ನವದೆಹಲಿ: ನ್ಯೂಜಿಲೆಂಡ್ ವಿರುದ್ಧ ಸತತ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಭಾರತ ತಂಡದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ (Sanju Samnson) ಅವರನ್ನು ಹಿರಿಯ ಸ್ಪಿನ್ನರ್ ಯುಜ್ವೇಂದ್ರ ಚಹಲ್ (Yuzvendra Chahal) ಟೀಕಿಸಿದ್ದಾರೆ. ಸಂಜು ಸ್ಯಾಮ್ಸನ್ ಅವರು ಬುಧವಾರ ಆಡಿದ ನಾಲ್ಕನೇ ಪಂದ್ಯದಲ್ಲಿಯೂ (IND vs NZ) 24 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಆ ಮೂಲಕ ಆಡಿದ ನಾಲ್ಕೂ ಪಂದ್ಯಗಳಿಂದ ಒಟ್ಟು 40ಕ್ಕೂ ಅಧಿಕ ರನ್ ಗಳಿಸಿದ್ದಾರೆ. ಆ ಮೂಲಕ ಆರಂಭಿಕ ಆಟಗಾರನಾಗಿ ತಂಡದ ಪ್ಲೇಯಿಂಗ್ XIಗೆ ಮರಳಿದಾಗಿನಿಂದ ಸತತ ವೈಫಲ್ಯವನ್ನು ಅನುಭವಿಸುತ್ತಿದ್ದಾರೆ.
ಪಂದ್ಯದ ಒತ್ತಡವನ್ನು ನಿರ್ವಹಿಸುವಷ್ಟು ಅನಭವ ಸಂಜು ಸ್ಯಾಮ್ಸನ್‌ಗೆ ಇದೆ ಎಂದು ಹೇಳಿದ ಯುಜ್ವೇಂದ್ರ ಚಹಲ್, ತಂಡದಲ್ಲಿ ತಮ್ಮ ಸ್ಥಾನವನ್ನು ಗಟ್ಟಿ ಮಾಡಿಕೊಳ್ಳಲು ನ್ಯೂಜಿಲೆಂಡ್ ವಿರುದ್ಧದ ಟಿ20ಐ ಸರಣಿಯಲ್ಲಿ ಉತ್ತಮ ಅವಕಾಶ ಸಿಕ್ಕಿತ್ತು. ಆದರೆ, ಅದನ್ನು ಅವರು ಸದುಪಯೋಗಪಡಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಒಂದು ದಶಕಕ್ಕೂ ಹೆಚ್ಚು ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಭಾಗವಾಗಿರುವವರಿಗೆ, ಪುನರಾವರ್ತಿತ ವೈಫಲ್ಯಗಳನ್ನು ಮಾನಸಿಕ ಒತ್ತಡ ಎಂದು ತಳ್ಳಿಹಾಕಲು ಸಾಧ್ಯವಿಲ್ಲ ಎಂದು ಚಹಲ್ ಸ್ಪಷ್ಟಪಡಿಸಿದರು.
ಶ್ರೇಯಸ್ ಅಯ್ಯರ್‌ಗೆ ಏಕೆ ಅವಕಾಶ ನೀಡಿಲ್ಲ? ಗೌತಮ್ ಗಂಭೀರ್‌ಗೆ ಆಕಾಶ್ ಚೋಪ್ರಾ ಪ್ರಶ್ನೆ!
ಸಂಜು ಸ್ಯಾಮ್ಸನ್ ವಿರುದ್ಧ ಚಹಲ್ ಟೀಕೆ
ಜಿಯೊ ಸ್ಟಾರ್ ಜೊತೆ ಮಾತನಾಡಿದ ಯುಜ್ವೇಂದ್ರ ಚಹಲ್, "ಸಂಜು ಸ್ಯಾಮ್ಸನ್ ಹಲವು ವರ್ಷಗಳಿಂದ ಆಡುತ್ತಿದ್ದಾರೆ. ಅವರು ಐಪಿಎಲ್ ಮಧ್ಯಮ ಕ್ರಮಾಂಕದಲ್ಲಿ ಆಡಲಾರಂಭಿಸಿದರು, ನಂತರ ಆರಂಭಿಕರಾದರು. 10-12 ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ ನಂತರ, ಒತ್ತಡವು ಒಂದು ನೆಪವಾಗಬಾರದು. ಈ ಸರಣಿಯಲ್ಲಿ ಅವರಿಗೆ ನಾಲ್ಕು ಅವಕಾಶಗಳು ಸಿಕ್ಕಿವೆ. ನಾನು ಒಂದು ಅಥವಾ ಎರಡು ಪಂದ್ಯಗಳಲ್ಲಿ ವೈಫಲ್ಯವನ್ನು ಒಪ್ಪಿಕೊಳ್ಳಬಲ್ಲೆ, ಆದರೆ ಮೂರು ಅಥವಾ ನಾಲ್ಕು ಪಂದ್ಯಗಳಲ್ಲಿ ಅಲ್ಲ. ಬ್ಯಾಕಪ್ ಆಗಿರುವ ಮತ್ತು ಮೂರನೇ ಸ್ಥಾನದಲ್ಲಿ ಉತ್ತಮವಾಗಿ ಬ್ಯಾಟ್ ಮಾಡುತ್ತಿರುವ ಇಶಾನ್ ಕಿಶನ್ ಅವರಂತಹ ಆಟಗಾರರು ಕಾಯುತ್ತಿದ್ದಾರೆ ಎಂದು ಅವರಿಗೆ ತಿಳಿದಿದೆ. ಸಂಜು ತನ್ನನ್ನು ತಾನೇ ದೂಷಿಸಿಕೊಳ್ಳುತ್ತಾರೆ. ಅವರಿಗೆ ನಾಲ್ಕು ಅವಕಾಶಗಳು ಸಿಕ್ಕವು ಆದರೆ ಅವುಗಳನ್ನು ಸದುಪಯೋಗಪಡಿಸಿಕೊಳ್ಳಲು ಸಾಧ್ಯವಾಗಲಿಲ್ಲ," ಎಂದು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
IND vs NZ: ಟಿ20ಐ ಪಂದ್ಯದಲ್ಲಿ ಗೋಲ್ಡನ್ ಡಕ್‌ಔಟ್ ಆದ ಭಾರತದ ಟಾಪ್ 5 ಬ್ಯಾಟರ್ಸ್!
ಟಿ20 ವಿಶ್ವಕಪ್‌ಗೆ ಇನ್ನೂ ಹೆಚ್ಚಿನ ಸಮಯವಿದೆ: ಚಹಲ್
2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಇನ್ನೂ ಹೆಚ್ಚಿನ ಸಮಯವಿದೆ, ಹಾಗಾಗಿ ಸಂಜು ಸ್ಯಾಮ್ಸನ್ ಫಾರ್ಮ್ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಯುಜ್ವೇಂದ್ರ ಚಹಲ್ ತಿಳಿಸಿದ್ದಾರೆ.
"ಟಿ20 ವಿಶ್ವಕಪ್ ಟೂರ್ನಿಗೆ ಇನ್ನೂ ಸಾಕಷ್ಟು ಸಮಯವಿದೆ, ಹಾಗಾಗಿ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ನ್ಯೂಜಿಲೆಂಡ್ ವಿರುದ್ಧ ಇನ್ನೂ ಕೊನೆಯ ಪಂದ್ಯವನ್ನು ಆಡುವ ಅಗತ್ಯವಿದೆ. ಸಂಜು ಫಾರ್ಮ್ ಬಗ್ಗೆ ಟೀಮ್ ಮ್ಯಾನೇಜ್‌ಮೆಂಟ್ ಹೇಗೆ ಚಿಂತಿಸುತ್ತದೆ ಎಂಬುದರ ಮೇಲೆ ಇದು ಅವಲಂಬನೆಯಾಗಿದೆ. ಸಂಜು ಸ್ಯಾಮ್ಸನ್ ಸತತ ವೈಫಲ್ಯ ಅನುಭವಿಸುತ್ತಿದ್ದಾರೆಂದು ಟೀಮ್ ಮ್ಯಾನೇಜ್‌ಮೆಂಟ್ ಭಾವಿಸುತ್ತಿದ್ದರೆ, ಮೂರನೇ ಕ್ರಮಾಂಕದಲ್ಲಿ ಇಶಾನ್ ಕಿಶನ್ ಉತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ತೋರುತ್ತಿದ್ದಾರೆ, ಹಾಗಾಗಿ ಎಡಗೈ ಬ್ಯಾಟ್ಸ್‌ಮನ್ ಅನ್ನು ವಿಕೆಟ್ ಕೀಪರ್ ಆಗಿ ಮತ್ತು ಅಭಿಷೇಕ್ ಶರ್ಮಾ ಜೊತೆ ಇನಿಂಗ್ಸ್ ಆರಂಭಿಸಲು ಅನುವು ಮಾಡಿಕೊಡಬಹುದು," ಎಂದು ಹಿರಿಯ ಸ್ಪಿನ್ನರ್ ಹೇಳಿದ್ದಾರೆ.