T20 World Cup: ಬೆಥೆಲ್ ಶತಕ ವ್ಯರ್ಥ, ಇಂಗ್ಲೆಂಡ್ ಎದುರು ಹೈಸ್ಕೋರಿಂಗ್ ಕದನ ಗೆದ್ದ ಭಾರತಕ್ಕೆ ಫೈನಲ್ ಟಿಕೆಟ್!
India vs England Match Highlights: ಜಾಕೋಬ್ ಬೆಥೆಲ್ ಶತಕದ ಹೊರತಾಗಿಯೂ ಕಠಿಣ ಹೋರಾಟ ನಡೆಸಿದ ಭಾರತ ತಂಡ, 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಕೇವಲ 7 ರನ್ ರೋಚಕ ಜಯ ದಾಖಲಿಸಿತು. ಆ ಮೂಲಕ ಫೈನಲ್‌ಗೆ ಪ್ರವೇಶ ಮಾಡಿತು.
ಇಂಗ್ಲೆಂಡ್ ವಿರುದ್ಧ ಭಾರತ ತಂಡಕ್ಕೆ 7 ರನ್ ಜಯ. -
ಮುಂಬೈ: ಕೊನೆಯ ಓವರ್‌ವರೆಗೂ ತೀವ್ರ ರೋಚಕತೆಯಿಂದ ಕೂಡಿದ್ದ 2026ರ ಐಸಿಸಿ ಟಿ20 ವಿಶ್ವಕಪ್ (T20 World Cup 2026) ಟೂರ್ನಿಯ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ (IND vs ENG) ಭಾರತ ತಂಡ, ಎದುರಾಳಿ ಇಂಗ್ಲೆಂಡ್ ವಿರುದ್ಧ 7 ರನ್ ರೋಚಕ ಗೆಲುವು ಸಾಧಿಸಿತು. ಈ ಗೆಲುವಿನಿಂದ ಟೀಮ್ ಇಂಡಿಯಾ ಸತತ ಎರಡನೇ ಬಾರಿ ಚುಟುಕು ವಿಶ್ವಕಪ್ ಟೂರ್ನಿಯಲ್ಲಿ ಫೈನಲ್‌ಗೆ ಪ್ರವೇಶ ಮಾಡಿತು. ಇದರ ಶ್ರೇಯ ಸಂಜು ಸ್ಯಾಮ್ಸನ್‌ಗೆ (Sanju Samson) ಸಲ್ಲಬೇಕು. ಏಕೆಂದರೆ ಅವರು ಕೇವಲ 42 ಎಸೆತಗಳಲ್ಲಿ 89 ರನ್ ಗಳನ್ನು ಸಿಡಿಸಿದ್ದರು. ಇದರ ಫಲವಾಗಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಇನ್ನು ಜಾಕೋಬ್ ಬೆಥೆಲ್ ಅವರ ಹೋರಾಟದ ಶತಕದ ಹೊರತಾಗಿಯೂ ಇಂಗ್ಲೆಂಡ್ ತಂಡ ಕೂದಲೆಳೆಯ ಅಂತರದಲ್ಲಿ ಗೆಲುವು ತಪ್ಪಿಸಿಕೊಂಡಿತು.
ಗುರುವಾರ ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ಭಾರತ ನೀಡಿದ್ದ 254 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಇಂಗ್ಲೆಂಡ್ ತಂಡ, ಜಾಕೋಬ್ ಬೆಥೆಲ್ ಅವರ ದಾಖಲೆಯ ಶತಕದ ಬಲದಿಂದ ಕೊನೆಯ ಓವರ್‌ವರೆಗೂ ಕಠಿಣ ಹೋರಾಟ ನಡೆಸಿತ್ತು. ಆದರೆ, ಡೆತ್ ಓವರ್‌ಗಳಲ್ಲಿ ಭಾರತದ ಬೌಲರ್‌ಗಳ ರಣತಂತ್ರವನ್ನು ಮೆಟ್ಟಿ ನಿಲ್ಲುವಲ್ಲಿ ವಿಫಲವಾದ ಇಂಗ್ಲೆಂಡ್, ತನ್ನ ಪಾಲಿನ 20 ಓವರ್‌ಗಳನ್ನು ಪೂರ್ಣಗೊಳಿಸಿದರೂ 7 ವಿಕೆಟ್‌ಗಳ ನಷ್ಟಕ್ಕೆ 246 ರನ್‌ಗಳಿಗೆ ಸೀಮಿತವಾಯಿತು. ಆ ಮೂಲಕ ಕೇವಲ 7 ರನ್‌ಗಳಿಂದ ಸೋತ ಇಂಗ್ಲೆಂಡ್ ತಂಡದ ಟಿ20 ವಿಶ್ವಕಪ್ ಕನಸು ಭಗ್ನವಾಯಿತು.
T20 World Cup: 89 ರನ್ ಗಳಿಸಿ ವಿರಾಟ್ ಕೊಹ್ಲಿಯ ದಾಖಲೆಯನ್ನು ಸರಿಗಟ್ಟಿದ ಸಂಜು ಸ್ಯಾಮ್ಸನ್!
ಜಾಕೋಬ್ ಬೆಥೆಲ್ ಶತಕ ವ್ಯರ್ಥ
ಇಂಗ್ಲೆಂಡ್ ಪರ ಮೂರು ಮಂದಿ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಾದ ಫಿಲ್ ಸಾಲ್ಟ್, ಜೋಸ್ ಬಟ್ಲರ್(25 ರನ್) ಹಾಗೂ ಹ್ಯಾರಿ ಬ್ರೂಕ್ ಬೇಗ ವಿಕೆಟ್ ಒಪ್ಪಿಸಿದರು. ಆದರೆ, ನಾಲ್ಕನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ಜಾಕೋಬ್ ಬೆಥೆಲ್, ಕೊನೆಯ ಓವರ್‌ವರೆಗೂ ಏಕಾಂಗಿ ಹೋರಾಟ ನಡೆಸಿ 48 ಎಸೆತಗಳಲ್ಲಿ 7 ಸಿಕ್ಸರ್ ಹಾಗೂ 8 ಬೌಂಡರಿಗಳೊಂದಿಗೆ 105 ರನ್ ಗಳಿಸಿ ದಾಖಲೆಯ ಶತಕವನ್ನು ಸಿಡಿಸಿದರು. ಆ ಮೂಲಕ ಇಂಗ್ಲೆಂಡ್ ತಂಡವನ್ನು ಬಹುತೇಕ ಗೆಲುವಿನ ಸನಿಹ ತಂದಿದ್ದರು. ಆದರೆ, ಕೊನೆಯ ಹಂತದಲ್ಲಿ ಭಾರತೀಯ ಬೌಲರ್‌ಗಳು ಮೇಲುಗೈ ಸಾಧಿಸಿದ್ದರಿಂದ ಆಂಗ್ಲರು ಸೋಲು ಒಪ್ಪಬೇಕಾಯಿತು. ಜಾಕೋಬ್ ಬೆಥೆಲ್‌ಗೆ ಕೆಲ ಕಾಲ ಸಾಥ್ ನೀಡಿದ್ದ ವಿಲ್ ಜ್ಯಾಕ್ಸ್ 20 ಎಸೆತಗಳಲ್ಲಿ 35 ರನ್ ಗಳಿಸಿದ್ದರು. ಆದರೆ, ಅವರನ್ನು ದೀರ್ಘಾವಧಿ ಕ್ರೀಸ್‌ನಲ್ಲಿ ಉಳಿಯಲು ಅರ್ಷದೀಪ್ ಸಿಂಗ್ ಬಿಡಲಿಲ್ಲ.
Sanju Samson's classy innings provided the platform for India's win against England in the #T20WorldCup semi-final👏
— ICC (@ICC) March 5, 2026
He wins @aramco POTM🏅
📝: https://t.co/w7G9C2FaMw pic.twitter.com/wyh2KWcJIk
ಭಾರತದ ಪರ ಹಾರ್ದಿಕ್ ಪಾಂಡ್ಯ 2 ವಿಕೆಟ್ ಕಿತ್ತರೆ, ಇನ್ನುಳಿದ ಬೌಲರ್‌ಗಳಾದ ಅರ್ಷದೀಪ್ ಸಿಂಗ್, ಜಸ್‌ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ ಹಾಗೂ ಅಕ್ಷರ್ ಪಟೇಲ್ ತಲಾ ಒಂದೊಂದು ವಿಕೆಟ್ ಕಿತ್ತರು.
253 ರನ್ ಕಲೆ ಹಾಕಿದ ಭಾರತ
ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ಭಾರತ ತಂಡ, ಸಂಜು ಸ್ಯಾಮ್ಸನ್ (89 ರನ್) ಅವರ ಸ್ಪೋಟಕ ಬ್ಯಾಟಿಂಗ್ ಬಲದಿಂದ ತನ್ನ ಪಾಲಿನ 20 ಓವರ್‌ಗಳಿಗೆ 7 ವಿಕೆಟ್‌ಗಳ ನಷ್ಟಕ್ಕೆ 253 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ಇಂಗ್ಲೆಂಡ್ ತಂಡಕ್ಕೆ 254 ರನ್‌ಗಳ ದಾಖಲೆಯ ಗುರಿಯನ್ನು ನೀಡಿದೆ. ಸಂಜು ಜೊತೆಗೆ ಇಶಾನ್ ಕಿಶನ್ (39 ರನ್), ಶಿವಂ ದುಬೆ (43 ರನ್), ತಿಲಕ್ ವರ್ಮಾ (21 ರನ್) ಹಾಗೂ ಹಾರ್ದಿಕ್ ಪಾಂಡ್ಯ(27 ರನ್) ಅವರು ಕೂಡ ಸಿಕ್ಕ ಅವಕಾಶದಲ್ಲಿ ರನ್ ಗಳಿಸಿದರು.
Jacob Bethell smashes the second-fastest century in a men's #T20WorldCup to keep England in the hunt against India🙌
— ICC (@ICC) March 5, 2026
It is one of the @marriottbonvoy Milestones of the #T20WorldCup
📝: https://t.co/w7G9C2FaMw pic.twitter.com/0PaWvNZa0G
ಸಂಜು ಸ್ಯಾಮ್ಸನ್ ಬ್ಯಾಟಿಂಗ್ ಆರ್ಭಟ
ಔಟ್ ಆಫ್ ಫಾರ್ಮ್ ಅಭಿಷೇಕ್ ಶರ್ಮಾ 7 ಎಸೆತಗಳಲ್ಲಿ 9 ರನ್ ಗಳಿಸಿದ ಬಳಿಕ ವಿಲ್ ಜ್ಯಾಕ್ಸ್‌ಗೆ ಎರಡನೇ ಓವರ್‌ನಲ್ಲಿ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ತಂಡದ ಜವಾಬ್ದಾರಿ ತೆಗೆದುಕೊಂಡ ಮತ್ತೊಬ್ಬ ಆರಂಭಿಕ ಸಂಜು ಸ್ಯಾಮ್ಸನ್ ಕಳೆದ ಪಂದ್ಯದಲ್ಲಿ ಸಿಡಿಸಿದ್ದ ಶತಕದ ಫಾರ್ಮ್ ಅನ್ನು ಇಲ್ಲಿ ಮುಂದುವರಿಸಿದರು. ಇಂಗ್ಲೆಂಡ್ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದ ಸಂಜು, ಕೇವಲ 42 ಎಸೆತಗಳಲ್ಲಿ ಬರೋಬ್ಬರಿ 7 ಸಿಕ್ಸರ್ ಹಾಗೂ 8 ಬೌಂಡರಿಗಳ ಮೂಲಕ 89 ರನ್ ಸಿಡಿಸಿದರು. ಇದರಲ್ಲಿ ಅವರು 211ಕ್ಕೂ ಅಧಿಕ ಸ್ಟ್ರೈಕ್ ರೇಟ್‌ನಲ್ಲಿ ರನ್ ಗಳಿಸಿದ್ದು ವಿಶೇಷ. ಅಲ್ಲದೆ 18 ಎಸೆತಗಳಲ್ಲಿ 39 ರನ್ ಸಿಡಿಸಿದ ಇಶಾನ್ ಕಿಶನ್ ಜೊತೆಗೆ ಸಂಜು 45 ಎಸೆತಗಳಲ್ಲಿ 97 ರನ್‌ಗಳ ಜೊತೆಯಾಟ ಹಾಗೂ ಶಿವಂ ದುಬೆ ಅವರೊಂದಿಗೆ 43 ರನ್‌ಗಳ ಅಲ್ಪ ಜೊತೆಯಾಟವನ್ನು ಆಡಿದರು. ಇದರೊಂದಿಗೆ ಭಾರತ ತಂಡಕ್ಕೆ ಭದ್ರ ಅಡಿಪಾಯವನ್ನು ಹಾಕಿ ಶತಕದಂಚಿನಲ್ಲಿ ವಿಲ್ ಜ್ಯಾಕ್ಸ್‌ಗೆ ವಿಕೆಟ್ ಒಪ್ಪಿಸಿದರು.
𝐇𝐢𝐬𝐭𝐨𝐫𝐲 𝐚𝐰𝐚𝐢𝐭𝐬 ⏳
— ICC (@ICC) March 5, 2026
India and New Zealand will chase ultimate glory in the #T20WorldCup Final 🏆 pic.twitter.com/L1iPOTLfbX
ಇಶಾನ್ ಕಿಶನ್ ಕೂಡ ಬ್ಯಾಟಿಂಗ್‌ನಲ್ಲಿ ಗಮನ ಸೆಳೆದರು. ಅವರು 18 ಎಸೆತಗಳಲ್ಲಿ ಎರಡು ಸಿಕ್ಸರ್ ಹಾಗೂ 4 ಬೌಂಡರಿಗಳೊಂದಿಗೆ 39 ರನ್ ಗಳಿಸಿ ಅರ್ಧಶತಕದಂಚಿನಲ್ಲಿ ಆದಿಲ್ ರಶೀದ್‌ಗೆ ವಿಕೆಟ್ ಒಪ್ಪಿಸಿದರು. ಮಧ್ಯಮ ಕ್ರಮಾಂಕದಲ್ಲಿ ಶಿವಂ ದುಬೆ 25 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ ಒಂದು ಬೌಂಡರಿಯೊಂದಿಗೆ 43 ರನ್ ಚಚ್ಚಿದರು. ಕೊನೆಯಲ್ಲಿ ಪಂದ್ಯವನ್ನು ಮುಗಿಸುವ ಜವಾಬ್ದಾರಿ ಹೊತ್ತ ಹಾರ್ದಿಕ್ ಪಾಂಡ್ಯ ಹಾಗೂ ತಿಲಕ್ ವರ್ಮಾ ಸ್ಪೋಟಕ ಬ್ಯಾಟಿಂಗ್ ಮೂಲಕ ಕ್ರಮವಾಗಿ 27 ರನ್ ಹಾಗೂ 21 ರನ್ ಸಿಡಿಸಿದರು.
ಇಂಗ್ಲೆಂಡ್ ತಂಡದ ಬೌಲರ್‌ಗಳು ಭಾರತೀಯ ಬ್ಯಾಟ್ಸ್‌ಮನ್‌ಗಳ ಎದುರು ದುಬಾರಿಯಾದರು. ಎಲ್ಲಾ ಬೌಲರ್‌ಗಳು 10ಕ್ಕಿಂತ ಹೆಚ್ಚಿನ ಸರಾಸರಿಯನ್ನು ರನ್‌ಗಳನ್ನು ಬಿಟ್ಟುಕೊಟ್ಟರು. ಇವರ ಪೈಕಿ ವಿಲ್ ಜ್ಯಾಕ್ಸ್ ಹಾಗೂ ಆದಿಲ್ ರಶೀದ್ ತಲಾ ಎರಡೆರಡು ವಿಕೆಟ್‌ಗಳನ್ನು ಕಬಳಿಸಿದರು.