ನವದೆಹಲಿ: ಭಾರತ ತಂಡದ ವಿರುದ್ದ 2025ರ ಏಷ್ಯಾ ಕಪ್ (Asia Cup 2025) ಟೂರ್ನಿಯ ಸೂಪರ್-4ರ ಪಂದ್ಯದಲ್ಲಿ (IND vs PAK) ಪಾಕಿಸ್ತಾನ ತಂಡ ಸೋಲು ಅನುಭವಿಸಿದ ಬಳಿಕ ನಾಯಕ ಸಲ್ಮಾನ್ ಆಘಾ (Salman Agha) ಅವರನ್ನು ವೇಗದ ಬೌಲಿಂಗ್ ದಿಗ್ಗಜ ಶೋಯೆಬ್ ಅಖ್ತರ್ ಟೀಕಿಸಿದ್ದಾರೆ. ನಾಯಕ ಸಲ್ಮಾನ್ ಆಘಾ ಅವರಿಂದಲೇ ಪಾಕಿಸ್ತಾನ ತಂಡ ಸೋಲು ಅನುಭವಿಸಲು ಕಾರಣ ಎಂದು ಅವರು ದೂರಿದ್ದಾರೆ. ಅಂದ ಹಾಗೆ ಮೊಹಮ್ಮದ್ ರಿಝ್ವಾನ್ ಅವರು ಟಿ20ಐ ತಂಡದಲ್ಲಿ ಸ್ಥಾನ ಕಳೆದುಕೊಂಡ ಬಳಿಕ ಸಲ್ಮಾನ್ ಆಘಾ ಅವರಿಗೆ ಪಾಕಿಸ್ತಾನ ತಂಡಕ್ಕೆ ನಾಯಕನನ್ನಾಗಿ ನೇಮಿಸಲಾಗಿತ್ತು. ಅವರು ಬೇಡಿಕೆಗೆ ತಕ್ಕಂತೆ ಉತ್ತಮ ಪ್ರದರ್ಶನವನ್ನು ತೋರುತ್ತಿಲ್ಲ ಎಂದು ಅಖ್ತರ್ ಆರೋಪ ಮಾಡಿದ್ದಾರೆ.
ಏಷ್ಯಾ ಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡದ ಎರಡನೇ ಸೋಲು ಇದಾಗಿದೆ. ಲೀಗ್ ಹಂತದ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ತಂಡ 7 ವಿಕೆಟ್‌ಗಳಿಂದ ಗೆಲುವು ಪಡೆದಿತ್ತು. ಇದೀಗ ಸೂಪರ್-4ರ ಪಂದ್ಯದಲ್ಲಿಯೂ ಪಾಕಿಸ್ತಾನ ತಂಡ 6 ವಿಎಕಟ್ ಸೋಲು ಅನುಭವಿಸಿದೆ. ಪಾಕಿಸ್ತಾನ ತಂಡ ಎರಡು ಪಂದ್ಯಗಳಲ್ಲಿ ಸೋಲು ಅನುಭವಿಸಿದ ಬಳಿಕ ಸಲ್ಮಾನ್ ಆಘಾ ಅವರ ನಾಯಕತ್ವದ ಬಗ್ಗೆ ಸಾಕಷ್ಟು ಟೀಕೆಗಳು ಕೇಳಿ ಬರುತ್ತಿವೆ. ಅಲ್ಲದೆ ಸೂಪರ್-4ರ ಪಂದ್ಯದಲ್ಲಿ ಹಸನ್ ನವಾಝ್ ಅವರನ್ನು ಕೈ ಬಿಡಲಾಗಿದ್ದು, ಸಲ್ಮಾನ್ ಆಘಾ ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದಿದ್ದರು.
IND vs PAK: ಪಾಕಿಸ್ತಾನದ ಎದುರು ಸೂಪರ್-4ರ ಪಂದ್ಯದಲ್ಲಿ ಭಾರತಕ್ಕೆ ಗೆಲುವಿನ ಅಭಿಷೇಕ!
ನಾಯಕನಾಗಿ ಸಲ್ಮಾನ್ ಆಘಾ ತೆಗೆದುಕೊಂಡ ಈ ಕರೆಗಳನ್ನು ಶೋಯೆಬ್ ಅಖ್ತರ್ ಟೀಕಿಸಿದ್ದಾರೆ. ಹಸನ್ ನವಾಝ್ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಪ್ರದರ್ಶನವನ್ನು ತೋರುವುದು ಅಗತ್ಯವಿತ್ತು ಏಕೆಂದರೆ ಪಾಕಿಸ್ತಾನ ತಂಡ ದೊಡ್ಡ ಮೊತ್ತವನ್ನು ಕಲೆ ಹಾಕಬೇಕು. ಪಾಕಿಸ್ತಾನ ತಂಡದ ವೀಕ್ನೆಸ್ ಸಲ್ಮಾನ್ ಆಘಾ. ಅವರು ತಂಡದಲ್ಲಿ ಏನು ಮಾಡುತ್ತಿದ್ದಾರೆಂದು ಯಾರಿಗೂ ಸುಳಿವು ಸಿಗುತ್ತಿಲ್ಲ ಎಂದು ಅಖ್ತರ್ ಹೇಳಿದ್ದಾರೆ.
"ನಾಯಕನ ವಿಷಯದಲ್ಲಿ - ಅವರು ಏನು ಮಾಡುತ್ತಿದ್ದಾರೆ, ಯಾವ ರೀತಿಯ ನಾಯಕತ್ವವನ್ನು ಒದಗಿಸುತ್ತಿದ್ದಾರೆ ಅಥವಾ ಅವರು ಸ್ವತಃ ಹೇಗೆ ಆಡುತ್ತಿದ್ದಾರೆಂದು ಅವರಿಗೇ ಸ್ವತಃ ತಿಳಿದಿಲ್ಲ. ಅದು ಅತ್ಯಂತ ದುರ್ಬಲ ಭಾಗವಾಗಿದೆ ಮತ್ತು ಯಾರೂ ಅದರ ಬಗ್ಗೆ ಮಾತನಾಡುವುದಿಲ್ಲ. ಅವರು ಬ್ಯಾಟ್ ಮಾಡುತ್ತಿರುವ ಕ್ರಮಾಂಕದಲ್ಲಿ ಆಡಲು ಅರ್ಹರೇ? ಅದು ದೊಡ್ಡ ಪ್ರಶ್ನೆ. ಅವರು ನಿಜವಾಗಿ ಏನು ಮಾಡುತ್ತಾರೆ? ಸರಿ, ಅವರು 6ನೇ ಸ್ಥಾನದಲ್ಲಿ ಬರುತ್ತಾರೆ. ಅವರು ಪ್ರತಿಭೆಯಾಗಿ ಏನು ಉತ್ಪಾದಿಸುತ್ತಾರೆ? ತಿಲಕ್ ಬಂದಾಗ, ಹಾರ್ದಿಕ್ ಪಾಂಡ್ಯ ಬಂದಾಗ - ಅವರನ್ನು ಹೋಲಿಸಿ ನೋಡಿ, ಆದರೆ ಇಲ್ಲಿ ಯಾವುದೇ ಹೋಲಿಕೆ ಇಲ್ಲ. ಸರಿ, ಅವರು "ಒಳ್ಳೆಯ ಹುಡುಗ" ಆಗಿರಬಹುದು, ಕೆಲವು ದೃಷ್ಟಿಯಲ್ಲಿ ಅವರು "ಒಳ್ಳೆಯ ನಾಯಕ" ಆಗಿರಬಹುದು, ಆದರೆ ಅವರು ನಿಜವಾಗಿಯೂ ಯಾವ ಪ್ರತಿಭೆಯನ್ನು ಉತ್ಪಾದಿಸುತ್ತಾರೆ? ಅದು ದೊಡ್ಡ ಪ್ರಶ್ನಾರ್ಥಕ ಚಿಹ್ನೆ. ಅವರು ಅತ್ಯಂತ ದುರ್ಬಲ ಕೊಂಡಿ," ಎಂದು ಅಖ್ತರ್ ಟೀಕಿಸಿದ್ದಾರೆ.
IND vs PAK: ಟಾಸ್ ವೇಳೆ ಶೇಕ್‌ಹ್ಯಾಂಡ್ ನೀಡಲು ನಿರಾಕರಿಸಿದ ಸೂರ್ಯಕುಮಾರ್-ಸಲ್ಮಾನ್ ಅಘಾ!
ಅಭಿಷೇಕ್ ಶರ್ಮಾ ಅವರಿಗೆ ಶಾರ್ಟ್ ಬಾಲ್ ಎಸೆತಗಳನ್ನು ಹಾಕಿ ಟಾರ್ಗೆಟ್ ಮಾಡುವಲ್ಲಿ ಪಾಕಿಸ್ತಾನ ಬೌಲರ್‌ಗಳು ವಿಫಲರಾಗಿದ್ದಾರೆಂದು ಇದೇ ವೇಳೆ ಅಖ್ತರ್ ದೂರಿದ್ದಾರೆ. "ಹಸನ್ ನವಾಝ್ ಅವರನ್ನು ಆಡಿಸದೇ ಇರಲು ತೆಗೆದುಕೊಂಡ ನಿರ್ಧಾರ ತಪ್ಪಾಗಿದೆ. ಏಕೆಂದರೆ, ಏಕಾಂಗಿಯಾಗಿ ತಂಡವನ್ನು ಗೆಲ್ಲಿಸುವ ಆಟಗಾರ ಅವರು. ಮ್ಯಾಚ್ ವಿನ್ನರ್ ಅವರಂಥ ಆಟಗಾರನನ್ನು ಕೈ ಬಿಡಲಾಗಿದೆ. ಅಭಿಷೇಕ್ ಶರ್ಮಾ ಕ್ರೀಸ್‌ನಲ್ಲಿದ್ದರೆ, ನೀವು ಹೊಸ ಚೆಂಡಿನಲ್ಲಿ ಬೌಲ್ ಮಾಡುತ್ತಿದ್ದರೆ, ಅವರನ್ನು ನೀವು ಪರೀಕ್ಷೆಗೆ ಒಳಪಡಿಸಬಹುದು. ಆ ಮೂಲಕ ನೆಲೆ ಕಂಡುಕೊಳ್ಳಲು ಬಿಡಬಾರದಿತ್ತು. ಎರಡು ಶಾರ್ಟ್ ಬಾಲ್‌ಗಳು, ಎರಡು ಫುಲ್ ಎಸೆತಗಳು, ಎರಡು ಶಾರ್ಟ್, ಎರಡು ಫುಲ್ ಈ ರೀತಿ ನೀವು ಎಸೆತಗಳನ್ನು ಮಿಶ್ರಣ ಮಾಡಬೇಕು. ಬ್ಯಾಟ್ಸ್‌ಮನ್ ಅನ್ನು ನೀವು ಈ ಹಾದಿಯಲ್ಲಿ ಟೆಸ್ಟ್ ಮಾಡಬೇಕಾಗುತ್ತದೆ," ಎಂದು ಹೇಳಿದ್ದಾರೆ.