ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

RR vs DC: ರಾಜಸ್ಥಾನ್‌ಗೆ ಭಾರಿ ನಿರಾಶೆ, ಸೂಪರ್‌ ಓವರ್‌ ಥ್ರಿಲ್ಲರ್‌ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್‌!

RR vs DC Match Highlights: ಯಶಸ್ವಿ ಜೈಸ್ವಾಲ್‌ ಹಾಗೂ ನಿತೀಶ್‌ ರಾಣಾ ಅವರ ಅರ್ಧಶತಕಗಳ ಹೊರತಾಗಿಯೂ ರಾಜಸ್ಥಾನ್‌ ರಾಯಲ್ಸ್‌ ತಂಡ ಸೂಪರ್‌ ಓವರ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಎದುರು ಸೋಲು ಅನುಭವಿಸಿತು. ನಿಗದಿತ 20 ಓವರ್‌ಗಳಲ್ಲಿ ಎರಡೂ ತಂಡಗಳ ಮೊತ್ತ ಸಮವಾಗಿತ್ತು. ನಂತರ ಸೂಪರ್‌ ಓವರ್‌ನಲ್ಲಿ ಆರ್‌ಆರ್‌ ನೀಡಿದ್ದ 12 ರನ್‌ಗಳ ಗುರಿಯನ್ನು ಡೆಲ್ಲಿ ಇನ್ನೂ 2 ಎಸೆತಗಳು ಬಾಕಿ ಇರುವಾಗಲೇ ಗೆದ್ದು ಬೀಗಿತು.

ಸೂಪರ್‌ ಓವರ್‌ನಲ್ಲಿ ರಾಜಸ್ಥಾನ್‌ ವಿರುದ್ಧ ಡೆಲ್ಲಿಗೆ ರೋಚಕ ಜಯ!

ರಾಜಸ್ಥಾನ್‌ ಎದುರು ಸೂಪರ್‌ ಓವರ್‌ ಗೆದ್ದ ಡೆಲ್ಲಿ.

Profile Ramesh Kote Apr 17, 2025 12:18 AM

ನವದೆಹಲಿ: ಹದಿನೆಂಟನೇ ಆವೃತ್ತಿಯ ಮೊದಲ ಸೂಪರ್‌ ಓವರ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ (Rajasthan Royals) ವಿರುದ್ದ ಡೆಲ್ಲಿ ಕ್ಯಾಪಿಟಲ್ಸ್‌ (Delhi capitals) ರೋಚಕ ಗೆಲುವು ಸಾಧಿಸಿತು. ಪಂದ್ಯದಲ್ಲಿ ಡೆಲ್ಲಿ ನೀಡಿದ್ದ 189 ರನ್‌ಗಳ ಗುರಿಯನ್ನು ಹಿಂಬಾಲಿಸಿದ ರಾಜಸ್ಥಾನ್‌ ರಾಯಲ್ಸ್‌ ತಂಡ ಸುಲಭವಾಗಿ ಗೆಲ್ಲುವ ಹಾದಿಯಲ್ಲಿತ್ತು. ಆದರೆ, ಕೊನೆಯ ಓವರ್‌ನಲ್ಲಿ 9 ರನ್‌ಗಳ ಅಗತ್ಯವಿದ್ದ ವೇಳೆ ಮಿಚೆಲ್‌ ಸ್ಟಾರ್ಕ್‌ (Mitchell Starc) 8 ರನ್‌ ನೀಡಿದರು. ಆ ಮೂಲಕ ಉಭಯ ತಂಡಗಳ ಮೊತ್ತ 188 ರನ್‌ಗಳಿಗೆ ಟೈ ಆಯಿತು. ಬಳಿಕ ಸೂಪರ್‌ ಓವರ್‌ನಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ಆರ್‌ಆರ್‌, ಎರಡು ವಿಕೆಟ್‌ ಕಳೆದುಕೊಂಡು 5 ಎಸೆತಗಳಲ್ಲಿ 11 ರನ್‌ ಕಲೆ ಹಾಕಿತ್ತು. ಬಳಿಕ 12 ರನ್‌ ಗುರಿ ಹಿಂಬಾಲಿಸಿದ ಡೆಲ್ಲಿ ಕ್ಯಾಪಿಟಲ್ಸ್‌, ಇನ್ನೂ ಎರಡು ಎಸೆತಗಳು ಬಾಕಿ ಇರುವಾಗಲೇ ಗೆದ್ದು ಬೀಗಿತು.

ಇಲ್ಲಿನ ಅರುಣ್‌ ಜೆಟ್ಲಿ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ನೀಡಿದ್ದ 189 ರನ್‌ಗಳ ಗುರಿಯನ್ನು ಹಿಂಬಾಲಿಸಿದ್ದ ರಾಜಸ್ಥಾನ್‌ ರಾಯಲ್ಸ್‌ ತಂಡಕ್ಕೆ ಸಂಜು ಸ್ಯಾಮ್ಸನ್‌ (31 ರನ್)‌ ಹಾಗೂ ಯಶಸ್ವಿ ಜೈಸ್ವಾಲ್‌ (51) ಅವರು ಮೊದಲನೇ ವಿಕೆಟ್‌ಗೆ 76 ರನ್‌ ಗಳಿಸಿ ಉತ್ತಮ ಆರಂಭವನ್ನು ತಂದುಕೊಟ್ಟಿದ್ದರು. ‌31 ರನ್‌ ಗಳಿಸಿ ಉತ್ತಮವಾಗಿ ಆಡುತ್ತಿದ್ದ ಸಂಜು ಸ್ಯಾಮನ್ ಗಾಯದ ಕಾರಣ ರಿಟೈರ್‌ ಹರ್ಟ್‌ ಆದರು. ರಿಯಾನ್‌ ಪರಾಗ್‌ ಕೇವಲ 8 ರನ್‌ಗೆ ವಿಕೆಟ್‌ ಒಪ್ಪಿಸಿದರು.

IPL 2025: ಡಕ್‌ಔಟ್‌ ಆದ ಬಳಿಕ ಡ್ರೆಸ್ಸಿಂಗ್‌ ಕೊಠಡಿಯಲ್ಲಿ ಕರುಣ್‌ ನಾಯರ್‌ ಆಕ್ರೋಶ!

‌ಅತ್ಯುತ್ತಮ ಬ್ಯಾಟ್‌ ಮಾಡಿದ ಯಶಸ್ವಿ ಜೈಸ್ವಾಲ್ 37 ಎಸೆತಗಳಲ್ಲಿ 51 ರನ್‌ ಹಾಗೂ ನಿತೀಶ್‌ ರಾಣಾ 28 ಎಸೆತಗಳಲ್ಲಿ 51 ರನ್‌ ಸಿಡಿಸಿದ್ದರು. ಇವರಿಬ್ಬರ ಅರ್ಧಶತಕಗಳ ನೆರವಿನಿಂದ ರಾಜಸ್ಥಾನ್‌ ತಂಡ ಸುಲಭವಾಗಿ ಗೆಲ್ಲುವ ಹಾದಿಯಲ್ಲಿತ್ತು. ಯಶಸ್ವಿ ಜೈಸ್ವಾಲ್‌ ಔಟ್‌ ಆದ ಬಳಿಕ ರಾಣಾ ತಂಡವನ್ನು ಗೆಲ್ಲಿಸುವ ಹಾದಿಯಲ್ಲಿದ್ದರು. ಆದರೆ, ಅವರು 18ನೇ ಓವರ್‌ನಲ್ಲಿ ಮಿಚೆಲ್‌ ಸ್ಟಾರ್ಕ್‌ಗೆ ಎಲ್‌ಬಿಡಬ್ಲ್ಯುಗೆ ಬಲಿಯಾದರು. ಅಂದಹಾಗೆ ಕೊನೆಯ ಎರಡು ಓವರ್‌ಗಳಲ್ಲಿ ರಾಜಸ್ಥಾನ್‌ಗೆ 23 ರನ್‌ ಅಗತ್ಯವಿತ್ತು. 19ನೇ ಓವರ್‌ನಲ್ಲಿ ಧ್ರುವ್‌ ಜುರೆಲ್‌ ಹಾಗೂ ಶಿಮ್ರಾನ್‌ ಹೆಟ್ಮಾಯೆರ್‌ ಸೇರಿ 14 ರನ್‌ ಗಳಿಸಿದ್ದರು. 20ನೇ ಓವರ್‌ನಲ್ಲಿ ಆರ್‌ಆರ್‌ಗೆ 9 ರನ್‌ ಅಗತ್ಯವಿತ್ತು. ಈ ವೇಳೆ ಮಿಚೆಲ್‌ ಸ್ಟಾರ್ಕ್‌ 8 ರನ್‌ ನೀಡಿ ಧ್ರುವ್‌ ಜುರೆಲ್‌ ಅವರನ್ನು ಔಟ್‌ ಮಾಡಿದರು. ಅಂತಿಮವಾಗಿ ರಾಜಸ್ಥಾನ್‌ ತಂಡ 20 ಓವರ್‌ಗಳಿಗೆ 4 ವಿಕೆಟ್‌ ನಷ್ಟಕ್ಕೆ 188 ರನ್‌ಗಳಿಗೆ ಸೀಮಿತವಾಯಿತು. ಆ ಮೂಲಕ ಪಂದ್ಯ ಟೈ ಆಗಿತ್ತು.



188 ರನ್‌ ಕಲೆ ಹಾಕಿದ್ದ ಡೆಲ್ಲಿ

ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ತನ್ನ ಪಾಲಿನ 20 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 188 ರನ್‌ಗಳನ್ನು ಕಲೆ ಹಾಕಿತ್ತು. ಆ ಮೂಲಕ ಎದುರಾಳಿ ರಾಜಸ್ಥಾನ್‌ ರಾಯಲ್ಸ್‌ಗೆ 189 ರನ್‌ಗಳ ಸವಾಲಿನ ಗುರಿಯನ್ನು ನೀಡಿತ್ತು.ಡೆಲ್ಲಿ ಕ್ಯಾಪಿಟಲ್ಸ್‌ ಪರ ಅಭಿಷೇಕ್‌ ಪೊರೆಲ್‌ 49ರನ್‌ ಗಳಿಸಿ ವೈಯಕ್ತಿಕ ಗರಿಷ್ಠ ಸ್ಕೋರರ್‌ ಎನಿಸಿಕೊಂಡರು.



ಡೆಲ್ಲಿ ಪರ ಇನಿಂಗ್ಸ್‌ ಆರಂಭಿಸಿದ ಜೇಕ್‌ ಮೆಗರ್ಕ್‌ ಹಾಗೂ ಅಭಿಷೇಕ್‌ ಪೊರೆಲ್‌ ಜೋಡಿಯು 2.3 ಓವರ್‌ಗಳಿಗೆ 34 ರನ್‌ ಜೊತೆಯಾಟವನ್ನು ಆಡಿತು. ಆದರೆ, ಜೇಕ್‌ ಮೆಗರ್ಕ್‌ 9 ರನ್‌ಗೆ ವಿಕೆಟ್‌ ಒಪ್ಪಿಸಿದರು. ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದಿದ್ದ ಕರುಣ್‌ ನಾಯರ್‌ 3 ಎಸೆತಗಳನ್ನು ಆಡಿದರೂ ಅನಗತ್ಯವಾಗಿ ರನ್‌ ಕದಿಯಲು ಮುಂದಾಗಿ ಖಾತೆ ತೆರೆಯದೆ ರನ್‌ಔಟ್‌ ಆದರು. 32 ಎಸೆತಗಳಲ್ಲಿ 38 ರನ್‌ ಗಳಿಸಿದ ಕೆಎಲ್‌ ರಾಹುಲ್‌ ದೊಡ್ಡ ಇನಿಂಗ್ಸ್‌ ಆಡಲು ಜೋಫ್ರಾ ಆರ್ಚರ್‌ ಅವರ ನೀಡಲಿಲ್ಲ. ಒಂದು ಹಂತದಲ್ಲಿ 37 ಎಸೆತಗಳಲ್ಲಿ 49 ರನ್‌ ಗಳಿಸಿ ಉತ್ತಮವಾಗಿ ಕಾಣುತ್ತಿದ್ದ ಅಭಿಷೇಕ್‌ ಪೊರೆಲ್‌ ಅವರನ್ನುವಾನಿಂದು ಹಸರಂಗ ಔಟ್‌ ಮಾಡಿದರು. ಆ ಮೂಲಕ ಪೊರೆಲ್‌ ಕೇವಲ ಒಂದು ರನ್‌ ಅಂತರದಲ್ಲಿ ಅರ್ಧಶತಕವನ್ನು ಕಳೆದುಕೊಂಡರು.



ಮಧ್ಯಮ ಕ್ರಮಾಂಕದಲ್ಲಿ ಟ್ರಿಸ್ಟನ್‌ ಸ್ಟಬ್ಸ್‌ ಹಾಗೂ ಅಕ್ಷರ್‌ ಪಟೇಲ್‌ ಕೆಲ ಕಾಲ ಉತ್ತಮ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದರು. ಅಕ್ಷರ್‌ ಪಟೇಲ್‌ 24 ಎಸೆತಗಳಲ್ಲಿ 34 ರನ್‌ ಗಳಿಸಿ ಔಟ್‌ ಆದರು. ಕೊನೆಯವರೆಗೂ ಬ್ಯಾಟ್‌ ಮಾಡಿದ ಸ್ಟಬ್ಸ್‌ 18 ಎಸೆತಗಳಲ್ಲಿ ಅಜೇಯ 34 ರನ್‌ ಗಳಿಸಿದರು. ಆ ಮೂಲಕ ತಂಡದ ಮೊತ್ತವನ್ನು 180ರ ಗಡಿ ದಾಟಿಸಲು ನೆರವು ನೀಡಿದ್ದರು. ಆಶುತೋಷ್‌ ಶರ್ಮಾ 15 ರನ್‌ಗಳ ಕೊಡುಗೆಯನ್ನು ತಂಡಕ್ಕೆ ನೀಡಿದ್ದರು. ಜೋಫ್ರಾ ಆರ್ಚರ್‌ ಎರಡು ವಿಕೆಟ್ ಪಡೆದರು.

ಸ್ಕೋರ್‌ ವಿವರ

ಡೆಲ್ಲಿ ಕ್ಯಾಪಿಟಲ್ಸ್‌: 20 ಓವರ್‌ಗಳಿಗೆ 188-5 (ಅಭಿಷೇಕ್‌ ಪೊರೆಲ್‌ 49, ಅಕ್ಷರ್‌ ಪಟೇಲ್‌ 34, ಟ್ರಿಸ್ಟನ್‌ ಸ್ಟಬ್ಸ್‌ 34*, ಕೆಎಲ್‌ ರಾಹುಲ್‌ 38; ಜೋಫ್ರಾ ಆರ್ಚರ್‌ 32 ಕ್ಕೆ 2)

ರಾಜಸ್ಥಾನ್‌ ರಾಯಲ್ಸ್‌: 20 ಓವರ್‌ಗಳಿಗೆ 188-4 (ಯಶಸ್ವಿ ಜೈಸ್ವಾಲ್‌ 51, ನಿತೀಶ್‌ ರಾಣಾ 51; ಅಕ್ಷರ್‌ ಪಟೇಲ್‌ 23 ಕ್ಕೆ 1)

ಪಂದ್ಯ ಶ್ರೇಷ್ಠ ಪ್ರಶಸ್ತಿ: ಮಿಚೆಲ್‌ ಸ್ಟಾರ್ಕ್‌