IND vs ENG: ಲಾರ್ಡ್ಸ್ ಟೆಸ್ಟ್‌ನಲ್ಲಿ ವಿವಾದಾತ್ಮಕ ತೀರ್ಪು ನೀಡಿದ ಅಂಪೈರ್ ವಿರುದ್ಧ ಆರ್ ಅಶ್ವಿನ್ ಕಿಡಿ!
ಭಾರತ ಹಾಗೂ ಇಂಗ್ಲೆಂಡ್ ನಡುವಣ ಮೂರನೇ ಟೆಸ್ಟ್ ಪಂದ್ಯದಲ್ಲಿ ವಿವಾದಾತ್ಮಕ ಕರೆಗಳನ್ನು ತೆಗೆದುಕೊಂಡಿದ್ದ ಫೀಲ್ಡ್ ಅಂಪೈರ್ ಪಾಲ್ ರೀಫೆಲ್ ವಿರುದ್ಧ ಸ್ಪಿನ್ ದಿಗ್ಗಜ ರವಿಚಂದ್ರನ್ ಅಶ್ವಿನ್ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಈ ಪಂದ್ಯದಲ್ಲಿ ರವೀಂದ್ರ ಜಡೇಜಾರ ಕಠಿಣ ಹೋರಾಟದ ಹೊರತಾಗಿಯೂ ಭಾರತ ತಂಡ 22 ರನ್‌ಗಳಿಂದ ಸೋಲು ಅನುಭವಿಸಿತು.

ಅಂಪೈರ್ ಪಾಲ್ ರೀಫೆಲ್ ವಿರುದ್ಧ ಆರ್ ಅಶ್ವಿನ್ ಕಿಡಿ.

ನವದೆಹಲಿ: ಲಂಡನ್‌ನ ಲಾರ್ಡ್ಸ್ ಅಂಗಣದಲ್ಲಿ ನಡೆದಿದ್ದ ಭಾರತ ಹಾಗೂ ಇಂಗ್ಲೆಂಡ್ ತಂಡಗಳ (IND vs ENG) ನಡುವಣ ಮೂರನೇ ಟೆಸ್ಟ್ ಪಂದ್ಯದಲ್ಲಿ ಫೀಲ್ಡ್ ಅಂಪೈರ್ ಪಾಲ್ ರೀಫೆಲ್ (Paul Reiffel) ಅವರ ಅವರ ಕೆಲ ತೀರ್ಪುಗಳ ವಿರುದ್ದ ಭಾರತದ ಮಾಜಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ (R Ashwin) ಕಟುವಾಗಿ ಟೀಕಿಸಿದ್ದಾರೆ. ಈ ನಿರ್ಧಾರಗಳು ಪ್ರವಾಸಿ ಭಾರತ ತಂಡಕ್ಕೆ ಅನ್ಯಾಯವಾಗಿದೆ ಎಂದು ಅಶ್ವಿನ್ ಹೇಳಿದ್ದಾರೆ ಮತ್ತು ಈ ವಿಷಯವನ್ನು ಐಸಿಸಿ ಪರಿಶೀಲಿಸುವಂತೆ ವಿನಂತಿಸಿದ್ದಾರೆ. ಅಂದಹಾಗೆ ಈ ಪಂದ್ಯದಲ್ಲಿ ಭಾರತ ತಂಡ, ರವೀಂದ್ರ ಜಡೇಜಾ ಅವರ ಕಠಿಣ ಹೋರಾಟದ ಹೊರತಾಗಿಯೂ 22 ರನ್‌ಗಳಿಂದ ಸೋಲು ಅನುಭವಿಸಿತು. ಆ ಮೂಲಕ ಟೀಮ್ ಇಂಡಿಯಾ ಸರಣಿಯಲ್ಲಿ 1-2 ಹಿನ್ನಡೆಯನ್ನು ಅನುಭವಿಸಿದೆ.
ಪಂದ್ಯದ ನಾಲ್ಕನೇ ದಿನ ಜೋ ರೂಟ್ ವಿರುದ್ದ ಮೊಹಮ್ಮದ್ ಸಿರಾಜ್ ಅವರ ಮನವಿಯನ್ನು ಅಂಪೈರ್ ಪಾಲ್ ರೀಫೆಲ್ ಅವರು ತಳ್ಳಿಹಾಕುವ ಮೂಲಕ ವಿವಾದ ಆರಂಭವಾಯಿತು. ಸಿರಾಜ್ ಮನವಿ ಸಲ್ಲಿಸಿದ್ದ ಎಲ್‌ಬಿಡಬ್ಲ್ಯುಗೆ ಜೋ ರೂಟ್ ಔಟ್ ಆಗಿದ್ದರು. ವಿಡಿಯೊ ರೀಪ್ಲೆನಲ್ಲಿ ಚೆಂಡು ಸ್ಟಂಪ್ಸ್‌ಗೆ ತಾಗುತ್ತಿರುವುದನ್ನು ನೋಡಬಹುದಾಗಿತ್ತು. ಆದರೆ, ಇದು ಅಂಪೈರ್ ಕರೆಯಾಗಿದ್ದ ಕಾರಣ ಜೋ ರೂಟ್ ಅವರು ಜೀವದಾನ ಪಡೆದಿದ್ದರು.
IND vs ENG: ಜಡೇಜಾ ಏಕಾಂಗಿ ಹೋರಾಟ ವ್ಯರ್ಥ, ಲಾರ್ಡ್ಸ್ ಟೆಸ್ಟ್‌ನಲ್ಲಿ ಇಂಗ್ಲೆಂಡ್‌ಗೆ ಮಣಿದ ಭಾರತ!
ಅಂಪೈರ್ ನಾಟ್‌ಔಟ್ ಎಂದು ನೀಡುತ್ತಿದ್ದಂತೆ ಮೊಹಮ್ಮದ್ ಸಿರಾಜ್ ಅವರು ಪಾಲ್ ರೀಫೆಲ್ ಅವರ ವಿರುದ್ಧ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ಇನ್ನು ಪಂದ್ಯದ ಕೊನೆಯ ಇನಿಂಗ್ಸ್‌ನಲ್ಲಿ ಭಾರತ ತಂಡದ ನಾಯಕ ಶುಭಮನ್ ಗಿಲ್ ಅವರಿಗೆ ಕಾಟ್ ಬಿಹೈಂಡ್ ನೀಡಿದ್ದರು. ಆದರೆ, ಬ್ರೈಡನ್ ಕಾರ್ಸ್ ಎಸೆತದಲ್ಲಿ ಚೆಂಡು ಬ್ಯಾಟ್‌ಗೆ ತಾಗಿರಲಿಲ್ಲ. ಆದರೂ ಅಂಪೈರ್ ವಿಕೆಟ್ ಕ್ಯಾಚ್ ಕೊಟ್ಟಿದ್ದರು. ಇದು ಕೂಡ ಭಾರತ ತಂಡಕ್ಕೆ ದೊಡ್ಡ ಹಿನ್ನಡೆಯನ್ನು ತಂದಿತ್ತು.
IND vs ENG: ರವೀಂದ್ರ ಜಡೇಜಾ-ಬ್ರೈಡೆನ್ ಕಾರ್ಸ್ ನಡುವೆ ಮಾತಿನ ಚಕಮಕಿ! ವಿಡಿಯೊ
ಪಾಲ್ ರೀಫೆಲ್ ವಿರುದ್ಧ ಅಶ್ವಿನ್ ಆಕ್ರೋಶ
ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಆರ್ ಅಶ್ವಿನ್, "ಭಾರತ ತಂಡ ಬೌಲ್ ಮಾಡುವಾಗಲೆಲ್ಲಾ, ಅವರು (ಪಾಲ್ ರೀಫೆಲ್) ನಾಟ್‌ಔಟ್ ಎಂದು ಭಾವಿಸುತ್ತಿದ್ದರು. ಆದರೆ, ಭಾರತ ತಂಡ ಬ್ಯಾಟ್ ಮಾಡುವಾಗಲೆಲ್ಲಾ ಅವರು ಔಟ್ ಎಂದು ಭಾವಿಸುತ್ತಿದ್ದರು. ಭಾರತದ ವಿರುದ್ಧ ಮಾತ್ರವಲ್ಲ, ಇತರೆ ಎಲ್ಲಾ ತಂಡಗಳ ವಿರುದ್ದವೂ ಕೂಡ ಇದೇ ರೀತಿ ಮಾಡುತ್ತಾರೆ. ಐಸಿಸಿ ಇದನ್ನು ಪರಿಹರಿಸಬೇಕು,"ಎಂದು ಮನವಿ ಮಾಡಿದ್ದಾರೆ.
IND vs ENG: ಐಸಿಸಿ ನಿಯಮ ಉಲ್ಲಂಘಿಸಿದ ಮೊಹಮ್ಮದ್ ಸಿರಾಜ್‌ಗೆ ದಂಡ ವಿಧಿಸಿದ ಐಸಿಸಿ!
ಭಾರತ ತಂಡದ ಮತ್ತೊಬ್ಬ ಬ್ಯಾಟ್ಸ್‌ಮನ್ ಔಟ್ ಆದ ಬಗ್ಗೆಯೂ ಅಶ್ವಿನ್ ಅಂಪೈರ್ ವಿರುದ್ಧ ಕಿಡಿ ಕಾರಿದ್ದಾರೆ. "ನನ್ನ ಸೆಡಾನ್ ಕಾರ್ ಅನ್ನು ಬ್ಯಾಟ್ ಮತ್ತು ಬಾಲ್ ನಡುವೆ ಪಾರ್ಕ್ ಮಾಡಬಹುದು, ಅಷ್ಟೊಂದು ಗ್ಯಾಪ್ ಇದೆ. ನಾಟ್‌ಔಟ್ ಎಂಬುದು ಸ್ಪಷ್ಟವಾಗಿದೆ. ಆದರೂ ಅಂಪೈರ್ ಔಟ್ ಕೊಟ್ಟಿದ್ದಾರೆ. ನನ್ನ ಜೊತೆ ನನ್ನ ಅಪ್ಪ ಕೂಡ ಪಂದ್ಯವನ್ನು ವೀಕ್ಷಿಸುತ್ತಿದ್ದರು. ಪಾಲ್ ಬಂದಾಗಲೆಲ್ಲಾ ಭಾರತ ಸೋಲುತ್ತದೆ ಎಂದು ಅವರು ನನಗೆ ಹೇಳಿದ್ದರು,"ಎಂದು ಅಶ್ವಿನ್ ತಿಳಿಸಿದ್ದಾರೆ.
R Ashwin on Paul reiffel umpire :-
— Atul Kapoor (@atulkapoor569) July 14, 2025
#ENGvIND pic.twitter.com/gHSEMW9wHt