IND vs AFG: ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯಿಂದ ವಿರಾಟ್ ಕೊಹ್ಲಿ ಔಟ್!
Virat Kohli injured: ಸ್ನಾಯು ಸೆಳೆತದ ಗಾಯಕ್ಕೆ ತುತ್ತಾಗಿರುವ ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಮುಂಬರುವ ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಿಂದ ಹೊರ ನಡೆದಿದ್ದಾರೆ. ಅವರು ಗುಜರಾತ್ ಟೈಟನ್ಸ್ ವಿರುದ್ಧದ 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಫೈನಲ್‌ನಲ್ಲಿ ಗಾಯಕ್ಕೆ ತುತ್ತಾಗಿದ್ದರು.
ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಗೆ ವಿರಾಟ್ ಕೊಹ್ಲಿ ಇಲ್ಲ. -
ನವದೆಹಲಿ: ಭಾರತ ತಂಡದ ಮಾಜಿ ನಾಯಕ ಹಾಗೂ ಆಧುನಿಕ ಕ್ರಿಕೆಟ್ ದಿಗ್ಗಜ ವಿರಾಟ್ ಕೊಹ್ಲಿ (Virat Kohli) ಅವರು ಸ್ನಾಯು ಸೆಳೆತದ ಗಾಯಕ್ಕೆ ತುತ್ತಾಗಿದ್ದು, ಅಫ್ಘಾನಿಸ್ತಾನ ವಿರುದ್ಧದ ಮುಂಬರುವ ಮೂರು ಪಂದ್ಯಗಳ ಏಕದಿನ ಸರಣಿಯಿಂದ (IND vs AFG) ಹೊರನಡೆದಿದ್ದಾರೆ. ಆ ಮೂಲಕ ಏಕದಿನ ಸರಣಿಗೂ ಮುನ್ನ ಶುಭಮನ್ ಗಿಲ್ ನಾಯಕತ್ವದ ಭಾರತ ತಂಡಕ್ಕೆ ಭಾರಿ ಹಿನ್ನಡೆಯಾಗಿದೆ. ಉಭಯ ತಂಡಗಳ ನಡುವಣ ಏಕದಿನ ಸರಣಿ ಜೂನ್ 13 ರಿಂದ ಜೂನ್ 20ರವರೆಗೆ ನಡೆಯಲಿದೆ. ಅಂದ ಹಾಗೆ ಗುಜರಾತ್ ಟೈಟನ್ಸ್ ವಿರುದ್ಧದ 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ದೊಡ್ಡ ಇನಿಂಗ್ಸ್ ಆಡಿದ್ದರು.
ವಿರಾಟ್ ಕೊಹ್ಲಿ ಅವರು 42 ಎಸೆತಗಳಲ್ಲಿ ಅಜೇಯ 75 ರನ್‌ಗಳ ಅಮೋಘ ಇನಿಂಗ್ಸ್ ಆಡಿ ಅಹಮದಾಬಾದ್‌ನಲ್ಲಿ ನಡೆದಿದ್ದ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಐದು ವಿಕೆಟ್‌ಗಳ ಭರ್ಜರಿ ಗೆಲುವಿನತ್ತ ಮುನ್ನಡೆಸಿದರು. ಪಂದ್ಯದ ಅಂತಿಮ ಹಂತದಲ್ಲಿ ಕೊಹ್ಲಿ ಓಡುವಾಗ ಅಸ್ವಸ್ಥತೆಯಿಂದ ಬಳಲುತ್ತಿರುವುದು ಕಂಡುಬಂದರೂ, ಅವರು ಕೊನೆಯವರೆಗೂ ಕ್ರೀಸ್‌ನಲ್ಲಿ ಉಳಿದು ತಂಡಕ್ಕೆ ಅದ್ಭುತ ಗೆಲುವು ತಂದುಕೊಟ್ಟರು.
IPL 2026: ವೈಭವ್ ಸೂರ್ಯವಂಶಿಗೆ ವಿರಾಟ್ ಕೊಹ್ಲಿ ನೀಡಿದ್ದ ಸಂದೇಶವನ್ನು ರಿವೀಲ್ ಮಾಡಿದ ಆರ್‌ಸಿಬಿ!
ಫೈನಲ್ ಪಂದ್ಯದ ವೇಳೆ ಕೊಹ್ಲಿಗೆ ಗಾಯವಾಗಿದ್ದು, ಬಳಿಕ ನಡೆಸಿದ ಸ್ಕ್ಯಾನ್ ವರದಿಯಲ್ಲಿ ಡಿಸ್ಟಲ್ ಸೆಮಿಮೆಂಬ್ರನೋಸಸ್ ಟೆಂಡನ್ ಟಿಯರ್ (Distal Semimembranosus Tendon Tear) ಆಗಿರುವುದು ಪತ್ತೆಯಾಗಿದೆ ಎಂದು ತಿಳಿದುಬಂದಿದೆ. 2026ರ ಐಪಿಎಲ್ ಋತುವಿನಲ್ಲಿ ಕೊಹ್ಲಿ ಅದ್ಭುತ ಪ್ರದರ್ಶನ ನೀಡಿ, 16 ಪಂದ್ಯಗಳಲ್ಲಿ 56.25ರ ಸರಾಸರಿಯಲ್ಲಿ ಹಾಗೂ 165.85ರ ಸ್ಟ್ರೈಕ್‌ರೇಟ್‌ನೊಂದಿಗೆ ಒಟ್ಟು 675 ರನ್‌ಗಳನ್ನು ಕಲೆಹಾಕಿದರು.
ಆದಾಗ್ಯೂ, ಗಾಯದ ತೀವ್ರತೆ ಎಷ್ಟಿದೆ ಮತ್ತು ಅವರು ಎಷ್ಟು ಕಾಲ ಕ್ರಿಕೆಟ್‌ನಿಂದ ದೂರ ಉಳಿಯಬೇಕಾಗುತ್ತದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ವೈದ್ಯಕೀಯ ತಂಡದ ಮುಂದಿನ ಮೌಲ್ಯಮಾಪನದ ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗುವ ನಿರೀಕ್ಷೆಯಿದೆ.
ಭಾರತ ಟಿ20ಐ ತಂಡದ ನಾಯಕತ್ವದ ರೇಸ್‌ನಲ್ಲಿ ಮೂವರು ಆಟಗಾರರು, ಜೂ 4ಕ್ಕೆ ಬಿಸಿಸಿಐ ಮೀಟಿಂಗ್!
2027ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆಡುವ ಗರಿಯನ್ನು ಇಟ್ಟಕೊಂಡಿರುವ ವಿರಾಟ್ ಕೊಹ್ಲಿ, 2026ರ ಐಪಿಎಲ್ ಟೂರ್ನಿಯಲ್ಲಿನ ಫಾರ್ಮ್ ಅನ್ನು ಆಫ್ಘನ್ ವಿರುದ್ಧದ ಸರಣಿಯಲ್ಲಿಯೂ ಮುಂದುವರಿಸಲು ಎದುರು ನೋಡುತ್ತಿದ್ದರು. ಆದರೆ, ಅವರು ಸ್ನಾಯು ಸೆಳೆತಕ್ಕೆ ತುತ್ತಾಗಿರುವುದು ಭಾರಿ ಹಿನ್ನಡೆಯಾಗಿದೆ. 2025ರಲ್ಲಿ ಕೊಹ್ಲಿ ಒಡಿಐ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನವನ್ನು ತೋರಿದ್ದರು. ಅವರು 13 ಪಂದ್ಯಗಳಿಂದ 651 ರನ್‌ಗಳನ್ನು ಕಲೆ ಹಾಕಿದ್ದಾರೆ, ಇದರಲ್ಲಿ ಅವರು ನಾಲ್ಲು ಅರ್ಧಶತಕಗಳನ್ನು ಬಾರಿಸಿದ್ದಾರೆ.
ಅದೇ ಲಯವನ್ನು ಅವರು 2026ರಲ್ಲಿಯೂ ಮುಂದುವರಿಸಿದ್ದು, ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಸರಣಿಯಲ್ಲಿ 240 ರನ್‌ಗಳನ್ನು ಕಲೆ ಹಾಕಿದ್ದರು. ಇದರಲ್ಲಿ ಅವರು ಒಂದು ಶತಕ ಹಾಗೂ ಒಂದು ಅರ್ಧಶತಕವನ್ನು ಸಿಡಿಸಿದ್ದಾರೆ. ಆಫ್ಘನ್ ವಿರುದ್ಧದ ಏಕದಿನ ಸರಣಿಯಲ್ಲಿ ವಿರಾಟ್ ಕೊಹ್ಲಿ ಅವರ ಬದಲಿ ಸ್ಥಾನಕ್ಕೆ ಇನ್ನೂ ಯಾರನ್ನೂ ಬಿಸಿಸಿಐ ಹೆಸರಿಸಿಲ್ಲ. ಸ್ನಾಯು ಸೆಳೆತದ ಗಾಯದಿಂದಾಗಿ ಜುಲೈ 14 ರಿಂದ 19ವರೆಗೆ ಇಂಗ್ಲೆಂಡ್ ವಿರದ್ಧದ ಏಕದಿನ ಸರಣಿಗೂ ಅವರು ಅನುಮಾನ ಎಂದು ಹೇಳಲಾಗುತ್ತಿದೆ.
ಆಫ್ಘಾನ್ ಟೆಸ್ಟ್ ಪಂದ್ಯಕ್ಕೆ ಮೊಹಮ್ಮದ್ ಸಿರಾಜ್ ಅನುಮಾನ; ಔಕಿಬ್ ನಬಿ ತಂಡ ಸೇರ್ಪಡೆ ಸಾಧ್ಯತೆ
ಅಫ್ಘಾನಿಸ್ತಾನ ಏಕದಿನ ಸರಣಿಗೆ ಭಾರತ ತಂಡ
ಶುಭಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ಶ್ರೇಯಸ್ ಅಯ್ಯರ್ (ಉಪನಾಯಕ), ಕೆಎಲ್ ರಾಹುಲ್ (ವಿಕೆಟ್-ಕೀಪರ್), ಇಶಾನ್ ಕಿಶನ್ (ವಿಕೆಟ್-ಕೀಪರ್), ಹಾರ್ದಿಕ್ ಪಾಂಡ್ಯ, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಅರ್ಷದೀಪ್ ಸಿಂಗ್, ಪ್ರಸಿಧ್ ಕೃಷ್ಣ, ಪ್ರಿನ್ಸ್ ಯಾದವ್, ಗುರ್ನೂರ್ ಯಾದವ್, ಹರ್ಷ್ ದುಬೇ