ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs PAK: ಪಾಕಿಸ್ತಾನದ ಎದುರು ಸೂಪರ್‌-4ರ ಪಂದ್ಯದಲ್ಲಿ ಭಾರತಕ್ಕೆ ಗೆಲುವಿನ ಅಭಿಷೇಕ!

IND vs PAK Match Highlights: ದುಬೈ ಇಂಟರ್‌ನ್ಯಾಷನಲ್‌ ಕ್ರೀಡಾಂಗಣದಲ್ಲಿ ಭಾನುವಾರ ನಡೆದಿದ್ದ 2025ರ ಏಷ್ಯಾ ಕಪ್‌ ಟೂರ್ನಿಯ ಸೂಪರ್‌-4 ಪಂದ್ಯದಲ್ಲಿ ಭಾರತ ತಂಡ, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ 6 ವಿಕೆಟ್‌ಗಳ ಗೆಲುವು ಪಡೆಯಿತು. ಆ ಮೂಲಕ ಪಾಕ್‌ ಎದುರು ತನ್ನ ಪ್ರಾಬಲ್ಯವನ್ನು ಟೀಮ್‌ ಇಂಡಿಯಾ ಮುಂದುವರಿಸಿದೆ.

ಪಾಕಿಸ್ತಾನ ಎದುರು ಭಾರತ ತಂಡಕ್ಕೆ ಗೆಲುವಿನ ಅಭಿಷೇಕ!

ಪಾಕಿಸ್ತಾನ ತಂಡಕ್ಕೆ ಮತ್ತೊಂದು ಸೋಲಿನ ರುಚಿ ತೋರಿಸಿದ ಭಾರತ ತಂಡ. -

Profile Ramesh Kote Sep 22, 2025 12:09 AM

ದುಬೈ: ಅಭಿಷೇಕ್‌ ಶರ್ಮಾ (74 ರನ್‌) ಹಾಗೂ ಶುಭಮನ್‌ ಗಿಲ್‌ (47 ರನ್‌) ಅವರ ಸ್ಪೋಟಕ ಬ್ಯಾಟಿಂಗ್‌ ಬಲದಿಂದ ಭಾರತ ತಂಡ 2025ರ ಏಷ್ಯಾ ಕಪ್‌ (Asia Cup 2025) ಟೂರ್ನಿಯ ಸೂಪರ್‌-4ರ ತನ್ನ ಮೊದಲನೇ ಪಂದ್ಯದಲ್ಲಿ (IND vs PAK) ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ 6 ವಿಕೆಟ್‌ಗಳ ಗೆಲುವು ದಾಖಲಿಸಿತು. ಆ ಮೂಲಕ ಹ್ಯಾಂಡ್‌ಶೇಕ್‌ ವಿವಾದದಿಂದ ಭಾರತ ತಂಡಕ್ಕೆ ತಕ್ಕ ಪಾಠ ಕಲಿಸಬೇಕೆಂದು ಬಂದಿದ್ದ ಸಲ್ಮಾನ್‌ ಆಘಾ ನಾಯಕತ್ವದ ಪಾಕಿಸ್ತಾನ ತಂಡ ಮತ್ತೊಮ್ಮೆ ಭಾರಿ ಮುಖಭಂಗ ಅನುಭವಿಸಿತು. ಈ ಗೆಲುವಿನ ಮೂಲಕ ಪಾಕ್‌ ಎದುರು ಟೀಮ್‌ ಇಂಡಿಯಾದ ಪ್ರಾಬಲ್ಯ ಮುಂದುವರಿದಿದೆ. ಸ್ಪೋಟಕ ಅರ್ಧಶತಕ ಬಾರಿಸಿ ಭಾರತದ ಗೆಲುವಿನಲ್ಲಿ ಮಹತ್ತರ ಪಾತ್ರವನ್ನು ವಹಿಸಿದ ಅಭಿಷೇಕ್‌ ಶರ್ಮಾ (Abhishek Sharma) ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಭಾನುವಾರ ಇಲ್ಲಿನ ದುಬೈ ಇಂಟರ್‌ನ್ಯಾಷನಲ್‌ ಕ್ರೀಡಾಂಗಣದಲ್ಲಿ ಪಾಕಿಸ್ತಾನ ನೀಡಿದ್ದ 172 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಭಾರತ ತಂಡದ ಪರ ಇನಿಂಗ್ಸ್‌ ಆರಂಭಿಸಿದ ಅಭಿಷೇಕ್‌ ಶರ್ಮಾ ಹಾಗೂ ಶುಭಮನ್‌ ಗಿಲ್‌ ಸ್ಪೋಟಕ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದರು. ಈ ಜೋಡಿ ಮುರಿಯದ ಮೊದಲನೇ ವಿಕೆಟ್‌ಗೆ 9.5 ಓವರ್‌ಗಳಿಗೆ 105 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಭಾರತ ತಂಡಕ್ಕೆ ಭರ್ಜರಿ ಆರಂಭವನ್ನು ನೀಡಿತ್ತು. ಕಳೆದ ಪಂದ್ಯಗಳಲ್ಲಿ ವಿಫಲರಾಗಿದ್ದ ಉಪ ನಾಯಕ ಶುಭಮನ್‌ ಗಿಲ್‌, ಈ ಪಂದ್ಯದಲ್ಲಿ 28 ಎಸೆತಗಳಲ್ಲಿ 47 ರನ್‌ಗಳಿಸಿ ತಂಡಕ್ಕೆ ಭರ್ಜರಿ ಆರಂಭ ತಂದುಕೊಟ್ಟು ವಿಕೆಟ್‌ ಒಪ್ಪಿಸಿದರು.

IND vs PAK: ಟಾಸ್‌ ವೇಳೆ ಶೇಕ್‌ಹ್ಯಾಂಡ್‌ ನೀಡಲು ನಿರಾಕರಿಸಿದ ಸೂರ್ಯಕುಮಾರ್‌-ಸಲ್ಮಾನ್‌ ಅಘಾ!

ಅಭಿಷೇಕ್‌ ಶರ್ಮಾ ಸ್ಪೋಟಕ ಅರ್ಧಶತಕ

ಮೂರನೇ ಕ್ರಮಾಂಕದಲ್ಲಿ ಬಂದಿದ್ದ ಸೂರ್ಯಕುಮಾರ್‌ ಯಾದವ್‌ ಶೂನ್ಯಕ್ಕೆ ವಿಕೆಟ್‌ ಒಪ್ಪಿಸಿದರು. ಆದರೆ, ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್‌ ಮಾಡಿದ ಅಭಿಷೇಕ್‌ ಶರ್ಮಾ ತಮ್ಮ ಸ್ಪೋಟಕ ಬ್ಯಾಟಿಂಗ್‌ ಮೂಲಕ ಪಾಕ್‌ ಬೌಲರ್‌ಗಳಿಗೆ ಬೆಂಡೆತ್ತಿದರು. ಅವರು ಆಡಿದ 39 ಎಸೆತಗಳಲ್ಲಿ 5 ಸಿಕ್ಸರ್‌ ಹಾಗೂ 6 ಬೌಂಡರಿಗಳೊಂದಿಗೆ ಸ್ಪೋಟಕ 74 ರನ್‌ಗಳನ್ನು ಕಲೆ ಹಾಕಿದರು. ಇನ್ನೇನು ಪಂದ್ಯವನ್ನು ಮುಗಿಸುವ ಹಾದಿಯಲ್ಲಿದ್ದ ಇವರನ್ನು ಅಬ್ರಾರ್‌ ಅಹ್ಮದ್‌ ಔಟ್‌ ಮಾಡಿದರು. ಸಂಜು ಸ್ಯಾಮ್ಸನ್‌ 13 ರನ್‌ ಗಳಿಸಿದ ಬಳಿಕ ಔಟ್‌ ಆದರು. ಆದರೆ, ತಿಲಕ್‌ ವರ್ಮಾ ( 30*) ಹಾಗೂ ಹಾರ್ದಿಕ್‌ ಪಾಂಡ್ಯ (7* ) ಇಬ್ಬರೂ ಪಂದ್ಯವನ್ನು ಮುಗಿಸಿದರು. ಭಾರತ ತಂಡ 18.5 ಓವರ್‌ಗಳಿಗೆ 4 ವಿಕೆಟ್‌ಗಳ ನಷ್ಟಕ್ಕೆ 174 ರನ್‌ ಗಳಿಸಿ ಗೆಲುವಿನ ದಡ ಸೇರಿತು.



171 ರನ್‌ ಕಲೆ ಹಾಕಿದ ಪಾಕಿಸ್ತಾನ

ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡುವಂತಾಗಿದ್ದ ಪಾಕಿಸ್ತಾನ ತಂಡ, ಸಹಿಬ್ದಾಝ ಫರ್ಹಾನ್‌ (58 ರನ್‌) ಅವರ ಅರ್ಧಶತಕದ ಬಲದಿಂದ ತನ್ನ ಪಾಲಿನ 20 ಓವರ್‌ಗಳಿಗೆ 5 ವಿಕೆಟ್‌ ನಷ್ಟಕ್ಕೆ 171 ರನ್‌ಗಳನ್ನು ಕಲೆ ಹಾಕಿತ್ತು. ಆ ಮೂಲಕ ಎದುರಾಳಿ ಭಾರತ ತಂಡಕ್ಕೆ 172 ರನ್‌ಗಳ ಸ್ಪರ್ಧಾತ್ಮಕ ಗುರಿಯನ್ನು ನೀಡಿತ್ತು. ಪಾಕ್‌ ಪರ ಸಹಿಬ್ದಾಝ ಬಿಟ್ಟರೆ ಇನ್ನುಳಿದ ಯಾವುದೇ ಬ್ಯಾಟ್ಸ್‌ಮನ್‌ 30ರ ಗಡಿ ದಾಟಲು ಸಾಧ್ಯವಾಗಿಲ್ಲ.



ಪಾಕ್‌ ಪರ ಇನಿಂಗ್ಸ್‌ ಆರಂಭಿಸಿದ ಫಖರ್‌ ಝಮಾನ್‌ ಹಾಗೂ ಸಹಿಬ್ದಾಝ ಫರ್ಹಾನ್‌ ಜೋಡಿ ಉತ್ತಮ ಆರಂಭ ನೀಡುವಲ್ಲಿ ವಿಫಲರಾದರು. ಫಖರ್‌ ಝಮಾನ್‌ 9 ಎಸೆತಗಳಲ್ಲಿ 15 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದಿದ್ದ ಸೈಯಮ್‌ ಆಯುಬ್‌ ಅವರು 17 ಎಸೆತಗಳಲ್ಲಿ 21 ರನ್‌ಗಳಿಸಿ ಉತ್ತಮ ಆರಂಭವನ್ನು ಪಡೆದಿದ್ದರು. ಆದರೆ, ಶಿವಂ ದುಬೆ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಕೈಹಾಕಿ ವಿಕೆಟ್‌ ಒಪ್ಪಿಸಿದರು. ಹುಸೇನ್‌ ತಲತ್‌ ಕೂಡ 10 ರನ್‌ ಗಳಿಸಿ ಔಟ್‌ ಆದರು.



ಸಹಿಬ್ದಾಝ ಫರ್ಹಾನ್‌ ಅರ್ಧಶತಕ

ಸಹಿಬ್ದಾಝ ಫರ್ಹಾನ್‌ ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ದೀರ್ಘಾವಧಿ ಬ್ಯಾಟ್‌ ಮಾಡಿದ್ದರು. ಅವರು ಪವರ್‌ಪ್ಲೇನಲ್ಲಿ ಸ್ಪೋಟಕ ಬ್ಯಾಟ್‌ ಮಾಡಿದ್ದ ಫರ್ಹಾನ್‌, ಮಧ್ಯಮ ಓವರ್‌ಗಳಲ್ಲಿಯೂ ಮಿಂಚಿದ್ದರು. ಅವರು ಆಡಿದ್ದ 45 ಎಸೆತಗಳಲ್ಲಿ 3 ಸಿಕ್ಸರ್‌ ಹಾಗೂ 5 ಬೌಂಡರಿಗಳೊಂದಿಗೆ 58 ರನ್‌ಗಳನ್ನು ಕಲೆ ಹಾಕಿ ತಂಡದ ಮೊತ್ತವನ್ನು 100ರ ಗಡಿಯನ್ನು ದಾಟಿಸಿ ಶಿವಂ ದುಬೆಗೆ ವಿಕೆಟ್‌ ಒಪ್ಪಿಸಿದರು.



ಕೊನೆಯಲ್ಲಿ ಡೆತ್‌ ಓವರ್‌ಗಳಲ್ಲಿ ಮೊಹಮ್ಮದ್‌ ನವಾಝ್‌ (21), ಸಲ್ಮಾನ್‌ ಆಘಾ (17*) ಹಾಗೂ ಫಹೀಮ್‌ ಅಶ್ರಫ್‌ (20*) ಅವರು ತಂಡಕ್ಕೆ ನಿರ್ಣಾಯಕ ಕೊಡುಗೆಯನ್ನು ನೀಡಿದರು. ಇದರ ಫಲವಾಗಿ ಪಾಕಿಸ್ತಾನ 170ರ ಗಡಿ ದಾಟಲು ಸಾಧ್ಯವಾಯಿತು. ಭಾರತದ ಪರ ಶಿವಂ ದುಬೆ ಎರಡು ವಿಕೆಟ್‌ ಕಿತ್ತರೆ, ಹಾರ್ದಿಕ್‌ ಪಾಂಡ್ಯ ಮತ್ತು ಕುಲ್ದೀಪ್‌ ಯಾದವ್‌ ತಲಾ ಒಂದೊಂದು ವಿಕೆಟ್‌ ಕಿತ್ತರು. ಆದರೆ, ಜಸ್‌ಪ್ರೀತ್‌ ಬುಮ್ರಾ 4 ಓವರ್‌ಗಳಿಗೆ 45 ರನ್‌ ನೀಡಿ ದುಬಾರಿ ಬೌಲರ್‌ ಎನಿಸಿಕೊಂಡರು.

ಸ್ಕೋರ್‌ ವಿವರ

ಪಾಕಿಸ್ತಾನ: 20 ಓವರ್‌ಗಳಿಗೆ 171-5 (ಸಹಿಬ್ದಾಝ ಫರ್ಹಾನ್‌ 58, ಮೊಹಮ್ಮದ್‌ ನವಾಝ್‌ 21, ಸೈಯಮ್‌ ಆಯುಬ್‌ 21, ಫಹೀಮ್‌ ಅಶ್ರಫ್‌ 28*; ಶಿವಂ ದುಬೆ 33ಕ್ಕೆ 2, ಹಾರ್ದಿಕ್‌ ಪಾಂಡ್ಯ 29ಕ್ಕೆ 1)

ಭಾರತ: 18.5 ಓವರ್‌ಗಳಿಗೆ 174-4 (ಅಭಿಷೇಕ್‌ ಶರ್ಮಾ 74, ಶುಭಮನ್‌ ಗಿಲ್‌ 47, ತಿಲಕ್‌ ವರ್ಮಾ 30*; ಹ್ಯಾರಿಸ್‌ ರೌಫ್‌ 26ಕ್ಕೆ 2)

ಪಂದ್ಯ ಶ್ರೇಷ್ಠ ಪ್ರಶಸ್ತಿ: ಅಭಿಷೇಕ್‌ ಶರ್ಮಾ