ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಶುಭದೀಪ್‌ ಘೋಷ್‌ ಭಾರತ ಕ್ರಿಕೆಟ್‌ ತಂಡಕ್ಕೆ ನೂತನ ಫೀಲ್ಡಿಂಗ್‌ ಕೋಚ್‌?

ಭಾರತ ಕ್ರಿಕೆಟ್ ತಂಡದ ಸಹಾಯಕ ಕೋಚ್ ರಿಯಾನ್ ಟೆನ್ ಡಶ್ಕಾಟೆ ಹಾಗೂ ಫೀಲ್ಡಿಂಗ್ ಕೋಚ್ ಟಿ ದಿಲೀಪ್ ಅವರ ಅಧಿಕಾರಾವಧಿ ಪೂರ್ಣಗೊಂಡಿದೆ. ಈ ಹಿನ್ನೆಲೆಯಲ್ಲಿ ಅವರ ಸ್ಥಾನಗಳಿಗೆ ಸೂಕ್ತ ಅಭ್ಯರ್ಥಿಗಳನ್ನು ಕರೆ ತರಲು ಬಿಸಿಸಿಐ ಪ್ರಯತ್ನ ನಡೆಸುತ್ತಿದೆ. ಇತ್ತೀಚಿನ ವರದಿಗಳ ಪ್ರಕಾರ, ಶುಭದೀಪ್‌ ಘೋಷ್‌ ಅವರನ್ನು ಫೀಲ್ಡಿಂಗ್‌ ಕೋಚ್‌ ಆಗಿ ನೇಮಿಸಲಾಗಿದೆ.

ಭಾರತ ತಂಡಕ್ಕೆ ಶುಭದೀಪ್‌ ಘೋಷ್‌ ಫೀಲ್ಡಿಂಗ್‌ ಕೋಚ್‌.

ನವದೆಹಲಿ: ಭಾರತ ಪುರುಷರ ಕ್ರಿಕೆಟ್ (Indian Cricket team) ತಂಡದ ಸಹಾಯಕ ಕೋಚ್ ರಿಯಾನ್ ಟೆನ್ ಡಶ್ಕಾಟೆ ಮತ್ತು ಫೀಲ್ಡಿಂಗ್ ಕೋಚ್ ಟಿ ದಿಲೀಪ್ ಅವರ ಒಪ್ಪಂದದ ಅವಧಿ ಮುಕ್ತಾಯಗೊಂಡಿದೆ. ಈ ಹಿನ್ನೆಲೆಯಲ್ಲಿ ಅವರ ಒಪ್ಪಂದವನ್ನು ವಿಸ್ತರಿಸದಿರಲು ಬಿಸಿಸಿಐ ನಿರ್ಧರಿಸಿದೆ ಎಂದು ಮಂಡಳಿಯ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರು ಮಂಗಳವಾರ ಪಿಟಿಐಗೆ ತಿಳಿಸಿದ್ದಾರೆ. ಶ್ರೀಲಂಕಾ ಪ್ರವಾಸಕ್ಕೂ ಮುನ್ನ ಹೊಸ ಫೀಲ್ಡಿಂಗ್ ಕೋಚ್ ಹೆಸರನ್ನು ಬಿಸಿಸಿಐ ಶೀಘ್ರದಲ್ಲೇ ಪ್ರಕಟಿಸುವ ಸಾಧ್ಯತೆಯಿದೆ. ಅದರಂತೆ ಇದೀಗ ವರದಿಗಳ ಪ್ರಕಾರ, ಶುಭದೀಪ್‌ ಘೋಷ್‌ (Shubhdeep Ghosh) ಅವರನ್ನು ಫೀಲ್ಡಿಂಗ್‌ ಕೋಚ್‌ ಆಗಿ ನೇಮಸಲಾಗಿದೆ ಎಂದು ವರದಿಯಾಗಿದೆ.

ಪ್ರಸ್ತುತ ಎರಡು-ಮೂರು ಅಭ್ಯರ್ಥಿಗಳ ಹೆಸರಿನ ಕುರಿತು ಚರ್ಚೆ ನಡೆಯುತ್ತಿದೆ ಎಂದು ಸೈಕಿಯಾ ತಿಳಿಸಿದ್ದಾರೆ. ಮೂಲಗಳ ಪ್ರಕಾರ, ಭಾರತ ಮಹಿಳಾ ತಂಡ ಮತ್ತು ಭಾರತ 'ಎ' ತಂಡದೊಂದಿಗೆ ಕೆಲಸ ಮಾಡಿರುವ ಶುಭದೀಪ್ ಘೋಷ್ ಈ ಹುದ್ದೆಗೆ ಪ್ರಮುಖ ಅಭ್ಯರ್ಥಿಯಾಗಿದ್ದಾರೆ. ಅವರು ಟಿ ದಿಲೀಪ್ ಮತ್ತು ರಿಯಾನ್ ಟೆನ್ ಡಶ್ಕಾಟೆ ಅವರ ಸ್ಥಾನವನ್ನು ತುಂಬುವ ಸಾಧ್ಯತೆ ಇದೆ.

ಪಿಟಿಐಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಸೈಕಿಯಾ, "ಸಹಾಯಕ ಕೋಚ್ ರಿಯಾನ್ ಟೆನ್ ಡಶ್ಕಾಟೆ ಅವರ ಭಾರತೀಯ ಪುರುಷರ ತಂಡದೊಂದಿಗಿನ ಎರಡು ವರ್ಷಗಳ ಒಪ್ಪಂದ ಜೂನ್ 10ರಂದು ಮುಕ್ತಾಯಗೊಂಡಿತ್ತು. ಒಂದು ವರ್ಷದ ವಿಸ್ತರಣೆ ಪಡೆದಿದ್ದ ಫೀಲ್ಡಿಂಗ್ ಕೋಚ್ ಟಿ ದಿಲೀಪ್ ಅವರ ಒಪ್ಪಂದವೂ ಜೂನ್ 8ರಂದು ಕೊನೆಗೊಂಡಿದೆ," ಎಂದು ತಿಳಿಸಿದ್ದಾರೆ.

ಭಾರತ ಕ್ರಿಕೆಟ್‌ ತಂಡ ಸಹಾಯಕ ಕೋಚ್‌ ಹುದ್ದೆಯಿಂದ ಕೆಳಗಿಳಿದ ರಯಾನ್‌ ಡಿ ಡಶ್ಕಾಟೆ!

ದೇವಜಿತ್ ಸೈಕಿಯಾ ಅವರ ಪ್ರಕಾರ, "ಬ್ರಿಟನ್ ಪ್ರವಾಸ ಮುಕ್ತಾಯವಾಗುವವರೆಗೆ ಬಿಸಿಸಿಐ ಇಬ್ಬರನ್ನೂ ತಂಡದೊಂದಿಗೇ ಮುಂದುವರಿಸಿತ್ತು. ಆದರೆ ಈಗ ಅವರ ಒಪ್ಪಂದವನ್ನು ಮತ್ತಷ್ಟು ವಿಸ್ತರಿಸುವುದಿಲ್ಲ. ಅವರ ಒಪ್ಪಂದದ ಅವಧಿಯೇ ಮಕ್ತಾಯಗೊಂಡಿರುವುದರಿಂದ, ರಾಜೀನಾಮೆ ಸ್ವೀಕರಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ," ಎಂದು ಹೇಳಿದ್ದಾರೆ.

ರಯಾನ್ ಟೆನ್ ಡಶ್ಕಾಟೆ ಕೂಡ ಸ್ವತಃ ತಮ್ಮ ಹುದ್ದೆಯಿಂದ ಹೊರಬರಲು ಬಯಸಿದ್ದರು ಎನ್ನಲಾಗಿದೆ. ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ಮನವಿಯ ಮೇರೆಗೆ ಅವರನ್ನು ಭಾರತ ತಂಡದ ಕೋಚಿಂಗ್ ಬಳಗಕ್ಕೆ ಸೇರಿಸಲಾಗಿತ್ತು. ಆ ಸಂದರ್ಭದಲ್ಲಿ ಅವರಿಗೆ ಫೀಲ್ಡಿಂಗ್ ಕೋಚ್ ಜವಾಬ್ದಾರಿ ನೀಡುವ ಭರವಸೆಯನ್ನೂ ನೀಡಲಾಗಿತ್ತು. ಆದರೆ ಕಳೆದ ಎರಡು ವರ್ಷಗಳಲ್ಲಿ ಅವರಿಗೆ ಸ್ಪಷ್ಟವಾದ ಜವಾಬ್ದಾರಿ ಅಥವಾ ನಿರ್ದಿಷ್ಟ ಪಾತ್ರವನ್ನು ನೀಡಲಾಗಿರಲಿಲ್ಲ.

ಯುವ ಬ್ಯಾಟ್ಸ್‌ಮನ್‌ ವೈಭವ್‌ ಸೂರ್ಯವಂಶಿಯನ್ನು ಡಾನ್‌ ಬ್ರಾಡ್ಮನ್‌ಗೆ ಹೋಲಿಸಿದ ರಾಬಿನ್‌ ಉತ್ತಪ್ಪ!

ಇನ್ನೊಂದೆಡೆ, ಟಿ. ದಿಲೀಪ್ ಅವರಿಗೆ 2025ರ ಇಂಗ್ಲೆಂಡ್ ಟೆಸ್ಟ್ ಸರಣಿಗೆ ಮುನ್ನ ಹಿರಿಯ ಆಟಗಾರರೊಬ್ಬರ ಮನವಿಯ ಮೇರೆಗೆ ಒಂದು ವರ್ಷದ ಒಪ್ಪಂದ ವಿಸ್ತರಣೆ ನೀಡಲಾಗಿತ್ತು. ಆದರೆ ಅವರ ಕಾರ್ಯಕ್ಷಮತೆಯಿಂದ ತಂಡದ ಆಡಳಿತ ಮಂಡಳಿ ಸಂಪೂರ್ಣ ತೃಪ್ತರಾಗಿರಲಿಲ್ಲ ಎಂದು ವರದಿಯಾಗಿದೆ.

ಕಳಪೆ ಫೀಲ್ಡಿಂಗ್‌

ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಸೀಮಿತ ಓವರ್‌ಗಳ ಸರಣಿಗಳಲ್ಲಿ ಭಾರತ ತಂಡದ ಕಳಪೆ ಫೀಲ್ಡಿಂಗ್ ಪ್ರದರ್ಶನದ ಬಳಿಕ, ಫೀಲ್ಡಿಂಗ್ ಕೋಚ್ ಟಿ ದಿಲೀಪ್ ಅವರ ಒಪ್ಪಂದವನ್ನು ವಿಸ್ತರಿಸುವ ಸಾಧ್ಯತೆ ಬಹುತೇಕ ಕೊನೆಗೊಂಡಿತ್ತು.

ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಯಾವುದೇ ಅಭ್ಯರ್ಥಿಯ ಹೆಸರನ್ನು ಬಹಿರಂಗಪಡಿಸದೆ, "ಪ್ರಸ್ತುತ ಎರಡು-ಮೂರು ಅಭ್ಯರ್ಥಿಗಳೊಂದಿಗೆ ಮಾತುಕತೆ ನಡೆಯುತ್ತಿದೆ. ಮುಂದಿನ ಒಂದು ಅಥವಾ ಎರಡು ದಿನಗಳಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುವ ನಿರೀಕ್ಷೆಯಿದೆ. ಶ್ರೀಲಂಕಾ ಪ್ರವಾಸದಲ್ಲಿ ಭಾರತ ತಂಡದೊಂದಿಗೆ ಹೊಸ ಫೀಲ್ಡಿಂಗ್ ಕೋಚ್ ಕಾರ್ಯನಿರ್ವಹಿಸಲಿದ್ದಾರೆ," ಎಂದು ತಿಳಿಸಿದ್ದಾರೆ.

ʻಒಂದು ವರ್ಷ ಪಾಲೋ ಮಾಡಿದೆʼ: ವಿರಾಟ್‌ ಕೊಹ್ಲಿ ಲೈಫ್‌ ಸ್ಟೈಲ್‌ ಬಗ್ಗೆ ಸಂಜು ಸ್ಯಾಮ್ಸನ್‌ ಹೇಳಿಕೆ!

ಮೂಲಗಳ ಪ್ರಕಾರ, ಅಸ್ಸಾಂ ಮೂಲದ ಶುಭದೀಪ್ ಘೋಷ್ ಈ ಹುದ್ದೆಗೆ ಪ್ರಮುಖ ಸ್ಪರ್ಧಿಯಾಗಿದ್ದಾರೆ. ರಾಹುಲ್ ದ್ರಾವಿಡ್ ಅವರು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ಮುಖ್ಯಸ್ಥರಾಗಿದ್ದ ಅವಧಿಯಿಂದಲೇ ಕಳೆದ 6-7 ವರ್ಷಗಳಿಂದ ಶುಭದೀಪ್ ಘೋಷ್ ಭಾರತೀಯ ಕ್ರಿಕೆಟ್ ವ್ಯವಸ್ಥೆಯ ಭಾಗವಾಗಿದ್ದು, ಹೊಸ ಫೀಲ್ಡಿಂಗ್ ಕೋಚ್ ಹುದ್ದೆಗೆ ಅವರೇ ಅತ್ಯಂತ ಬಲಿಷ್ಠ ಅಭ್ಯರ್ಥಿ ಎಂದು ಪರಿಗಣಿಸಲಾಗಿದೆ.