ವೃದ್ದಾಶ್ರಮದಿಂದ ಭಾವನಾತ್ಮಕ ವಿಡಿಯೊ ಹಂಚಿಕೊಂಡ ಸಚಿನ್ ಬಾಲ್ಯದ ಗೆಳೆಯ ವಿನೋದ್ ಕಾಂಬ್ಳಿ!
ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ವಿನೋದ್ ಕಾಂಬ್ಳಿ ಭಾವನಾತ್ಮಕ ವಿಡಿಯೊವೊಂದನ್ನು ಹಂಚಿಕೊಂಡಿದ್ದಾರೆ. ವೃದ್ಧರ ಆರೈಕೆ ಕೇಂದ್ರದಲ್ಲಿ ಅವರು ಮಾತನಾಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೊ ನೋಡಿದ ಅಭಿಮಾನಿಗಳು ಮಾಜಿ ಆಟಗಾರನ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ವೃದ್ದಾಶ್ರಮ ಸೇರಿದ ವಿನೋದ್ ಕಾಂಬ್ಳಿ. -
ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ಬ್ಯಾಟ್ಸ್‌ಮನ್ ವಿನೋದ್ ಕಾಂಬ್ಳಿ (Vindo kambli) ಅವರು ವೃದ್ಧರ ಆರೈಕೆ ಕೇಂದ್ರದಲ್ಲಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳಲ್ಲಿ ಅವರ ಆರೋಗ್ಯದ ಬಗ್ಗೆ ಕಳವಳ ಮೂಡಿಸಿದೆ. ಕಾಂಬ್ಳಿ ಅವರು ಕಳೆದ ಕೆಲ ವರ್ಷಗಳಿಂದ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. 2024ರ ಡಿಸೆಂಬರ್‌ನಲ್ಲಿ ಮೂತ್ರನಾಳದ ಸೋಂಕು ಹಾಗೂ ಕಡಿಮೆ ರಕ್ತದೊತ್ತಡದ ಕಾರಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಈ ಹಿಂದೆ ಸಂಭವಿಸಿದ್ದ ಮೆದುಳಿನ ಪಾರ್ಶ್ವವಾಯುವಿಗೆ ಸಂಬಂಧಿಸಿದಂತೆ ಅವರ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿರುವುದನ್ನು ವೈದ್ಯರು ಪತ್ತೆಹಚ್ಚಿದ್ದರು. ಸುಮಾರು ಒಂದು ತಿಂಗಳ ಬಳಿಕ ಆಸ್ಪತ್ರೆಯಿಂದ ಬಿಡುಗಡೆಯಾದರೂ, ಕಾಂಬ್ಳಿ ಅವರು ಸರಿಯಾಗಿ ನಡೆಯಲು ಪರದಾಡುತ್ತಿರುವ ವಿಡಿಯೊಗಳು ಆಗಾಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದವು.
ಇದೀಗ ವೈರಲ್ ಆಗಿರುವ ವಿಡಿಯೊದಲ್ಲಿ ವಿನೋದ್ ಕಾಂಬ್ಳಿ ಅವರು ತಾವು ಇರುವ ವೃದ್ದಾಶ್ರಮದಲ್ಲಿನ ಸೌಲಭ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಾತನಾಡುವಾಗ ಇನ್ನೂ ಕೆಲವು ತೊಂದರೆಗಳು ಕಂಡುಬಂದರೂ, ಸುತ್ತಮುತ್ತಲಿನ ವಾತಾವರಣದ ಬಗ್ಗೆ ಅವರು ಸಂತೋಷದಿಂದಿರುವುದು ವಿಡಿಯೊದಲ್ಲಿ ಕಾಣಿಸಿಕೊಂಡಿದೆ.
“ನಾನು ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದೇನೆ. ಇಲ್ಲಿ ದೊರೆಯುತ್ತಿರುವ ಸೌಲಭ್ಯಗಳು ಅತ್ಯುತ್ತಮವಾಗಿವೆ ಎಂದು ಹೇಳಲು ಬಯಸುತ್ತೇನೆ. ಇಲ್ಲಿ ಇರುವಾಗ ನಾನು ಮನೆಯಿಂದ ದೂರವಿದ್ದೇನೆ ಎಂಬ ಭಾವನೆ ಎಂದಿಗೂ ಮೂಡುವುದಿಲ್ಲ. ಇಲ್ಲಿನ ಜನರಿಂದ ನನಗೆ ಸಾಕಷ್ಟು ಪ್ರೀತಿ ಮತ್ತು ಗೌರವ ಸಿಗುತ್ತಿದೆ,” ಎಂದು ವಿನೋದ್ ಕಾಂಬ್ಳಿ ವಿಡಿಯೊದಲ್ಲಿ ಹೇಳಿದ್ದಾರೆ.
ʻಬ್ರೈನ್ ಸ್ಟ್ರೋಕ್ ಅಪಾಯಕ್ಕೆ ಸಿಲುಕಿದ ವಿನೋದ್ ಕಾಂಬ್ಳಿʼ: ಶಾಕಿಂಗ್ ಮಾಹಿತಿ ನೀಡಿದ ಸ್ನೇಹಿತ ಮಾರ್ಕಸ್ ಕೌಟೊ!
ಧೂಮಪಾನ, ಮದ್ಯಪಾನದಿಂದ ದೂರ
ಕಾಂಬ್ಳಿ ಅವರು ಮದ್ಯಪಾನವನ್ನು ತ್ಯಜಿಸಿದ್ದಾರೆ. ಆದರೆ ಅವರ ನೆನಪಿನ ಶಕ್ತಿ ಸಂಪೂರ್ಣವಾಗಿ ಸಹಕರಿಸದ ಕಾರಣ, ಕೆಲವೊಮ್ಮೆ ಧೂಮಪಾನ ಮಾಡಬಾರದು ಎಂಬುದನ್ನೇ ಮರೆತುಬಿಡುತ್ತಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದು ಅವರ ಆರೋಗ್ಯಕ್ಕೆ ಮತ್ತಷ್ಟು ಅಪಾಯವನ್ನು ಉಂಟುಮಾಡುವ ಸಾಧ್ಯತೆಯಿದೆ.
ಕಾಂಬ್ಳಿ ಅವರ ಹಲವು ಆರೋಗ್ಯ ಸಮಸ್ಯೆಗಳು ಧೂಮಪಾನ ಮತ್ತು ಮದ್ಯಪಾನದ ಅಭ್ಯಾಸಗಳಿಗೆ ಸಂಬಂಧಿಸಿದ್ದವು ಎಂದು ಹೇಳಲಾಗಿದೆ. ಆದರೆ ಸ್ನೇಹಿತರು ಮತ್ತು ಕುಟುಂಬದವರ ಬೆಂಬಲದಿಂದ ಅವರು ಈ ಅಭ್ಯಾಸಗಳಿಂದ ದೂರವಾಗಲು ಸಾಧ್ಯವಾಯಿತು. ಕ್ರಿಕೆಟ್ ಸಮುದಾಯವೂ ಅವರ ಚೇತರಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ.
Vinod Kambli’s latest video, he is presently at an elderly care centre in Thane.
— Abhishek ✨ (@ImAbhishek7_) September 25, 2026
Praying for his recovery soon. pic.twitter.com/6k1plg1aCl
ಕ್ರಿಕೆಟಿಗರಿಂದ ಆರ್ಥಿಕ ನೆರವು
ವಿನೋದ್ ಕಾಂಬ್ಳಿ ಅವರ ಆಪ್ತ ಸ್ನೇಹಿತ ಹಾಗೂ ಮಾಜಿ ಬಿಸಿಸಿಐ ಅಂಪೈರ್ ಮಾರ್ಕಸ್ ಕೌಟೊ ಅವರು, ಕೆಲವು ಕ್ರಿಕೆಟಿಗರು ಕಾಂಬ್ಳಿಯ ಕಲ್ಯಾಣಕ್ಕಾಗಿ ರಹಸ್ಯವಾಗಿ ಆರ್ಥಿಕ ನೆರವು ನೀಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
“ನಾನು ಅವರ ಸ್ನೇಹಿತರನ್ನು, ಹೆಚ್ಚಾಗಿ ಕ್ರಿಕೆಟಿಗರನ್ನು ಒಳಗೊಂಡ ವಾಟ್ಸಾಪ್ ಗ್ರೂಪ್ ರಚಿಸಿದ್ದೇನೆ. ಯಾರ ಹೆಸರನ್ನೂ ಬಹಿರಂಗಪಡಿಸದೆ ಅವರು ಆರ್ಥಿಕವಾಗಿ ಸಾಕಷ್ಟು ನೆರವು ನೀಡುತ್ತಿದ್ದಾರೆ. ಅವರ ನೆನಪಿನ ಶಕ್ತಿ ಉತ್ತಮವಾಗಿಲ್ಲ. ಆದರೆ ಕಳೆದ ಆರು ತಿಂಗಳಲ್ಲಿ ಅದು ಮತ್ತಷ್ಟು ಕುಸಿದಿಲ್ಲ. ಅವರಿಗೆ ಹೆಚ್ಚಿನ ವಿಷಯಗಳು ನೆನಪಿರುವುದಿಲ್ಲ. ಆದರೆ ಯಾವುದಾದರೂ ವಿಷಯ ನೆನಪಿಗೆ ಬಂದರೆ ಅದನ್ನು ನೆನಪಿಸಿಕೊಳ್ಳುತ್ತಾರೆ. ಇಲ್ಲದಿದ್ದರೆ ಅವರಿಗೆ ಕಷ್ಟವಾಗುತ್ತದೆ,” ಎಂದು ಅವರು ಹಿಂದೂಸ್ಥಾನ್ ಟೈಮ್ಸ್‌ಗೆ ತಿಳಿಸಿದ್ದಾರೆ.
“ವಿನೋದ್ ಅವರ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದೆ. ಆರಂಭದಲ್ಲೇ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳದ ಕಾರಣ ಅದನ್ನು ತೆಗೆದುಹಾಕಲು ಸಾಧ್ಯವಾಗುತ್ತಿಲ್ಲ. ಅವರಿಗೆ ಮೆದುಳಿನ ಪಾರ್ಶ್ವವಾಯು ಸಂಭವಿಸುವ ಸಾಧ್ಯತೆಯಿದೆ ಎಂದು ವೈದ್ಯರು ತಿಳಿಸಿದ್ದಾರೆ. ಆದರೆ ಅವರ ಮನೋಬಲದಿಂದ ಸಾಧ್ಯವಾದಷ್ಟು ಚೇತರಿಸಿಕೊಳ್ಳಲು ಅವರು ಪ್ರಯತ್ನಿಸುತ್ತಿದ್ದಾರೆ,” ಎಂದು ಮಾರ್ಕಸ್ ಕೌಟೊ ಹೇಳಿದ್ದಾರೆ.