ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಭಾರತ ಟೆಸ್ಟ್‌ ತಂಡದ ಕೋಚ್‌ ಆಗಿ ಗೌತಮ್‌ ಗಂಭೀರ್‌ ವಿಫಲ: ದಿನೇಶ್‌ ಕಾರ್ತಿಕ್‌ ಕಳವಳ!

ಪ್ರತ್ಯೇಕ ಕೋಚಿಂಗ್ ವ್ಯವಸ್ಥೆ ಜಾರಿಯಲ್ಲಿದ್ದರೆ ಗೌತಮ್ ಗಂಭೀರ್ ಟೆಸ್ಟ್ ತಂಡದ ಕೋಚ್ ಆಗಿ ಹೆಚ್ಚಿನ ಒತ್ತಡ ಎದುರಿಸುತ್ತಿದ್ದರು ಎಂದು ದಿನೇಶ್ ಕಾರ್ತಿಕ್ ಹೇಳಿದ್ದಾರೆ. ವೈಟ್‌ಬಾಲ್ ಕ್ರಿಕೆಟ್‌ನಲ್ಲಿ ಗಂಭೀರ್ ಯಶಸ್ಸು ಕಂಡಿದ್ದರೂ, ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಕಳಪೆ ಪ್ರದರ್ಶನ ಸವಾಲಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಗೌತಮ್‌ ಗಂಭೀರ್‌ ಟೆಸ್ಟ್‌ ಕೋಚಿಂಗ್‌ ಬಗ್ಗೆ ದಿನೇಶ್‌ ಕಾರ್ತಿಕ್‌ ಟೀಕೆ.

ನವದೆಹಲಿ: ಟೀಮ್ ಇಂಡಿಯಾದ ಮುಖ್ಯ ಕೋಚ್ ಗೌತಮ್ ಗಂಭೀರ್ (Gautam Gambhir) ಅವರ ಟೆಸ್ಟ್ ಕ್ರಿಕೆಟ್‌ನ ಸಾಧನೆ ಕುರಿತು ಭಾರತದ ಮಾಜಿ ವಿಕೆಟ್‌ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್ (Dinesh Karthik) ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿ ಪ್ರತ್ಯೇಕ ಕೋಚಿಂಗ್ ವ್ಯವಸ್ಥೆ ಜಾರಿಯಲ್ಲಿದ್ದರೆ, ಟೆಸ್ಟ್ ತಂಡದ ಕೋಚ್ ಆಗಿ ಗಂಭೀರ್ ಸಾಕಷ್ಟು ಒತ್ತಡ ಎದುರಿಸಬೇಕಾಗುತ್ತಿತ್ತು ಎಂದು ಕಾರ್ತಿಕ್ ಹೇಳಿದ್ದಾರೆ.

ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಭಾರತದ ತಂಡದ ಆಯ್ಕೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಅನುಭವಿ ಆಟಗಾರರಾದ ಮೊಹಮ್ಮದ್ ಸಿರಾಜ್ ಮತ್ತು ರವೀಂದ್ರ ಜಡೇಜಾ ಮೊದಲ ಎರಡು ಟೆಸ್ಟ್ ಪಂದ್ಯಗಳಲ್ಲೂ ತಂಡದಲ್ಲಿ ಸ್ಥಾನ ಪಡೆದಿಲ್ಲ. ಕ್ರೈಸ್ಟ್‌ಚರ್ಚ್ ಟೆಸ್ಟ್‌ನಲ್ಲಿ ಆಕಾಶ್ ದೀಪ್ ಕನ್ಕಷನ್‌ನಿಂದಾಗಿ ಪಂದ್ಯದಿಂದ ಹೊರಬಿದ್ದಾಗ, ಅವರ ಬದಲಿಗೆ ಸಿರಾಜ್ ಅವರನ್ನು ಆಯ್ಕೆ ಮಾಡದೆ ಪ್ರಸಿಧ್‌ ಕೃಷ್ಣ ಅವರನ್ನು ಕನ್ಕಷನ್ ಬದಲಿಯಾಗಿ ಕಣಕ್ಕಿಳಿಸಿದ್ದು ಕೂಡ ಟೀಕೆಗೆ ಕಾರಣವಾಗಿದೆ.

2024ರಲ್ಲಿ ನ್ಯೂಜಿಲೆಂಡ್ ವಿರುದ್ಧ ಹಾಗೂ 2025ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ತವರಿನಲ್ಲಿ ನಡೆದಿದ್ದ ಟೆಸ್ಟ್ ಸರಣಿಗಳಲ್ಲಿ ಭಾರತ ವೈಟ್‌ವಾಶ್ ಸೋಲು ಅನುಭವಿಸಿತ್ತು. ಈ ಸೋಲುಗಳ ಬಳಿಕ ಗಂಭೀರ್ ಅವರ ಕೋಚಿಂಗ್ ಮತ್ತು ತಂಡದ ಆಯ್ಕೆ ಕುರಿತು ಪ್ರಶ್ನೆಗಳು ಹೆಚ್ಚಾಗಿವೆ.

IND v NZ: ಅರ್ಧಶತಕದ ಬಳಿಕ ಧ್ರುವ್ ಜುರೆಲ್ ಸೆಲ್ಯೂಟ್ ಮಾಡೋದ್ಯಾಕೆ? ಇಲ್ಲಿದೆ ಬಲವಾದ ಕಾರಣ!

ಈ ಕುರಿತು ಕ್ರಿಕ್‌ಬಜ್‌ಗೆ ಮಾತನಾಡಿದ ದಿನೇಶ್ ಕಾರ್ತಿಕ್, “ಭಾರತೀಯ ಕ್ರಿಕೆಟ್‌ನಲ್ಲಿ ಪ್ರತ್ಯೇಕ ಕೋಚಿಂಗ್ ವ್ಯವಸ್ಥೆಯನ್ನು ಎಷ್ಟು ಆರಾಮವಾಗಿ ಸ್ವೀಕರಿಸಲಾಗುತ್ತದೆ ಎಂಬುದು ನನಗೆ ತಿಳಿದಿಲ್ಲ. ಅಂತಹ ವ್ಯವಸ್ಥೆ ಇದ್ದರೆ, ಟೆಸ್ಟ್ ತಂಡದ ಕೋಚ್ ಆಗಿ ಗೌತಮ್ ಗಂಭೀರ್ ಖಂಡಿತವಾಗಿಯೂ ಒತ್ತಡ ಎದುರಿಸುತ್ತಿದ್ದರು,” ಎಂದು ಹೇಳಿದ್ದಾರೆ.

ಆದರೆ ವೈಟ್‌ಬಾಲ್ ಕ್ರಿಕೆಟ್‌ನಲ್ಲಿ ಗಂಭೀರ್ ಸಾಧನೆಯನ್ನು ಕಾರ್ತಿಕ್ ಶ್ಲಾಘಿಸಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಭಾರತ ಟಿ20 ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ ಮತ್ತು ಏಷ್ಯಾಕಪ್‌ನಂತಹ ಪ್ರಮುಖ ಟೂರ್ನಿಗಳಲ್ಲಿ ಪ್ರಶಸ್ತಿ ಗೆದ್ದಿರುವುದನ್ನು ಉಲ್ಲೇಖಿಸಿದ್ದಾರೆ.

“ಗೌತಮ್ ಗಂಭೀರ್ ವೈಟ್‌ಬಾಲ್ ಕ್ರಿಕೆಟ್‌ನಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಪ್ರಮುಖ ಟೂರ್ನಿಗಳಲ್ಲಿ ಇತರ ಕೋಚ್‌ಗಳಷ್ಟೇ ಅಲ್ಲ, ಅವರಿಗಿಂತಲೂ ಹೆಚ್ಚಿನ ಯಶಸ್ಸು ಗಳಿಸಿದ್ದಾರೆ. ಆದರೆ ಟೆಸ್ಟ್ ಕ್ರಿಕೆಟ್‌ನಲ್ಲಿ ಅವರಿಗೆ ಅಷ್ಟೊಂದು ಯಶಸ್ಸು ಸಿಕ್ಕಿಲ್ಲ. ಕಳೆದ ಎರಡು ತವರಿನ ಟೆಸ್ಟ್ ಸರಣಿಗಳಲ್ಲಿ ಭಾರತ ವೈಟ್‌ವಾಶ್ ಸೋಲು ಅನುಭವಿಸಿದೆ,” ಎಂದು ಕಾರ್ತಿಕ್ ಅಭಿಪ್ರಾಯಪಟ್ಟಿದ್ದಾರೆ.

ಶತಕ ಬಾರಿಸಿದರೂ ಆಸ್ಟ್ರೇಲಿಯಾಗೆ ಸೋಲು, ಸೂರ್ಯಕುಮಾರ್‌ರ ಅನಗತ್ಯ ದಾಖಲೆ ಮುರಿದ ಮಿಚೆಲ್‌ ಮಾರ್ಷ್‌!

ಹಿರಿಯ ಆಟಗಾರರ ನಿರ್ಗಮನದಿಂದ ಸವಾಲು

ರವಿಶಾಸ್ತ್ರಿ ಮತ್ತು ರಾಹುಲ್ ದ್ರಾವಿಡ್ ಕೋಚ್ ಆಗಿದ್ದ ಅವಧಿಯಲ್ಲಿ ಭಾರತ 2021 ಮತ್ತು 2023ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ತಲುಪಿತ್ತು. ಆದರೆ ಗಂಭೀರ್ ಮಾರ್ಗದರ್ಶನದಲ್ಲಿ 2025ರ ಫೈನಲ್‌ಗೆ ಅರ್ಹತೆ ಪಡೆಯಲು ಭಾರತ ವಿಫಲವಾಗಿತ್ತು.

ಪ್ರಸ್ತುತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಭಾರತ ಶೇಕಡಾ 50ರ ಅಂಕಗಳೊಂದಿಗೆ ಹಿಂದುಳಿದಿದೆ. ದಕ್ಷಿಣ ಆಫ್ರಿಕಾ (77.78), ಆಸ್ಟ್ರೇಲಿಯಾ (69.23) ಮತ್ತು ನ್ಯೂಜಿಲೆಂಡ್ (66.67) ತಂಡಗಳು ಭಾರತಕ್ಕಿಂತ ಮುಂದಿವೆ. ವಿರಾಟ್ ಕೊಹ್ಲಿ ಮತ್ತು ಆರ್. ಅಶ್ವಿನ್ ಅವರಂತಹ ಹಿರಿಯ ಆಟಗಾರರು ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿಯಾಗಿರುವುದು ತಂಡದ ಮೇಲೆ ಪರಿಣಾಮ ಬೀರಿದೆ ಎಂದು ಕಾರ್ತಿಕ್ ಹೇಳಿದ್ದಾರೆ.

“ಭಾರತ ಕೆಲವು ಟೆಸ್ಟ್ ಸರಣಿಗಳನ್ನು ಸೋತಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿನ ಪ್ರದರ್ಶನವೂ ಕುಸಿದಿದೆ. ವಿರಾಟ್ ಕೊಹ್ಲಿ ಮತ್ತು ಆರ್. ಅಶ್ವಿನ್ ಅವರಂತಹ ದೊಡ್ಡ ಆಟಗಾರರು ತಂಡದಲ್ಲಿ ಇಲ್ಲದಿರುವುದನ್ನು ಇದಕ್ಕೆ ಕಾರಣವೆಂದು ಹೇಳಬಹುದು. ಇದು ಯುವ ಆಟಗಾರರನ್ನು ಒಳಗೊಂಡಿರುವ ಪರಿವರ್ತನೆಯ ಹಂತದಲ್ಲಿರುವ ತಂಡ. ಸವಾಲುಗಳು ಸ್ಪಷ್ಟವಾಗಿವೆ,” ಎಂದು ಕಾರ್ತಿಕ್ ತಿಳಿಸಿದ್ದಾರೆ.

ʻಮೊದಲು ನಿಮ್ಮಿಂದ ಆರಂಭವಾಗಿದ್ದು, ಆದರೆ ನಾವು ಮುಗಿಸುತ್ತೇವೆʼ: ಭಾರತಕ್ಕೆ ಕೈಲ್‌ ಜೇಮಿಸನ್‌ ವಾರ್ನಿಂಗ್‌!

ನ್ಯೂಜಿಲೆಂಡ್ ವಿರುದ್ಧದ ಹ್ಯಾಗ್ಲಿ ಓವಲ್ ಟೆಸ್ಟ್‌ನಲ್ಲಿ ಭಾರತ ಸಂಕಷ್ಟದಲ್ಲಿದ್ದು, ನ್ಯೂಜಿಲೆಂಡ್ ಏಳು ವಿಕೆಟ್‌ಗಳು ಬಾಕಿ ಇರುವಂತೆ 243 ರನ್‌ಗಳ ಮುನ್ನಡೆ ಸಾಧಿಸಿತ್ತು. ಈ ಪಂದ್ಯದಲ್ಲಿ ಸೋಲು ಎದುರಾದರೆ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಸರಣಿಗೂ ಮುನ್ನ ಗಂಭೀರ್ ಮೇಲಿನ ಒತ್ತಡ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ ಪ್ರವೇಶದ ಭಾರತದ ಹಾದಿಯೂ ಕಠಿಣವಾಗಲಿದೆ.