IND vs AFG: ತಮ್ಮ ತವರು ಅಭಿಮಾನಿಗಳ ಎದುರು 11ನೇ ಟೆಸ್ಟ್ ಶತಕ ಪೂರೈಸಿದ ಶುಭಮನ್ ಗಿಲ್!
Shubman Gill century: 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿನ ಫಾರ್ಮ್ ಅನ್ನು ಇದೀಗ ಅಫ್ಘಾನಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯದಲ್ಲಿಯೂ ಶುಭಮನ್ ಗಿಲ್ ಮುಂದುವರಿಸಿದ್ದಾರೆ. ಅವರು ಪಂದ್ಯದ ಮೊದಲನೇ ದಿನ ತಮ್ಮ ಟೆಸ್ಟ್ ವೃತ್ತಿ ಜೀವನದ 11ನೇ ಶತಕವನ್ನು ಪೂರ್ಣಗೊಳಿಸಿದ್ದಾರೆ. ಆ ಮೂಲಕ ಭಾರತ ತಂಡ ದೊಡ್ಡ ಮೊತ್ತವನ್ನು ಕಲೆ ಹಾಕಲು ನೆರವು ನೀಡಿದ್ದಾರೆ.
11ನೇ ಟೆಸ್ಟ್ ಶತಕ ಸಿಡಿಸಿ ಸಂಭ್ರಮಿಸಿದ ಶುಭಮನ್ ಗಿಲ್. -
ಚಂಡೀಗಢ: ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿನ ಫಾರ್ಮ್ ಅನ್ನು ಇದೀಗ ಟೆಸ್ಟ್ ಪಂದ್ಯದಲ್ಲಿಯೂ ಶುಭಮನ್ ಗಿಲ್ (Shubman Gill) ಮುಂದುವರಿಸಿದ್ದಾರೆ. ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದ (IND vs AFG) ಮೊದಲನೇ ದಿನವೇ ಭಾರತ ತಂಡದ ನಾಯಕ ಶುಭಮನ್ ಗಿಲ್ (Shubman Gill) ತಮ್ಮ ಟೆಸ್ಟ್ ವೃತ್ತಿ ಜೀವನದ 11ನೇ ಶತಕವನ್ನು ಬಾರಿಸಿದ್ದಾರೆ. ಇದಕ್ಕೂ ಮುನ್ನ ಕೆಎಲ್ ರಾಹುಲ್ ಕೂಡ ಶತಕವನ್ನು ಸಿಡಿಸಿದ್ದರು. ಅಂದ ಹಾಗೆ ಈ ಇಬ್ಬರ ಶತಕಗಳ ಬಲದಿಂದ ಭಾರತ ತಂಡ ಮೊದಲನೇ ದಿನ ಪ್ರಥಮ ಇನಿಂಗ್ಸ್‌ನಲ್ಲಿ ದೊಡ್ಡ ಮೊತ್ತವನ್ನು ಕಲೆ ಹಾಕಿದೆ.
ಶನಿವಾರ ಇಲ್ಲಿನ ಮುಲ್ಲಾನ್‌ಪುರದ ಮಹಾರಾಜ ಯದವೀಂದ್ರ ಸಿಂಗ್ ಇಂಟರ್‌ನ್ಯಾಷನಲ್ ಕ್ರೀಡಾಂಗಣದಲ್ಲಿ ಆರಂಭವಾದ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆರಿಸಿಕೊಂಡ ಭಾರತ ತಂಡ, ಗಿಲ್ ಹಾಗೂ ರಾಹುಲ್ ಅವರ ಶತಕಗಳ ಬಲದಿಂದ ಮೊದಲನೇ ದಿನದಾಟದ ಅಂತ್ಯಕ್ಕೆ ಪ್ರಥಮ ಇನಿಂಗ್ಸ್‌ನಲ್ಲಿ 85 ಓವರ್‌ಗಳಿಗೆ 3 ವಿಕೆಟ್‌ಗಳ ನಷ್ಟಕ್ಕೆ 368 ರನ್‌ಗಳನ್ನು ಕಲೆ ಹಾಕಿ ಉತ್ತಮ ಆರಂಭವನ್ನು ಪಡೆದಿದೆ.
IND vs AFG: ತಮ್ಮ 12ನೇ ಟೆಸ್ಟ್ ಶತಕ ಸಿಡಿಸಿ ಸಂಭ್ರಮಿಸಿದ ಕನ್ನಡಿಗ ಕೆಎಲ್ ರಾಹುಲ್!
ಯಶಸ್ವಿ ಜೈಸ್ವಾಲ್ (24) ಅವರನ್ನು ಹೊರತುಪಡಿಸಿ ಇನ್ನುಳಿದ ಎಲ್ಲಾ ಬ್ಯಾಟ್ಸ್‌ಮನ್‌ಗಳು ಗಮನ ಸೆಳೆದರು. ಸಾಯಿ ಸುದರ್ಶನ್ 81 ರನ್ ಗಳಿಸಿ ಶತಕದಂಚಿನಲ್ಲಿ ವಿಕೆಟ್ ಒಪ್ಪಸಿದರು. ಆದರೆ, ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್ ಮಾಡಿದ ಶುಭಮನ್ ಗಿಲ್, ಮೊದಲನೇ ದಿನದಾಟದ ಅಂತ್ಯಕ್ಕೆ 143 ಎಸೆತಗಳಲ್ಲಿ ಒಂದು ಸಿಕ್ಸರ್ ಹಾಗೂ 11 ಬೌಂಡರಿಗಳೊ೦ದಿಗೆ ಅಜೇಯ 103 ರನ್‌ಗಳನ್ನು ಕಲೆ ಹಾಕಿದ್ದಾರೆ.
ನಾಯಕನಾಗಿ ಆರನೇ ಟೆಸ್ಟ್ ಶತಕ
ಈ ಶತಕವು ಶುಭಮನ್ ಗಿಲ್ ಅವರ ನಾಯಕತ್ವದ ಪಯಣದಲ್ಲಿ ಮತ್ತೊಂದು ಮಹತ್ವದ ದಾಖಲೆಯಾಗಿ ಪರಿಣಮಿಸಿದೆ. ಭಾರತದ ಟೆಸ್ಟ್ ತಂಡದ ನಾಯಕನಾಗಿ ಅವರು ದಾಖಲಿಸಿದ ಆರನೇ ಶತಕ ಇದಾಗಿದ್ದು, ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು ಸಿಡಿಸಿದ ಭಾರತೀಯ ನಾಯಕರ ಪಟ್ಟಿಯಲ್ಲಿ ಅವರು ಮತ್ತಷ್ಟು ಮೇಲಕ್ಕೆ ಏರಿದ್ದಾರೆ. ಈ ಸಾಧನೆಯ ಮೂಲಕ ಗಿಲ್ ಅವರು ನಾಯಕನಾಗಿ ಮಾತ್ರವಲ್ಲದೆ ಬ್ಯಾಟರ್ ಆಗಿಯೂ ತಮ್ಮ ಸ್ಥಿರ ಪ್ರದರ್ಶನವನ್ನು ಮುಂದುವರಿಸಿದ್ದು, ಭಾರತೀಯ ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮ ಸ್ಥಾನವನ್ನು ಇನ್ನಷ್ಟು ಬಲಪಡಿಸಿದ್ದಾರೆ.
Skipper. Centurion. Local boy. 🌟
— BCCI (@BCCI) June 6, 2026
Frames from a very special ton from Shubman Gill 📸
Updates ▶️ https://t.co/Au50EfVM30#TeamIndia | #INDvAFG | @IDFCFIRSTBank | @ShubmanGill pic.twitter.com/YOCKt09xQ7
ಭಾರತದ ಟೆಸ್ಟ್ ತಂಡದ ನಾಯಕರಾಗಿ ಅತಿ ಹೆಚ್ಚು ಶತಕಗಳನ್ನು ದಾಖಲಿಸಿದ ಆಟಗಾರರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ(20), ಸುನೀಲ್ ಗವಾಸ್ಕರ್ (11), ಮೊಹಮ್ಮದ್ ಅಝರುದ್ದೀನ್ (9) ಹಾಗೂ ಸಚಿನ್ ತೆಂಡೂಲ್ಕರ್ (7) ಮಾತ್ರ ಶುಭಮನ್ ಗಿಲ್ ಅವರಿಗಿಂತ ಹೆಚ್ಚಿನ ಟೆಸ್ಟ್ ಶತಕಗಳನ್ನು ನಾಯಕರಾಗಿ ದಾಖಲಿಸಿದ್ದಾರೆ.
ಗಿಲ್ ಅವರ ಇತ್ತೀಚಿನ ಶತಕದೊಂದಿಗೆ ನಾಯಕನಾಗಿ ಅವರ ಒಟ್ಟು ಟೆಸ್ಟ್ ಶತಕಗಳ ಸಂಖ್ಯೆ ಆರುಕ್ಕೆ ಏರಿಕೆಯಾಗಿದೆ. ನಾಯಕತ್ವದ ಆರಂಭಿಕ ವರ್ಷಗಳಲ್ಲಿಯೇ ಬ್ಯಾಟರ್ ಹಾಗೂ ನಾಯಕನಾಗಿ ಅವರು ಬೀರಿರುವ ಪ್ರಭಾವವನ್ನು ಈ ಸಾಧನೆ ಮತ್ತೊಮ್ಮೆ ಎತ್ತಿ ತೋರಿಸಿದೆ. ಭಾರತೀಯ ಟೆಸ್ಟ್ ತಂಡದ ಭವಿಷ್ಯದ ನಾಯಕನಾಗಿ ಗಿಲ್ ತಮ್ಮ ಸಾಮರ್ಥ್ಯವನ್ನು ನಿರಂತರವಾಗಿ ಸಾಬೀತುಪಡಿಸುತ್ತಿದ್ದಾರೆ.