ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ENG vs NZ: ನ್ಯೂಜಿಲೆಂಡ್‌ ತಂಡದಲ್ಲಿ ಕೇನ್‌ ವಿಲಿಯಮ್ಸನ್‌ ಸ್ಥಾನವನ್ನು ತುಂಬಿದ ಹೆನ್ರಿ ನಿಕೋಲ್ಸ್‌!

ಇಂಗ್ಲೆಂಡ್‌ ವಿರುದ್ಧ ಟೆಸ್ಟ್‌ ಸರಣಿಯ ಇನ್ನುಳಿದ ಭಾಗಕ್ಕೆ ಕೇನ್‌ ವಿಲಿಯಮ್ಸನ್‌ ಅವರ ಸ್ಥಾನಕ್ಕೆ ಹೆನ್ರಿ ನಿಕೋಲ್ಸ್‌ ನ್ಯೂಜಿಲೆಂಡ್‌ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ವಿಲಿಯಮ್ಸನ್‌ ಅವರು ಮೊದಲನೇ ಟೆಸ್ಟ್‌ ಪಂದ್ಯದ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಹಾಗಾಗಿ ನಿಕೋಲ್ಸ್‌ ಅವರನ್ನು ಮೂರನೇ ಕ್ರಮಾಂಕದಲ್ಲಿ ಆಡಿಸಬಹುದು.

‌ENG vs NZ: ನ್ಯೂಜಿಲೆಂಡ್‌ ಟೆಸ್ಟ್‌ ತಂಡಕ್ಕೆ ಸೇರಿದ ಹೆನ್ರಿ ನಿಕೋಲ್ಸ್!

ನ್ಯೂಜಿಲೆಂಡ್‌ ಪರ ಮೂರನೇ ಕ್ರಮಾಂಕದಲ್ಲಿ ಆಡಲಿರುವ ಹೆನ್ರಿ ನಿಕೋಲ್ಸ್‌. -

Profile
Ramesh Kote Jun 16, 2026 10:55 PM

ನವದೆಹಲಿ: ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯ (ENG vs NZ) ಇನ್ನುಳಿದ ಭಾಗಕ್ಕೆ ನ್ಯೂಜಿಲೆಂಡ್‌ ತಂಡಕ್ಕೆ ಹೆನ್ರಿ ನಿಕೋಲ್ಸ್‌(Henri Nichols) ಅವರು ನ್ಯೂಜಿಲೆಂಡ್‌ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಮೊದಲನೇ ಟೆಸ್ಟ್‌ ಪಂದ್ಯದ ಬಳಿಕ ಮಾಜಿ ನಾಯಕ ಕೇನ್‌ ವಿಲಿಯಮ್ಸನ್‌ (Kane Williamson) ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಅಂದ ಹಾಗೆ 34ರ ಪ್ರಾಯದ ಬ್ಯಾಟ್ಸ್‌ಮನ್‌ 2024ರಿಂದ ಇಲ್ಲಿಯವರೆಗೂ ಎರಡು ಟೆಸ್ಟ್‌ ಪಂದ್ಯಗಳಲ್ಲಿ ಮಾತ್ರ ಆಡಿದ್ದಾರೆ. ಜಿಂಬಾಬ್ವೆ ಪ್ರವಾಸಕ್ಕೆ ವಿಲಿಯಮ್ಸನ್‌ ಅವರು ಅಲಭ್ಯರಾಗಿದ್ದ ವೇಳೆ, ನಿಕೋಲ್ಸ್‌ ಆ ಎರಡು ಟೆಸ್ಟ್‌ ಪಂದ್ಯಗಳನ್ನು ಆಡಿದ್ದರು.

ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮ ವೃತ್ತಿಜೀವನದ ಬಹುಪಾಲು ಐದನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಿರುವ ಹೆನ್ರಿ ನಿಕೋಲ್ಸ್‌ ಅವರನ್ನು ಜಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ಮೂರನೇ ಕ್ರಮಾಂಕಕ್ಕೆ ಬಡ್ತಿ ನೀಡಲಾಗಿತ್ತು. ಇದೀಗ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿಯೂ ಅವರು ಅದೇ ಸ್ಥಾನದಲ್ಲಿ ಬ್ಯಾಟ್‌ ಮಾಡುವುದಾಗಿ ದೃಢಪಟ್ಟಿದೆ. ಮಂಗಳವಾರದ ತರಬೇತಿ ಅವಧಿಗೆ ಮುನ್ನ ಮಾತನಾಡಿದ ನ್ಯೂಜಿಲೆಂಡ್ ನಾಯಕ ಟಾಮ್‌ ಲೇಥಮ್,‌ ಹೆನ್ರಿ ನಿಕೋಲ್ಸ್ ಅವರನ್ನು ಮತ್ತೆ ತಂಡಕ್ಕೆ ಕರೆಸಿಕೊಳ್ಳುವುದು ಅವರ ದೇಶಿ ಕ್ರಿಕೆಟ್‌ನಲ್ಲಿನ ಅದ್ಭುತ ಪ್ರದರ್ಶನಕ್ಕೆ ನೀಡಿರುವ ಪ್ರತಿಫಲ ಎಂದು ಹೇಳಿದರು.

ENG vs NZ: ಎರಡನೇ ಟೆಸ್ಟ್‌ ಪಂದ್ಯಕ್ಕೆ ಇಂಗ್ಲೆಂಡ್‌ ಪ್ಲೇಯಿಂಗ್‌ XI ಪ್ರಕಟ, ಜೋಫ್ರಾ ಆರ್ಚರ್‌ ಕಮ್‌ಬ್ಯಾಕ್‌!

"ಅವರು ಸಾಕಷ್ಟು ಅಂತಾರಾಷ್ಟ್ರೀಯ ಅನುಭವ ಹೊಂದಿರುವ ಆಟಗಾರ. ಕಳೆದ ಎರಡು ವರ್ಷಗಳಿಂದ ತಂಡದ ಹೊರಗಿದ್ದರೂ, ದೇಶಿ ಕ್ರಿಕೆಟ್‌ನಲ್ಲಿ ನಿರಂತರವಾಗಿ ರನ್‌ ಹೊಳೆ ಹರಿಸುವ ಮೂಲಕ ಮತ್ತೆ ರಾಷ್ಟ್ರೀಯ ತಂಡಕ್ಕೆ ಮರಳುವಂತೆ ತಮ್ಮ ಅರ್ಹತೆಯನ್ನು ಸಾಬೀತುಪಡಿಸಿದ್ದಾರೆ. ತವರಿನಲ್ಲಿ ಮೂರನೇ ಕ್ರಮಾಂಕದಲ್ಲಿ ಉತ್ತಮ ಪ್ರದರ್ಶನ ನೀಡಿರುವ ಕಾರಣ, ಇದೀಗ ಅದೇ ಪಾತ್ರದಲ್ಲಿ ರಾಷ್ಟ್ರೀಯ ತಂಡಕ್ಕೆ ಮರಳಿರುವುದು ಅವರಿಗೆ ಅತ್ಯಂತ ರೋಚಕ ಅವಕಾಶವಾಗಿದೆ," ಎಂದು ನ್ಯೂಜಿಲೆಂಡ್ ನಾಯಕ ಟಾಮ್‌ ಲೇಥಮ್‌ ತಿಳಿಸಿದ್ದಾರೆ.

"ತಮ್ಮ ವೃತ್ತಿಜೀವನದ ಬಹುಪಾಲು ಅವಧಿಯಲ್ಲಿ ಹೆನ್ರಿ ನಿಕೋಲ್ಸ್‌ ನಾಲ್ಕನೇ ಅಥವಾ ಐದನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಿದ್ದಾರೆ. ಆದರೆ ಕ್ಯಾಂಟರ್ಬರಿಗಾಗಿ ದೇಶೀಯ ಕ್ರಿಕೆಟ್ ಆಡಿದಾಗ ಅವರು ಸಾಮಾನ್ಯವಾಗಿ ಮೂರನೇ ಅಥವಾ ನಾಲ್ಕನೇ ಕ್ರಮಾಂಕದಲ್ಲೇ ಬ್ಯಾಟಿಂಗ್ ಮಾಡುತ್ತಿದ್ದರು. ಹೆನ್ರಿಯ ವಿಶೇಷತೆ ಎಂದರೆ, ಅವರು ಯಾವ ಪರಿಸ್ಥಿತಿಗೂ ಸುಲಭವಾಗಿ ಹೊಂದಿಕೊಳ್ಳಬಲ್ಲರು. ಪಂದ್ಯದ ಬೇಡಿಕೆಗೆ ಅನುಗುಣವಾಗಿ ತಮ್ಮ ಆಟವನ್ನು ಬದಲಾಯಿಸುವ ಸಾಮರ್ಥ್ಯ ಅವರಲ್ಲಿದೆ. ಆದ್ದರಿಂದ ಟೆಸ್ಟ್ ಕ್ರಿಕೆಟ್‌ನಲ್ಲಿ ಹೊಸ ಪಾತ್ರವನ್ನು ನಿರ್ವಹಿಸಲು ಇದು ಅವರಿಗೆ ಅತ್ಯಂತ ಉತ್ತಮ ಮತ್ತು ಉತ್ಸಾಹಭರಿತ ಅವಕಾಶವಾಗಿದೆ," ಎಂದು ಅವರು ಹೇಳಿದ್ದಾರೆ.



ಮೂರನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಲು ವಿಲ್‌ ಯಂಗ್ ಉತ್ತಮ ಆಯ್ಕೆಯಾಗಿದ್ದರು. ಏಕೆಂದರೆ ಕಳೆದ ವರ್ಷ ಭಾರತ ವಿರುದ್ಧ ನ್ಯೂಜಿಲೆಂಡ್ ದಾಖಲಿಸಿದ್ದ ಐತಿಹಾಸಿಕ ಸರಣಿ ಜಯದಲ್ಲಿ ವಿಲಿಯಮ್ಸನ್‌ ಅನುಪಸ್ಥಿತಿಯಲ್ಲಿ ಯಂಗ್ ಮೂರನೇ ಕ್ರಮಾಂಕದಲ್ಲಿ ಅತ್ಯುತ್ತಮ ಪ್ರದರ್ಶನವನ್ನು ತೋರಿದ್ದರು. ಆದರೆ ಇತ್ತೀಚಿನ ಅವಧಿಯಲ್ಲಿ ಅವರ ಫಾರ್ಮ್ ಕುಸಿದಿದ್ದು, ಅವರು ಇತ್ತೀಚೆಗಷ್ಟೇ ನ್ಯೂಜಿಲೆಂಡ್‌ನಿಂದ ಇಂಗ್ಲೆಂಡ್‌ಗೆ ಮರಳಿದ್ದರು.

ಕೇನ್‌ ವಿಲಿಯಮ್ಸನ್‌ ಹಠಾತ್‌ ನಿವೃತ್ತಿ ಘೋಷಿಸಿದ ಬಗ್ಗೆ ಪ್ರತಿಕ್ರಿಯಿಸಿ, "ನಿಸ್ಸಂದೇಹವಾಗಿ ಅದು ನನಗೆ ಬೇಸರ ತಂದಿತ್ತು. ಕೇನ್ ನಮ್ಮ ತಂಡದ ಅತ್ಯಂತ ಪ್ರಮುಖ ಆಟಗಾರರಲ್ಲಿ ಒಬ್ಬರು. ಆದರೆ ಕಳೆದ ಎರಡು ವರ್ಷಗಳಿಂದ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿನ ತಮ್ಮ ಬದ್ಧತೆಗಳನ್ನು ಹಂತ ಹಂತವಾಗಿ ಕಡಿಮೆ ಮಾಡುತ್ತಾ ಬಂದಿರುವುದರಿಂದ, ಈ ನಿರ್ಧಾರ ಸಂಪೂರ್ಣ ಅಚ್ಚರಿಯ ವಿಷಯವಾಗಿರಲಿಲ್ಲ," ಎಂದು ಟಾಮ್‌ ಲೇಥಮ್‌ ಹೇಳಿದ್ದಾರೆ.