ವೈಭವ್ ಸೂರ್ಯವಂಶಿಗೆ ಎದುರಾಗಿರುವ ದೊಡ್ಡ ಸವಾಲನ್ನು ತಿಳಿಸಿದ ಕಪಿಲ್ ದೇವ್!
ಕಳೆದ ಒಂದು ವರ್ಷದ ಅವಧಿಯಲ್ಲಿ ವೈಭವ್ ಸೂರ್ಯವಂಶಿ ಅವರ ಕ್ರಿಕೆಟ್ ಪಯಣ ಅತ್ಯಂತ ವೇಗವಾಗಿ ಬೆಳವಣಿಗೆ ಕಂಡಿದೆ. ಇದೀಗ ಐರ್ಲೆಂಡ್ ಪ್ರವಾಸದ ಭಾರತದ ಟಿ20ಐ ತಂಡದಲ್ಲಿ ಸ್ಥಾನ ಪಡೆದಿರುವ ಅವರು ಪರ ಹಿರಿಯರ ತಂಡದ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದಾರೆ. ಈ ಬಗ್ಗೆ ಮಾಜಿ ನಾಯಕ ಕಪಿಲ್ ದೇವ್ ಮಾತನಾಡಿದ್ದಾರೆ.
ವೈಭವ್ ಸೂರ್ಯವಂಶಿಗೆ ಎದುರಾಗಲಿರುವ ಸವಾಲನ್ನು ತಿಳಿಸಿದ ಕಪಿಲ್ ದೇವ್. -
ನವದೆಹಲಿ: ಯುವ ಪ್ರತಿಭೆ ವೈಭವ್ ಸೂರ್ಯವಂಶಿ (Vaibhav Sooryavanshi) ಅವರ ಬಗ್ಗೆ ಭಾರತದ ಮಾಜಿ ನಾಯಕ ಹಾಗೂ ವಿಶ್ವಕಪ್ ವಿಜೇತ ದಿಗ್ಗಜ ಕಪಿಲ್ ದೇವ್ (Kapil Dev) ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವೈಭವ್ ಅವರನ್ನು ವಿಶೇಷ ಪ್ರತಿಭೆಯ ಆಟಗಾರ ಎಂದು ಬಣ್ಣಿಸಿದ ಕಪಿಲ್ ದೇವ್, ಅವರ ಭವಿಷ್ಯದ ವೃತ್ತಿಜೀವನದ ಬಗ್ಗೆ ಈಗಲೇ ತ್ವರಿತ ತೀರ್ಮಾನಗಳಿಗೆ ಬರುವುದು ಸರಿಯಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಕಳೆದ ಒಂದು ವರ್ಷದ ಅವಧಿಯಲ್ಲಿ 15ನೇ ವಯಸ್ಸಿನ ಆಟಗಾರನ ಏರಿಕೆ ಗಣನೀಯವಾಗಿ ನಡೆದಿದೆ. ಐರ್ಲೆಂಡ್ ವಿರುದ್ಧದ ಮುಂಬರುವ ಟಿ20ಐ ಸರಣಿಯ ಭಾರತ ತಂಡದಲ್ಲಿ ಸ್ಥಾನ ಪಡೆದಿರುವ ಅವರು, ಇದೀಗ ಹಿರಿಯ ಭಾರತ ತಂಡದ ಪರ ಪದಾರ್ಪಣೆ ಮಾಡುವ ಹಂತದಲ್ಲಿದ್ದಾರೆ.
ಈ ಯುವ ಪ್ರತಿಭೆಯ ವೇಗದ ಬೆಳವಣಿಗೆಯನ್ನು ಭಾರತೀಯ ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರೊಂದಿಗೆ ಹೋಲಿಕೆಗಳನ್ನು ಮಾಡಲಾಗುತ್ತಿದೆ. ಸಚಿನ್ ಕೂಡ ಹದಿಹರೆಯದಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿ, ನಂತರ ಕ್ರಿಕೆಟ್ ಇತಿಹಾಸದ ಶ್ರೇಷ್ಠ ಬ್ಯಾಟರ್‌ಗಳಲ್ಲಿ ಒಬ್ಬರಾಗಿ ಬೆಳೆದಿದ್ದರು.
ʻ116 ಎಸೆತಗಳಲ್ಲಿ 168 ರನ್ʼ: ಮತ್ತೊಂದು ಸ್ಪೋಟಕ ಶತಕ ಸಿಡಿಸಿದ ವೈಭವ್ ತಮ್ಮ ಆಶಿರ್ವಾದ್!
ವೈಭವ್ ಸೂರ್ಯವಂಶಿ ಅವರ ಅಪಾರ ಪ್ರತಿಭೆಯನ್ನು ಒಪ್ಪಿಕೊಂಡಿರುವ ಕಪಿಲ್ ದೇವ್, ಅವರ ವೃತ್ತಿಜೀವನದ ನಿಜವಾದ ಮೌಲ್ಯಮಾಪನವನ್ನು ಮುಂದಿನ ಹಂತದ ಬೆಳವಣಿಗೆಯ ಬಳಿಕ ನಿರ್ಧರಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
"ವೈಭವ್ ಇನ್ನೂ ತುಂಬಾ ಚಿಕ್ಕವರು. ಆದರೆ ಹೌದು, ಅವರು ವಿಶೇಷ ಪ್ರತಿಭೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಅವರು ಕೇವಲ 16 ವರ್ಷದ ಹುಡುಗ ಮತ್ತು ಅವರ ಜೀವನದಲ್ಲಿ ಈಗ ಕ್ರಿಕೆಟ್ ಮಾತ್ರ ಇದೆ. ಅವರು 20-22 ವರ್ಷದ ವಯಸ್ಸಿಗೆ ತಲುಪಿದಾಗ ನಾವು ಅವರನ್ನು ಸರಿಯಾಗಿ ಮೌಲ್ಯಮಾಪನ ಮಾಡಬಹುದು. ಆದರೆ ಅವರ ಪ್ರತಿಭೆ ಅಸಾಧಾರಣ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. 16ನೇ ವಯಸ್ಸಿನ ಸಚಿನ್‌ನಂತೆಯೇ ಅವರು ಕಾಣಿಸುತ್ತಾರೆ. ಆದರೆ ಸಚಿನ್‌ನಂತೆ ದೀರ್ಘಕಾಲ ಆಡಲು ಸಾಧ್ಯವಾಗುತ್ತದೆಯೇ? ಅದಕ್ಕಾಗಿ ಅವರು ಇನ್ನೂ ಬಹಳ ದೂರ ಸಾಗಬೇಕಿದೆ," ಎಂದು ಕಪಿಲ್ ದೇವ್ ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್‌ಗೆ ಸೇರಿದ ಬೆನ್ನಲ್ಲೆ ಎಲ್‌ಎಸ್‌ಜಿಗೆ ರಿಷಭ್ ಪಂತ್ ಕೊನೆಯ ಸಂದೇಶ!
ಕಳೆದ ಕೆಲವು ತಿಂಗಳುಗಳಲ್ಲಿ ಈ ಯುವ ಆಟಗಾರನ ಪಯಣ ಅಸಾಧಾರಣವಾಗಿತ್ತು. ಮೊದಲಿಗೆ, ಅಂಡರ್-19 ವಿಶ್ವಕಪ್ ಫೈನಲ್‌ನಲ್ಲಿ 175 ರನ್‌ಗಳ ಮ್ಯಾಚ್ ವಿನ್ನಿಂಗ್ ಇನಿಂಗ್ಸ್ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಆ ಇನಿಂಗ್ಸ್ ನೆರವಿನಿಂದ ಭಾರತ ತಂಡ ಪ್ರಶಸ್ತಿ ಗೆದ್ದಿತ್ತು ಹಾಗೂ ದೇಶದ ಅತ್ಯಂತ ಭರವಸೆಯ ಯುವ ಪ್ರತಿಭೆಗಳಲ್ಲಿ ಒಬ್ಬರಾಗಿ ವೈಭವ್ ತಮ್ಮ ಸ್ಥಾನವನ್ನು ಗಟ್ಟಿಗೊಳಿಸಿಕೊಂಡರು.
ಅವರ ಅದ್ಭುತ ಪ್ರದರ್ಶನ ಐಪಿಎಲ್‌ನಲ್ಲಿಯೂ ಮುಂದುವರಿಯಿತು. ರಾಜಸ್ಥಾನ್ ರಾಯಲ್ಸ್ ಪರ ಆಡಿದ ಈ ಹದಿಹರೆಯದ ಬ್ಯಾಟರ್, 776 ರನ್‌ಗಳನ್ನು ಕಲೆಹಾಕಿ ಆರೆಂಜ್ ಕ್ಯಾಪ್ ಗೆದ್ದರು. ಆ ಮೂಲಕ ಐಪಿಎಲ್ ಇತಿಹಾಸದಲ್ಲಿ ಈ ಸಾಧನೆ ಮಾಡಿದ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆಯನ್ನು ನಿರ್ಮಿಸಿದರು.
ಇದಲ್ಲದೆ, ಒಂದು ಐಪಿಎಲ್ ಸೀಸನ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ದಾಖಲೆಯಲ್ಲಿ ಕ್ರಿಸ್ ಗೇಲ್ ಅವರ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದು, ಹೊಸ ಇತಿಹಾಸವನ್ನೂ ಸೃಷ್ಟಿಸಿದರು.