ನಡೆಯಿತು.

ಕಳೆದ ಪಂದ್ಯದಲ್ಲಿ ಮ್ಯಾಚ್‌ ರೆಫರಿಯಾಗಿದ್ದ ಆಂಡಿ ಪೈಕ್ರಾಫ್ಟ್‌ ಅವರೇ ಈ ಹಣಾಹಣಿಯಲ್ಲಿದ್ದರು. ಆದರೂ ಈ ಪಂದ್ಯದಲ್ಲಿ ಹ್ಯಾಂಡ್‌ಶೇಕ್‌ ಪ್ರಕ್ರಿಯೆ ನಡೆಯಲಿಲ್ಲ. ಅಂದ ಹಾಗೆ ಸೆಪ್ಟಂಬರ್‌ 14ರಿಂದಲೂ ಹ್ಯಾಂಡ್‌ಶೇಕ್‌ ವಿವಾದದ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಕಳೆದ ಪಂದ್ಯದಲ್ಲಿನ ನೋ ಹ್ಯಾಂಡ್‌ಶೇಕ್‌ ಸಂಬಂಧ ಏಷ್ಯಾ ಕ್ರಿಕೆಟ್‌ ಕೌನ್ಸಿಲ್‌ ಅಧ್ಯಕ್ಷರೂ ಆದ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಮುಖ್ಯಸ್ಥ ಮೊಹ್ಸಿನ್‌ ನಖ್ವಿ ಅವರು ಈ ಬಗ್ಗೆ ಐಸಿಸಿಗೆ ದೂರು ನೀಡಿದ್ದರು ಹಾಗೂ ಪಂದ್ಯದ ರೆಫರಿ ಆಂಡಿ ಪೈಕ್ರಾಫ್ಟ್‌ ಅವರನ್ನು ಕೈ ಬಿಡಬೇಕೆಂದು ಮನವಿ ಮಾಡಿದ್ದರು.

IND vs PAK: ಪಾಕಿಸ್ತಾನ ಎದುರು ಟಾಸ್‌ ಗೆದ್ದು ಬೌಲಿಂಗ್‌ ಆಯ್ದುಕೊಂಡ ಭಾರತ ತಂಡ!

ಮೊಹಮ್ಮದ್‌ ನಖ್ವಿ ಅವರ ದೂರನ್ನು ಐಸಿಸಿ ಮಾನ್ಯ ಮಾಡಲಿಲ್ಲ. ಪಿಸಿಬಿ ತಪ್ಪು ಮಾಹಿತಿಯನ್ನು ನೀಡುತ್ತಿದೆ ಎಂದು ಛೀಮಾರಿ ಹಾಕಿತ್ತು. ನಂತರ ಯುಎಇ ವಿರುದ್ದದ ಪಂದ್ಯಕ್ಕೂ ಮುನ್ನ ಪಾಕಿಸ್ತಾನ ತಂಡ ಹೈಡ್ರಾಮಾ ಮಾಡಿತ್ತು. ಆಂಡಿ ಪೈಕ್ರಾಫ್ಟ್‌ ಅವರನ್ನು ಕೈ ಬಿಡಬೇಕು, ಇಲ್ಲವಾದಲ್ಲಿ ಏಷ್ಯಾ ಕಪ್‌ ಟೂರ್ನಿಯನ್ನು ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿತ್ತು. ಆದರೆ, ಐಸಿಸಿ ಮ್ಯಾಚ್‌ ರೆಫರಿ ಜೊತೆ ಚರ್ಚೆ ನಡೆಸಿದ ಬಳಿಕ ಪಾಕಿಸ್ತಾನ ಒಂದು ಗಂಟೆ ತಡವಾಗಿ ಯುಎಇ ಎದುರು ಆಡಿ ಗೆಲುವು ಪಡೆದಿತ್ತು. ಭಾರತ ವಿರುದ್ದದ ಸೂಪರ್‌-4ರ ಪಂದ್ಯಕ್ಕೂ ಮುನ್ನ ಪಾಕಿಸ್ತಾನ ಸುದ್ದಿಗೋಷ್ಠಿಯನ್ನು ನಡೆಸಲು ನಿರಾಕರಿಸಿತ್ತು.



ಸೂರ್ಯಕುಮಾರ್‌ ಯಾದವ್‌ ಹೇಳಿದ್ದೇನು?

ಸೂಪರ್-‌4ರ ಪಂದ್ಯದಲ್ಲಿ ಟಾಸ್‌ ಗೆದ್ದು ಬೌಲಿಂಗ್‌ ಆಯ್ಕೆ ಮಾಡಿಕೊಂಡ ಬಳಿಕ ಮಾತನಾಡಿದ ಸೂರ್ಯಕುಮಾರ್‌ ಯಾದವ್‌, "ನಾವು ಮೊದಲು ಬೌಲ್‌ ಮಾಡುತ್ತೇವೆ. ಪಿಚ್‌ ನೋಡಲು ಚೆನ್ನಾಗಿದೆ ಹಾಗೂ ಶನಿವಾರ ಇಲ್ಲಿ ಇಬ್ಬನಿ ಇತ್ತು. ನಾವು ಮೊದಲನೇ ಸುತ್ತಿನಿಂದಲೂ ಪ್ರತಿಯೊಂದು ಪಂದ್ಯವನ್ನು ನಾಕೌಟ್‌ ಎಂದು ಪರಿಗಣಿಸಿ ಆಡುತ್ತಿದ್ದೇವೆ. ಇದರಲ್ಲಿ ಬದಲಾವಣೆ ಏನೂ ಇಲ್ಲ. ಅಬುದಾಬಿ ಸಂಪೂರ್ಣವಾಗಿ ವಿಭಿನ್ನವಾಗಿ ಕೂಡಿತ್ತು. ಇದು ತುಂಬಾ ಸಾಮಾನ್ಯ, ಇದು ವಿಭಿನ್ನ ಪಂದ್ಯ. ಅರ್ಷದೀಪ್‌ ಸಿಂಗ್‌ ಹಾಗೂ ಹರ್ಷಿತ್‌ ರಾಣಾ ಅವರ ಸ್ಥಾನಗಳಿಗೆ ಜಸ್‌ಪ್ರೀತ್‌ ಬುಮ್ರಾ ಹಾಗೂ ವರುಣ್‌ ಚಕ್ರವರ್ತಿ ಬಂದಿದ್ದಾರೆ," ಎಂದು ಹೇಳಿದ್ದಾರೆ.



ಪಾಕ್‌ ನಾಯಕ ಸಲ್ಮಾನ್‌ ಅಘಾ ಹೇಳಿಕೆ

"ನಾವು ಕೂಡ ಮೊದಲು ಬೌಲ್‌ ಮಾಡಲು ಬಯಸಿದ್ದೆವು. ಇದು ಹೊಸ ಪಂದ್ಯ, ಹೊಸ ಸವಾಲು. ನಮ್ಮ ಮನಸ್ಥಿತಿ ಸಾಮಾನ್ಯವಾಗಿದೆ. ಪಿಚ್‌ ನೋಡಲು ತುಂಬಾ ನಿಧಾನಗತಿಯಿಂದ ಇರುವಂತೆ ಕಾಣುತ್ತಿದೆ. ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡೂ ವಿಭಾಗದಲ್ಲಿ ಉತ್ತಮ ಆರಂಭ ಪಡೆಯಬೇಕು. ಎರಡು ಬದಲಾವಣೆಯನ್ನು ತರಲಾಗಿದೆ. ಹಸನ್‌ ನವಾಝ್‌ ಹಾಗೂ ಖುಷ್ದಿಲ್‌ ಶಾ ಅವರು ಆಡುತ್ತಿಲ್ಲ," ಎಂದು ಪಾಕಿಸ್ತಾನ ನಾಯಕ ಸಲ್ಮಾನ್‌ ಅಘಾ ತಿಳಿಸಿದ್ದಾರೆ.