ʻಭಾರತ ತಂಡದಲ್ಲಿ ಸ್ಪರ್ಧೆ ಹೆಚ್ಚಾಗುತ್ತಿದೆʼ: ವಿರಾಟ್ ಕೊಹ್ಲಿಗೆ ರವಿ ಶಾಸ್ತ್ರಿ ಎಚ್ಚರಿಕೆ!
ಆಸ್ಟ್ರೇಲಿಯಾ ವಿರುದ್ದ ಏಕದಿನ ಸರಣಿಯ ಆರಂಭಿಕ ಎರಡೂ ಪಂದ್ಯಗಳಲ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿಗೆ, ಮಾಜಿ ಹೆಡ್ ಕೋಚ್ ರವಿ ಶಾಸ್ತ್ರಿ ಎಚ್ಚರಿಕೆ ನೀಡಿದ್ದಾರೆ. ತಂಡದಲ್ಲಿ ಸದ್ಯ ಸ್ಪರ್ಧೆ ಹೆಚ್ಚಾಗಿದೆ, ಹಾಗಾಗಿ ನೀವು ಬಹುಬೇಗ ಫಾರ್ಮ್‌ಗೆ ಮರಳಬೇಕೆಂದು ಕಿವಿ ಮಾತು ಕೇಳಿದ್ದಾರೆ.
ವಿರಾಟ್ ಕೊಹ್ಲಿಗೆ ರವಿ ಶಾಸ್ತ್ರಿ ಎಚ್ಚರಿಕೆ ನೀಡಿದ್ದಾರೆ. -
ನವದಹೆಲಿ: ದೀರ್ಘಾವಧಿ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿದ ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿಗೆ (Virat Kohli) ಭಾರಿ ನಿರಾಶೆಯಾಗಿದೆ. ಆಸ್ಟ್ರೇಲಿಯಾ ವಿರುದ್ದ ಪ್ರಸ್ತುತ ನಡೆಯುತ್ತಿರುವ ಏಕದಿನ ಸರಣಿಯ (IND vs AUS) ಆರಂಭಿಕ ಎರಡೂ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಡಕ್‌ಔಟ್ ಆಗಿದ್ದರು. ಆ ಮೂಲಕ ತಮ್ಮ ಏಕದಿನ ಕ್ರಿಕೆಟ್ ವೃತ್ತಿ ಜೀವನದಲ್ಲಿ ಈ ಘಟನೆ ನಡೆದಿದ್ದು ಇದೇ ಮೊದಲು. ಅಂದ ಹಾಗೆ 2027ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆಡಬೇಕೆಂದು ಬಯಸುತ್ತಿರುವ ವಿರಾಟ್ ಕೊಹ್ಲಿಗೆ ಟೀಮ್ ಇಂಡಿಯಾ ಮಾಜಿ ಹೆಡ್ ಕೋಚ್ ರವಿ ಶಾಸ್ತ್ರಿ (Ravi Shastri) ಎಚ್ಚರಿಕೆ ನೀಡಿದ್ದಾರೆ. ತಂಡದಲ್ಲಿ ಪೈಪೋಟಿ ಹೆಚ್ಚಾಗುತ್ತಿದೆ, ಹಾಗಾಗಿ ನೀವು ಆದಷ್ಟು ಬೇಗ ಫಾರ್ಮ್‌ಗೆ ಮರಳುವಂತೆ ಕೊಹ್ಲಿಗೆ ಅವರು ಸಲಹೆ ನೀಡಿದ್ದಾರೆ.
ಫಾಕ್ಸ್ ಸ್ಪೋರ್ಟ್ಸ್‌ಗೆ ಕಾಮೆಂಟರಿ ಮಾಡುತ್ತಿದ್ದ ವೇಳೆ ಮಾತನಾಡಿದ ರವಿ ಶಾಸ್ತ್ರಿ, "ಅವರು (ವಿರಾಟ್ ಕೊಹ್ಲಿ) ಆದಷ್ಟು ಬೇಗ ತಮ್ಮ ಫಾರ್ಮ್ ಕಂಡುಕೊಂಡು ರನ್ ಗಳಿಸಬೇಕಾಗಿದೆ. ಸದ್ಯ ಭಾರತ ತಂಡದಲ್ಲಿ ಸ್ಪರ್ಧೆ ತೀವ್ರವಾಗಿದ್ದು, ವಿರಾಟ್ ಕೊಹ್ಲಿ ಆಗಲಿ ಅಥವಾ ರೋಹಿತ್ ಶರ್ಮಾ ಆಗಲಿ, ತಂಡದಲ್ಲಿ ಯಾವುದೇ ಆಟಗಾರ ಆರಾಮಾ ಮನಸ್ಥಿತಿಗೆ ಜಾರಬಾರದು. ತಂಡದಲ್ಲಿ ಸದ್ಯ ಸ್ಪರ್ಧೆ ಇದೆ ಹಾಗೂ ಇದು ಸುಲಭವಲ್ಲ. ಎರಡನೇ ಪಂದ್ಯದಲ್ಲಿಯೂ ಅವರು ಅವಕಾಶವನ್ನು ಕೈಚೆಲ್ಲಿಕೊಂಡಿದ್ದಾರೆ. ಅವರು ತನ್ನ ಫುಟ್‌ವರ್ಕ್‌ನ ವಿಷಯದಲ್ಲಿ ಸ್ವಲ್ಪ ಹಿಂಜರಿಕೆ ಹೊಂದಿದ್ದರು. ಇದು ಆಗಾಗ್ಗೆ ಸಂಭವಿಸುವುದಿಲ್ಲ, ಏಕದಿನ ಕ್ರಿಕೆಟ್‌ನಲ್ಲಿ ಅವರ ದಾಖಲೆ ಅದ್ಭುತವಾಗಿದೆ, ಆದ್ದರಿಂದ ಅವರು ಸತತ ಎರಡು ಬಾರಿ ಶೂನ್ಯಕ್ಕೆ ಔಟಾದರೆ, ಅವರು ನಿರಾಶೆಗೊಳ್ಳುತ್ತಾರೆ," ಎಂದು ಹೇಳಿದ್ದಾರೆ.
IND vs AUS: ಮೂರನೇ ಏಕದಿನ ಪಂದ್ಯಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್ XI ವಿವರ!
ವಿರಾಟ್ ಕೊಹ್ಲಿಗೆ ರವಿ ಶಾಸ್ತ್ರಿ ಬೆಂಬಲ
ಅಂದಹಾಗೆ ಈ ಪಂದ್ಯಕ್ಕೂ ಮುನ್ನ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾಗೆ ರವಿ ಶಾಸ್ತ್ರಿ ಬೆಂಬಲ ವ್ಯಕ್ತಪಡಿಸಿದ್ದರು. ಅಡಿಲೇಡ್ ಪಂದ್ಯದಲ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ ಬಳಿಕ ವಿರಾಟ್ ಕೊಹ್ಲಿ, ಗ್ಯಾಲರಿಯಲ್ಲಿ ಕುಳಿತಿದ್ದ ವೀಕ್ಷಕರತ್ತ ಕೈ ತೋರಿಸಿದ್ದರು. ಇದರಿಂದ ಹಲವರು ವಿರಾಟ್ ಕೊಹ್ಲಿ ನಿವೃತ್ತಿ ಘೋಷಿಸಬಹುದೆಂದು ಅನುಮಾನ ವ್ಯಕ್ತಪಡಿಸಿದ್ದರು. ಆದರೆ, ಇದನ್ನು ರವಿ ಶಾಸ್ತ್ರಿ ತಳ್ಳಿ ಹಾಕಿದ್ದಾರೆ. ಎರಡು ಬಾರಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ ಬಳಿಕ ವಿದಾಯ ಹೇಳುವ ಮನಸ್ಥಿತಿ ವಿರಾಟ್ ಕೊಹ್ಲಿಗಿಲ್ಲ ಎಂದು ರವಿ ಶಾಸ್ತ್ರಿ ತಿಳಿಸಿದ್ದಾರೆ.
"ಎರಡು ಬಾರಿ ಡಕ್‌ಔಟ್ ಆದ ಬಳಿಕ ವಿದಾಯ ಹೇಳುವ ಆಟಗಾರ ವಿರಾಟ್ ಕೊಹ್ಲಿ ಅಲ್ಲ. ಸಿಡ್ನಿಯಲ್ಲಿ ಉತ್ತಮವಾಗಿ ಆಡಿದ ಬಳಿಕ ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿ ಹಾಗೂ 2027ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ಅವರ ಜೊತೆ ಆಡಿದ ಬಳಿಕ ಅಗ್ರ ಸ್ಥಾನದಲ್ಲಿರುವಾಗ ಅವರು ನಿವೃತ್ತಿ ಘೋಷಿಸಲಿದ್ದಾರೆ. ವಿರಾಟ್ ಕೊಹ್ಲಿಯಿಂದ ಇಲ್ಲಿ ದೊಡ್ಡ ಮೊತ್ತ ಮೂಡಿಬಂದಿಲ್ಲವಾದರೆ ಆಸ್ಟ್ರೇಲಿಯನ್ ಅಭಿಮಾನಿಗಳಿಗೆ ದೊಡ್ಡ ನಿರಾಶೆಯಾಗಲಿದೆ. ತಮ್ಮ ಗ್ಲೌಸ್‌ಗಳಿಂದ ಸುಮ್ಮನೆ ಅಭಿಮಾನಿಗಳತ್ತ ನೋಡಿದ್ದಾರೆ ಅಷ್ಟೆ. ದೊಡ್ಡ ಮೊತ್ತವನ್ನು ಕಲೆ ಹಾಕಿದಾಗ, ಬ್ಯಾಟ್ ತೋರಿಸುವುದು, ಹೆಲ್ಮೆಟ್ ತೆಗೆಯುವುದು ಅಥವಾ ಕ್ಯಾಪ್ ತೆಗೆಯವುದು ಸಾಮಾನ್ಯ. ಆದರೆ, ಇದು ಅವರಿಗೆ ನೀಡಿದ ಸ್ವಾಗತ ಮತ್ತು ಗೌರವಕ್ಕಾಗಿ ಜನಸಮೂಹಕ್ಕೆ ಧನ್ಯವಾದ ಹೇಳುವ ಅವರ ಮಾರ್ಗವಾಗಿತ್ತು. ಅದರ ಬಗ್ಗೆ ಜಾಸ್ತಿ ಯೋಚಿಸಬೇಡಿ, ” ಎಂದು ರವಿ ಶಾಸ್ತ್ರಿ ಹೇಳಿದ್ದಾರೆ.
IND vs AUS-ʻಶ್ರೇಯಸ್ ಅಯ್ಯರ್‌ರನ್ನು ನೋಡಿʼ: ವಿರಾಟ್ ಕೊಹ್ಲಿಗೆ ಮೊಹಮ್ಮದ್ ಕೈಫ್ ಸಲಹೆ!
ಸಿಡ್ನಿ ಪಂದ್ಯದಲ್ಲಿ ವಿರಾಟ್ ಕೊಹ್ಲಿಗೆ ಪರೀಕ್ಷೆ
ವಿರಾಟ್ ಕೊಹ್ಲಿ ಆರಂಭಿಕ ಎರಡೂ ಪಂದ್ಯಗಳಲ್ಲಿ ಡಕ್‌ಔಟ್ ಆಗಿದ್ದು, ಅದರಂತೆ ಭಾರತ ತಂಡ ಕೂಡ ಎರಡೂ ಪಂದ್ಯಗಳನ್ನು ಸೋತಿದೆ ಹಾಗೂ ಇನ್ನೂ ಒಂದು ಪಂದ್ಯ ಬಾಕಿ ಇರುವಾಗ ಏಕದಿನ ಸರಣಿಯನ್ನು 0-2 ಅಂತರದಲ್ಲಿ ಕಳೆದುಕೊಂಡಿದೆ. ಇನ್ನು ಮೂರನೇ ಹಾಗೂ ಏಕದಿನ ಸರಣಿಯ ಕೊನೆಯ ಪಂದ್ಯ ಶನಿವಾರ ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ದೊಡ್ಡ ಮೊತ್ತವನ್ನು ಕಲೆ ಹಾಕಬೇಕಾದ ಅಗತ್ಯವಿದೆ.