DC vs PBKS: ಪಾಕ್ ದಾಳಿಯ ಕಾರಣ ಪಂಜಾಬ್ vs ಡೆಲ್ಲಿ ನಡುವಣ ಪಂದ್ಯ ರದ್ದು!
DC vs PBKS: ಪಾಕಿಸ್ತಾನದ ದಾಳಿ ಕಾರಣ ಧರ್ಮಶಾಲಾದಲ್ಲಿ ನಡೆಯುತ್ತಿದ್ದ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ನಡುವಣ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಪಂದ್ಯವನ್ನು ರದ್ದುಗೊಳಿಸಲಾಗಿದೆ. ಟೂರ್ನಿಯ ನಿರ್ಣಾಯಕ ಹಂತದಲ್ಲಿ ಪಂದ್ಯ ರದ್ದಾಗಿದ್ದರಿಂದ ಎರಡೂ ತಂಡಗಳಿಗೆ ಭಾರಿ ನಿರಾಶೆಯಾಗಿದೆ.

ಡೆಲ್ಲಿ-ಪಂಜಾಬ್ ಪಂದ್ಯ ರದ್ದು.

ಧರ್ಮಶಾಲಾ: ಇಲ್ಲಿನ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳ (DC vs PBKS) ನಡುವಣ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯ ಪಂದ್ಯವನ್ನು ಅರ್ಧಕ್ಕೆ ರದ್ದುಗೊಳಿಸಲಾಗಿದೆ. ಭಾರತದ ಗಡಿ ಭಾಗದ ವಿವಿಧ ಕಡೆ ಪಾಕಿಸ್ತಾನ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಆಟಗಾರರು ಹಾಗೂ ಅಭಿಮಾನಿಗಳ ಸುರಕ್ಷಿತ ಕ್ರಮವಾಗಿ ಈ ಪಂದ್ಯದಲ್ಲಿ ರದ್ದುಗೊಳಿಸಲಾಗಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಕಾರ್ಯದರ್ಶಿ ದೇವಜಿತ್ ಸೈಕಿಯಾ ತಿಳಿಸಿದ್ದಾರೆ.
ಇದಕ್ಕೂ ಮುನ್ನ ಈ ಪಂದ್ಯಕ್ಕೆ ಮಳೆ ಅಡ್ಡಿ ಉಂಟು ಮಾಡಿತ್ತು ಹಾಗಾಗಿ ಟಾಸ್ ತಡವಾಗಿತ್ತು. ಈ ಪಂದ್ಯದಲ್ಲಿ ಟಾಸ್ ಗೆದ್ದಿದ್ದ ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದರು. ಅದರಂತೆ ಪಂಜಾಬ್ ಕಿಂಗ್ಸ್ ಪರ ಇನಿಂಗ್ಸ್ ಆರಂಭಿಸಿದ ಪ್ರಿಯಾಂಶ್ ಆರ್ಯ ಹಾಗೂ ಪ್ರಭ್‌ಸಿಮ್ರಾನ್ ಸಿಂಗ್ ಅಬ್ಬರಿಸಿದರು. ಈ ಜೋಡಿ ಮುರಿಯದ ಮೊದಲನೇ ವಿಕೆಟ್‌ಗೆ 122 ರನ್‌ಗಳನ್ನು ಕಲೆ ಹಾಕಿತು.
IPL 2025: ಗಾಯಗೊಂಡು ಐಪಿಎಲ್‌ನಿಂದ ಹೊರಬಿದ್ದ ರಾಜಸ್ಥಾನ್ ತಂಡದ ನಿತೀಶ್ ರಾಣಾ
ಸ್ಪೋಟಕ ಬ್ಯಾಟ್ ಮಾಡಿದ ಪ್ರಿಯಾಂಶ್ ಆರ್ಯ 34 ಎಸೆತಗಳಲ್ಲಿ ಆರು ಸಿಕ್ಸರ್ ಹಾಗೂ ಐದು ಬೌಂಡರಿಗಳೊಂದಿಗೆ 70 ರನ್ ಸಿಡಿಸಿ ವಿಕೆಟ್ ಒಪ್ಪಿಸಿದರು. ಮತ್ತೊಂದು ತುದಿಯಲ್ಲಿ ಇವರಿಗೆ ಸಾಥ್ ನೀಡಿದ್ದ ಪ್ರಭ್‌ಸಿಮ್ರಾನ್ ಸಿಂಗ್ ಕೇವಲ 28 ಎಸೆತಗಳಲ್ಲಿ 50 ರನ್‌ಗಳನ್ನು ಬಾರಿಸಿದ್ದರು. 10.1 ಓವರ್‌ಗಳಿಗೆ ಪಂಜಾಬ್ ಕಿಂಗ್ಸ್ ಒಂದು ವಿಕೆಟ್ ನಷ್ಟಕ್ಕೆ 122 ರನ್‌ಗಳನ್ನು ಕಲೆ ಹಾಕಿತ್ತು. ಈ ವೇಳೆ ಸ್ಟೇಡಿಯಂನಲ್ಲಿ ತಾಂತ್ರಿಕ ದೋಷದ ಕಾರಣ ಲೈಟ್ ಆಫ್ ಆಗಿತ್ತು. ನಂತರ ಪಂದ್ಯವನ್ನು ರದ್ದುಗೊಳಿಸಲಾಯಿತು. ಈ ವೇಳೆ ಪಂದ್ಯದ ಆಟಗಾರರು, ಪಂದ್ಯದ ಅಧಿಕಾರಿಗಳು ಹಾಗೂ ವೀಕ್ಷಕರು ಸ್ಟೇಡಿಯಂನಿಂದ ಸುರಕ್ಷಿತವಾಗಿ ಹೊರಗೆ ಕಳುಹಿಸಲಾಯಿತು.
Priyansh Arya served up special shots like these during his entertaining 7⃣0⃣(34) 👏
— IndianPremierLeague (@IPL) May 8, 2025
Updates ▶ https://t.co/R7eQDiYQI9 #TATAIPL | #PBKSvDC | @PunjabKingsIPL pic.twitter.com/uajDx9NJ6V
ಆಟಗಾರರಿಗೆ ವಿಶೇಷ ರೈಲು ವ್ಯವಸ್ಥೆ
ಧರ್ಮಶಾಲಾದಿಂದ ದಿಲ್ಲಿಗೆ ಆಟಗಾರರು ಸುರಕ್ಷಿತವಾಗಿ ಕರೆ ತರಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ವಿಶೇಷ ರೈಲಿನ ವ್ಯವಸ್ಥೆಯನ್ನುಏರ್ಪಡಿಸಿದೆ. ಇಲ್ಲಿಗೆ ಸಮೀಪವಾಗಿರುವ ರೈಲು ನಿಲ್ದಾಣವಾದ ಉನಾದಿಂದ ಎರಡೂ ತಂಡಗಳ ಆಟಗಾರರು, ಸಹಾಯಕ ಸಿಬ್ಬಂದಿ, ಪಂದ್ಯದ ಅಧಿಕಾರಿಗಳು ರೈಲಿನ ಮೂಲಕ ದಿಲ್ಲಿಗೆ ಬಂದಿಳಿಯಲಿದ್ದಾರೆ.
ಬಿಸಿಸಿಐ ಕಾರ್ಯದರ್ಶಿ ಹೇಳಿದ್ದೇನು?
ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ನಡುವಣ ಪಂದ್ಯವನ್ನು ರದ್ದುಗೊಳಿಸಿದ ಬಗ್ಗೆ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಇಂಡಿಯಾ ಟುಡೇಗೆ ತಿಳಿಸಿದ್ದಾರೆ.
"ಸದ್ಯಕ್ಕೆ ಪರಿಸ್ಥಿತಿ ಸ್ಥಿರವಾಗಿಲ್ಲ, ಅದಕ್ಕಾಗಿಯೇ ನಾವು ಇಂದಿನ ಪಂದ್ಯವನ್ನು ರದ್ದುಗೊಳಿಸಿದ್ದೇವೆ. ಧರ್ಮಶಾಲಾದಲ್ಲಿ ಮಾತ್ರವಲ್ಲ, ನೆರೆಯ ದೇಶದಿಂದ ಉದ್ವಿಗ್ನತೆ ಹೆಚ್ಚುತ್ತಿದೆ," ಎಂದು ಅವರು ತಿಳಿಸಿದ್ದಾರೆ.
"ಆಟಗಾರರು, ಪ್ರೇಕ್ಷಕರು ಮತ್ತು ಸಹಾಯಕ ಸಿಬ್ಬಂದಿಯ ಸುರಕ್ಷತೆಯು ನಮ್ಮ ಪ್ರಮುಖ ಆದ್ಯತೆಯಾಗಿದೆ. ಟೂರ್ನಿಯಲ್ಲಿ ಭಾಗವಹಿಸುವ ವಿವಿಧ ರಾಷ್ಟ್ರಗಳ ಆಟಗಾರರ ಹಿತದೃಷ್ಟಿಯಿಂದ ನಾವು ಈ ಕ್ರಮವನ್ನು ತೆಗೆದುಕೊಂಡಿದ್ದೇವೆ," ಎಂದು ಹೇಳಿದ್ದಾರೆ.
IPL 2025: ಪಂಜಾಬ್-ಮುಂಬೈ ಪಂದ್ಯದ ಸ್ಥಳ ಬದಲಾವಣೆ ಸಾಧ್ಯತೆ!
"ನಾವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ ಮತ್ತು ಅದಕ್ಕೆ ಅನುಗುಣವಾಗಿ ಮುಂದಿನ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ," ಎಂದು ಅವರು ತಿಳಿಸಿದ್ದಾರೆ.
ಪಾಕಿಸ್ತಾನ, ವಿಮಾನ ನಿಲ್ದಾಣ ಸೇರಿದಂತೆ ಜಮ್ಮುವಿನ ಹಲವು ಸ್ಥಳಗಳ ಮೇಲೆ ದಾಳಿ ಮಾಡಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಗುರುವಾರ ಅಂತಾರಾಷ್ಟ್ರೀಯ ಗಡಿಯುದ್ದಕ್ಕೂ ಜಮ್ಮುವಿನ ಮೇಲೆ ರಾಕೆಟ್‌ಗಳನ್ನು ಹಾರಿಸಲಾಯಿತು. ಡ್ರೋನ್ ಜಮ್ಮು ವಿಮಾನ ನಿಲ್ದಾಣಕ್ಕೆ ಅಪ್ಪಳಿಸಿತು. ಇದಾದ ಬಳಿಕ ಭಾರತದ ವಾಯು ಭದ್ರತಾ ಪಡೆ ಸಕ್ರಿಯಗೊಂಡಿದೆ.