ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಶತಕ ಬಾರಿಸಿದರೂ ಆಸ್ಟ್ರೇಲಿಯಾಗೆ ಸೋಲು, ಸೂರ್ಯಕುಮಾರ್‌ರ ಅನಗತ್ಯ ದಾಖಲೆ ಮುರಿದ ಮಿಚೆಲ್‌ ಮಾರ್ಷ್‌!

ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟಿ20ಐ ಪಂದ್ಯದಲ್ಲಿ ಮಿಚೆಲ್ ಮಾರ್ಷ್ 57 ಎಸೆತಗಳಲ್ಲಿ 119 ರನ್ ಸಿಡಿಸಿದರು. ಆ ಮೂಲಕ ಸೋಲಿನ ಪಂದ್ಯದಲ್ಲಿ ಗರಿಷ್ಠ ವೈಯಕ್ತಿಕ ರನ್ ಗಳಿಸಿದ ಸೂರ್ಯಕುಮಾರ್ ಯಾದವ್ ಅವರ ಅನಗತ್ಯ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಆದರೂ ಆಸ್ಟ್ರೇಲಿಯಾ 7 ರನ್‌ಗಳಿಂದ ಸೋಲು ಕಂಡಿತು. ಇಂಗ್ಲೆಂಡ್ ಸರಣಿ ಗೆದ್ದುಕೊಂಡಿತು.

ಸೂರ್ಯಕುಮಾರ್‌ ಯಾದವ್‌ರ ಅನಗತ್ಯ ದಾಖಲೆ ಮುರಿದ ಮಿಚೆಲ್‌ ಮಾರ್ಷ್‌!

ಸೂರ್ಯಕುಮಾರ್‌ ಯಾದವ್‌ರ ಅನಗತ್ಯ ದಾಖಲೆ ಮುರಿದ ಮಿಚೆಲ್‌ ಮಾರ್ಷ್‌. -

Profile
Ramesh Kote Nov 29, 2026 7:51 PM

ಸಿಡ್ನಿ: ಆಸ್ಟ್ರೇಲಿಯಾ ತಂಡದ ನಾಯಕ ಮಿಚೆಲ್ ಮಾರ್ಷ್ (Mitchell Marsh) ಇಂಗ್ಲೆಂಡ್ ವಿರುದ್ಧದ ಟಿ20ಐ ಪಂದ್ಯದಲ್ಲಿ (AUS vs ENG) ಸ್ಫೋಟಕ ಶತಕ ಸಿಡಿಸಿದರೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆದಿದ್ದ ಪಂದ್ಯದಲ್ಲಿ ಕೇವಲ 57 ಎಸೆತಗಳಲ್ಲಿ 119 ರನ್ ಗಳಿಸಿದ ಮಾರ್ಷ್, ಭಾರತದ ಸೂರ್ಯಕುಮಾರ್ ಯಾದವ್ (Suryakumar Yadav) ಹೆಸರಿನಲ್ಲಿದ್ದ ಅನಗತ್ಯ ದಾಖಲೆಯನ್ನು ಮುರಿದಿದ್ದಾರೆ.

ಇಂಗ್ಲೆಂಡ್ ನೀಡಿದ್ದ 182 ರನ್‌ಗಳ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 174 ರನ್ ಗಳಿಸಲಷ್ಟೇ ಶಕ್ತವಾಯಿತು. ಇದರೊಂದಿಗೆ ಇಂಗ್ಲೆಂಡ್ 7 ರನ್‌ಗಳ ರೋಚಕ ಗೆಲುವು ದಾಖಲಿಸಿ, ಐದು ಪಂದ್ಯಗಳ ಟಿ20 ಸರಣಿಯನ್ನು 3-1 ಅಂತರದಲ್ಲಿ ವಶಪಡಿಸಿಕೊಂಡಿತು.

ʻಮೊದಲು ನಿಮ್ಮಿಂದ ಆರಂಭವಾಗಿದ್ದು, ಆದರೆ ನಾವು ಮುಗಿಸುತ್ತೇವೆʼ: ಭಾರತಕ್ಕೆ ಕೈಲ್‌ ಜೇಮಿಸನ್‌ ವಾರ್ನಿಂಗ್‌!

ಸೂರ್ಯಕುಮಾರ್ ಯಾದವ್‌ ಅನಗತ್ಯ ದಾಖಲೆ ಹಿಂದಿಕ್ಕಿದ ಮಾರ್ಷ್

ಮಾರ್ಷ್ ಕೇವಲ 49 ಎಸೆತಗಳಲ್ಲಿ ಶತಕ ಪೂರೈಸಿದರು. ತಮ್ಮ ಸ್ಫೋಟಕ ಇನಿಂಗ್ಸ್‌ನಲ್ಲಿ 9 ಬೌಂಡರಿ ಹಾಗೂ 9 ಸಿಕ್ಸರ್ ಸಿಡಿಸಿದರು. ಆದರೆ ಅವರ ಹೋರಾಟ ತಂಡದ ಗೆಲುವಿಗೆ ಸಾಕಾಗಲಿಲ್ಲ. ಇಂಗ್ಲೆಂಡ್ ವಿರುದ್ಧ 2022ರಲ್ಲಿ ಸೂರ್ಯಕುಮಾರ್ ಯಾದವ್ 55 ಎಸೆತಗಳಲ್ಲಿ 117 ರನ್ ಗಳಿಸಿದ್ದರೂ ಭಾರತ ಸೋಲು ಕಂಡಿತ್ತು. ಇದೀಗ ಮಾರ್ಷ್ 119 ರನ್ ಗಳಿಸುವ ಮೂಲಕ ಸೋಲಿನ ಪಂದ್ಯದಲ್ಲಿ ದಾಖಲಾದ ವೈಯಕ್ತಿಕ ಟಿ20 ಶತಕಗಳ ಪಟ್ಟಿಯಲ್ಲಿ ಸೂರ್ಯಕುಮಾರ್ ಅವರನ್ನು ಹಿಂದಿಕ್ಕಿದ್ದಾರೆ.

ಸೋಲಿನಲ್ಲೂ ದಾಖಲೆ ಬರೆದ ಮಾರ್ಷ್

ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸೋಲಿನ ಪಂದ್ಯದಲ್ಲಿ ಗರಿಷ್ಠ ವೈಯಕ್ತಿಕ ರನ್ ಗಳಿಸಿದವರ ಪಟ್ಟಿಯಲ್ಲಿ ಮಾರ್ಷ್ ಅವರ 119 ರನ್‌ಗಳ ಮೂಲಕ ಐದನೇ ಸ್ಥಾನದಲ್ಲಿದೆ. ಆಸ್ಟ್ರೇಲಿಯಾ ಪರ ಶೇನ್ ವಾಟ್ಸನ್ 2016ರಲ್ಲಿ ಭಾರತದ ವಿರುದ್ಧ ಗಳಿಸಿದ್ದ ಅಜೇಯ 124 ರನ್ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಋತುರಾಜ್ ಗಾಯಕ್ವಾಡ್ 123 ರನ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.

IND vs SL: ಶ್ರೀಲಂಕಾ ವಿರುದ್ಧದ ವೈಟ್‌ಬಾಲ್‌ ಸರಣಿಗೆ ಭಾರತ ತಂಡಕ್ಕೆ ಕಮ್‌ಬ್ಯಾಕ್‌ ಮಾಡಬಲ್ಲ ಮೂವರು ಸ್ಟಾರ್‌ ಆಟಗಾರರು!

181 ರನ್‌ ಕಲೆ ಹಾಕಿದ್ದ ಇಂಗ್ಲೆಂಡ್‌

ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್ ತಂಡಕ್ಕೆ ಆಸ್ಟ್ರೇಲಿಯಾದ ವೇಗದ ಬೌಲರ್‌ಗಳು ಆರಂಭದಲ್ಲೇ ಆಘಾತ ನೀಡಿದರು. ಫಿಲಿಪ್ ಸಾಲ್ಟ್, ಹ್ಯಾರಿ ಬ್ರೂಕ್ ಮತ್ತು ಟಾಮ್ ಬ್ಯಾಂಟನ್ ಸೇರಿದಂತೆ ಪ್ರಮುಖ ಬ್ಯಾಟರ್‌ಗಳು ಬೇಗನೆ ವಿಕೆಟ್ ಒಪ್ಪಿಸಿದರು. ಒಂದು ಹಂತದಲ್ಲಿ ಇಂಗ್ಲೆಂಡ್ 32 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಸಂದರ್ಭದಲ್ಲಿ ಜೋರ್ಡನ್ ಕಾಕ್ಸ್ ಮತ್ತು ಜೇಮ್ಸ್ ಕೋಲ್ಸ್ ತಂಡಕ್ಕೆ ಆಸರೆಯಾದರು. ಕೋಲ್ಸ್ 29 ಎಸೆತಗಳಲ್ಲಿ 33 ರನ್ ಗಳಿಸಿದರು.

ಬಳಿಕ ಸ್ಯಾಮ್ ಕರನ್ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿ ಕೇವಲ 28 ಎಸೆತಗಳಲ್ಲಿ ಅಜೇಯ 50 ರನ್ ಗಳಿಸಿದರು. ಕೊನೆಯ ಹಂತದಲ್ಲಿ ಜೇಮಿ ಓವರ್ಟನ್ 9 ಎಸೆತಗಳಲ್ಲಿ 20 ರನ್ ಗಳಿಸಿ ತಂಡದ ಮೊತ್ತ ಹೆಚ್ಚಿಸಿದರು. ಇದರ ಪರಿಣಾಮ ಇಂಗ್ಲೆಂಡ್ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 181 ರನ್ ಗಳಿಸಿತು.

ಭಾರತ ತಂಡದಿಂದ ನನ್ನನ್ನು ಕಿತ್ತರು, ನನ್ನ ಬ್ಯಾಟಿಂಗ್‌ನಲ್ಲಿ ತಪ್ಪೇನಿತ್ತೆಂದು ಗೊತ್ತಿಲ್ಲ: ಸೂರ್ಯಕುಮಾರ್‌ ಅಳಲು!

ಆಸ್ಟ್ರೇಲಿಯಾಗೆ ಮತ್ತೊಂದು ಸೋಲು

182 ರನ್‌ಗಳ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ಆರಂಭದಲ್ಲೇ ಜೇಕ್ ಫ್ರೇಸರ್ ಮೆಗರ್ಕ್ ಅವರ ವಿಕೆಟ್ ಕಳೆದುಕೊಂಡಿತು. ಆದರೆ ನಾಯಕ ಮಿಚೆಲ್ ಮಾರ್ಷ್ ಮಾತ್ರ ಇಂಗ್ಲೆಂಡ್ ಬೌಲರ್‌ಗಳ ಮೇಲೆ ಸವಾರಿ ಮಾಡಿದರು. ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾದ ಮಾರ್ಷ್ ಮೈದಾನದ ಮೂಲೆ ಮೂಲೆಗೂ ಚೆಂಡನ್ನು ಅಟ್ಟಿದರು. ಬೌಂಡರಿ ಹಾಗೂ ಸಿಕ್ಸರ್‌ಗಳ ಮಳೆಯನ್ನೇ ಸುರಿಸಿದ ಅವರು ಕೇವಲ 49 ಎಸೆತಗಳಲ್ಲಿ ಶತಕ ಪೂರೈಸಿದರು. ಒಟ್ಟಾರೆ 57 ಎಸೆತಗಳನ್ನು ಎದುರಿಸಿದ ಮಾರ್ಷ್ 9 ಬೌಂಡರಿ ಹಾಗೂ 9 ಸಿಕ್ಸರ್‌ಗಳ ನೆರವಿನಿಂದ 119 ರನ್ ಗಳಿಸಿದರು. ಅವರ ಸ್ಟ್ರೈಕ್‌ರೇಟ್ 208.77 ಆಗಿತ್ತು.

ಕೊನೆಯ ಎರಡು ಓವರ್‌ಗಳಲ್ಲಿ ಆಸ್ಟ್ರೇಲಿಯಾಗೆ 30 ರನ್‌ಗಳ ಅಗತ್ಯವಿತ್ತು. 19ನೇ ಓವರ್‌ನಲ್ಲಿ ಮಾರ್ಷ್ ವಿಕೆಟ್ ಉಳಿಸಿಕೊಂಡು ತಂಡದ ಗೆಲುವಿನ ಆಸೆಯನ್ನು ಜೀವಂತವಾಗಿಟ್ಟಿದ್ದರು. ಆದರೆ ಕೊನೆಯ ಓವರ್‌ನಲ್ಲಿ ಹೆನ್ರಿ ಕ್ರೊಂಬ್‌ಕಾಂಬ್ ಪಂದ್ಯದ ಚಿತ್ರಣವನ್ನೇ ಬದಲಿಸಿದರು. ನಾಲ್ಕನೇ ಎಸೆತದಲ್ಲಿ ಅಪಾಯಕಾರಿ ಮಿಚೆಲ್ ಮಾರ್ಷ್ ಅವರನ್ನು ಔಟ್ ಮಾಡಿದ ಅವರು, ಐದನೇ ಎಸೆತದಲ್ಲಿ ಜೋಯಲ್ ಡೇವಿಸ್ ಅವರನ್ನೂ ಪೆವಿಲಿಯನ್‌ಗೆ ಕಳುಹಿಸಿದರು. ಅಂತಿಮವಾಗಿ ಆಸ್ಟ್ರೇಲಿಯಾ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 174 ರನ್ ಗಳಿಸಲಷ್ಟೇ ಶಕ್ತವಾಯಿತು. ಇಂಗ್ಲೆಂಡ್ 7 ರನ್‌ಗಳ ರೋಚಕ ಗೆಲುವು ದಾಖಲಿಸಿತು. ಇಂಗ್ಲೆಂಡ್‌ ತಂಡ 3-1 ಅಂತರದಲ್ಲಿ ಟಿ20ಐ ಸರಣಿಯನ್ನು ತನ್ನದಾಗಿಸಿಕೊಂಡಿತು.