Ramayana Movie: ಸೀತೆ ಮಾತೆ ಪಾತ್ರಕ್ಕೆ ಜೀವ ತುಂಬಿದ ನಟಿ ಸಾಯಿ ಪಲ್ಲವಿ; ನೆಟ್ಟಿಗರಿಂದ ಸಿಕ್ತು ಭಾರಿ ಬಹುಪರಾಕ್!
ರಾಮಾಯಣ ಚಿತ್ರದಲ್ಲಿನ ನಟಿ ಸಾಯಿ ಪಲ್ಲವಿ ಅವರ ಅಭಿನಯಕ್ಕೆ ಪ್ರೇಕ್ಷಕರಿಂದ ಮುಕ್ತಕಂಠದ ಶ್ಲಾಘನೆ ಸಿಕ್ಕಿದೆ. ಸೀತೆಯಾಗಿ ಸಾಯಿ ಪಲ್ಲವಿ ತೋರಿದ ಸಹಜ ನಟನೆ ಪ್ರೇಕ್ಷಕರ ಹೃದಯ ಮುಟ್ಟಿದೆ. ಆರಂಭದಲ್ಲಿ ಕೇಳಿಬಂದ ಟೀಕೆಗಳಿಗೆ ಸಾಯಿ ಪಲ್ಲವಿ ಅವರು ತಮ್ಮ ಪ್ರತಿಭೆಯಿಂದಲೇ ಉತ್ತರ ನೀಡಿದ್ದಾರೆ.
-
ನಿರ್ದೇಶಕ ನಿತೇಶ್ ತಿವಾರಿ ಅವರ ಮಹತ್ವಾಕಾಂಕ್ಷೆಯ 'ರಾಮಾಯಣ: ಭಾಗ 1' ಸಿನಿಮಾ ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಂಡು ಪ್ರೇಕ್ಷಕರ ಅಪಾರ ಪ್ರಶಂಸೆಗೆ ಪಾತ್ರವಾಗುತ್ತಿದೆ. ಈ ಪೌರಾಣಿಕ ಚಿತ್ರದಲ್ಲಿ ಶ್ರೀರಾಮನಾಗಿ ರಣಬೀರ್ ಕಪೂರ್ ಮತ್ತು ಲಂಕಾಧಿಪತಿ ರಾವಣನಾಗಿ ರಾಕಿಂಗ್ ಸ್ಟಾರ್ ಯಶ್ ತಮ್ಮ ಪಾತ್ರಗಳಲ್ಲಿ ಅಬ್ಬರಿಸಿದ್ದರೂ, ಆರಂಭದಿಂದಲೂ ಸಿನಿಪ್ರಿಯರಲ್ಲಿ ಅತಿ ಹೆಚ್ಚು ಕೌತುಕ ಮೂಡಿಸಿದ್ದು ಸೀತಾದೇವಿಯ ಪಾತ್ರ. ತಮ್ಮ ಸಹಜ ಸೌಂದರ್ಯ ಮತ್ತು ನೈಜ ಅಭಿನಯಕ್ಕೆ ಹೆಸರಾಗಿರುವ ಸಾಯಿ ಪಲ್ಲವಿ ಈ ಪಾತ್ರವನ್ನು ನಿರ್ವಹಿಸಿದ್ದು, ಸಿನಿಮಾ ಬಿಡುಗಡೆಯಾದ ಬೆನ್ನಲ್ಲೇ ಅವರ ನಟನೆ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಚರ್ಚೆ ಶುರುವಾಗಿದೆ.
ನೆಟ್ಟಿಗರಿಂದ ಸಾಯಿ ಪಲ್ಲವಿಗೆ ಭಾರಿ ಮೆಚ್ಚುಗೆ
ಈ ಚಿತ್ರ ವೀಕ್ಷಿಸಿದ ಬಹುತೇಕ ಸಿನಿಮಾ ವಿಮರ್ಶಕರು, ಪ್ರೇಕ್ಷಕರು ಸಾಯಿ ಪಲ್ಲವಿ ಅವರ ಅಭಿನಯವನ್ನು ಮುಕ್ತಕಂಠದಿಂದ ಕೊಂಡಾಡುತ್ತಿದ್ದಾರೆ. ಯಾವುದೇ ಅತಿರೇಕದ ಮೇಕಪ್ ಇಲ್ಲದೆ, ಸಹಜ ಮುಗ್ಧತೆಯಲ್ಲೇ ಸೀತಾದೇವಿಯ ಪಾವಿತ್ರ್ಯತೆ, ಘನತೆ ಮತ್ತು ಮುಖದಲ್ಲಿನ ಅಪರೂಪದ ಪ್ರಶಾಂತತೆಯನ್ನು ತೆರೆಯ ಮೇಲೆ ತಂದು ದೈವಿಕ ಅನುಭವ ಕಟ್ಟಿಕೊಟ್ಟಿದ್ದಾರೆ ಎಂದು ನೆಟ್ಟಿಗರು ಶ್ಲಾಘಿಸುತ್ತಿದ್ದಾರೆ. ಸಾಯಿ ಪಲ್ಲವಿ ಅವರ ಅಭಿನಯವು ಅತ್ಯಂತ ಭಾವಪೂರ್ಣವಾಗಿದ್ದು, ಪ್ರೇಕ್ಷಕರ ಮನಸ್ಸಿಗೆ ತೀರಾ ಹತ್ತಿರವಾಗುವಂತೆ ಮಾಡಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
ಸೀತೆಯನ್ನ ತೋರಿಸಿರುವ ರೀತಿ ಅಮೋಘ
ವಿವಿಧ ಚಿತ್ರರಂಗಗಳ ಹಲವು ಸೆಲೆಬ್ರಿಟಿಗಳು ಚಿತ್ರತಂಡಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಶ್ರೀರಾಮನಾಗಿ ರಣಬೀರ್ ಕಪೂರ್ ಮತ್ತು ಸೀತೆಯಾಗಿ ಸಾಯಿ ಪಲ್ಲವಿ ಪರಕಾಯ ಪ್ರವೇಶ ಮಾಡಿ ಪಾತ್ರಗಳಿಗೆ ಜೀವ ತುಂಬಿದ್ದಾರೆ ಎಂದು ಅವರು ಬಣ್ಣಿಸಿದ್ದಾರೆ. ವಿಶೇಷವಾಗಿ, ಈ ಚಿತ್ರದಲ್ಲಿ ಸೀತೆಯನ್ನು ಕೇವಲ ತ್ಯಾಗಮಯಿಯನ್ನಾಗಿ ಮಾತ್ರವಲ್ಲದೆ, ಪೌರಾಣಿಕ ಹಿನ್ನೆಲೆಯ ಧೈರ್ಯಶಾಲಿ ಸ್ತ್ರೀಯಾಗಿ ಬಿಂಬಿಸಲಾಗಿದೆ. ಯುದ್ಧ ಕೌಶಲ್ಯ ಹಾಗೂ ಕೆಲ ಸಾಹಸಮಯ ಸನ್ನಿವೇಶಗಳಲ್ಲಿ ಸಾಯಿ ಪಲ್ಲವಿ ತೋರಿದ ದಿಟ್ಟತನ ಮತ್ತು ಶೌರ್ಯ ಪ್ರೇಕ್ಷಕರ ವಿಶೇಷ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.
ಸಾಯಿ ಪಲ್ಲವಿಗೆ ಭಾರಿ ಮೆಚ್ಚುಗೆ
#SaiPallavi has done decently well in her role, but the divine aura that Sita Devi is supposed to carry feels missing! Honestly, she seems a bit miscast. Her next big project is #Kalki Part 2, which also demands that divine aura, grace and commanding screen presence.
— Movies4u Official (@Movies4u_Officl) November 5, 2026
ಈ ಚಿತ್ರ ಬಿಡುಗಡೆಗೂ ಮುನ್ನ ಸೀತೆ ಮಾತೆಯ ಪಾತ್ರಕ್ಕೆ ಸಾಯಿ ಪಲ್ಲವಿ ಸೂಕ್ತ ಆಯ್ಕೆ ಅಲ್ಲ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ಆ ಟೀಕೆಗಳಿಗೆ ತಮ್ಮ ನಟನೆಯಿಂದಲೇ ಉತ್ತರ ನೀಡಿದ್ದಾರೆ ಸಾಯಿ ಪಲ್ಲವಿ. ಒಟ್ಟಾರೆಯಾಗಿ ಸಾಯಿ ಪಲ್ಲವಿ ತಮ್ಮ ನಟನೆ, ಸರಳತೆ ಹಾಗೂ ಅಭಿವ್ಯಕ್ತಿಗಳ ಮೂಲಕ ಎಲ್ಲ ಟೀಕೆಗಳಿಗೆ ತಿರುಗೇಟು ನೀಡಿ, ಸೀತಾ ಮಾತೆಯ ಪಾತ್ರಕ್ಕೆ ಸಂಪೂರ್ಣ ನ್ಯಾಯ ಒದಗಿಸಿದ್ದಾರೆ ಎಂಬುದು ಸಿನಿಪ್ರಿಯರ ವಲಯದಿಂದ ಕೇಳಿಬರುತ್ತಿರುವ ಮಾತಾಗಿದೆ.