ಲಂಡನ್: ಇಲ್ಲಿನ ಲಾರ್ಡ್ಸ್ ಅಂಗಣದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ(IND vs ENG) ಎರಡನೇ ದಿನದಾಟದಲ್ಲಿ ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವೆ ಸಮಬಲದ ಹೋರಾಟ ಮೂಡಿ ಬಂದಿತು. ಚೆಂಡು ಬದಲಾವಣೆಯ ವಿವಾದದ ಹೊರತಾಗಿಯೂ ಎರಡನೇ ದಿನ ಪ್ರವಾಸಿ ಟೀಮ್ ಇಂಡಿಯಾ ಯೋಗ್ಯ ಪ್ರದರ್ಶವನ್ನು ತೋರಿದೆ. ಬೌಲಿಂಗ್‌ನಲ್ಲಿ ಜಸ್‌ಪ್ರೀತ್ ಬುಮ್ರಾ (Jasprit Bumrah) 5 ವಿಕೆಟ್ ಕಿತ್ತರೆ, ಬ್ಯಾಟಿಂಗ್‌ನಲ್ಲಿ ಕನ್ನಡಿಗ ಕೆಎಲ್ ರಾಹುಲ್ (KL Rahul) ಅಜೇಯ ಅರ್ಧಶತಕವನ್ನು ಬಾರಿಸಿದ್ದಾರೆ. ಇಂಗ್ಲೆಂಡ್ ತಂಡವನ್ನು ಪ್ರಥಮ ಇನಿಂಗ್ಸ್‌ನಲ್ಲಿ 387 ರನ್‌ಗಳಿಗೆ ಆಲ್‌ಔಟ್ ಮಾಡಿದ ಬಳಿಕ, ಬ್ಯಾಟ್ ಮಾಡಿದ ಭಾರತ ತಂಡ ಎರಡನೇ ದಿನದಾಟದ ಮುಗಿಯುವ ಹೊತ್ತಿಗೆ 43 ಓವರ್‌ಗಳಿಗೆ 3 ವಿಕೆಟ್‌ಗಳ ನಷ್ಟಕ್ಕೆ 145 ರನ್‌ಗಳನ್ನು ಗಳಿಸಿದೆ.
ಪಂದ್ಯದ ಎರಡನೇ ದಿನವಾದ ಶುಕ್ರವಾರ 251 ರನ್‌ಗಳಿಂದ ಪ್ರಥಮ ಇನಿಂಗ್ಸ್ ಮುಂದುವರಿಸಿದ ಇಂಗ್ಲೆಂಡ್ ತಂಡಕ್ಕೆ ಜಸ್‌ಪ್ರೀತ್ ಬುಮ್ರಾ ಆರಂಭದಲ್ಲಿಯೇ ಆಘಾತ ನೀಡಿದರು. ಎರಡನೇ ಬ್ಯಾಟಿಂಗ್‌ನಲ್ಲಿ ಮಿಂಚಿದ್ದ ಬೆನ್ ಸ್ಟೋಕ್ಸ್ (44 ರನ್) ಅವರನ್ನು ಬುಮ್ರಾ ಕ್ಲೀನ್ ಬೌಲ್ಡ್ ಮಾಡಿದರು. ನಂತರ 37ನೇ ಟೆಸ್ಟ್ ಶತಕ ಸಿಡಿಸಿದ ಬಳಿಕ ಜೋ ರೂಟ್ (104) ಅವರನ್ನು ಕೂಡ ಬುಮ್ರಾ ಬೌಲ್ಡ್ ಮಾಡಿದರು. ನಂತರ ಕ್ರಿಸ್ ವೋಕ್ಸ್ ಅವರನ್ನು ಕೂಡ ಬೇಗ ಔಟ್ ಮಾಡಿದರು. ಆ ಮೂಲಕ ಇಂಗ್ಲೆಂಡ್ ತಂಡ 271 ರನ್‌ಗಳಿಗೆ 7 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟ ಸಿಲುಕಿತ್ತು.
IND vs ENG: ಚೆಂಡು ಬದಲಾಯಿಸಿದ ಅಂಪೈರ್ ಜೊತೆ ಶುಭಮನ್ ಗಿಲ್ ವಾಗ್ವಾದ! ವಿಡಿಯೊ
ಪ್ರಮುಖ ಮೂವರು ಬ್ಯಾಟ್ಸ್‌ಮನ್‌ಗಳು ವಿಕೆಟ್ ಒಪ್ಪಿಸಿದ ಬಳಿಕ ಇಂಗ್ಲೆಂಡ್ ತಂಡ 300 ರನ್ ಗಳಿಸುವುದೂ ಅನುಮಾನ ಎಂಬಂತೆ ಸನ್ನಿವೇಶ ಉಂಟಾಗಿತ್ತು. ಆದರೆ, ಜೇಮಿ ಸ್ಮಿತ್ (51) ಹಾಗೂ ಬ್ರೈಡೆನ್ ಕಾರ್ಸ್ (56) ತಲಾ ಅರ್ಧಶತಕಗಳನ್ನು ಬಾರಿಸುವ ಜೊತೆಗೆ ಮುರಿಯದ ಎಂಟನೇ ವಿಕೆಟ್‌ಗೆ 82 ರನ್‌ಗಳ ನಿರ್ಣಾಯಕ ಜೊತೆಯಾಟವನ್ನು ಆಡಿದರು. ಆ ಮೂಲಕ ಇಂಗ್ಲೆಂಡ್ ತಂಡದ ಮೊತ್ತವನ್ನು 350ರ ಗಡಿ ದಾಟಿಸಿದರು. ಆದರೆ, ಮೊಹಮ್ಮದ್ ಸಿರಾಜ್ ಈ ಇಬ್ಬರೂ ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡಿ ಭಾರತದ ಕಮ್‌ಬ್ಯಾಕ್ ನೆರವು ನೀಡಿದರು. ಒಟ್ಟಾರೆ ಇಂಗ್ಲೆಂಡ್ ಪ್ರಥಮ ಇನಿಂಗ್ಸ್‌ನಲ್ಲಿ 112.3 ಓವರ್‌ಗಳಿಗೆ 387 ರನ್‌ಗಳಿಗೆ ಆಲ್‌ಔಟ್ ಆಯಿತು.
ಜಸ್‌ಪ್ರೀತ್ ಬುಮ್ರಾಗೆ 5 ವಿಕೆಟ್
ಭಾರತದ ಪರ ಜಸ್‌ಪ್ರೀತ್ ಬುಮ್ರಾ 5 ವಿಕೆಟ್ ಸಾಧನೆ ಮಾಡಿದರೆ, ಇವರಿಗೆ ಸಾಥ್ ನೀಡಿದ್ದ ನಿತೀಶ್ ರೆಡ್ಡಿ ಹಾಗೂ ಮೊಹಮ್ಮದ್ ಸಿರಾಜ್ ತಲಾ ಎರಡೆರಡು ವಿಕೆಟ್ ಪಡೆದರು. ರವೀಂದ್ರ ಜಡೇಜಾ ಏಕೈಕ ವಿಕೆಟ್ ಪಡೆದರು.
ಭಾರತ: 145-3
ಬಳಿಕ ಪ್ರಥಮ ಇನಿಂಗ್ಸ್ ಆರಂಭಿಸಿದ ಭಾರತ ತಂಡ ಆರಂಭದಲ್ಲಿಯೇ ವಿಕೆಟ್ ಕಳೆದುಕೊಂಡಿತು. ಆರಂಭಿಕ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್, 13 ರನ್ ಗಳಿಸಿದ ಬಳಿಕ ಜೋಫ್ರಾ ಆರ್ಚರ್‌ಗೆ ವಿಕೆಟ್ ಒಪ್ಪಿಸಿದರು. ಎರಡನೇ ವಿಕೆಟ್‌ಗೆ ಕರುಣ್ ನಾಯರ್ ಹಾಗೂ ಕೆಎಲ್ ರಾಹುಲ್ 61 ರನ್‌ಗಳ ಜೊತೆಯಾಟದ ಮೂಲಕ ಭಾರತಕ್ಕೆ ಉತ್ತಮ ಆರಂಭವನ್ನು ತಂದುಕೊಟ್ಟಿದ್ದರು. ಆದರೆ, 62 ಎಸೆತಗಳಲ್ಲಿ 40 ರನ್ ಗಳಿಸಿ ಉತ್ತಮ ಆರಂಭ ಪಡೆದಿದ್ದ ಕರುಣ್ ನಾಯರ್, ನಾಯಕ ಬೆನ್ ಸ್ಟೋಕ್ಸ್‌ಗೆ ಔಟ್ ಆದರು. ನಂತರ ಬಂದ ನಾಯಕ ಶುಭಮನ್ ಗಿಲ್ 16 ರನ್ ಗಳಿಸಿ ಕ್ರಿಸ್ ವೋಕ್ಸ್‌ಗೆ ಶರಣಾದರು.
IND vs ENG: ಅರ್ಧಶತಕ ಬಾರಿಸಿದ ಬಳಿಕ ಸರ್ಫರಾಝ್ ಖಾನ್ ದಾಖಲೆ ಮುರಿದ ಜೇಮಿ ಸ್ಮಿತ್!
ಕೆಎಲ್ ರಾಹುಲ್ ಅರ್ಧಶತಕ
ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್ ಮಾಡಿದ ಕೆಎಲ್ ರಾಹುಲ್, ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದರು. ಅವರು ಎರಡನೇ ದಿನದಾಟದ ಮುಗಿಯುವ ಹೊತ್ತಿಗೆ 113 ಎಸೆತಗಳಲ್ಲಿ 5 ಬೌಂಡರಿಗಳೊಂದಿಗೆ ಅಜೇಯ 53 ರನ್ ಗಳಿಸಿ ಮೂರನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಮತ್ತೊಂದು ತುದಿಯಲ್ಲಿ ರಿಷಭ್ ಪಂತ್ (19*) ಅಜೇಯರಾಗಿ ಉಳಿದಿದ್ದಾರೆ. ಭಾರತ ತಂಡ ಇನ್ನೂ 242 ರನ್‌ಗಳ ಹಿನ್ನಡೆಯಲ್ಲಿದೆ.