ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs ENG: 5 ವಿಕೆಟ್‌ ಕಿತ್ತ ತಮ್ಮ ಬೌಲಿಂಗ್‌ ಪ್ಲ್ಯಾನ್‌ ರಿವೀಲ್‌ ಮಾಡಿದ ಮೊಹಮ್ಮದ್‌ ಸಿರಾಜ್‌!

ಇಂಗ್ಲೆಂಡ್‌ ಹಾಗೂ ಭಾರತದ ನಡುವಣ ಐದು ಪಂದ್ಯಗಳ ಟೆಸ್ಟ್‌ ಸರಣಿ ಡ್ರಾನಲ್ಲಿ ಮುಕ್ತಾಯವಾಗಿದೆ. ಕೆನಿಂಗ್ಟನ್‌ನ ಓವಲ್‌ನಲ್ಲಿ ತೀವ್ರ ರೋಚಕತೆಯನ್ನು ಕೆರಳಿಸಿದ್ದ ಐದನೇ ಟೆಸ್ಟ್‌ ಪಂದ್ಯವನ್ನು ಭಾರತ ತಂಡ 6 ರನ್‌ ರೋಚಕ ಗೆಲುವು ಪಡೆಯಿತು. ಇದರ ಶ್ರೇಯ 5 ವಿಕೆಟ್‌ ಸಾಧನೆ ಮಾಡಿದ ಮೊಹ್ಮಮದ್‌ ಸಿರಾಜ್‌ಗೆ ಸಲ್ಲಬೇಕು.

ತಮ್ಮ ಬೌಲಿಂಗ್‌ ಪ್ಲ್ಯಾನ್‌ ರಿವೀಲ್‌ ಮಾಡಿದ ಮೊಹಮ್ಮದ್‌ ಸಿರಾಜ್‌!

‌ತಮ್ಮ ಬೌಲಿಂಗ್‌ ಪ್ಲ್ಯಾನ್‌ ತಿಳಿಸಿದ ಮೊಹಮ್ಮದ್‌ ಸಿರಾಜ್.

Profile Ramesh Kote Aug 4, 2025 8:53 PM

ಲಂಡನ್‌: ಭಾರತ ಹಾಗೂ ಇಂಗ್ಲೆಂಡ್‌ (IND vs ENG) ನಡುವಣ ಆಂಡರ್ಸನ್‌-ತೆಂಡೂಲ್ಕರ್‌ ಟ್ರೋಫಿಯ ಅಂತಿಮ ಪಂದ್ಯದ ಜಯವನ್ನು ಕೊನೆಯ ಕ್ಷಣದಲ್ಲಿ ಭಾರತ (India) ತನ್ನದಾಗಿಸಿಕೊಂಡಿತು. ಆ ಮೂಲಕ ಐದು ಪಂದ್ಯಗಳ ಟೆಸ್ಟ್‌ ಸರಣಿ ಡ್ರಾನಲ್ಲಿ ಅಂತ್ಯ ಕಂಡಿದೆ. ಓವಲ್‌ ಮೈದಾನದಲ್ಲಿ ಉಭಯ ತಂಡಗಳ ನಡುವೆ ರಣರೋಚಕತೆಯಿಂದ ಕೂಡಿದ್ದ ಈ ಪಂದ್ಯದಲ್ಲಿ ಇಂಗ್ಲೆಂಡ್‌ (England) ತಂಡಕ್ಕೆ ಕೊನೆಯ ದಿನದಾಟದಲ್ಲಿ ಕೇವಲ 35 ರನ್‌ಗಳ ಅಗತ್ಯವಿತ್ತು. ಇತ್ತ ಹೇಗಾದರೂ ಪಂದ್ಯವನ್ನು ಗೆದ್ದು ಸರಣಿ ಸೋಲಿನ ಸುಳಿಯಿಂದ ಪಾರಾಗಲು ಎದುರು ನೋಡುತ್ತಿದ್ದ ಟೀಮ್‌ ಇಂಡಿಯಾಗೆ ನಾಲ್ಕು ವಿಕೆಟ್‌ ಬೇಕಿತ್ತು. ಅದರಂತೆ ಕೊನೆಯ ದಿನದಾಟದಲ್ಲಿ ನಾಲ್ಕು ವಿಕೆಟ್‌ ಕಿತ್ತು ಐತಿಹಾಸಿಕ ಜಯ ದಾಖಲಿಸಬೇಕೆಂದು ಪಣತೊಟ್ಟು ಭಾರತ ತಂಡ ಮೈದಾನಕ್ಕಿಳಿದಿತ್ತು. ತನ್ನ ಯೋಜನೆಯಂತೆ ಇಂಗ್ಲೆಂಡ್‌ ತಂಡವನ್ನು ಆಲೌಟ್‌ ಮಾಡುವಲ್ಲಿ ಭಾರತ ತಂಡದ ಬೌಲರ್‌ಗಳು ಯಶಸ್ವಿಯಾದರು. ಇದರೊಂದಿಗೆ ಭಾರತ ತಂಡ 6 ರನ್‌ಗಳ ರೋಚಕ ಗೆಲುವು ಸಾಧಿಸಿ ಸರಣಿಯನ್ನು 2-2 ಅಂತರದಲ್ಲಿ ಮಾಡಿಕೊಂಡಿತು.

ಈ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಹಿರಿಯ ವೇಗಿ ಮೊಹಮ್ಮದ್‌ ಸಿರಾಜ್‌ 5 ವಿಕೆಟ್ ಮತ್ತು ಪ್ರಸಿಧ್‌ ಕೃಷ್ಣ 4 ವಿಕೆಟ್ ಪಡೆದು, ಇಂಗ್ಲೆಂಡ್‌ ಕೆಳ ಕ್ರಮಾಂಕದ ಬ್ಯಾಟಿಂಗ್‌ ಪಡೆಯನ್ನು ಕಟ್ಟಿ ಹಾಕಿದರು. ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದ ಮೊಹಮ್ಮದ್‌ ಸಿರಾಜ್‌ ಭಾವುಕ ಪ್ರತಿಕ್ರಿಯೆ ನೀಡಿದರು. ಅಲ್ಲದೆ, ಕೊನೆಯ ದಿನ ತಮ್ಮ ಬೌಲಿಂಗ್‌ ರಣತಂತ್ರವೇನೆಂದು ಬಹಿರಂಗಪಡಿಸಿದ್ದಾರೆ.

IND vs ENG: ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ ಅನುಪಸ್ಥಿತಿ ಕಾಡುತ್ತಿದೆ ಎಂದ ಕೆಎಲ್‌ ರಾಹುಲ್!

ಮೊಹಮ್ಮದ್‌ ಸಿರಾಜ್‌ ಹೇಳಿದ್ದೇನು?

"ನಾನು ಸರಿಯಾದ ಜಾಗದಲ್ಲಿ ಪಿಚ್‌ ಮಾಡಬೇಕೆಂದು ಯೋಚಿಸುತ್ತಿದ್ದೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ನಾನು ಹ್ಯಾರಿ ಬ್ರೂಕ್‌ ಅವರ ಕ್ಯಾಚ್‌ ತೆಗೆದುಕೊಂಡ ಬಳಿಕ ಬೌಂಡರಿ ಗೆರೆ ತುಳಿಯುತ್ತೇನೆಂದು ಭಾವಿಸಿರಲಿಲ್ಲ. ಇದು ಪಂದ್ಯಕ್ಕೆ ಟರ್ನಿಂಗ್‌ ಪಾಯಿಂಟ್‌ ಆಗಿತ್ತು. ಹೌದು, ನಾನು ತಂಡಕ್ಕಾಗಿ ಅದನ್ನು ಮಾಡುತ್ತೇನೆಂದು ಯಾವಾಗಲೂ ನಂಬಿದ್ದೇನೆ," ಎಂದು ಮೊಹಮ್ಮದ್‌ ಸಿರಾಜ್‌ ತಿಳಿಸಿದ್ದಾರೆ.

ನಾಲ್ಕನೇ ದಿನ ಹ್ಯಾರಿ ಬ್ರೂಕ್‌ ಅವರ ಕ್ಯಾಚ್‌ ಅನ್ನು ಮೊಹಮ್ಮದ್‌ ಸಿರಾಜ್‌ ಪಡೆದ ನಂತರ ಅರಿವಿಲ್ಲದೆ ಬೌಂಡರಿ ಗೆರೆಯನ್ನು ತುಳಿದಿದ್ದರು. ಇದು ಇಂಗ್ಲೆಂಡ್‌ ತಂಡಕ್ಕೆ ಲಾಭವನ್ನು ತಂದುಕೊಟ್ಟಿತ್ತು. ಏಕೆಂದರೆ ಹ್ಯಾರಿ ಬ್ಯೂಕ್‌ ಸಿಕ್ಕ ಜೀವದಾನದಲ್ಲಿ ಭರ್ಜರಿ ಶತಕವನ್ನು ಬಾರಿಸಿದ್ದರು. ಆದರೆ 30ರ ಪ್ರಾಯದ ವೇಗಿ ಮೊಹಮ್ಮದ್‌ ಸಿರಾಜ್‌, ಯಾವುದಕ್ಕೂ ಒತ್ತಡ ತೆಗೆದುಕೊಳ್ಳದೆ, ಶಾಂತವಾಗಿ ತಮ್ಮ ಕೌಶಲವನ್ನು ಪ್ರದರ್ಶಿಸಿದರು ಹಾಗೂ ಐದು ವಿಕೆಟ್‌ಗಳನ್ನು ಕಬಳಿಸುವ ಮೂಲಕ ಭಾರತಕ್ಕೆ ಪಂದ್ಯವನ್ನು ಗೆದ್ದುಕೊಟ್ಟರು.



ಕೊನೆಯ ದಿನದಂದು ಭಾರತದ ಐತಿಹಾಸಿಕ ಗೆಲುವು ಒಂದು ಗಂಟೆಯೊಳಗೆ ಪೂರ್ಣಗೊಂಡಿತು. ನಾಲ್ಕು ವಿಕೆಟ್‌ಗಳು ಬಾಕಿ ಇರುವಾಗಲೇ ಇಂಗ್ಲೆಂಡ್‌ಗೆ ಇನ್ನೂ 35 ರನ್‌ಗಳ ಅಗತ್ಯವಿತ್ತು. ಆದರೆ ಅಟ್ಕಿನ್ಸನ್, ಸಿರಾಜ್ ಅವರನ್ನು ಆರು ವಿಕೆಟ್‌ಗಳಿಗೆ ಔಟ್ ಮಾಡಿದಾಗ ಅದು ಹತ್ತಿರವಾಗುತ್ತಿತ್ತು. ಆದರೆ ಭುಜದ ಮೂಳೆ ಮುರಿದ ಕ್ರಿಸ್ ವೋಕ್ಸ್, ಒಂದು ಕೈಯಲ್ಲಿ ತನ್ನ ತೋಳನ್ನು ಸ್ಲಿಂಗ್‌ನಲ್ಲಿ ಹಿಡಿದುಕೊಂಡು ಬ್ಯಾಟಿಂಗ್ ನಡೆಸಲು ಹೊರಟಾಗ, ಉದ್ವಿಗ್ನತೆ ಹೆಚ್ಚಾಯಿತು. ಅಟ್ಕಿನ್ಸನ್, ವೋಕ್ಸ್ ಅವರನ್ನು ಸ್ಟ್ರೈಕ್‌ನಿಂದ ರಕ್ಷಿಸಲು ಪ್ರಯತ್ನಿಸಿದರು, ಇನ್ನು ಕೊನೆಯ ಯಾರ್ಕರ್‌ನೊಂದಿಗೆ ಸಿರಾಜ್‌, ಇಂಗ್ಲೆಂಡ್‌ ತಂಡದ ಕೊನೆಯ ವಿಕೆಟ್‌ ಅನ್ನು ಕಿತ್ತರು.

IND vs ENG 5th Test: ಓವಲ್‌ ಟೆಸ್ಟ್‌ ಗೆದ್ದ ಭಾರತ; ಸರಣಿ ಡ್ರಾದಲ್ಲಿ ಅಂತ್ಯ

ಐದನೇ ದಿನದಾಟದಲ್ಲಿ ಆಗಿದ್ದೇನು?

ಎರಡನೇ ಇನಿಂಗ್ಸ್‌ನಲ್ಲಿ ಭಾರತ ನೀಡಿದ್ದ 374ರನ್‌ಗಳ ಗುರಿಯನ್ನು ಬೆನ್ನತ್ತಿದ್ದ ಇಂಗ್ಲೆಂಡ್‌ ಉತ್ತಮ ಆರಂಭ ಕಂಡಿತ್ತು. ನಾಲ್ಕನೇ ದಿನದಾಟದ ಮುಕ್ತಾಯಕ್ಕೆ 6 ವಿಕೆಟ್‌ ನಷ್ಠಕ್ಕೆ 339 ರನ್‌ಗಳನ್ನು ಕಲೆಹಾಕಿ ಗೆಲುವನ್ನು ಐದನೇ ದಿನದಾಟಕ್ಕೆ ಕಾಯ್ದಿರಿಸಿತ್ತು. ಐದನೇ ದಿನದಾಟದಲ್ಲಿ ಆಂಗ್ಲರ ಗೆಲುವಿಗೆ 35 ರನ್‌ಗಳ ಅಗತ್ಯವಿತ್ತು. ಐದನೇ ದಿನದ ಮೊದಲ ಓವರ್‌ನಲ್ಲಿ ಜೇಮಿ ಓವರ್ಟನ್ 2 ಬೌಂಡರಿಗಳನ್ನು ಬಾರಿಸುವ ಮೂಲಕ ಇಂಗ್ಲೆಂಡ್‌ಗೆ ಗೆಲುವಿನ ಆಸೆ ಚಿಗುರಿಸಿದರು. ಬಳಿಕ ಬಾಲ್‌ ಹಿಡಿದ ಸಿರಾಜ್‌ ಜೇಮೀ ಸ್ಮಿತ್ ಅವರನ್ನು ಪೆವಿಲಿಯನ್‌ಗಟ್ಟುವುದರ ಮೂಲಕ ಇಂಗ್ಲೆಂಡ್‌ ಗೆಲುವಿನ ಲೆಕ್ಕಚಾರವನ್ನೇ ತಲೆ ಕೆಳಗಾಗಿಸಿದರು. ಇದಾದ ನಂತರ ಮುಂದಿನ ಓವರ್‌ನಲ್ಲೂ ಕೂಡ ಓವರ್ಟನ್ ಅವರನ್ನು ಔಟ್‌ ಮಾಡಿ ಪೆವಿಲಿಯನ್‌ ದಾರಿ ತೋರಿಸಿ ತಂಡವನ್ನು ಗೆಲುವಿನ ಸನಿಹಕ್ಕೆ ತಂದರು.



ಬಳಿಕ ಸಿರಾಜ್‌ಗೆ ಸಾಥ್‌ ನೀಡಲು ದಾಳಿಗಿಳಿದ ಕನ್ನಡಿಗ ಪ್ರಸಿಧ್‌ ಕೃಷ್ಣ, ಜಾಶ್ ಟಾಂಗ್‌ ಅವರನ್ನು ಕ್ಲೀನ್ ಬೌಲ್ಡ್ ಮಾಡಿ ಇಂಗ್ಲೆಂಡ್​ನ 9ನೇ ವಿಕೆಟ್ ಕಿತ್ತು ಸಂಭ್ರಮಿಸಿದರು. ನಂತರ ಗಾಯದ ನಡುವೆಯೂ ಒಂದೇ ಕೈನಲ್ಲಿ ಬ್ಯಾಟ್ ಹಿಡಿದು ಕೊನೆಯ ವಿಕೆಟ್ ಆಗಿ ಕ್ರಿಸ್​ಗೆ ಬಂದ ಕ್ರಿಸ್ ವೋಕ್ಸ್ ಮತ್ತು ಗಸ್ ಅಟ್ಕಿನ್ಸನ್ ಒಟ್ಟಾಗಿ ಇಂಗ್ಲೆಂಡ್ ತಂಡವನ್ನು ಗೆಲುವಿನತ್ತ ನಡೆಸಲು ಯತ್ನಿಸಿದರು. ಆದರೆ ಮೋಡಿ ಮಾಡಲು ಬೇರೆಯೇ ಪ್ಲ್ಯಾನ್‌ ಮಾಡಿದ್ದ ಸಿರಾಜ್‌, ಅಟ್ಕಿನ್ಸನ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿ ಇಂಗ್ಲೆಂಡ್ ತಂಡವನ್ನು 367 ರನ್‌ಗಳಿಗೆ ಆಲೌಟ್ ಮಾಡಿ ಭಾರತದ ಈ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಬರಹ: ಕೆಎನ್‌ ರಂಗು, ಚಿತ್ರದುರ್ಗ