ಅಫ್ಘಾನಿಸ್ತಾನ ಏಕದಿನ ಸರಣಿಯನ್ನು ಆಡಲು ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯಗೆ ಗ್ರೀನ್ ಸಿಗ್ನಲ್!
IND vs AFG: ರೋಹಿತ್ ಶರ್ಮಾ ಹಾಗೂ ಹಾರ್ದಿಕ್ ಪಾಂಡ್ಯ ಅವರು ಫಿಟ್‌ನೆಸ್ ಪಾಸ್ ಮಾಡಿದ್ದಾರೆ ಹಾಗೂ ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದ್ದಾರೆ. ಆದರೆ, ಸ್ನಾಯು ಸೆಳೆತದ ಗಾಯಕ್ಕೆ ತುತ್ತಾಗಿರುವ ವಿರಾಟ್ ಕೊಹ್ಲಿ ಈ ಏಕದಿನ ಸರಣಿಗೆ ಅಲಭ್ಯರಾಗಿದ್ದಾರೆ. ಜೂನ್ 13 ರಂದು ಏಕದಿನ ಸರಣಿ ಆರಂಭವಾಗಲಿದೆ.
ಆಫ್ಘನ್ ಏಕದಿನ ಸರಣಿಗೆ ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ ಫಿಟ್. -
ನವದೆಹಲಿ: ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೂ(IND vs AFG) ಮುನ್ನ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ರೋಹಿತ್ ಶರ್ಮಾ (Rohit Sharma) ಹಾಗೂ ಹಾರ್ದಿಕ್ ಪಾಂಡ್ಯ (Hardik Pandya) ಅವರು ಫಿಟ್‌ನೆಸ್ ಟೆಸ್ಟ್‌ನಲ್ಲಿ ಉತ್ತೀರ್ಣರಾಗಿದ್ದು, ಆಫ್ಘನ್ ಒಡಿಐ ಸರಣಿಯಲ್ಲಿ ಭಾರತ ತಂಡದ ಪರ ಕಣಕ್ಕೆ ಇಳಿಯಲಿದ್ದಾರೆ. ಜೂನ್ 13 ರಂದು ಶನಿವಾರ ಧರ್ಮಶಾಲಾದಲ್ಲಿ ಮೊದಲನೇ ಏಕದಿನ ಪಂದ್ಯ ನಡೆಯಲಿದೆ. ಈ ಇಬ್ಬರ ಆಗಮನದಿಂದ ಭಾರತ ತಂಡದ ಬ್ಯಾಟಿಂಗ್ ವಿಭಾಗಕ್ಕೆ ಬಲ ಬಂದಿದೆ.
ತಮ್ಮ-ತಮ್ಮ ವಿಭಿನ್ನ ಗಾಯಗಳಿಂದಾಗಿ ರೋಹಿತ್ ಶರ್ಮಾ ಹಾಗೂ ಹಾರ್ದಿಕ್ ಪಾಂಡ್ಯ ಅವರು ಮುಂಬೈ ಇಂಡಿಯನ್ಸ್ ತಂಡದ 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಕೆಲ ಪಂದ್ಯಗಳಿಗೆ ಅಲಭ್ಯರಾಗಿದ್ದರು. ಹಾರ್ದಿಕ್ ಬೆನ್ನು ನೋವಿನ ಗಾಯಕ್ಕೆ ತುತ್ತಾಗಿದ್ದರೆ, ರೋಹಿತ್ ಶರ್ಮಾ ಸ್ನಾಯು ಸೆಳೆತದ ಗಾಯಕ್ಕೆ ತುತ್ತಾಗಿದ್ದರು. ಜೂನ್ 2 ರಿಂದ ಇಲ್ಲಿಯವರೆಗೂ ಈ ಇಬ್ಬರೂ ಆಟಗಾರರು ಬೆಂಗಳೂರು ಬಿಸಿಸಿಐ ಸೆಂಟರ್ ಆಫ್ ಎಕ್ಸ್‌ಲೆನ್ಸ್‌ನಲ್ಲಿ ಪುನಶ್ಚೇತನ ಕಾರ್ಯದಲ್ಲಿ ತೊಡಗಿದ್ದರು.
"ಹಾರ್ದಿಕ್ ಪಾಂಡ್ಯ ಅವರು ಜೂನ್ 2ರಂದು ಸೆಂಟರ್ ಆಫ್ ಎಕ್ಸಲೆನ್ಸ್‌ಗೆ ವರದಿ ಮಾಡುವ ಮುನ್ನ ವಿದೇಶದಲ್ಲಿ ರಜೆಯನ್ನು ಕಳೆಯುತ್ತಿದ್ದರು. ಬಳಿಕ ಐದು ದಿನಗಳಲ್ಲಿ ಅವರು ಹಲವು ಪಂದ್ಯ ಸನ್ನಿವೇಶಗಳ ಅಭ್ಯಾಸ ನಡೆಸಿದ್ದು, ಪೂರ್ಣ 10 ಓವರ್‌ಗಳ ಬೌಲ್ ಕೂಡ ಮಾಡಿದ್ದಾರೆ," ಎಂದು ಬಿಸಿಸಿಐ ಮೂಲವೊಂದು ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದೆ.
"ಅವರಿಗೆ ಯಾವುದೇ ರೀತಿಯ ದೈಹಿಕ ಅಸ್ವಸ್ಥತೆ ಅಥವಾ ತೊಂದರೆ ಕಾಣಿಸಿಕೊಂಡಿಲ್ಲ. ಅಲ್ಲದೆ, ವಿವಿಧ ಫಿಟ್ನೆಸ್ ಮಾನದಂಡಗಳಿಗೆ ಸಂಬಂಧಿಸಿದ ಅವರ ದೈಹಿಕ ಸಾಮರ್ಥ್ಯದ ಅಂಕಿಅಂಶಗಳಿಗೆ ಸೆಂಟರ್ ಆಫ್ ಎಕ್ಸಲೆನ್ಸ್‌ನ ಶಕ್ತಿ ಮತ್ತು ಕಂಡೀಷನಿಂಗ್ ತರಬೇತುದಾರರು ಅನುಮೋದನೆ ನೀಡಿದೆ," ಎಂದು ಆ ಮೂಲವು ಮತ್ತಷ್ಟು ವಿವರಿಸಿದೆ.
ವೈಭವ್ ಸೂರ್ಯವಂಶಿ ಟೆಸ್ಟ್ ಕ್ರಿಕೆಟ್‌ನಲ್ಲಿ ಸಕ್ಸಸ್ ಆಗುವುದು ಅನುಮಾನ ಎಂದ ಎಬಿ ಡಿ ವಿಲಿಯರ್ಸ್!
ಮಾಜಿ ನಾಯಕ ರೋಹಿತ್ ಶರ್ಮಾ ಕೂಡ ತಮ್ಮ ಹ್ಯಾಮ್‌ಸ್ಟ್ರಿಂಗ್ ಸಮಸ್ಯೆಯ ಮೌಲ್ಯಮಾಪನಕ್ಕಾಗಿ ಸೆಂಟರ್ ಆಫ್ ಎಕ್ಸಲೆನ್ಸ್‌ಗೆ ಭೇಟಿ ನೀಡಿದ್ದರು. ವೈದ್ಯಕೀಯ ಪರೀಕ್ಷೆಯ ಬಳಿಕ ಅವರಿಗೆ ಕೂಡ ಆಡಲು ಅನುಮತಿ ನೀಡಲಾಗಿದೆ ಎಂದು ತಿಳಿದುಬಂದಿದೆ.
ಸೋಮವಾರ ಮಾತನಾಡಿದ್ದ ಭಾರತದ ಸಹಾಯಕ ಕೋಚ್ ಸಿತಾಂಶು ಕೊಟಕ್, ಹಾರ್ದಿಕ್ ಪಾಂಡ್ಯ ಅವರ ಫಿಟ್ನೆಸ್ ಸ್ಥಿತಿಯ ಬಗ್ಗೆ ತಮ್ಮ ಬಳಿ ಅಧಿಕೃತ ಮಾಹಿತಿ ಇಲ್ಲ ಎಂದು ಹೇಳಿದ್ದರೂ, ಆಲ್‌ರೌಂಡರ್ ಉತ್ತಮ ಸ್ಥಿತಿಯಲ್ಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದರು. ವೇಗದ ಬೌಲಿಂಗ್ ಹಾಗೂ ಡೆತ್ ಓವರ್‌ಗಳಲ್ಲಿ ಸ್ಫೋಟಕ ಬ್ಯಾಟಿಂಗ್ ಮೂಲಕ ತಂಡಕ್ಕೆ ಸಮತೋಲನ ಒದಗಿಸುವ ಹಾರ್ದಿಕ್, ಭಾರತದ ಸೀಮಿತ ಓವರ್‌ಗಳ ತಂಡದ ಪ್ರಮುಖ ಅಂಗವಾಗಿದ್ದಾರೆ.
ಹಾರ್ದಿಕ್ ತರಬೇತಿ ಅವಧಿಯಲ್ಲಿ ಪೂರ್ಣ 10 ಓವರ್‌ಗಳ ಬೌಲಿಂಗ್ ನಡೆಸಿರುವುದು ಭಾರತ ತಂಡದ ಪಾಲಿಗೆ ಪ್ಲಸ್ ಪಾಯಿಂಟ್. ಇದು 50 ಓವರ್‌ಗಳ ಕ್ರಿಕೆಟ್‌ನ ಕಠಿಣ ಬೇಡಿಕೆಗಳನ್ನು ನಿಭಾಯಿಸಲು ಅವರು ಸಂಪೂರ್ಣವಾಗಿ ಸಿದ್ಧರಾಗಿದ್ದಾರೆ ಎಂಬುದಕ್ಕೆ ಸ್ಪಷ್ಟ ಸೂಚನೆಯಾಗಿದೆ.
IND vs AFG: ʻ80 ರನ್ ಸಾಕಾ?ʼ: ರಿಷಭ್ ಪಂತ್‌ಗೆ ಉಪಯುಕ್ತ ಸಲಹೆ ನೀಡಿದ ಆರ್ ಅಶ್ವಿನ್!
ಆದಾಗ್ಯೂ, ಹಾರ್ದಿಕ್ ಪಾಂಡ್ಯ ಅವರು ಫ್ಲಡ್‌ಲೈಟ್‌ಗಳ ಅಡಿಯಲ್ಲಿ ನಡೆಯುವ ತರಬೇತಿ ಶಿಬಿರಕ್ಕಾಗಿ ತಂಡದೊಂದಿಗೆ ಚಂಡೀಗಢದಲ್ಲಿ ಸೇರ್ಪಡೆಯಾಗಲಿದ್ದಾರೆಯೇ ಅಥವಾ ಮೊದಲಿನಿಂದಲೂ ರೂಪಿಸಲಾಗಿದ್ದ ಯೋಜನೆಯಂತೆ ನೇರವಾಗಿ ಧರ್ಮಶಾಲಾದಲ್ಲಿ ತಂಡವನ್ನು ಸೇರಿಕೊಳ್ಳಲಿದ್ದಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಇನ್ನೊಂದೆಡೆ, ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಹ್ಯಾಮ್‌ಸ್ಟ್ರಿಂಗ್ ಗಾಯದ ಕಾರಣದಿಂದ ಈ ಸರಣಿಯಿಂದ ಹೊರಗುಳಿದಿದ್ದಾರೆ. ಅವರ ಸ್ಥಾನಕ್ಕೆ ಯಶಸ್ವಿ ಜೈಸ್ವಾಲ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಧರ್ಮಶಾಲಾದಲ್ಲಿ ನಡೆಯುವ ಪಂದ್ಯವಲ್ಲದೆ, ಈ ಸರಣಿಯ ಇನ್ನುಳಿದ ಪಂದ್ಯಗಳು ಜೂನ್ 17ರಂದು ಲಖನೌ ಹಾಗೂ ಜೂನ್ 20ರಂದು ಚೆನ್ನೈನಲ್ಲಿ ನಡೆಯಲಿವೆ.