ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs AUS-ʻಶ್ರೇಯಸ್‌ ಅಯ್ಯರ್‌ರನ್ನು ನೋಡಿʼ: ವಿರಾಟ್‌ ಕೊಹ್ಲಿಗೆ ಮೊಹಮ್ಮದ್‌ ಕೈಫ್‌ ಸಲಹೆ!

ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ವಿರಾಟ್ ಕೊಹ್ಲಿ ಅವರು ಸತತ ಎರಡು ಪಂದ್ಯಗಳಲ್ಲಿ ಶೂನ್ಯಕ್ಕೆ ಔಟಾಗಿರುವುದು ಅವರ ಲಯದ ಬಗ್ಗೆ ಕಳವಳ ಹುಟ್ಟುಹಾಕಿದೆ. ಈ ಹಿನ್ನೆಲೆಯಲ್ಲಿ ಮಾಜಿ ಟೀಮ್ ಇಂಡಿಯಾ ಆಟಗಾರ ಮೊಹಮ್ಮದ್ ಕೈಫ್, ಶ್ರೇಯಸ್ ಅಯ್ಯರ್ ಅವರ ಸ್ಥಿರತೆ ನೋಡಿ ಕೊಹ್ಲಿಯವರು ಕಲಿಯಬೇಕಿದೆ ಎಂದು ಹೇಳಿದ್ದಾರೆ.

IND vs AUS: ವಿರಾಟ್‌ ಕೊಹ್ಲಿಗೆ ಮೊಹಮ್ಮದ್‌ ಕೈಫ್‌ ಮಹತ್ವದ ಸಲಹೆ!

ವಿರಾಟ್‌ ಕೊಹ್ಲಿಗೆ ಮಹತ್ವದ ಸಲಹೆ ನೀಡಿದ ಮೊಹಮ್ಮದ್‌ ಕೈಫ್‌. -

Profile Ramesh Kote Oct 24, 2025 8:47 PM

ಅಡಿಲೇಡ್: ಕಾಂಗರೂ ನಾಡಿನಲ್ಲಿ ಭಾರತ ತಂಡ ಸತತ ಎರಡು ಪಂದ್ಯಗಳನ್ನು ಸೋತು ಏಕದಿನ ಸರಣಿಯನ್ನು (IND vs AUS) ಕಳೆದುಕೊಂಡಿದೆ. ಇನ್ನು ಮೂರನೇ ಪಂದ್ಯದಲ್ಲಿ ಗೆದ್ದು ಅತಿಥೇಯ ತಂಡದ ವಿರುದ್ಧ ಕ್ಲೀನ್ ಸ್ವೀಪ್ ಮುಜುಗರದಿಂದ ತಪ್ಪಿಸಿಕೊಳ್ಳಲು ಶುಭಮನ್‌ ಗಿಲ್‌ ನಾಯಕತ್ವದ ಟೀಮ್‌ ಇಂಡಿಯಾ ಎದುರು ನೋಡುತ್ತಿದೆ. ಸರಣಿಯ ಪ್ರಮುಖ ಆಕರ್ಷಣೆಯಾಗಿರುವ ವಿರಾಟ್ ಕೊಹ್ಲಿ (Virat Kohli) ಸತತ ಎರಡು ಪಂದ್ಯಗಳಲ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿ ಲಯಕ್ಕೆ ಮರಳುವಲ್ಲಿ ವಿಫಲರಾಗಿದ್ದಾರೆ. ಒಂದು ವೇಳೆ ಅವರು ಫಾರ್ಮ್ ಕಂಡುಕೊಳ್ಳದಿದ್ದರೆ ಮುಂಬರುವ ಏಕದಿನ ವಿಶ್ವಕಪ್ ತಂಡಕ್ಕೆ ಆಯ್ಕೆಯ ಬಗ್ಗೆ ಪ್ರಶ್ನೆಗಳು ಶುರುವಾಗಬಹುದು. ಇದರ ನಡುವೆ ಮಾಜಿ ಟೀಮ್ ಇಂಡಿಯಾ ಆಟಗಾರ ಮೊಹಮ್ಮದ್ ಕೈಫ್ (Mohammad Kaif)ಕೊಹ್ಲಿಯವರಿಗೆ ಉಪಯುಕ್ತ ಸಲಹೆಯನ್ನು ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಕೈಫ್, ಆಸ್ಟ್ರೇಲಿಯಾ ವಿರುದ್ಧದ ಪ್ರಸ್ತುತ ಏಕದಿನ ಸರಣಿಯಲ್ಲಿ ದೀರ್ಘ ವಿರಾಮದ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿರುವ ಕೊಹ್ಲಿ, ತಮ್ಮ ಏಕದಿನ ವೃತ್ತಿಜೀವನದಲ್ಲಿ ಮೊದಲ ಬಾರಿ ಸತತ ಎರಡು ಪಂದ್ಯಗಳಲ್ಲಿ ಶೂನ್ಯಕ್ಕೆ ಔಟಾಗಿದ್ದಾರೆ. 36ನೇ ವರ್ಷದ ಕೊಹ್ಲಿ ಭಾರತ ಎ ಪಂದ್ಯಗಳಲ್ಲಿ ಸ್ಥಿರವಾಗಿ ಆಡುತ್ತಿರುವ ಶ್ರೇಯಸ್ ಅಯ್ಯರ್ ಅವರಿಂದ ಕಲಿಯಬೇಕು. ವಿಶೇಷವಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೀರ್ಘಾವಧಿ ಕಾಲ ದೂರ ಉಳಿದ ಬಳಿಕ ಫಾರ್ಮ್ ಅನ್ನು ಕಾಪಾಡಿಕೊಳ್ಳುವಲ್ಲಿ ಆಟದ ಸಮಯ ಮತ್ತು ಮಾನಸಿಕ ಸಿದ್ಧತೆ ತುಂಬಾ ಮುಖ್ಯ ಎಂದು ಹೇಳಿದ್ದಾರೆ.

IND vs AUS: ಮೂರನೇ ಏಕದಿನ ಪಂದ್ಯಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್‌ XI ವಿವರ!

ಈ ಕುರಿತು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿರುವ ಮೊಹಮ್ಮದ್ ಕೈಫ್, "ನಾನು ಇತ್ತೀಚೆಗೆ ಶ್ರೇಯಸ್ ಅಯ್ಯರ್ ಅವರನ್ನು ಭೇಟಿಯಾಗಿದ್ದೆ ಮತ್ತು ಅವರ ನಿಲುವು ಮತ್ತು ಲಯದ ಬಗ್ಗೆ ಕೇಳಿದೆ. ಅವರು ರೆಡ್-ಬಾಲ್ ಕ್ರಿಕೆಟ್‌ನಿಂದ ವಿರಾಮ ತೆಗೆದುಕೊಂಡು ಟಿ20ಐಗಳಿಂದಲೂ ದೂರ ಉಳಿದ ನಂತರ ಪ್ರಸ್ತುತ ಏಕದಿನ ಪಂದ್ಯಗಳನ್ನು ಮಾತ್ರ ಆಡುತ್ತಿರುವುದರಿಂದ, ಅವರು ಇನ್ನೂ ಹೇಗೆ ಇಷ್ಟೊಂದು ನಿರರ್ಗಳವಾಗಿ ಆಡುತ್ತಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳಲು ನಾನು ಬಯಸುತ್ತೇನೆ. ಅವರು ಮಾನಸಿಕವಾಗಿ ಸ್ಥಿರರಾಗಿದ್ದಾರೆ, ಅವರ ಆಟವನ್ನು ಒಳಗಿನಿಂದ ಹೊರಗೆ ತಿಳಿದಿದ್ದಾರೆ ಮತ್ತು ಆಟದ ಬಗೆಗಿನ ಅವರ ಮನಸ್ಥಿತಿ ಸ್ಪಷ್ಟವಾಗಿದೆ. ಅವರು ಭಾರತ ಎ ಪಂದ್ಯಗಳಲ್ಲಿಯೂ ಆಡಿದ್ದರು, ಅದಕ್ಕಾಗಿಯೇ ವಿರಾಟ್ ಮತ್ತು ರೋಹಿತ್ ಅದೇ ರೀತಿ ಮಾಡುವುದನ್ನು ಪರಿಗಣಿಸಬೇಕು ಎಂದು ನಾನು ಹೇಳುತ್ತೇನೆ," ಎಂದು ಕೈಫ್ ತಿಳಿಸಿದ್ದಾರೆ.

"ಅಯ್ಯರ್ ಅವರ ನಿರರ್ಗಳತೆ ಸಕ್ರಿಯರಾಗಿರುವುದರಿಂದ ಬರುತ್ತದೆ. ಈ ಸಮಯದಲ್ಲಿ ವಿರಾಟ್‌ನಂತೆ ಅವರು ಎಂದಿಗೂ ಸಂಪರ್ಕದಿಂದ ಹೊರಗುಳಿಯುವುದಿಲ್ಲ. ವಿರಾಟ್ ಪ್ರಸ್ತುತ ಅಸ್ಥಿರವಾಗಿ ಕಾಣುತ್ತಾರೆ, ಆದರೆ ಅಯ್ಯರ್ ನಿಯಮಿತವಾಗಿ ಆಡುತ್ತಿದ್ದಾರೆ ಮತ್ತು ಅದು ಅವರ ಆಟದಲ್ಲಿ ಕಂಡುಬರುತ್ತದೆ," ಎಂದು ಕೈಫ್ ವಿವರಿಸಿದ್ದಾರೆ.

IND vs AUS: ತಮ್ಮ ಬ್ಯಾಟಿಂಗ್‌ ಸ್ಟ್ಯಾನ್ಸ್‌ ಬದಲಿಸಿಕೊಳ್ಳಲು ಕಾರಣ ತಿಳಿಸಿದ ಶ್ರೇಯಸ್‌ ಅಯ್ಯರ್‌!

2027ರ ಐಸಿಸಿ ಏಕದಿನ ವಿಶ್ವಕಪ್ ಸಮೀಪಿಸುತ್ತಿರುವುದರಿಂದ, ಸತತವಾಗಿ ಸೊನ್ನೆಗಳಿಗೆ ಔಟ್ ಆಗುತ್ತಿರುವುದು ಕೊಹ್ಲಿಯ ಪ್ರಸ್ತುತ ಫಾರ್ಮ್ ಬಗ್ಗೆ ಕಳವಳವನ್ನುಂಟುಮಾಡಿದೆ. ಮಾಜಿ ನಾಯಕ ತಮ್ಮ ಲಯವನ್ನು ಸಾಬೀತುಪಡಿಸಲು ಲಭ್ಯವಿರುವ ಪ್ರತಿಯೊಂದು ಅಂತಾರಾಷ್ಟ್ರೀಯ ಪಂದ್ಯದಲ್ಲೂ ಉತ್ತಮ ಪ್ರದರ್ಶನ ತೋರಬೇಕಾಗುತ್ತದೆ. ಆಸ್ಟ್ರೇಲಿಯಾ ವಿರುದ್ಧದ ಎರಡೂ ಏಕದಿನ ಪಂದ್ಯಗಳಲ್ಲಿ ಸೋತ ನಂತರ, ಕೊಹ್ಲಿ ಈಗ ಅಕ್ಟೋಬರ್ 25 ರಂದು ಸಿಡ್ನಿಯಲ್ಲಿ ನಡೆಯಲಿರುವ ಸರಣಿಯ ಅಂತಿಮ ಪಂದ್ಯದಲ್ಲಿ ಲಯಕ್ಕೆ ಮರಳಲು ಎದುರು ನೋಡುತ್ತಿದ್ದಾರೆ.