ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IND vs NZ 1st ODI: ವಿರಾಟ್‌ ಕೊಹ್ಲಿ ಆರ್ಭಟದಿಂದ ಭಾರತಕ್ಕೆ ಸುಲಭ ತುತ್ತಾದ ನ್ಯೂಜಿಲೆಂಡ್‌!

IND vs NZ: ಅರ್ಷದೀಪ್‌ ಸಿಂಗ್‌ ಮಾರಕ ಬೌಲಿಂಗ್‌ ಹಾಗೂ ವಿರಾಟ್‌ ಕೊಹ್ಲಿಯ ಸ್ಪೋಟಕ ಅರ್ಧಶತಕದ ಬಲದಿಂದ ಭಾರತ ತಂಡ, ಮೊದಲನೇ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್‌ ಎದುರು 5 ವಿಕೆಟ್‌ಗಳ ಸುಲಭ ಗೆಲುವು ಪಡೆಯಿತು. ಆ ಮೂಲಕ 5 ಪಂದ್ಯಗಳ ಏಕದಿನ ಸರಣಿಯಲ್ಲಿ ಟೀಮ್‌ ಇಂಡಿಯಾ 1-0 ಮುನ್ನಡೆ ಪಡೆದಿದೆ.

ವಿರಾಟ್‌ ಕೊಹ್ಲಿ ಆರ್ಭಟದಿಂದ ಭಾರತಕ್ಕೆ ಸುಲಭ ತುತ್ತಾದ ಕಿವೀಸ್‌!

ನ್ಯೂಜಿಲೆಂಡ್‌ ವಿರುದ್ಧ ಮೊದಲನೇ ಒಡಿಐನಲ್ಲಿ ಮಿಂಚಿದ ಕೊಹ್ಲಿ, ಅರ್ಷದೀಪ್‌. -

Profile
Ramesh Kote Nov 4, 2026 3:10 PM

ಆಕ್ಲೆಂಡ್‌: ಅರ್ಷದೀಪ್‌ ಸಿಂಗ್‌ ಮಾರಕ ದಾಳಿ ಹಾಗೂ ವಿರಾಟ್‌ ಕೊಹ್ಲಿಯ (Virat Kohli) ಸ್ಪೋಟಕ ಬ್ಯಾಟಿಂಗ್‌ ಬಲದಿಂದ ಭಾರತ ತಂಡ, ಮೊದಲನೇ ಏಕದಿನ ಪಂದ್ಯದಲ್ಲಿ (IND vs NZ) ನ್ಯೂಜಿಲೆಂಡ್‌ ವಿರುದ್ಧ 5 ವಿಕೆಟ್‌ಗಳ ಭರ್ಜರಿ ಗೆಲುವು ಪಡೆದಿದೆ. ಆ ಮೂಲಕ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಟೀಮ್‌ ಇಂಡಿಯಾ 1-0 ಮುನ್ನಡೆಯೊಂದಿಗೆ ಶುಭಾರಂಭ ಕಂಡಿದೆ. ಇನ್ನು ಟಿ20ಐ ಸರಣಿಯನ್ನು ಸೋತಿದ್ದ ಆತಿಥೇಯ ಕಿವೀಸ್‌ಗೆ ಏಕದಿನ ಸರಣಿಯಲ್ಲಿಯೂ ಉತ್ತಮ ಆರಂಭ ಪಡೆಯಲು ಸಾಧ್ಯವಾಗಲಿಲ್ಲ.

ಬುಧವಾರ ಇಲ್ಲಿನ ಈಡನ್‌ ಪಾರ್ಕ್‌ನಲ್ಲಿ ನಡೆದಿದ್ದ ಮೊದಲನೇ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ನ್ಯೂಜಿಲೆಂಡ್‌ ತಂಡ ಬ್ಯಾಟಿಂಗ್‌ ವೈಫಲ್ಯತೆಯನ್ನು ಅನುಭವಿಸಿತು. 40.2 ಓವರ್‌ಗಳಿಗೆ 185 ರನ್‌ಗಳಿಗೆ ಆಲ್‌ಔಟ್‌ ಆಯಿತು. ಆ ಮೂಲಕ ಪ್ರವಾಸಿ ಭಾರತ ತಂಡಕ್ಕೆ 186 ರನ್‌ಗಳ ಸಾಧಾರಣ ಗುರಿಯನ್ನು ನೀಡಿತು.

IND vs NZ: ಡ್ಯಾರಿಲ್‌ ಮಿಚೆಲ್‌ರನ್ನು ಮಿಂಚಿನಂತೆ ರನ್‌ಔಟ್‌ ಮಾಡಿದ ರೋಹಿತ್‌ ಶರ್ಮಾ! ವಿಡಿಯೊ

ಬಳಿಕ ಗುರಿಯನ್ನು ಹಿಂಬಾಲಿಸಿದ ಭಾರತ ತಂಡ ಒಂದು ಹಂತದಲ್ಲಿ 12 ಓವರ್‌ಗಳಿಗೆ ಒಂದು ವಿಕೆಟ್‌ ನಷ್ಟಕ್ಕೆ 64 ರನ್‌ ಗಳಿಸಿತ್ತು. ಈ ವೇಳೆ ಮಳೆ ಬಂದಿದ್ದರಿಂದ ಆಟವನ್ನು ನಿಲ್ಲಿಸಲಾಯಿತು. ಇದರ ಪರಿಣಾಮವಾಗಿ ಡಿಎಲ್‌ಎಸ್‌ ನಿಯಮದ ಪ್ರಕಾರ ಭಾರತ ತಂಡಕ್ಕೆ 32 ಓವರ್‌ಗಳಿಗೆ 143 ರನ್‌ಗಳ ಗುರಿಯನ್ನು ನೀಡಲಾಯಿತು. ವಿರಾಟ್‌ ಕೊಹ್ಲಿಯ ಸ್ಪೋಟಕ ಬ್ಯಾಟಿಂಗ್‌ ಬಲದಿಂದ ಭಾರತ, 22.4 ಓವರ್‌ಗಳಿಗೆ 5 ವಿಕೆಟ್‌ಗಳ ನಷ್ಟಕ್ಕೆ ಗೆದ್ದು ಬೀಗಿತು.



ವಿರಾಟ್‌ ಕೊಹ್ಲಿ ಮಿಂಚಿನ ಅರ್ಧಶತಕ

ರೋಹಿತ್‌ ಶರ್ಮಾ ಶೂನ್ಯಕ್ಕೆ ವಿಕೆಟ್‌ ಒಪ್ಪಿಸಿದ ಬಳಿಕ ಕ್ರೀಸ್‌ಗೆ ಬಂದ ವಿರಾಟ್‌ ಕೊಹ್ಲಿ ಸ್ಪೋಟಕ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದರು. ಅವರು ಆಡಿದ 51 ಎಸೆತಗಳಲ್ಲಿ ಒಂದು ಸಿಕ್ಸರ್‌ ಹಾಗೂ 13 ಮನಮೋಹಕ ಬೌಂಡರಿಗಳೊಂದಿಗೆ 71 ರನ್‌ ಬಾರಿಸಿದರು ಹಾಗೂ ನಾಯಕ ಶುಭಮನ್‌ ಗಿಲ್‌ ಜೊತೆಗೆ 113 ರನ್‌ಗಳ ದೊಡ್ಡ ಜೊತೆಯಾಟವನ್ನು ಆಡಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವನ್ನು ವಹಿಸಿದರು. ಗಿಲ್‌ 36 ರನ್‌ ಗಳಿಸಿದ ಬಳಿಕ ಔಟ್‌ ಆದರು. ವಿರಾಟ್‌ ಕೊಹ್ಲಿ ಈ ಇನಿಂಗ್ಸ್‌ ಮೂಲಕ ಮೂರನೇ ಕ್ರಮಾಂಕದಲ್ಲಿ 13,000 ರನ್‌ಗಳನ್ನು ಪೂರ್ಣಗೊಳಿಸಿ ವಿಶ್ವ ದಾಖಲೆಯನ್ನು ಬರೆದಿದ್ದಾರೆ.



114 ರನ್‌ಗಳಿಗೆ ಎರಡು ವಿಕೆಟ್‌ ಕಳೆದುಕೊಂಡಿದ್ದ ಭಾರತ ತಂಡ, ಕೇವಲ 10 ರನ್‌ಗಳ ಅಂತರದಲ್ಲಿ ಪ್ರಮುಖ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತು. ಆದರೆ, ಕೊನೆಯಲ್ಲಿ ಶ್ರೇಯಸ್‌ ಅಯ್ಯರ್‌ (15 ರನ್‌) ಹಾಗೂ ಕೆಎಲ್‌ ರಾಹುಲ್‌ ಭಾರತ ತಂಡವನ್ನು ಗೆಲುವಿನ ದಡ ಸೇರಿಸಿದರು. ಕಿವೀಸ್‌ ಪರ ಜೇಕಬ್‌ ಡಫಿ ಮೂರು ವಿಕೆಟ್‌ಗಳನ್ನು ಕಿತ್ತರು.

ಮಿಂಚಿದ ಅರ್ಷದೀಪ್‌ ಸಿಂಗ್‌

ಇದಕ್ಕೂ ಮುನ್ನ ಟಾಸ್ ಗೆದ್ದ ಭಾರತ ತಂಡದ ನಾಯಕ ಶುಭಮನ್ ಗಿಲ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು ಹಾಗೂ ಬೌಲರ್‌ಗಳು ತಮ್ಮ ನಾಯಕನ ನಿರ್ಧಾರವನ್ನು ಸಮರ್ಥಿಸಿಕೊಂಡರು. ನ್ಯೂಜಿಲೆಂಡ್ ತಂಡವನ್ನು ಕಡಿಮೆ ಮೊತ್ತಕ್ಕೆ ನಿಯಂತ್ರಿಸುವಲ್ಲಿ ಭಾರತದ ಬೌಲರ್‌ಗಳು ಯಶಸ್ವಿಯಾಗಿದ್ದಾರೆ. ವಿಶೇಷವಾಗಿ ಅರ್ಷದೀಪ್‌ ಸಿಂಗ್‌ ಶಿಸ್ತುಬದ್ಧವಾಗಿ ಬೌಲಿಂಗ್‌ ದಾಳಿ ನಡೆಸಿ 4 ವಿಕೆಟ್‌ಗಳನ್ನು ಕಬಳಿಸಿದರೆ, ಇವರಿಗೆ ಸಾಥ್‌ ನೀಡಿದ ಅನ್ಶುಲ್‌ ಕಾಂಬೋಜ್‌ ಅವರು ಎರಡು ವಿಕೆಟ್‌ ಹಾಗೂ ಗುರ್ನೂರ್‌ ಬ್ರಾರ್‌ ಮೂರು ವಿಕೆಟ್‌ಗಳನ್ನು ಕಿತ್ತರು.

ವಿರಾಟ್ ಕೊಹ್ಲಿ ಮತ್ತೊಂದು ವಿಶ್ವ ದಾಖಲೆ: ಮೂರನೇ ಕ್ರಮಾಂಕದಲ್ಲಿ 13 ಸಾವಿರ ರನ್ ಗಳಿಸಿದ ಮೊದಲ ಬ್ಯಾಟರ್!

ಕಿವೀಸ್‌ ಪರ ಟಿಮ್‌ ಸೈಫರ್ಟ್‌ 43 ಎಸೆತಗಳಲ್ಲಿ 38 ರನ್, ಡ್ಯಾರಿಲ್‌ ಮಿಚೆಲ್‌ 41 ಎಸೆತಗಳಲ್ಲಿ 28 ರನ್‌, ಅದ್ಭುತ ಫಾರ್ಮ್‌ನಲ್ಲಿರುವ ಗ್ಲೆನ್‌ ಫಿಲಿಪ್ಸ್‌ ಅವರು 51 ಎಸೆತಗಳಲ್ಲಿ 30 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ಆದರೆ, ಕೊನೆಯಲ್ಲಿ ಬ್ಲೈರ್‌ ಟಿಕ್ನರ್‌ ಹಾಗೂ ಜೇಕಬ್‌ ಡಫಿ ಅವರು 39 ರನ್‌ಗಳ ಜೊತೆಯಾಟವನ್ನು ಆಡಿದರು. ಟಿಕ್ನರ್‌ ಅವರು 23 ಎಸೆತಗಳಲ್ಲಿ 34 ರನ್‌ಗಳ ಉಪಯುಕ್ತ ಕೊಡುಗೆಯನ್ನು ನೀಡಿದರು. ಡಫಿ ಅವರು 15 ರನ್‌ ಗಳಿಸಿ ಅಜೇಯರಾಗಿ ಉಳಿದರು.

ಸ್ಕೋರ್‌ ವಿವರ

ನ್ಯೂಜಿಲೆಂಡ್‌: 40.2 ಓವರ್‌ಗಳಿಗೆ 185-10 (ಗ್ಲೆನ್‌ ಫಿಲಿಪ್ಸ್‌ 30 ರನ್‌, ಡ್ಯಾರಿಲ್‌ ಮಿಚೆಲ್‌ 28 ರನ್‌, ಬ್ಲೈರ್‌ ಟಿಕ್ನರ್‌ 34 ರನ್‌, ಟಿಮ್‌ ಸೈಫರ್ಟ್‌ 38 ರನ್‌; ಅರ್ಷದೀಪ್‌ ಸಿಂಗ್‌ 70ಕ್ಕೆ 4, ಗುರ್ನೂರ್‌ ಬ್ರಾರ್‌ 44 ಕ್ಕೆ 3, ಅನ್ಶೂಲ್‌ ಕಾಂಬೋಜ್‌ 22 ಕ್ಕೆ 2)

ಭಾರತ: 22.4 ಓವರ್‌ಗಳಿಗೆ 143-5 (ವಿರಾಟ್‌ ಕೊಹ್ಲಿ 71 ರನ್‌, ಶುಭಮನ್‌ ಗಿಲ್‌ 36 ರನ್‌; ಜೇಕಬ್‌ ಡಫಿ 49ಕ್ಕೆ 3)