ಏಷ್ಯಾ ಕಪ್ ಟೂರ್ನಿಯನ್ನು ಗೆಲ್ಲುವ ನೆಚ್ಚಿನ ತಂಡವನ್ನು ಆರಿಸಿದ ಮದನ್ ಲಾಲ್!
ಮುಂಬರುವ ಏಷ್ಯಾ ಕಪ್ ಟೂರ್ನಿಯಲ್ಲಿ ಭಾರತ ತಂಡದ ಪ್ಲೇಯಿಂಗ್ Xiನಲ್ಲಿ ಚೈನಾಮನ್ ಸ್ಪಿನ್ನರ್ ಕುಲ್ದೀಪ್ ಯಾದವ್ ಆಡಬೇಕೆಂದು ಭಾರತದ ಮಾಜಿ ಕ್ರಿಕೆಟಿಗ ಮದನ್ ಲಾಲ್ ಆಗ್ರಹಿಸಿದ್ದಾರೆ. ಅಲ್ಲದೆ ಏಷ್ಯಾ ಕಪ್ ಗೆಲ್ಲುವ ಎಲ್ಲಾ ಸಾಮರ್ಥ್ಯ ಹಾಗೂ ಕೌಶಲ ಟೀಮ್ ಇಂಡಿಯಾಗೆ ಇದೆ ಎಂದು ಅವರು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಏಷ್ಯಾ ಕಪ್ ಗೆಲ್ಲುವ ನೆಚ್ಚಿನ ತಂಡವನ್ನು ಆರಿಸಿದ ಮದನ್ ಲಾಲ್. -

ನವದೆಹಲಿ: ಮುಂಬರುವ ಏಷ್ಯಾ ಕಪ್(Asia Cup 2025) ಟೂರ್ನಿಯು ಸೆಪ್ಟಂಬರ್ 9 ರಂದು ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಸೂರ್ಯಕುಮಾರ್ ಯಾದವ್ (Suryakumar yadav) ನಾಯಕತ್ವದ ಭಾರತ ತಂಡ ಕಠಿಣ ತಯಾರಿಯನ್ನು ನಡೆಸುತ್ತಿದೆ. ಅಲ್ಲದೆ, ಈ ಬಾರಿ ಏಷ್ಯಾ ಕಪ್ ಟೂರ್ನಿಯಲ್ಲಿ ಯಾವ ತಂಡ ಗೆಲ್ಲಲಿದೆ ಎಂಬ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಅದರಂತೆ ಭಾರತದ ಮಾಜಿ ಕ್ರಿಕೆಟಿಗ ಮದನ್ ಲಾಲ್ (Madan lal) ಅವರು ಕೂಡ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಈ ಬಾರಿ ಏಷ್ಯಾ ಕಪ್ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡ ಭಾರತ ಎಂದು ಭವಿಷ್ಯ ನುಡಿದಿದ್ದಾರೆ.
ಎಎನ್‌ಐ ಜತೆ ಮಾತನಾಡಿದ ಮದನ್ ಲಾಲ್, "ಕೌಶಲದ ಆಧಾರದ ಮೇಲೆ ಭಾರತ ತಂಡ ಏಷ್ಯಾ ಕಪ್ ಗೆಲ್ಲುವ ಅತ್ಯಂತ ನೆಚ್ಚಿನ ತಂಡವಾಗಿದೆ. ಟಿ20 ಮಾದರಿಯ ಅನಿರೀಕ್ಷಿತತೆ ಮತ್ತು ಪ್ರಸ್ತುತ ಉತ್ತಮವಾಗಿ ಆಡುತ್ತಿರುವ ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದ, ವಿಶೇಷವಾಗಿ ಅಫ್ಘಾನಿಸ್ತಾನದ ಪ್ರದರ್ಶನವು ರೋಮಾಂಚಕಾರಿಯಾಗಿ ಇರಲಿದೆ. ಅಫ್ಘಾನಿಸ್ತಾನ ತಂಡ ಪಾಕಿಸ್ತಾನ ತಂಡಕ್ಕೆ ಸವಾಲು ಹಾಕಲಿದೆ. ಪ್ರಸ್ತುತ ಆಫ್ಘನ್ ತಂಡ ವಿಶ್ವಾಸ ಹಾಗೂ ಅತ್ಯುತ್ತಮ ಫಾರ್ಮ್‌ನಲ್ಲಿದೆ. ಶ್ರೀಲಂಕಾ, ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನ ಕೂಡ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಾಗಿವೆ," ಎಂದು ಹೇಳಿದ್ದಾರೆ.
Asia Cup 2025: ಟಿ20 ಕ್ರಿಕೆಟ್‌ನಲ್ಲಿ ದೊಡ್ಡ ದಾಖಲೆಯ ಸನಿಹದಲ್ಲಿ ಹಾರ್ದಿಕ್ ಪಾಂಡ್ಯ!
ಮಾಜಿ ಬಲಗೈ ಭಾರತ ತಂಡದ ಪ್ಲೇಯಿಂಗ್ XIಬಗ್ಗೆಯೂ ವಿಶೇಷವಾಗಿ ಚೈನಾಮನ್ ಸ್ಪಿನ್ನರ್ ಕುಲ್ದೀಪ್ ಯಾದವ್ ಅವರು ಬಗ್ಗೆ ಮಾತನಾಡಿದ್ದಾರೆ. 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ದದ ಕುಲ್ದೀಪ್ ಯಾದವ್ ಅಬರು ತಮ್ಮ ಕೊನೆಯ ಟಿ20ಐ ಪಂದ್ಯವನ್ನು ಆಡಿದ್ದರು. ಇತ್ತೀಚೆಗೆ ಅಂತ್ಯವಾಗಿದ್ದ ಇಂಗ್ಲೆಂಡ್ ವಿರುದ್ದದ ಟೆಸ್ಟ್ ಸರಣಿಯಲ್ಲಿ ಕುಲ್ದೀಪ್ ಯಾದವ್‌ಗೆ ಅವಕಾಶವನ್ನು ನೀಡಲಾಗಿತ್ತು. ಆದರೆ, ಅವರಿಗೆ ಒಂದೇ ಒಂದು ಪಂದ್ಯದಲ್ಲಿಯೂ ಆಡಲು ಅವಕಾಶ ನೀಡಲಾಗಿರಲಿಲ್ಲ.
"ತಮ್ಮ ವಿಭಿನ್ನ ಬೌಲಿಂಗ್ ಶೈಲಿಯನ್ನು ಹೊಂದಿರುವ ಕುಲ್ದೀಪ್ ಯಾದವ್‌ಗೆ ಭಾರತ ತಂಡದ ಪ್ಲೇಯಿಂಗ್ XIನಲ್ಲಿ ಅವಕಾಶ ನೀಡಬೇಕಾಗಿದೆ. ಟಿ20 ಕ್ರಿಕೆಟ್‌ನಲ್ಲಿ ಅವರನ್ನು ಎದುರಿಸುವುದು ತುಂಬಾನೇ ಕಷ್ಟ. ವಿಕೆಟ್ ಕಂಡೀಷನ್ಸ್ ಹಾಗೂ ತಂಡದ ಕಾಂಬಿನೇಷನ್ ಅವರ ಆಯ್ಕೆಯನ್ನು ನಿರ್ಧರಿಸುತ್ತದೆ. ಭಾರತ ತಂಡಕ್ಕೆ ಮೂವರು ವೇಗದ ಬೌಲರ್‌ಗಳು ಹಾಗೂ ಇಬ್ಬರು ಸ್ಪಿನ್ನರ್‌ಗಳಿಗೆ ಅವಕಾಶವನ್ನು ನೀಡಿದರೆ ಒಳ್ಳೆಯದು," ಎಂದು ಮದನ್ ಲಾಲ್ ಸಲಹೆ ನೀಡಿದ್ದಾರೆ.
Asia Cup 2025: ಈ ಆಟಗಾರನಿಂದ ಸಂಜು ಸ್ಯಾಮ್ಸನ್‌ಗೆ ಅವಕಾಶ ಇಲ್ಲವೆಂದ ಇರ್ಫಾನ್ ಪಠಾಣ್!
2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಕುಲ್ದೀಪ್ ಯಾದವ್ ಅವರು ಅತ್ಯುತ್ತಮ ಬೌಲಿಂಗ್ ಪ್ರದರ್ಶನವನ್ನು ತೋರಿದ್ದರು. ಅವರು ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿದ್ದ 14 ಪಂದ್ಯಗಳಿಂದ 7.08ರ ಎಕಾನಮಿ ಹಾಗೂ 24.07ರ ಸರಾಸರಿಯಲ್ಲಿ 15 ವಿಕೆಟ್‌ಗಳನ್ನು ಕಬಳಿಸಿದ್ದರು. ಆಲ್‌ರೌಂಡ್ ಸಾಮರ್ಥ್ಯದಿಂದ ಅಕ್ಷರ್ ಪಟೇಲ್ ಅವರು ಪ್ಲೇಯಿಂಗ್ XIನಲ್ಲಿ ಆಡಿದರೆ, ಪೂರ್ಣ ಪ್ರಮಾಣದ ಸ್ಪಿನ್ನರ್ ಆಗಿ ವರುಣ್ ಚಕ್ರವರ್ತಿ ಆಡಬಹುದು. ಈ ಇಬ್ಬರ ಜತೆ ಕುಲ್ದೀಪ್ ಯಾದವ್ ಕಠಿಣ ಸ್ಪರ್ಧೆಯನ್ನು ಎದುರಿಸಲಿದ್ದಾರೆ.
ಏಷ್ಯಾ ಕಪ್ ಟೂರ್ನಿಯ ಭಾರತ ತಂಡ: ಸೂರ್ಯ ಕುಮಾರ್ ಯಾದವ್ (ನಾಯಕ), ಶುಭಮನ್ ಗಿಲ್ (ಉಪ ನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ಜಿತೇಶ್ ಶರ್ಮಾ (ವಿ.ಕೀ), ಜಸ್‌ಪ್ರೀತ್ ಬುಮ್ರಾ, ಅರ್ಷ್‌ದೀಪ್ ಸಿಂಗ್, ವರುಣ್ ಚಕ್ರವರ್ತಿ, ಕುಲ್‌ದೀಪ್ ಯಾದವ್, ಸಂಜು ಸ್ಯಾಮ್ಸನ್ (ವಿ.ಕೀ), ಹರ್ಷಿತ್ ರಾಣಾ, ರಿಂಕು ಸಿಂಗ್
ಸ್ಟ್ಯಾಂಡ್-ಬೈ: ಪ್ರಸಿಧ್ ಕೃಷ್ಣ, ವಾಷಿಂಗ್ಟನ್ ಸುಂದರ್, ರಿಯಾನ್ ಪರಾಗ್, ಧ್ರುವ್ ಜುರೆಲ್, ಯಶಸ್ವಿ ಜೈಸ್ವಾಲ್